Dailyhunt Logo
  • Light mode
    Follow system
    Dark mode
    • Play Story
    • App Story
ʻನನ್ನ ಪತಿ ದಯೆ, ನಿಸ್ವಾರ್ಥದ ಪ್ರತಿರೂಪʼ: ʻಕರಾವಳಿʼ ವಿವಾದದ ಬೆನ್ನಲ್ಲೇ ಪ್ರಜ್ವಲ್‌ ದೇವರಾಜ್‌ ಪತ್ನಿ ಪೋಸ್ಟ್‌ ವೈರಲ್!

ʻನನ್ನ ಪತಿ ದಯೆ, ನಿಸ್ವಾರ್ಥದ ಪ್ರತಿರೂಪʼ: ʻಕರಾವಳಿʼ ವಿವಾದದ ಬೆನ್ನಲ್ಲೇ ಪ್ರಜ್ವಲ್‌ ದೇವರಾಜ್‌ ಪತ್ನಿ ಪೋಸ್ಟ್‌ ವೈರಲ್!

Vijay Karnataka 3 months ago

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಸಿನಿಮಾ ಸದ್ಯದಲ್ಲೇ ರಿಲೀಸ್‌ಗೆ ಸಜ್ಜಾಗುತ್ತಿದೆ. ಆದರೆ, ಚಿತ್ರದ ರಿಲೀಸ್‌ಗೂ ಮುನ್ನವೇ ಚಿತ್ರತಂಡದಲ್ಲಿ ಮೂಡಿರುವ ಭಿನ್ನಾಭಿಪ್ರಾಯಗಳು ಹಾಗೂ ವಿವಾದಗಳು ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡ್ತಿವೆ. ಇವೆಲ್ಲದರ ನಡುವೆ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಪೋಸ್ಟ್ ಒಂದು ಸೋಶಿಯಲ್‌ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ʻಕರಾವಳಿʼ ಸಿನಿಮಾದ ಸಂಭಾವನೆ ವಿಚಾರವಾಗಿ ನಟ ಪ್ರಜ್ವಲ್ ದೇವರಾಜ್ ಹಾಗೂ 'ಕರಾವಳಿ' ಸಿನಿಮಾದ ನಿರ್ಮಾಪಕ ಕಮ್ ನಿರ್ದೇಶಕ ಗುರುದತ್ ಗಾಣಿಗ ನಡುವೆ ದೊಡ್ಡ ಬಿರುಕು ಮೂಡಿದೆ. ನಿರ್ದೇಶಕರೇ ಹೇಳುವಂತೆ ಈ ಚಿತ್ರದಲ್ಲಿ ನಟಿಸಲು ಪ್ರಜ್ವಲ್ ಅವರಿಗೆ 1.25 ಕೋಟಿ ರೂ. ಸಂಭಾವನೆ ನಿಗದಿಯಾಗಿತ್ತು. ಇದರಲ್ಲಿ ಈಗಾಗಲೇ 1 ಕೋಟಿ ರೂಪಾಯಿ ತಲುಪಿದ್ದು, ಬಾಕಿ ಇರುವ ಇನ್ನುಳಿದ ಸಂಭಾವನೆಯನ್ನ ನೀಡುವವರೆಗೂ ತಾವು ಡಬ್ಬಿಂಗ್ ಮಾಡುವುದಿಲ್ಲ ಎಂದು ಪ್ರಜ್ವಲ್ ಪಟ್ಟು ಹಿಡಿದಿದ್ದಾರೆ.

ಈ ಹಠಕ್ಕೆ ಪರ್ಯಾಯವಾಗಿ ಸಿನಿಮಾ ತಂಡ ಪ್ರಜ್ವಲ್ ಅವರ ಧ್ವನಿಯ ಬದಲಿಗೆ ಬೇರೆಯವರಿಂದ ಡಬ್ಬಿಂಗ್ ಮಾಡಿಸಿ, ಇತ್ತೀಚೆಗೆ ಟ್ರೈಲರ್ ಬಿಡುಗಡೆ ಮಾಡಿದೆ. ಟ್ರೈಲರ್‌ನಲ್ಲಿ ನೆಚ್ಚಿನ ನಟನ ಧ್ವನಿ ಇಲ್ಲದಿರುವುದನ್ನ ಕಂಡು ಪ್ರಜ್ವಲ್ ಅಭಿಮಾನಿಗಳು ಚಿತ್ರಮಂದಿರದಲ್ಲೇ ಗಲಾಟೆ ನಡೆಸಿ, ನಿರ್ದೇಶಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇತ್ತೀಚೆಗಷ್ಟೇ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು. ಈ ಸಂದರ್ಭವನ್ನ ಬಳಸಿಕೊಂಡು ಪತ್ನಿ ರಾಗಿಣಿ ಅವರು ಪತಿಯನ್ನ ಶ್ಲಾಘಿಸಿ ಸುದೀರ್ಘವಾದ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ. 'ದಿ ಬೆಸ್ಟ್ ಹಸ್ಬೆಂಡ್' ಎಂದು ಬರೆದಿರುವ ಟೀಶರ್ಟ್ ಧರಿಸಿ ಪತಿಯ ಜೊತೆಗಿರುವ ಫೋಟೋ ಹಾಗೂ ಪ್ರಜ್ವಲ್ ಅವರ 'ಜಂಟಲ್‌ಮನ್' ಸಿನಿಮಾದ ರಾಜ್ಯ ಪ್ರಶಸ್ತಿ ವಿಜೇತ ಕ್ಷಣದ ಫೋಟೊಗಳನ್ನ ರಾಗಿಣಿ ಅಪ್‌ಲೋಡ್ ಮಾಡಿದ್ದಾರೆ. "ತನ್ನ ಸುತ್ತಮುತ್ತಲಿನ ಎಲ್ಲರ ಒಳಿತನ್ನೇ ಬಯಸುವ ವ್ಯಕ್ತಿಗೆ, ನನ್ನನ್ನ ರಾಜಕುಮಾರಿಯಂತೆ ಕಾಣುವ ಪತಿಗೆ, ಕುಟುಂಬಕ್ಕೆ ಮೊದಲ ಆದ್ಯತೆ ನೀಡುವ ಮಗನಿಗೆ ಮತ್ತು ಎರಡು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಭಿಮಾನಿಗಳಿಗೆ ಅತ್ಯುತ್ತಮವಾದದ್ದನ್ನೇ ನೀಡಿದ ನಟನಿಗೆ.. ನೀವು ದಯೆ, ಆತ್ಮೀಯತೆ ಮತ್ತು ನಿಸ್ವಾರ್ಥತೆಯ ಸಾಕಾರರೂಪವಾಗಿದ್ದೀರಿ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬರಿಗೂ ನೀವು ನೀಡುವ ವಿನಮ್ರತೆ ಮತ್ತು ಗೌರವವೇ ನಿಮ್ಮ ಶಕ್ತಿ. ನಿಮ್ಮ ಕಲೆ, ನಮ್ಮ ಚಿತ್ರರಂಗ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ನೀವು ಯಾವಾಗಲೂ ನಿಮ್ಮ ಸಂಪೂರ್ಣ ಶ್ರಮವನ್ನು ನೀಡಿದ್ದೀರಿ. ಇದೇ ನಿಮ್ಮ ಶಾಶ್ವತ ಗುಣ! ನೀವು ಹೇಗಿದ್ದೀರೋ ಹಾಗೆಯೇ ಮತ್ತು ನೀವು ಎತ್ತಿಹಿಡಿಯುವ ಮೌಲ್ಯಗಳಿಗಾಗಿ ನಾವು ನಿಮ್ಮನ್ನ ಪ್ರೀತಿಸುತ್ತೇವೆ. ನೀವು ನಮಗೆ ಹೆಮ್ಮೆ ತರುತ್ತೀರಿ. ಹುಟ್ಟುಹಬ್ಬದ ಶುಭಾಶಯಗಳು ಕಣ್ಣಾ!" ಎಂದು ರಾಗಿಣಿ ಬರೆದುಕೊಂಡಿದ್ದಾರೆ.


ಜುಲೈ 24 ರಂದು 'ಕರಾವಳಿ' ಸಿನಿಮಾ ರಿಲೀಸ್‌ ಆಗಬೇಕಿದೆ. ಈ ಮಧ್ಯೆ ಸಿನಿಮಾದ ಯಶಸ್ಸಿಗೆ ಪ್ರಜ್ವಲ್ ಅವರ ಪ್ರಚಾರದ ಬೆಂಬಲ ಅತಿ ಮುಖ್ಯವಾಗಿದೆ. ಹೀಗಾಗಿ, ಚಿತ್ರತಂಡ ಹಾಗೂ ಪ್ರಜ್ವಲ್ ದೇವರಾಜ್ ಒಟ್ಟಿಗೆ ಕುಳಿತು ಮಾತನಾಡಿ ಈ ಹಣಕಾಸಿನ ಸಮಸ್ಯೆಯನ್ನ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತಾರಾ? ʻಕರಾವಳಿʼ ಸಿನಿಮಾ ಯಾವುದೇ ಅಡೆತಡೆಯಿಲ್ಲದೆ ತೆರೆಗೆ ಬರುತ್ತದಾ ಎಂಬುದನ್ನ ಕಾದು ನೋಡಬೇಕಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka