ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಹಾಗೂ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು ಬೆಳಗ್ಗೆ 7 ರಿಂದ 9 ಗಂಟೆವರೆಗೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.ಬಿಎಂಆರ್‌ಸಿಎಲ್ ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಮಾರು 2 ತಾಸು ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಚಲ್ಲಘಟ್ಟದಿಂದ ಮೈಸೂರು ರಸ್ತೆ, ಮಜೆಸ್ಟಿಕ್‌ನಿಂದ ವೈಟ್‌ಫೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಮತ್ತು ಆರ್.ವಿ.ರಸ್ತೆ ಯಿಂದ ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲುಗಳು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 7 ಗಂಟೆಯಿಂದ ವೇಳಾಪಟ್ಟಿಯಂತೆ ಸಂಚರಿಸಲಿವೆ. ಬೆಳಗ್ಗೆ 9 ಗಂಟೆ ಬಳಿಕ ಮಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲುಗಳ ಸಂಚಾರವು ಸಹಜ ಸ್ಥಿತಿಯಲ್ಲಿರಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ರಾತ್ರಿ 2 ಗಂಟೆವರೆಗೂ ಸಂಚಾರ ವಿಸ್ತರಂಎ
ಐಪಿಎಲ್ ಪಂದ್ಯ ನಡೆಯಲಿರುವ ಏಪ್ರಿಲ್ 5ರ ಭಾನುವಾರದಂದು ಪ್ರಯಾಣಿಕರ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಅನುಕೂಲವಾಗುವಂತೆ ಮೆಟ್ರೋೕ ರೈಲು ಸೇವಾವಧಿಯನ್ನು 'ಬಿಎಂಆರ್‌ಸಿಎಲ್' ವಿಸ್ತರಿಸಿದೆ. ಅಂದು ಎಲ್ಲಾ ಮೆಟ್ರೋ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11:00 ಗಂಟೆ ಬದಲಿಗೆ ತಡರಾತ್ರಿ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ.ನೇರಳೆ ಮಾರ್ಗದಲ್ಲಿವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45 ಗಂಟೆಗೆ ರೈಲುಗಳು ಹೊರಡುತ್ತವೆ. ಹಸಿರು ಮಾರ್ಗದ ರೇಷ್ಮೆ ಸಂಸ್ಥೆ ಹಾಗೂ ಮಾದಾವರ ನಿಲ್ದಾಣದಿಂದ ರಾತ್ರಿ 12.45 ಗಂಟೆಗೆ; ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣದಿಂದ ರಾತ್ರಿ 12.30 ಹಾಗೂ ಆರ್.ವಿ. ರಸ್ತೆ ನಿಲ್ದಾಣದಿಂದ ರಾತ್ರಿ 02.00ಕ್ಕೆ ಕೊನೆಯ ರೈಲು ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ (ಮಜೆಸ್ಟಿಕ್) ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಕ್ಕಾಲು ಗಂಟೆಗಳ ಕಾಲ ಪ್ರಯಾಣಿಕರು ಪರದಾಟ
ನಮ್ಮ ಮೆಟ್ರೋ ಚಲ್ಲಘಟ್ಟ ಮತ್ತು ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗದಲ್ಲಿ ಕಳೆದ ಭಾನುವಾರ ಬೆಳ್ಳಂಬೆಳಗ್ಗೆ ರೈಲು ಸಂಚಾರ ವ್ಯತ್ಯಯವಾಗಿ ಮುಕ್ಕಾಲು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದರು. ಈ ಮಾರ್ಗದ ಎಂ.ಜಿ. ರಸ್ತೆ ಹಾಗೂ ಗರುಡಾಚಾರ್‌ಪಾಳ್ಯದ ಮೆಟ್ರೋ ನಿಲ್ದಾಣಗಳ ನಡುವೆ ತುರ್ತು ನಿರ್ವಹಣಾ ಕಾರ್ಯ ಕೈಗೊಂಡಿದ್ದರಿಂದಾಗಿ ಬೆಳಗ್ಗೆ 7 ಗಂಟೆಯಿಂದ 7.45ರವರೆಗೆ ಸಂಚಾರ ಸ್ಥಗಿತವಾಗಿತ್ತು. ಈ ಕುರಿತು ಬಿಎಂಆರ್‌ಸಿಎಲ್ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಬೆಳಗ್ಗೆ ತುರ್ತಾಗಿ ತೆರಳಬೇಕಿದ್ದವರು ತೊಂದರೆಗೀಡಾದರು.
