ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ತಾರಾ ಪುತ್ರನ ಅದ್ದೂರಿ ಎಂಟ್ರಿಯಾಗ್ತಿದೆ. ಚನ್ನಪಟ್ಟಣ ಕ್ಷೇತ್ರದ ಶಾಸಕ ಹಾಗೂ ಸ್ಯಾಂಡಲ್‌ವುಡ್‌ನ ಖ್ಯಾತ ನಟ ಸಿಪಿ ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಬೆಳ್ಳಿಪರದೆಗೆ ಬರಲು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದಾರೆ.
ವಿಶೇಷವೆಂದರೆ, ಧ್ಯಾನ್ ಅವರ ಮೊದಲ ಎಂಟ್ರಿಯಲ್ಲೇ ಎರಡು ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗಿದ್ದು, ಎರಡೂ ಸಿನಿಮಾಗಳಲ್ಲಿ ತಂದೆ-ಮಗ ಜೊತೆಯಾಗಿ ನಟಿಸುತ್ತಿರುವುದು ವಿಶೇಷ.
ಧ್ಯಾನ್ ಯೋಗೇಶ್ವರ್ ಹೀರೋ ಆಗಿ ಚಿತ್ರರಂಗಕ್ಕೆ ಲಾಂಚ್ ಆಗುತ್ತಿರುವುದು ಈ ಎರಡು ಸಿನಿಮಾಗಳ ಜಂಟಿ ಮುಹೂರ್ತ ಇಂದು (ಜು. 5) ನೆರವೇರಲಿದೆ. ಈ ಸಮಾರಂಭಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ವಿ. ಸೋಮಣ್ಣ ಸೇರಿದಂತೆ ರಾಜಕೀಯ ರಂಗದ ಪ್ರಮುಖರು ಹಾಗೂ ಸ್ಯಾಂಡಲ್‌ವುಡ್‌ನ ಪ್ರಸಿದ್ದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಲಿದ್ದಾರೆ.
ಸಿಪಿ ಯೋಗೇಶ್ವರ್ ಅವರ ಹೋಮ್ ಬ್ಯಾನರ್ ಆದ ʻರಾಜಯೋಗಿ ಫಿಲಂಸ್ʼ ಅಡಿಯಲ್ಲಿ ಸುಮಾರು 25 ವರ್ಷಗಳ ಹಿಂದೆ ತೆರೆಕಂಡು ರಾಜ್ಯಾದ್ಯಂತ ಭರ್ಜರಿ ಯಶಸ್ಸು ಗಳಿಸಿದ್ದ ʻಸೈನಿಕʼ ಸಿನಿಮಾದ ಮುಂದುವರಿದ ಭಾಗವಾಗಿ ʻಸೈನಿಕ 2' ಮೂಡಿಬರಲಿದೆ. ಈ ಬಹುನಿರೀಕ್ಷಿತ ಸೀಕ್ವೆಲ್ ಸಿನಿಮಾವನ್ನ ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲೂ ಸಿಪಿ ಯೋಗೇಶ್ವರ್ ಹಾಗೂ ಅವರ ಪುತ್ರ ಧ್ಯಾನ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷ. ಅಂದಿನ ʻಸೈನಿಕʼ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಅನ್ನು ನೆನಪಿಸುವಂತೆ ಈ ಎರಡನೇ ಭಾಗವನ್ನ ಅಷ್ಟೇ ಅದ್ದೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.
ಧ್ಯಾನ್ ನಟಿಸಲಿರುವ ಮತ್ತೊಂದು ಮಹತ್ವಾಕಾಂಕ್ಷಿ ಸಿನಿಮಾ ʻಕರ್ಣಾಟಬಲಂ ಅಜೇಯಂʼ. ಪಿಎಂಜಿ ಫಿಲ್ಮ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಹಿರಿಯ ಮತ್ತು ಅನುಭವಿ ನಿರ್ದೇಶಕ ನಾಗಣ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದ ಮೂಲಕ ನಟ ಸಿಪಿ ಯೋಗೇಶ್ವರ್ ಅವರು ಸುಮಾರು 25 ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ಪೂರ್ಣ ಪ್ರಮಾಣದಲ್ಲಿ ಬಣ್ಣದ ಪ್ರಪಂಚಕ್ಕೆ ಮರಳುತ್ತಿದ್ದಾರೆ. ಈ ಸಿನಿಮಾದಲ್ಲಿ ಧ್ಯಾನ್ ಯೋಗೇಶ್ವರ್ ಅವರೊಂದಿಗೆ ಮಿಸ್ ಯೂನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ, ಮಿಸ್ ಯೂನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ ಮತ್ತು ದಕ್ಷಿಣ ಭಾರತದ ಖ್ಯಾತ ಪೋಷಕ ನಟ ಹಗಪತಿ ಬಾಬು ಪ್ರಮುಖ ತಾರಾಗಣದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಒಟ್ನಲ್ಲಿ, ಒಂದೆಡೆ ರಾಜಕೀಯದಲ್ಲಿ ಸಕ್ರಿಯರಾಗಿರುವ ಸಿಪಿ ಯೋಗೇಶ್ವರ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದರೆ, ಮತ್ತೊಂದೆಡೆ ಅವರ ಪುತ್ರ ಧ್ಯಾನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿರುವುದು ವಿಶೇಷ.

