Dailyhunt Logo
  • Light mode
    Follow system
    Dark mode
    • Play Story
    • App Story
ನೇಮಕಾತಿ ಹಗರಣ ಕಳಂಕದ ನಡುವೆಯೂ KAS ಪರೀಕ್ಷೆಗೆ KPSC ಸಿದ್ಧತೆ: 1.47ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ, ನ.15ಕ್ಕೆ ಎಕ್ಸಾಂ ಸಾಧ್ಯತೆ!

ನೇಮಕಾತಿ ಹಗರಣ ಕಳಂಕದ ನಡುವೆಯೂ KAS ಪರೀಕ್ಷೆಗೆ KPSC ಸಿದ್ಧತೆ: 1.47ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ, ನ.15ಕ್ಕೆ ಎಕ್ಸಾಂ ಸಾಧ್ಯತೆ!

Vijay Karnataka 1 month ago

ಬೆಂಗಳೂರು: ಅಕ್ರಮ ನೇಮಕಾತಿ ಪ್ರಕರಣದ ಉರುಳು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಸದಸ್ಯರ ಕೊರಳಿಗೆ ಸುತ್ತಿಕೊಂಡು, ಆಯೋಗದ ಮೇಲಿನ ಕಳಂಕ ಇನ್ನೂ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಯೋಗ 319 ಕೆಎಎಸ್‌ ಅಧಿಕಾರಿಗಳ ನೇಮಕಕ್ಕೆ ನ.15ರಂದು ಪ್ರಿಲಿಮಿನರಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.

ವಿವಾದ ನಡುವೆ ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ KPSC ಸಿದ್ದತೆ

ಕಳೆದ ಸಾಲಿನ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಾದ ಅನುವಾದದ ಎಡವಟ್ಟು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತಿತರ ಕಾರಣಗಳಿಂದ ಪಾಠ ಕಲಿತಿರುವ ಆಯೋಗ, ಈ ಬಾರಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ಹಾಗೂ ಒಎಂಆರ್‌ ಶೀಟ್‌ನ ಮೂರು ಪ್ರತಿ ಪರಿಚಯ ಸೇರಿ ಸಾಕಷ್ಟು ಹೊಸ ಸುಧಾರಣೆಗಳನ್ನು ಪರಿಚಯಿಸಲು ಮುಂದಾಗಿದೆ.

2026-27ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ ಗ್ರೂಪ್‌ 'ಎ' ಮತ್ತು 'ಬಿ' ವೃಂದದ ಒಟ್ಟು 319 (ಉಳಿಕೆ ಮೂಲ ವೃಂದ 297 + ಹೈದರಾಬಾದ್‌-ಕರ್ನಾಟಕ ವೃಂದ 22) ಹುದ್ದೆಗಳಿಗೆ ಸುಮಾರು 1.47 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹಿಂದಿನ ಕೆಎಎಸ್‌ ಪರೀಕ್ಷೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ‌ ಎನ್ನಲಾಗಿದ್ದು, 319 (ಗ್ರೂಪ್‌ 'ಎ'-117, ಗ್ರೂಪ್‌ 'ಬಿ'- 202) ಹುದ್ದೆಗಳಿಗೆ ಸುಮಾರು 461 ಪಟ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಂತಾಗಿದೆ.

ಕಳೆದ ಜು.31ರಂದು ಅಧಿಸೂಚನೆ ಪ್ರಕಟಿಸಿ ಅರ್ಜಿ ಸಲ್ಲಿಸಲು ಆಯೋಗ ಆ.31ರವರೆಗೆ ಅವಕಾಶ ನೀಡಿತ್ತು. ಆನಂತರ ತಾಂತ್ರಿಕ ಕಾರಣ ನೀಡಿ ಅರ್ಜಿ ಸಲ್ಲಿಸಲು ಸೆ.7ರವರೆಗೆ ಅವಧಿ ವಿಸ್ತರಿಸಿತ್ತು. ಅಧಿಸೂಚನೆಯಲ್ಲಿ ಪ್ರಕಟಿಸಿದ್ದಂತೆ ಪ್ರಿಲಿಮಿನರಿ ಪರೀಕ್ಷೆ ನಡೆಸಲು ಆಯೋಗ ಸಿದ್ಧತೆ ಆರಂಭಿಸಿದೆ. ಅನಿವಾರ್ಯ ಸಂದರ್ಭಗಳು ಎದುರಾಗದಿದ್ದರೆ ಬಹುತೇಕ ನಿಗದಿತ ದಿನಾಂಕದಂದೇ ಪರೀಕ್ಷೆ ನಡೆಸಲು ಆಯೋಗ ಉದ್ದೇಶಿಸಿದೆ.

ಪರೀಕ್ಷಾ ಸುಧಾರಣಾ ಕ್ರಮಗಳು

ಕೆಪಿಎಸ್‌ಸಿ ತಾನು ನಡೆಸುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಸದಾ ಕೇಳಿ ಬರುತ್ತಿರುವ ಅಕ್ರಮದ ಆರೋಪಗಳಿಗೆ ಶಾಶ್ವತವಾಗಿ ತಿಲಾಂಜಲಿ ನೀಡಲು ಮುಂದಾಗಿದ್ದು, ಪರೀಕ್ಷೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ನೇಮಕ ಪ್ರಕ್ರಿಯೆ ಗರಿಷ್ಠ ವೇಗಗೊಳಿಸಲು ಮೂರು ಮಹತ್ವದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ.

ಗೆಜೆಟೆಡ್‌ ಪ್ರೊಬೇಷನರಿ ಸೇರಿ ಆಯೋಗ ನಡೆಸುವ ಎಲ್ಲಾಒಎಂಆರ್‌ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಹೊಸ ನಿಯಮಗಳು ಅನ್ವಯವಾಗಲಿವೆ. ಅವುಗಳಲ್ಲಿ ಮೊದಲನೆಯದು ಒಎಂಆರ್‌ ಶೀಟ್‌ನ ಮೂರು ಪ್ರತಿ ಪರಿಚಯಿಸಿ, ಪರೀಕ್ಷೆ ಮುಗಿದ 24 ಗಂಟೆಯೊಳಗೆ ವೆಬ್‌ಸೈಟ್‌ನಲ್ಲಿ ಒಎಂಆರ್‌ ಶೀಟ್‌ ಪ್ರಕಟಿಸುವುದು ಮತ್ತು ಆನಂತರ ಕೀ ಉತ್ತರಗಳನ್ನು ಪ್ರಕಟಿಸುವುದು ಸೇರಿದೆ.

ಎರಡನೇಯದಾಗಿ, ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗೆ ಹಲವು ತಿಂಗಳು ಬೇಕಾಗುವುದರಿಂದ ನೇಮಕ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿತ್ತು. ಅದನ್ನು ತಪ್ಪಿಸಲು, ತಾನೇ ನಡೆಸುತ್ತಿದ್ದ ಪ್ರಾಥಮಿಕ ದಾಖಲೆ ಪರಿಶೀಲನೆ ಕೈಬಿಡಲು ಆಯೋಗ ಮುಂದಾಗಿದೆ. ಇನ್ನು ಮುಂದೆ ಕೆಪಿಎಸ್‌ಸಿ ದಾಖಲೆ ಪರಿಶೀಲನೆ ಮಾಡುವುದಿಲ್ಲ. ಬದಲಾಗಿ, ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆಗಳಲ್ಲಿಯೇ ನಡೆಸಲು ಉದ್ದೇಶಿಸಲಾಗಿದೆ.

ಮೂರನೇಯದಾಗಿ ವರ್ಷಾನುಗಟ್ಟಲೆ ಎಳೆಯುತ್ತಿದ್ದ ಗೆಜೆಟೆಡ್‌ ಪ್ರೊಬೇಷನರಿ (ಕೆಎಎಸ್‌) ನೇಮಕ ಪ್ರಕ್ರಿಯೆಗೆ ವೇಗ ನೀಡಲು ಗರಿಷ್ಠ 11 ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸಲು ಮುಂದಾಗಿದೆ. ಒಟ್ಟಾರೆ ಚುನಾವಣೆಗಳಲ್ಲಿ ಮತದಾನಕ್ಕೆ ಅನುಸರಿಸುತ್ತಿರುವ 'ಪೂಲ್‌ ಪ್ರೂಫ್‌ ಸೆಕ್ಯುರಿಟಿ' ಮಾದರಿಯಲ್ಲಿ ಪರೀಕ್ಷೆಗೆ ಭದ್ರತೆ ಕೈಗೊಳ್ಳಲು ಆಯೋಗ ಚಿಂತನೆ ನಡೆಸಿದೆ.

ಅಂತಿಮ ಪಟ್ಟಿ ಮೇಲೆ ಕಾರ್ಮೋಡ?

ಈ ಮಧ್ಯೆ, 2024-25ನೇ ಸಾಲಿನಲ್ಲಿ 384 ಕೆಎಎಸ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಕರ್ನಾಟಕ ಲೋಕಸೇವಾ ಆಯೋಗ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಹೈಕೋರ್ಟ್‌ ಅನುಮತಿಗಾಗಿ ಕಾಯುತ್ತಿದೆ.

ಸಂದರ್ಶನ ಸಂದರ್ಭದಲ್ಲಿ ಹೈಕೋರ್ಟ್‌ ವಿಭಾಗೀಯಪೀಠ, ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿ. ಆದರೆ, ಕೋರ್ಟ್‌ ಅನುಮತಿ ಇಲ್ಲದೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತಿಲ್ಲ ಎಂದು ಆದೇಶ ನೀಡಿದೆ. ಇದು ಆಯೋಗದ ಕೈ ಕಟ್ಟಿಹಾಕಿದೆ.

ಕಳೆದ ವಿಚಾರಣೆ ವೇಳೆ ಕೆಪಿಎಸ್‌ಸಿ ವಕೀಲರು ಹೈಕೋರ್ಟ್‌ ವಿಭಾಗೀಯ ಪೀಠದ ಮುಂದೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೆ ಅನುಮತಿ ಕೋರಿದರೂ ನ್ಯಾಯಾಲಯ ಒಪ್ಪಿಗೆ ನೀಡಲಿಲ್ಲ. ಹಾಗಾಗಿ, ಈಗ ಆಯೋಗ ಅಸಹಾಯಕ ಸ್ಥಿತಿಯಲ್ಲಿದೆ.

ಅದಲ್ಲದೆ, ಆ ನೇಮಕ ಪ್ರಕ್ರಿಯೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಆ ಬಗ್ಗೆ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಹಾಗಾಗಿ, ಆ ಆಯ್ಕೆ ಪಟ್ಟಿಯ ಮೇಲೂ 'ಕಾರ್ಮೋಡ' ಕವಿದಿದ್ದು, ಅದರ ಸ್ಥಿತಿ ಏನಾಗಲಿದೆಯೋ ಏನೋ ಎಂಬ ಆತಂಕದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಇದ್ದಾರೆ .

"ಈ ಮೊದಲೇ ತಾತ್ಕಾಲಿಕವಾಗಿ ನಿಗದಿಪಡಿಸಿರುವಂತೆ ನ.15ಕ್ಕೆ ಗೆಜೆಟೆಟ್‌ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಪ್ರಿಲಿಮಿನರಿ ಪರೀಕ್ಷೆ ನಡೆಸಲು ಆಯೋಗ ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದೆ."

-ಕೆ.ಜ್ಯೋತಿ, ಕಾರ್ಯದರ್ಶಿ, ಕೆಪಿಎಸ್‌ಸಿ
Dailyhunt
Disclaimer: This content has not been generated, created or edited by Dailyhunt. Publisher: Vijay Karnataka