ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ ಅನಿವಾಸಿ ಭಾರತೀಯರು (NRI), ಭಾರತದಲ್ಲಿನ ತಮ್ಮ ಆಸ್ತಿಯನ್ನು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ. ಮಾರಾಟ ಮಾಡಿ ಬಂದ ಹಣವನ್ನು ಮತ್ತೆ ಇಲ್ಲಿ ಇನ್ವೆಸ್ಟ್ ಮಾಡುತ್ತಿಲ್ಲ. ರೆಮಿಟರ್ ವಾರ್ಷಿಕ NRI ವೆಲ್ತ್ ರಿಪೋರ್ಟ್ 2026ರ ಸಮೀಕ್ಷಾ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಭಾರತದಲ್ಲಿನ ತಮ್ಮ ಮನೆಗಳನ್ನು/ಆಸ್ತಿಗಳನ್ನು ಮಾರಾಟ ಮಾಡಲು ಯೋಚಿಸುತ್ತಿರುವ ಸುಮಾರು ಅರ್ಧಕ್ಕಿಂತ ಹೆಚ್ಚಿನ ಅನಿವಾಸಿ ಭಾರತೀಯರು, ಇದರಿಂದ ಬರುವ ಆದಾಯವನ್ನು ವಿದೇಶದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದು, ಅನಿವಾಸಿ ಭಾರತೀಯರು ತಮ್ಮ ಆಸ್ತಿ ಹೊಣೆಗಾರಿಕೆಯನ್ನು ನೋಡುತ್ತಿರುವ ದೃಷ್ಟಿಕೋನದಲ್ಲಾಗಿರುವ ಬದಲಾವಣೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ತಾಯ್ನಾಡಿನಲ್ಲಿರುವ ಆಸ್ತಿಗಳ ಮೇಲೆ ಇರುವ ಭಾವನಾತ್ಮಕ ಸಂಬಂಧ
ತಮ್ಮ ತಾಯ್ನಾಡಿನಲ್ಲಿರುವ ಆಸ್ತಿಗಳ ಮೇಲೆ ಇರುವ ಭಾವನಾತ್ಮಕ ಸಂಬಂಧದ ಬದಲು ಸರಿಯಾದ ಸಮಯದಲ್ಲಿನ ಆಸ್ತಿ ನಿರ್ವಹಣೆಯಾಗಿ (Wealth Management) ಅನಿವಾಸಿ ಭಾರತೀಯರು ಪರಿಗಣಿಸಲು ಆರಂಭಿಸುರುವುದೇ ಈ ಬದಲಾವಣೆಗೆ ಪ್ರಮುಖ ಕಾರಣ ಎಂದು ರೆಮಿಟರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕಿಂತ ಹೆಚ್ಚಿನವರು ಭಾರತದಲ್ಲಿರುವ ತಮ್ಮ ಆಸ್ತಿಗಳನ್ನು ಮಾರಿ ಬಂದ ಹಣವನ್ನು ವಿವಿಧ ದೇಶಗಳಲ್ಲಿನ ಮಾರುಕಟ್ಟೆಯನ್ನು ಆಧರಿಸಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ.ಉತ್ತರ ಅಮೆರಿಕಾದ ಸುಮಾರು 150 ಅನಿವಾಸಿ ಭಾರತೀಯರನ್ನು ಸಂಪರ್ಕಿಸಿ ವರದಿ
ಉತ್ತರ ಅಮೆರಿಕಾದ ಸುಮಾರು 150 ಅನಿವಾಸಿ ಭಾರತೀಯರನ್ನು ವರದಿ ಬಿಡುಗಡೆ ಮಾಡುವ ಮೊದಲು ಸಂಪರ್ಕಿಸಲಾಗಿತ್ತು. ಅವರ ಅನಿಸಿಕೆ ಪ್ರಕಾರ, ಭಾರತೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಕುಟುಂಬದ ವಾಸಕ್ಕಾಗಿ ಶಾಶ್ವತ ಹೂಡಿಕೆ ಅಥವ ನಿವೃತ್ತಿಯ ನಂತರದ ಆದಾಯದ ಹೂಡಿಕೆಯನ್ನಾಗಿ NRIಗಳು ಪರಿಗಣಿಸುತ್ತಿಲ್ಲ. ಬದಲಾಗಿ, ಸದ್ಯ ಭಾರತದ ರಿಯಲ್ ಎಸ್ಟೇಟ್ ಮೇಲೆ ಮಾಡುತ್ತಿರುವ ಹೂಡಿಕೆಯನ್ನು ಫೈನಾನ್ಸಿಯಲ್ ಅಸೆಟ್ ಆಗಿ ಪರಿಗಣಿಸಲಾಗುತ್ತಿದೆ.ಜೊತೆಗೆ, ಈ ಹಿಂದೆ ಎಲ್ಲಾ ಭಾರತದಲ್ಲಿ ಸ್ವಂತ ಮನೆಯನ್ನು ಹೊಂದುವುದು ಅನಿವಾಸಿ ಭಾರತೀಯರಿಗೆ ತಾಯ್ನಾಡಿನ ಜೊತೆ ಸಂಪರ್ಕದಲ್ಲಿರಲು ಮತ್ತು ದೀರ್ಘಕಾಲಕ್ಕೆ ಕುಟುಂಬಕ್ಕೆ ಆಸ್ತಿಯನ್ನು ನಿರ್ಮಿಸಲು ಭಾರತದಲ್ಲಿನ ಹೂಡಿಕೆಗೆ ಪ್ರಮುಖ ಕಾರಣವಾಗಿತ್ತು. ಈಗ, ಆ ಮನಸ್ಥಿತಿ ಬದಲಾಗಿದೆ, 2010 - 2022ರ ನಡುವಿನ ಅವಧಿಯಲ್ಲಿನ ಹಲವು ಹೂಡಿಕೆಗಳು ಈಗ, ಮಾರಾಟಕ್ಕೆ ನಿಂತಿವೆ ಎನ್ನುವ ಅಭಿಪ್ರಾಯವನ್ನು ಇವರು ವ್ಯಕ್ತ ಪಡಿಸಿದ್ದಾರೆ.
ಅನಿವಾಸಿ ಭಾರತೀಯರ ಈ ಹಣ ಸದ್ಯ ಎಲ್ಲಿಗೆ ಹೋಗುತ್ತಿದೆ?
ಜುಲೈ 29ರಂದು ಬಿಡುಗಡೆಯಾದರೆ ರೆಮಿಟರ್ ವಾರ್ಷಿಕ NRI ವೆಲ್ತ್ ರಿಪೋರ್ಟ್ 2026ರ ಪ್ರಕಾರ, ಭಾರತದಲ್ಲಿನ ಆಸ್ತಿ ಮಾರಾಟದ ದುಡ್ಡನ್ನು ಅನಿವಾಸಿ ಭಾರತೀಯರು ವಿವಿಧ ಕಾರಣಗಳಿಗೆ ಬಳಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ..- 1. ಯಾವ ದೇಶದಲ್ಲಿ ನೆಲೆಸಿದ್ದಾರೋ, ಆ ದೇಶದಲ್ಲಿನ ಗೃಹ ಸಾಲವನ್ನು ತೀರಿಸಲು.
- 2. ಮಕ್ಕಳ ಶಿಕ್ಷಣಕ್ಕೆ ಹಣಕಾಸು ಒದಗಿಸಲು.
- 3. ನಿವೃತ್ತಿಯ ನಂತರದ ಉಳಿತಾಯವನ್ನು ಇನ್ನಷ್ಟು ಬಲಪಡಿಸಲು.
- 4. ಜಾಗತಿಕ ಹಣಕಾಸು ಉತ್ಪನ್ನಗಳಲ್ಲಿ (Global Financial Products) ಹೂಡಿಕೆ ಮಾಡಲು.
- 5. ಜಾಗತಿಕ ಮಾರುಕಟ್ಟೆಯ ವಿವಿಧ ಭಾಗಗಳಲ್ಲಿ ಹಣವನ್ನು ಹಂಚಿಕೆ ಮಾಡುತ್ತಿರುವುದು.
2010 - 2019ರ ಅವಧಿಯಲ್ಲಿ ಖರೀದಿಸಲಾದ ಆಸ್ತಿಗಳ ಮಾರಾಟ ಹೆಚ್ಚಳ
ರೆಮಿಟರ್ ವಾರ್ಷಿಕ ವರದಿಯ ಪ್ರಕಾರ, ಮಾರಾಟವಾಗುವ ನಿರೀಕ್ಷೆಯಲ್ಲಿರುವ ಶೇ. 89ರಷ್ಟು ವಸತಿ ಆಸ್ತಿಗಳಾಗಿವೆ (Residential Properties). ಇವುಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಮನೆಗಳನ್ನು 2010 - 2019ರ ಅವಧಿಯಲ್ಲಿ ಖರೀದಿಸಲಾಗಿತ್ತು. ಈಗ ಆಗುತ್ತಿರುವ ಬದಲಾವಣೆಗಳು, ಭಾರತದಲ್ಲಿನ ಅನಿವಾಸಿ ಭಾರತೀಯರಾ ಆಸ್ತಿ ಮಾರುಕಟ್ಟೆಯಲ್ಲಿ ಆಗುತ್ತಿರುವ ಹೊಸ ಬದಲಾವಣೆಯನ್ನು ತೋರಿಸುತ್ತದೆ. ತಮ್ಮ ಹೂಡಿಕೆಯನ್ನು ಇನ್ನಷ್ಟು ಲಾಭವಾಗಿ ಪರಿವರ್ತಿಸಿಕೊಳ್ಳುವುದು ಮತ್ತು ಜಾಗತಿಕವಾಗಿ ಹೂಡಿಕೆಯನ್ನು ವಿಸ್ತರಿಸಿಕೊಳ್ಳುವುದು ಇವರ ಪ್ರಮುಖ ಉದ್ದೇಶವಾಗಿದೆ.
