Dailyhunt Logo
  • Light mode
    Follow system
    Dark mode
    • Play Story
    • App Story
ನಮ್ಮ ಮೆಟ್ರೋ ವ್ಯಾಪ್ತಿಯ ಎಲ್ಲಾ ನಿಲ್ದಾಣಗಳಲ್ಲೂ1274 ಕೋಟಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ ಅವಳಡಿಕೆಗೆ BMRCL ಪ್ರಸ್ತಾವನೆ!

ನಮ್ಮ ಮೆಟ್ರೋ ವ್ಯಾಪ್ತಿಯ ಎಲ್ಲಾ ನಿಲ್ದಾಣಗಳಲ್ಲೂ1274 ಕೋಟಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ ಅವಳಡಿಕೆಗೆ BMRCL ಪ್ರಸ್ತಾವನೆ!

Vijay Karnataka 2 months ago

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗಾಗಿ ಈಗಿನ ಮೂರು ಹಂತದ ಮಾರ್ಗ ಸೇರಿ ಮುಂದಿನ 3 'ಎ' ಕಾರಿಡಾರ್‌ಗಳ 177 ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ಅಳವಡಿಸಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು, ಇದಕ್ಕಾಗಿ 1274 ಕೋಟಿ ರೂ.

ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿದೆ.

ಸದ್ಯ ನಮ್ಮ ಮೆಟ್ರೋ 83 ನಿಲ್ದಾಣಗಳನ್ನು ಒಳಗೊಂಡಿದೆ. ಪ್ರಸ್ತುತ ಯೋಜಿತಗೊಂಡ ಹೆಬ್ಬಾಳ-ಸರ್ಜಾಪುರದವರೆಗಿನ 3ಎ ಕಾರಿಡಾರ್‌ ಸೇರಿದರೆ ಸುಮಾರು 191 ನಿಲ್ದಾಣಗಳು ನಿರ್ಮಾಣವಾದಂತಾಗಲಿವೆ. ಇದರಲ್ಲಿ ಈಗಾಗಲೇ ಗುಲಾಬಿ ಮಾರ್ಗದ 26 ಹಾಗೂ ಏರ್‌ಪೋರ್ಟ್‌ ಮಾರ್ಗದ 2 ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಲು ನಿರ್ಧಾರವಾಗಿದೆ.

ಪಿಎಸ್‌ಡಿ ಅಳವಡಿಕೆಗೆ ಹಿಂದಿನಿಂದಲೂ ಕೇಳಿಬರುತ್ತಿರುವ ಒತ್ತಾಯ

ಮೆಟ್ರೋ ಆರಂಭಿಕ ವರ್ಷಗಳಿಂದಲೂ ಪ್ರಯಾಣಿಕರ ಸುರಕ್ಷತೆಗಾಗಿ ಪಿಎಸ್‌ಡಿ ಅಳವಡಿಸುವಂತೆ ಒತ್ತಾಯವಿತ್ತು. ಸದ್ಯ ಹೆಚ್ಚು ಜನ ಸೇರುವ ಇಂಟರ್‌ಚೇಂಜ್‌ಗಳಾದ ಮೆಜೆಸ್ಟಿಕ್‌ ಹಾಗೂ ಆರ್‌.ವಿ.ರೋಡ್‌ ನಿಲ್ದಾಣಗಳಲ್ಲಿ ಮಾತ್ರ ಸ್ಟೀಲ್‌ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಗುಲಾಬಿ ಮಾರ್ಗದ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಯ ಕಾಮಗಾರಿ ಚಾಲ್ತಿಯಲ್ಲಿದೆ. ಉಳಿದಂತೆ ನಿಲ್ದಾಣಗಳ ಪ್ಲಾಟ್‌ಫಾರ್ಮ್ ಅಂಚು ಪ್ರಯಾಣಿಕರಿಗೆ ಅಪಾಯಕಾರಿಯಾಗಿವೆ.

ವಿಸ್ತೃತ ಯೋಜನೆ ವರದಿ ಪ್ರಕಾರ, ಬಿಎಂಆರ್‌ಸಿಎಲ್‌ ಪ್ರತಿದಿನ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಕಲ್ಪಿಸುತ್ತಿದೆ. ಕಳೆದೆರಡು ವರ್ಷಗಳಲ್ಲಿ ಮೆಟ್ರೋ ಟ್ರ್ಯಾಕ್‌ಗೆ ಅನಧಿಕೃತವಾಗಿ ಇಳಿದ ಘಟನೆಗಳು, ಆತ್ಮಹತ್ಯೆಗೆ ಯತ್ನ ಹಾಗೂ ಆಕಸ್ಮಿಕವಾಗಿ ಟ್ರ್ಯಾಕ್‌ಗೆ ಬಿದ್ದ ಘಟನೆಗಳು ಸಾಕಷ್ಟು ನಡೆದಿವೆ. ನಮ್ಮ ಮೆಟ್ರೋ ಸೂಸೈಡ್‌ ಸ್ಪಾಟ್‌ ಆಗುತ್ತಿದೆ ಎಂಬ ಟೀಕೆಗಳೂ ಕೇಳಿ ಬಂದಿವೆ.

ಮೆಟ್ರೋ ಟ್ರ್ಯಾಕ್‌ನಲ್ಲಿ 750 ವೋಲ್ಟ್‌ ಡಿಸಿ ಥರ್ಡ್‌ ರೈಲ್‌ (ವಿದ್ಯುತ್‌ ಕಂಬಿ) ಇದೆ. ಅನಪೇಕ್ಷಿತವಾಗಿ ಜನ ಟ್ರ್ಯಾಕ್‌ಗೆ ಇಳಿದರೂ ಪ್ಲಾಟ್‌ಫಾರ್ಮ್ನ ಎರಡೂ ಟ್ರ್ಯಾಕ್‌ಗಳನ್ನು ಎಮರ್ಜೆನ್ಸಿ ಟ್ರಿಪ್‌ ಸಿಸ್ಟ್‌ಂ ಸಕ್ರಿಯಗೊಳಿಸಿ ರೈಲನ್ನು ಸ್ಥಗಿತಗೊಳಿಸಿ ಪುನಃ ಆರಂಭಿಸಲು 15-20 ನಿಮಿಷ ತಗಲುತ್ತಿದೆ. ಇಡೀ ಮಾರ್ಗದ ಕಾರ್ಯಾಚರಣೆ ಮೇಲೆ ಇದು ಪರಿಣಾಮ ಬೀರುತ್ತಿದೆ.
ಪಿಎಸ್‌ಡಿ ಅಳವಡಿಸುವ ಪ್ರಸ್ತಾವನೆಯು ಈಗಿನ ನೇರಳೆ, ಹಸಿರು ಹಾಗೂ ಹಳದಿ ಮಾರ್ಗ ಸೇರಿದಂತೆ ಏರ್‌ಪೋರ್ಟ್‌ ಸಂಪರ್ಕಿಸುವ ನೀಲಿ ಮಾರ್ಗ ಮತ್ತು ಜೆ.ಪಿ.ನಗರ- ಕೆಂಪಾಪುರ ಹಾಗೂ ಹೊಸಹಳ್ಳಿ - ಕಡಬಗೆರೆ ವ್ಯಾಪ್ತಿಯ ನಿಲ್ದಾಣಗಳನ್ನು ಒಳಗೊಂಡಿದೆ. ಜತೆಗೆ, ಎತ್ತರಿಸಿದ ಮೆಟ್ರೋ ನಿಲ್ದಾಣಗಳಲ್ಲಿ ಅರ್ಧ ಎತ್ತರದ ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ ಮತ್ತು ಭೂಗತ ನಿಲ್ದಾಣಗಳಲ್ಲಿ ಪೂರ್ಣ ಎತ್ತರದ ಡೋರ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ.

ಪಿಎಸ್‌ಡಿ ಖರೀದಿಗಾಗಿ 747 ಕೋಟಿ ರೂ., ಸಿವಿಲ್‌ ಕಾಮಗಾರಿಗಳಿಗಾಗಿ 317 ಕೋಟಿ ರೂ. ಹಾಗೂ ಸಿಗ್ನಲಿಂಗ್‌, ಟೆಲಿಕಾಂ ಮತ್ತು ವಿದ್ಯುತ್‌ ಕಾಮಗಾರಿಗೆ 210 ಕೋಟಿ ರೂ. ತಗಲಬಹುದು ಎಂದು ಅಂದಾಜಿಸಿದೆ. ಮುಂಬರುವ ಹೊಸ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆ ಸುಲಭ. ಆದರೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಿಲ್ದಾಣಗಳಲ್ಲಿ ಅದನ್ನು ಅಳವಡಿಸುವುದು ಕಷ್ಟವಾಗಲಿದೆ. ಆದರೆ, ಇದು ಅತ್ಯಂತ ಅನಿವಾರ್ಯ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪಿಎಸ್‌ಡಿ ಎಂದರೇನು?

ಪ್ಲಾಟ್‌ಫಾರ್ಮ್ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ಮೆಟ್ರೋ ಪ್ಲಾಟ್‌ಫಾರ್ಮ್ ಅಂಚು ಹಾಗೂ ಟ್ರ್ಯಾಕ್‌ ನಡುವೆ ತಡೆಗೋಡೆಯಂತೆ ಕೆಲಸ ಮಾಡುತ್ತದೆ. ರೈಲು ಬಂದು ನಿಂತಾಗಷ್ಟೇ ಬಾಗಿಲ ಬಳಿ ಪಿಎಸ್‌ಡಿ ಬಾಗಿಲು ಸ್ಲೈಡ್‌ನಂತೆ ಬದಿಗೆ ಸರಿಯುತ್ತವೆ. ಇದರಿಂದ ರೈಲು ಬರುವಾಗ ಹಾರುವ, ಆಕಸ್ಮಿಕವಾಗಿ ಟ್ತ್ಯಾಕ್‌ಗೆ ಬೀಳುವ ಘಟನೆಗಳು ತಪ್ಪಲಿವೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka