Dailyhunt
'ನಾನು ಕುಡಿಯೋಲ್ಲ, ಸಿಗರೇಟ್ ಸೇದಲ್ಲ, ಆದರೂ ಇದು ಯಾಕ್ ಬಂತೋ ಗೊತ್ತಿಲ್ಲ'; ರವಿಚಂದ್ರನ್ ಫಿಲ್ಟರ್‌ಲೆಸ್ ಮಾತು!

'ನಾನು ಕುಡಿಯೋಲ್ಲ, ಸಿಗರೇಟ್ ಸೇದಲ್ಲ, ಆದರೂ ಇದು ಯಾಕ್ ಬಂತೋ ಗೊತ್ತಿಲ್ಲ'; ರವಿಚಂದ್ರನ್ ಫಿಲ್ಟರ್‌ಲೆಸ್ ಮಾತು!

Vijay Karnataka 10 months ago

'ಕ್ರೇಜಿ ಸ್ಟಾರ್‌' ರವಿಚಂದ್ರನ್ ಮಾತನಾಡ್ತಾ ಇದ್ದಾರೆ ಅಂದ್ರೆ ಅಲ್ಲಿ ಫಿಲ್ಟರ್ ಲೆಸ್‌. ಮನಸ್ಸಿಗೆ ಬಂದಿದ್ದನ್ನು ಹಂಗ್ಹಂಗೆ ನೇರವಾಗಿ ಹೇಳಿಬಿಡುವುದು ರವಿಚಂದ್ರನ್ ಜಾಯಮಾನ. ಸದ್ಯ ಅವರು ತಮ್ಮ ಹೊಟ್ಟೆ ಬಗ್ಗೆ ಮಾತನಾಡಿದ್ದಾರೆ. 'ನಾದಬ್ರಹ್ಮ' ಹಂಸಲೇಖ ಅವರ 'ಓಕೆ' ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ರವಿಚಂದ್ರನ್, ಬಹಳ ಓಪನ್ ಆಗಿ ಮಾತನಾಡಿದ್ರು.

ಅದರಲ್ಲೂ ಮುಖ್ಯವಾಗಿ ತಮ್ಮ ಹೊಟ್ಟೆ ಬಗ್ಗೆ ತಿಳಿಸಿದ್ದು ವಿಶೇಷವಾಗಿತ್ತು.

ಗ್ರಾಫಿಕ್ಸ್‌ನಲ್ಲಿ ಬೊಜ್ಜನ್ನ ಕರಗಿಸ್ತಾರೆ

'ಓಕೆ' ಸಿನಿಮಾದ ಇವೆಂಟ್‌ನಲ್ಲಿ ರವಿಚಂದ್ರನ್‌ ಫುಲ್ ಜಾಲಿ ಮೂಡ್‌ನಲ್ಲಿದ್ದರು. ಆಗ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಹೊಟ್ಟೆ ಬಗ್ಗೆ ಮಾತಾಡೋಕೆ ಆರಂಭಿಸಿದರು. "ನಾನು ಡೈರೆಕ್ಟ್ ಮಾಡುವ ಸಿನಿಮಾದಲ್ಲಿ ಈ ಹೊಟ್ಟೆಯನ್ನು ನೀವು ತೋರಿಸ್ಬಿಡಿ, ನಾನು ಸಿನಿಮಾ ಇಂಡಸ್ಟ್ರಿ ಬಿಟ್ಬಿಡ್ತೀನಿ. ನಾನು ಡೈರೆಕ್ಷನ್ ಮಾಡ್ಬೇಕಾದ್ರೆ, ನಾನು ಇಡೋ ಶಾಟ್ಸ್ ಮೇಲೆ ನಮ್ಮ ವೀಕ್ನೆಸ್‌ನ ಕವರ್ ಮಾಡ್ಕೊತೀನಿ. ಹಾಗಾಗಿ, ಅದು ನಿಮಗೆ ಕಾಣಿಸೋದಿಲ್ಲ. ಆದರೆ ಕೆಲವು ಡೈರೆಕ್ಟರ್ಸ್ ಚೇಂಜ್ ಮಾಡಲ್ಲ. ಆದರೆ ನಾನು ಯಾವಾಗಲೂ ಸಿನಿಮಾವನ್ನು ನಂಬಿರೋದು. ಪರದೆ ಮೇಲೆ ಯಾರನ್ನೇ ತೋರಿಸಿದರೂ, ಅವರನ್ನು ಸುಂದರವಾಗಿ ತೋರಿಸಬೇಕು, ಚೆನ್ನಾಗಿ ತೋರಿಸಬೇಕು ಅನ್ನೋದು ನನ್ನ ಉದ್ದೇಶ.

ನನಗೆ ವರ್ಕ್‌ಔಟ್‌ ಮಾಡೋಕೆ ಆಗಲ್ಲ

"ಇವತ್ತು ಗ್ರಾಫಿಕ್ಸ್ ಇದೆ, 10 ಕೆಜಿ ಅಲ್ಲ 20 ಕೆಜಿ ಬೇಕಾದರೂ ಬೊಜ್ಜನ್ನ ಕೆರೆದು ಬಿಸಾಕ್ತಾರೆ. ಅದೇನು ತೊಂದರೆ ಇಲ್ಲ. ನನಗೆ ವರ್ಕ್‌ಔಟ್‌ ಮಾಡೋಕೆ ಆಗಲ್ಲ, ಸ್ವಿಮ್ಮಿಂಗ್ ಕೂಡ ಮಾಡೋಕೆ ಆಗಲ್ಲ. ಏನೂ ಮಾಡೋಕೆ ಆಗಲ್ಲ. ನಾನು ತಿನ್ನೋದು ಇಲ್ಲ, ಕುಡಿಯೋದು ಇಲ್ಲ, ಸಿಗರೇಟ್ ಸೇದೋದು ಇಲ್ಲ. ಇದು (ಹೊಟ್ಟೆ) ಯಾಕ್ ಬಂತು ಅನ್ನೋದು ನನಗೆ ಗೊತ್ತಿಲ್ಲ" ಎಂದು ರವಿಚಂದ್ರನ್ ಹೇಳಿದ್ದಾರೆ.

ಮಕ್ಕಳಿಗೆ ಇನ್ನೂ ಹಂಸಲೇಖ ಸಿಕ್ಕಿಲ್ಲ

ಇನ್ನು, ತಮ್ಮ ಮಕ್ಕಳ ಬಗ್ಗೆ ಮಾತನಾಡಿದ ರವಿಚಂದ್ರನ್, "ನನ್ನ ಒಬ್ಬರ ಮಗ 6 ಅಡಿ ಉದ್ದ ಇದ್ದಾರೆ. ಮತ್ತೊಬ್ಬ 6.2 ಅಡಿ ಇದ್ದಾನೆ. ಸಿನಿಮಾಕ್ಕೆ ನಮ್ಮಪ್ಪ ನನ್ನನ್ನ ಕರೆದುಕೊಂಡುಬಂದು ಬಿಟ್ರು. ಆಮೇಲೆ ಮುಂದೆ ಹೋಗಿದ್ದು ನಾನೇ. ನನಗೆ ನಮ್ಮಪ್ಪ ಏನು ಹೇಳಿಕೊಟ್ಟು ಹೋಗ್ಲಿಲ್ಲ. ನಾನೇ ಇಲ್ಲಿತನಕ ಎಲ್ಲಾ ಕಲಿತುಕೊಂಡು ಬಂದಿದ್ದು. ಆದರೆ ನಮ್ಮಪ್ಪ ಬೆನ್ನೆಲುಬಾಗಿ ಪ್ರೀತಿಯಿಂದ ಯಾವಾಗಲೂ ಜೊತೇಲಿ ಇರೋರು. ಅದೇ ರೀತಿ ನನ್ನ ಮಕ್ಕಳಿಗೂ ನಾನು ಜೊತೆಯಲ್ಲಿ ಇದ್ದೀನಿ. ಬಹುಶಃ ಸ್ವಲ್ಪ ಸಮಯ ಆಟ ಆಡಿಸುತ್ತಿದೆ. ಅವರಿಗೂ ಹಂಸಲೇಖ ಸಿಕ್ಕಿಲ್ವೇನೋ? ಸಿಕ್ಕಿದರೆ ಅವರು ಮುಂದೆ ಬರ್ತಾರೆ" ಎಂದು ಹೇಳಿದ್ದಾರೆ.

ನನ್ನ ನಗುವಿಗೆ ಹಂಸಲೇಖ ಕಾರಣ

ರವಿಚಂದ್ರನ್ ಅವರು ನಗುವುದು ಕಡಿಮೆಯಂತೆ. ಆದರೆ ಅವರು ಮನಸ್ಫೂರ್ತಿಯಾಗಿ ನಕ್ಕಿದ್ದಾರೆ ಎಂದಾಗ, ಅಲ್ಲಿ ಹಂಸಲೇಖ ಇರ್ತಾರಂತೆ. ಈ ವಿಚಾರವನ್ನು ಸ್ವತಃ ರವಿಚಂದ್ರನ್ ಹೇಳಿಕೊಂಡಿದ್ದಾರೆ. "ನಾನು ನಗುವುದು ತುಂಬ ಕಮ್ಮಿ. ಆದರೆ ಹಂಸಲೇಖ ಅವರಿದ್ದಾಗ ಮಾತ್ರ ನಾನು ಜಾಸ್ತಿ ನಗುತ್ತೇನೆ. ಅವರಿದ್ದಾಗ ಬರುವ ನಗು, ಬೇರೆ ಯಾರಿದ್ದಾಗಲೂ ಬರೋದಿಲ್ಲ. ಹಂಸಲೇಖ ಜೊತೆಗಿದ್ದಾಗ ಬರುವ ನಗು ಒಂದು ತಿಂಗಳಿಗಾಗುವಷ್ಟು ನನ್ನ ಮನಸ್ಸಿನಲ್ಲಿ ಇರುತ್ತದೆ. ನಾವು ದೂರ ಆಗಿರಬಹುದು. ಆದರೆ, ನಮ್ಮಿಬ್ಬರ ನಡುವಿನ ಸ್ನೇಹ ಕಮ್ಮಿಯಾಗಿಲ್ಲ. ಒಟ್ಟಿಗೆ ನಾವು ಸಿನಿಮಾ ಮಾಡಿಲ್ಲದಿರಬಹುದು. ಆದರೆ ಸಮಯ ಬಂದಾಗ ಮತ್ತೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡಬಹುದು" ಎಂದು ರವಿಚಂದ್ರನ್ ಹೇಳಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka