ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ನಡುವೆ ಇರಾನ್‌ನಿಂದ ಪ್ರಾಣಬೆದರಿಕೆಗಳು ಹೆಚ್ಚುತ್ತಿದ್ದಂತೆ ಕಳೆದ ತಿಂಗಳು ಟರ್ಕಿ ಪ್ರವಾಸ ಕೈಗೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವೇಳೆ ಅಲ್ಲಿಂದ ಹಿಂತಿರುಗುವಾಗ ತಾವು ಪ್ರವಾಸಕ್ಕೆ ಬಳಸಿದಿದ ಕತಾರ್ ಉಡುಗೊರೆಯ ವಿಮಾನ ಕೈಬಿಟ್ಟು, ಕಿಚನ್ ಟ್ರಕ್‌ನಲ್ಲಿ ಅಡಗಿಕೊಂಡು ಏರ್‌ಪೋರ್ಸ್ ಸಿ -32 ಎ ವಿಮಾನವನ್ನು ಏರಿ ರಹಸ್ಯವಾಗಿ ಪ್ರಯಾಣಿಸಿದ್ದರು ಎಂಬ ವರದಿಗಳನ್ನು ಇದೀಗ ಸ್ವತಃ ಡೊನಾಲ್ಡ್ ಟ್ರಂಪ್ ನಿಜ ಎಂದು ಒಪ್ಪಿಕೊಂಡಿದ್ದು, ತಮಗೆ ಸಾಕಷ್ಟು ಬೆದರಿಕೆಗಳಿವೆ ಎಂದು ತಿಳಿಸಿದ್ದಾರೆ.
ರಹಸ್ಯವಾಗಿ ವಿಮಾನ ಬದಲಿಸಿದ್ದು ನಿಜ ಎಂದ ಡೊನಾಲ್ಡ್ ಟ್ರಂಪ್
ಇರಾನ್ ದಾಳಿಯ ಬೆದರಿಕೆಗಳ ನಡುವೆ ಅಮೆರಿಕಾದ ಗುಪ್ತಚರ ಇಲಾಖೆಯ ಮಾಹಿತಿ ಹಾಗೂ ಭದ್ರತಾ ತಂಡಗಳ ಸೂಚನೆ ಮೇರೆಗೆ ಟರ್ಕಿಯಿಂದ ಅಮೆರಿಕಾಗೆ ತೆರಳುವಾಗ ಏರ್ಫೋರ್ಸ್ ಸಿ -32 ಎ ವಿಮಾನಕ್ಕೆ ರಹಸ್ಯವಾಗಿ ಸ್ಥಳಾಂತರಿಸಲಾಗಿದೆ ಎಂಬ ವರದಿಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ಇದು ಹೀಗೆ ವಿಮಾನ ಬದಲಿಸಿ ರಹಸ್ಯವಾಗಿ ಪ್ರಯಾಣಿಸಿದ್ದು, ನಿಜ ಎಂದಿದ್ದು "ನಾನು ಸೀಕ್ರೆಟ್ ಸರ್ವಿಸ್ ಮತ್ತು ಮಿಲಿಟರಿಯ ಮೂಲಕ ಸೂಚನೆಗಳನ್ನು ಅನುಸರಿಸುತ್ತೇನೆ. ಅವರು ನಾನು ಬೇರೆ ವಿಮಾನದಲ್ಲಿ ಬಯಸಿದ್ದರು. ಹಾಗಾಗಿ ನಾನು ಅವರು ಹೇಳಿದ್ದನ್ನು ಮಾಡುದ್ದೇನೆ. ಬಹುಶಃ ನನಗೆ ಬೆದರಿಕೆ ಇತ್ತು ಅಂತ ನಾನು ಭಾವಿಸುತ್ತೇನೆ. ನಾನು ಅದರ ಬಗ್ಗೆ ಹೆಚ್ಚು ಕೇಳಲಿಲ್ಲ ಆದಾಗ್ಯೂ, ವಾಸ್ತವವಾಗಿ ನಾನು ಹಾರಾಟ ನಡೆಸಿದ ವಿಮಾನವು ಹೆಚ್ಚಿನ ಅಪಾಯದಲ್ಲಿತ್ತು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅವರು ಆ ವಿಮಾನವನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ನನಗೆ ಅನಿಸುತ್ತದೆ. ಅಲ್ಲದೆ ನನಗೆ ಬಹಳಷ್ಟು ಬೆದರಿಕೆಗಳು ಬರುತ್ತಿವೆ" ಎಂದು ತಿಳಿಸಿದ್ದಾರೆ.ನನಗೆ ಸಾಕಷ್ಟು ಬೆದರಿಕೆಗಳಿವೆ ಎಂದು ಟ್ರಂಪ್ ಹೇಳಿಕೆ
ಅಲ್ಲದೆ, ತನಗೆ ಬಹಳಷ್ಟು ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿರುವ ಟ್ರಂಪ್ "ನಿಮಗೆ ತಿಳಿದಿಲ್ಲದ ಹಲವು ಬೆದರಿಕೆಗಳು ನನಗಿವೆ. ಯಾವುದೇ ಪರಿಣಾಮಕಾರಿ ಅಧ್ಯಕ್ಷರಿಗೆ ಹಲವು ಬೆದರಿಕೆಗಳು ಇರುತ್ತವೆ. ಪರಿಣಾಮಕಾರಿಯಲ್ಲದ ಅಧ್ಯಕ್ಷರು ಬೆದರಿಕೆಗೆ ಒಳಗಾಗುವುದಿಲ್ಲ ಮತ್ತು ನಾನು ಬಹುಶಃ ಅತ್ಯಂತ ಪರಿಣಾಮಕಾರಿ ಅಧ್ಯಕ್ಷ ಎಂದು ನಾನು ಭಾವಿಸುತ್ತೇನೆ. ಆದಾಗ್ಯೂ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇದ್ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ" ಎಂದು ತಿಳಿಸಿದ್ದಾರೆ.ಏನಿದು ಘಟನೆ?
ಮಧ್ಯಪ್ರಾಚ್ಯದಲ್ಲಿನ ಯುದ್ಧದ ನಡುವೆ ಕಳೆದ ತಿಂಗಳು ಜುಲೈನಲ್ಲಿಟರ್ಕಿಯ ಅಂಕಾರದಲ್ಲಿ ನಡೆದ ನ್ಯಾಟೋ ಶೃಂಗಸಭೆಗೆ ಡೊನಾಲ್ಡ್ ಟ್ರಂಪ್ ಕತಾರ್ ಉಡುಗೊರೆಯಾಗಿ ನೀಡಿದ್ದ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಆದಾಗ್ಯೂ, ಸಭೆಯ ಬಳಿಕ ಅಮೆರಿಕಾಗೆ ಹಿಂದಿರುಗುವ ಸಮಯದಲ್ಲಿ ಇರಾನ್‌ನಿಂದ ದಾಳಿಯ ಬೆದರಿಕೆಗಳಿವೆ ಎಂಬ ಭದ್ರತಾ ಕಾಳಜಿಗಳ ಹಿನ್ನಲೆಯಲ್ಲಿ ಕೊನೆಯ ಕ್ಷಣದಲ್ಲಿ ಕತಾರಿ ವಿಮಾನದಲ್ಲಿ ಪ್ರಯಾಣವನ್ನು ಕೈಬಿಟ್ಟು, ಅಮೆರಿಕಾದ ಏರ್‌ಫೋರ್ಸ್ ಓನ್ ವಿಮಾನದಲ್ಲಿ ಹಾರಾಟ ನಡೆಸಿದ್ದರು ಎಂಬ ಹೇಳಲಾಗಿತ್ತು. ಆದ್ರೆ, ಇನ್ನೂ ರೋಚಕವೆಂಬಂತೆ ಈ ಏರ್ಫೋರ್ಸ್ ವಿಮಾನದಿಂದ ಟ್ರಂಪ್ ರಹಸ್ಯವಾಗಿ ಕಿಚನ್ ಟ್ರಕ್ ಮೂಲಕ ಸಣ್ಣ ಏರ್ ಫೋರ್ಸ್ ಸಿ-32ಎ ವಿಮಾನಕ್ಕೆ ಶಿಫ್ಟ್ ಆಗಿದ್ದು, ಹೀಗೆ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಸದ್ಯ ಇದನ್ನು ಸ್ವತಃ ಟ್ರಂಪ್ ಒಪ್ಪಿಕೊಂಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
