Dailyhunt
Namma Metro- ಮೇ ತಿಂಗಳಿಂದ ಹಳದಿ ಮಾರ್ಗದಲ್ಲಿ 5 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೆ BMRCL ಸಿದ್ಧತೆ

Namma Metro- ಮೇ ತಿಂಗಳಿಂದ ಹಳದಿ ಮಾರ್ಗದಲ್ಲಿ 5 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೆ BMRCL ಸಿದ್ಧತೆ

Vijay Karnataka 2 weeks ago

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಆರ್‌.ವಿ. ರಸ್ತೆ- ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಮೇ ತಿಂಗಳಿಂದ 5 ನಿಮಿಷಕ್ಕೊಂದು ರೈಲನ್ನು ಕಾರ್ಯಾಚರಣೆಗೊಳಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ವು ಯೋಜನೆ ರೂಪಿಸಿದೆ. 2025ರ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮಾರ್ಗವನ್ನು ಉದ್ಘಾಟಿಸಿದರು.

ಸದ್ಯ 8 ರೈಲುಗಳು 9 ನಿಮಿಷಗಳ ಆವರ್ತನದಲ್ಲಿ (ನಾನ್‌ಪೀಕ್‌ ಅವರ್‌- 14 ನಿಮಿಷ) ಸಂಚರಿಸುತ್ತಿವೆ. ಪಶ್ಚಿಮ ಬಂಗಾಳ ಮೂಲದ ಟಿಟಾಗರ್‌ ರೈಲ್‌ ಸಿಸ್ಟಂ ಲಿಮಿಟೆಡ್‌ (TRSL) ಈ ತಿಂಗಳಲ್ಲೇ ಎರಡು ರೈಲುಗಳನ್ನು ಪೂರೈಸಲಿದೆ.

ಮೇ ವೇಳೆ ಸೇವೆಗೆ ಲಭ್ಯ

''ಇದೀಗ ಟಿಆರ್‌ಎಸ್‌ಎಲ್‌ ಶೀಘ್ರವೇ ಎರಡು ರೈಲುಗಳನ್ನು ಪೂರೈಸಲಿದೆ. ಆದರೆ, ಇವು ವಾಣಿಜ್ಯ ಕಾರ್ಯಾಚರಣೆಗೆ ಮುನ್ನ 750 ಕಿಲೋ ಮೀಟರ್ ಪ್ರಾಯೋಗಿಕ ಸಂಚಾರಕ್ಕೆ ಒಳಪಡಬೇಕಿದೆ. ರಾತ್ರಿ ವೇಳೆ ಈ ಸಂಚಾರ ನಡೆಸಬೇಕಾಗಿದೆ. ಹೀಗಾಗಿ ಬಹುತೇಕ ಮೇ ತಿಂಗಳಿಗೆ ಇವು ಸೇವೆಗೆ ಲಭ್ಯವಾಗಲಿವೆ,'' ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು. ''ಬಳಿಕ 1 ರೈಲನ್ನು ತುರ್ತು ಸಂದರ್ಭಕ್ಕೆ ಮೀಸಲಿಟ್ಟುಕೊಂಡು ಉಳಿದ 9 ರೈಲುಗಳನ್ನು ವಾಣಿಜ್ಯ ಕಾರ್ಯಾಚರಣೆಗೆ ಬಳಸಲಾಗುವುದು. ಬಳಿಕ 5 ನಿಮಿಷಕ್ಕೊಂದರಂತೆ ರೈಲುಗಳ ಸಂಚಾರ ಲಭ್ಯವಾಗಲಿದೆ,'' ಎಂದು ಹೇಳಿದರು.

ಈ ಮೊದಲು ಚೀನಾದ ಸಿಆರ್‌ಆರ್‌ಸಿ ಜತೆಗೆ ರೈಲುಗಳ ಪೂರೈಕೆಗೆ ಬಿಎಂಆರ್‌ಸಿಎಲ್‌ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಮೇಕ್‌ ಇನ್‌ ಇಂಡಿಯಾ ನೀತಿಯಡಿ ಪಶ್ಚಿಮ ಬಂಗಾಳದ ಟಿಆರ್‌ಎಸ್‌ಎಲ್‌ನಿಂದ ತರಿಸಿಕೊಳ್ಳಬೇಕಾಯಿತು. ಆದರೆ, ಚೀನಾದಿಂದ ಪ್ರೊಟೋಟೈಪ್‌ ರೈಲು ಬರುವುದು, ಟಿಟಾಗರ್‌ನಿಂದ ರೈಲು ನಿರ್ಮಾಣ ಸೇರಿ ಒಟ್ಟಾರೆ 4 ವರ್ಷ ವಿಳಂಬವಾಗಿದೆ.

ಇನ್ನೂ 13 ರೈಲು ಬೇಕು

ಹಳದಿ ಮಾರ್ಗಕ್ಕೆ ಇನ್ನೂ 13 ರೈಲುಗಳು ಸೇರ್ಪಡೆ ಆಗಬೇಕಿದೆ. ಆ ಪೈಕಿ ಟಿಆರ್‌ಎಸ್‌ಎಲ್‌ 7 ಹಾಗೂ ಬಿಇಎಂಎಲ್‌ 6 ರೈಲುಗಳನ್ನು ಪೂರೈಸಬೇಕಿದೆ. ನೀಲಿ ಮಾರ್ಗದ ಹೊರವರ್ತುಲ ರಸ್ತೆಗೆ 16, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲು 21 ರೈಲನ್ನು ಪೂರೈಸಬೇಕಿರುವ ಬಿಇಎಂಎಲ್‌ ಜತೆಗೆ ಹೆಚ್ಚುವರಿಯಾಗಿ 6 ರೈಲು ಪೂರೈಸಲು ಬಿಎಂಆರ್‌ಸಿಎಲ್‌ ಕಳೆದ ವರ್ಷ 414 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಈ ರೈಲುಗಳು ವರ್ಷಾಂತ್ಯದಿಂದ ಪೂರೈಕೆ ಆಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka