Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ ಪ್ರವಾಹಕ್ಕೆ ಸಿಲುಕಿದ 13 ಮಂದಿ ಕನ್ನಡಿಗರು! 290ಕ್ಕೂ ಅಧಿಕ ಭಾರತೀಯರು ಮಿಸ್ಸಿಂಗ್‌, ರಕ್ಷಣೆಗೆ ತುರ್ತು ಸಹಾಯವಾಣಿ ಆರಂಭ

ನೇಪಾಳ ಪ್ರವಾಹಕ್ಕೆ ಸಿಲುಕಿದ 13 ಮಂದಿ ಕನ್ನಡಿಗರು! 290ಕ್ಕೂ ಅಧಿಕ ಭಾರತೀಯರು ಮಿಸ್ಸಿಂಗ್‌, ರಕ್ಷಣೆಗೆ ತುರ್ತು ಸಹಾಯವಾಣಿ ಆರಂಭ

Vijay Karnataka 1 week ago

ಬೆಂಗಳೂರು/ಕಾಠ್ಮಂಡು: ನೇಪಾಳದ ಭೋಟೆ ಕೋಶಿ ಬಳಿ ಬುಧವಾರ(ಆ.26) ಸಂಭವಿಸಿದ ದಿಢೀರ್‌ ಪ್ರವಾಹದಲ್ಲಿ ನಾಪತ್ತೆಯಾದ ಭಾರತೀಯರ ಸಂಖ್ಯೆ 290ಕ್ಕೂ ಅಧಿಕಕ್ಕೆ ತಲುಪಿದ್ದು, 200 ಮಂದಿ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ. ಸಂತ್ರಸ್ತರ ನೆರವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮ ವಹಿಸಿವೆ.

ನೇಪಾಳ ಪ್ರವಾಹಕ್ಕೆ ಸಿಲುಕಿದ 13ಕ್ಕೂ ಅಧಿಕ ಕನ್ನಡಿಗರು

ನೇಪಾಳದಲ್ಲಿ ಕರ್ನಾಟಕದ 13ಕ್ಕೂ ಅಧಿಕ ಪ್ರವಾಸಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದು, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ''ಕಾಠ್ಮಂಡುಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗುವುದು. ಮುಂದಿನ ಮಾಹಿತಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ದಿಲ್ಲಿಯ ಸ್ಥಾನಿಕ ಆಯುಕ್ತರಿಗೂ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ,'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಈ ಮಧ್ಯೆ, ರಾಜ್ಯದ ವ್ಯಕ್ತಿಗಳು ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದಿದ್ದರೆ ತಕ್ಷಣವೇ ಮಾಹಿತಿ ಹಂಚಿಕೊಳ್ಳಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸಹಾಯವಾಣಿ ಸೇವೆ ಆರಂಭಿಸಿದೆ.

''ನೇಪಾಳದಲ್ಲಿ ತಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆ ಎಂಬ ಶಂಕೆ ಇದ್ದರೆ ಸಾರ್ವಜನಿಕರು ನಾಪತ್ತೆಯಾದವರ ಪೂರ್ಣ ಹೆಸರು, ಮೊಬೈಲ್‌ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ ಮತ್ತು ಸಮಯ ಹಾಗೂ ಕಾಯಂ ವಿಳಾಸದ ವಿವರವನ್ನು ಕೂಡಲೇ ಸರ್ಕಾರಕ್ಕೆ ಒದಗಿಸಬೇಕು,'' ಎಂದು ಸರ್ಕಾರ ಮನವಿ ಮಾಡಿದೆ.

ಪ್ರವಾಹದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ತುರ್ತು ಕಾರ್ಯಚರಣೆ ಆರಂಭ

​ಈ ವಿವರಗಳನ್ನು ನಮೂದಿಸಲು ವಿಶೇಷ ಗೂಗಲ್‌ ಫಾರ್ಮ್ ಲಿಂಕ್‌ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಾಗೆಯೇ ​ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (ಎಸ್‌ಇಒಸಿ) ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ ಸೇವೆ ಆರಂಭಿಸಿದ್ದು, ಸಾರ್ವಜನಿಕರು 1070 (ಟೋಲ್‌ ಫ್ರೀ) ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು. ಇ-ಮೇಲ್‌ ಮೂಲಕ ಮಾಹಿತಿ ಹಂಚಿಕೊಳ್ಳಬಹುದಾದ ವಿಳಾಸ: seockarnataka@gmail.com ಆಗಿದೆ.

ನೇಪಾಳದಲ್ಲಿ ಸಿಲುಕಿರುವ ಭಾರತೀಯರಿಗೆ ತುರ್ತು ನೆರವು ನೀಡಲು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತುರ್ತು ವಾಟ್ಸಾಪ್‌ ಹಾಗೂ ಕರೆ ಮಾಡಬಹುದಾದ ಸಂಖ್ಯೆಗಳ ವಿವರ ಹೀಗಿದೆ: +977 9851316807, +977 9709107500 ಅಥವಾ +977 9810326117

ಸಾವಿನ ಸಂಖ್ಯೆ 392ಕ್ಕೆ ಏರಿಕೆ, 290ಕ್ಕೂ ಅಧಿಕ ಭಾರತೀಯರು ನಾಪತ್ತೆ

ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ನೆರೆಯಿಂದಾಗಿ ಸದ್ಯ ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದ್ಯ ನೇಪಾಳ ಪ್ರವಾಹಕ್ಕೆ ಸಿಲುಕಿ 392 ಮಂದಿ ಸಾವನ್ನಪ್ಪಿದ್ದು, 1,400 ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ.‌ ಇದರಲ್ಲಿ ಹಲವು ವಿದೇಶಿ ಪ್ರಜೆಗಳು ಸೇರಿದ್ದು, ಕಾಣೆಯಾದ ವಿದೇಶಿಗರ ಸಂಖ್ಯೆಯಲ್ಲಿ ಭಾರತೀಯರದ್ದೇ ದೊಡ್ಡ ಗುಂಪಿದ್ದು, ಇದರಲ್ಲಿ ಹಲವರು ಟಿಬೆಟ್‌ನ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸಿದ್ದ ಯಾತ್ರಾರ್ಥಿಗಳು ಎಂಬ ಆತಂಕಕಾರಿ ಅಂಶ ತಿಳಿದು ಬಂದಿದೆ.

ಭಾರತೀಯ ವಿದೇಶಾಂಗ ಇಲಾಖೆಯ ಮಾಹಿತಿಯ ಪ್ರಕಾರ, ಈವರೆಗೂ ನೇಪಾಳ ಪ್ರವಾಹದಲ್ಲಿ ಸಿಲುಕಿದ 84 ಮಂದಿ ಭಾರತೀಯ ಪ್ರಜೆಗಳನ್ನು ರಕ್ಷಿಸಲಾಗಿದೆ. ಆದಾಗ್ಯೂ, ಬರೋಬ್ಬರಿ 290ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

''ನೆರೆ ಪೀಡಿತ ನೇಪಾಳ, ಟಿಬೆಟ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ತಮಿಳುನಾಡು ಮೂಲದ 21 ಮಂದಿಯನ್ನು ರಕ್ಷಿಸಲಾಗಿದೆ. ಚೀನಾ ಗಡಿಯ ಟಿಬೆಟ್‌ ಪ್ರದೇಶದಲ್ಲಿ 200 ಮಂದಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ,'' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಮಾಹಿತಿ ನೀಡಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ಸಂತ್ರಸ್ತರಿಗೆ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ ತೆರೆಯಲಾಗಿದೆ.

ನಾಪತ್ತೆಯಾದ ಭಾರತೀಯರ ವಿವರ

  • ತಮಿಳುನಾಡು: 86
  • ಪಶ್ಚಿಮ ಬಂಗಾಳ: 32
  • ಕೇರಳ ರಾಜ್ಯ: 33
  • ಕರ್ನಾಟಕ ಸೇರಿ ಇತರ ರಾಜ್ಯ: 61

47.5 ಟನ್‌ ಮಾನವೀಯ ನೆರವು

ಪ್ರವಾಹ ಪೀಡಿತ ನೇಪಾಳ ನೆರವಿಗೆ ಧಾವಿಸಿರುವ ಭಾರತ ಆಹಾರ, ನೀರು, ಬಟ್ಟೆ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ನೆರವು ರವಾನಿಸಿದೆ. ವಿಶೇಷ ವಿಮಾನದ ಮೂಲಕ 47.5 ಟನ್‌ ಮಾನವೀಯ ನೆರವು ಕಳುಹಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ತಾತ್ಕಾಲಿಕ ಆಶ್ರಯ ತಾಣಗಳು, ಬುಧವಾರ ರಾತ್ರಿ ಹೊದಿಕೆಗಳು, ನೈರ್ಮಲ್ಯ ಕಿಟ್‌ಗಳು, ಸೌರ ದೀಪಗಳು ಮತ್ತು ಅಗತ್ಯ ಔಷಧಿಗಳು ಸೇರಿದಂತೆ 10 ಟನ್‌ ತುರ್ತು ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದ ಮೂಲಕ ರವಾನಿಸಲಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka