Dailyhunt Logo
  • Light mode
    Follow system
    Dark mode
    • Play Story
    • App Story
ಪಶ್ಚಿಮ ಘಟ್ಟದಲ್ಲಿ ಮುಂಗಾರು ಬಿರುಸು: ತುಂಗಾ, ಕೃಷ್ಣ ಸೇರಿ ಹಲವು ಡ್ಯಾಂಗಳ ಒಳಹರಿವು ಹೆಚ್ಚಳ; ಯಾವ್ಯಾವ ಜಲಾಶಯದಲ್ಲಿ ನೀರು ಎಷ್ಟಿದೆ?

ಪಶ್ಚಿಮ ಘಟ್ಟದಲ್ಲಿ ಮುಂಗಾರು ಬಿರುಸು: ತುಂಗಾ, ಕೃಷ್ಣ ಸೇರಿ ಹಲವು ಡ್ಯಾಂಗಳ ಒಳಹರಿವು ಹೆಚ್ಚಳ; ಯಾವ್ಯಾವ ಜಲಾಶಯದಲ್ಲಿ ನೀರು ಎಷ್ಟಿದೆ?

Vijay Karnataka 2 weeks ago

ಶಿವಮೊಗ್ಗ/ಹೊಸಪೇಟೆ/ಬೆಳಗಾವಿ: ತುಂಗಾ ನದಿ ಕಣಿವೆಯ ಕಳಸ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿ ಭೋರ್ಗರೆಯುತ್ತಿದ್ದು, ಗಾಜನೂರು ಬಳಿಯ ತುಂಗಾ ಜಲಾಶಯ ಭರ್ತಿಯಾಗಿದೆ.ಜಲಾಶಯದಲ್ಲಿ 3.24 ಟಿಎಂಸಿ ನೀರು (ಗರಿಷ್ಠ ಮಟ್ಟ 588.24 ಮೀಟರ್‌) ಸಂಗ್ರಹಗೊಂಡಿದೆ.

ಡ್ಯಾಂನ 22 ಗೇಟ್‌ಗಳ ಪೈಕಿ 13ರನ್ನು ತೆರೆದು 22,822 ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ.

ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲೂ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಭದ್ರಾ ಜಲಾಶಯದಲ್ಲಿ ಶನಿವಾರ 2,108 ಕ್ಯುಸೆಕ್‌ನಷ್ಟಿದ್ದ ಒಳಹರಿವಿನ ಪ್ರಮಾಣ ಭಾನುವಾರ 7,919 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಲಿಂಗನಮಕ್ಕಿಯಲ್ಲಿ 7,950 ಕ್ಯುಸೆಕ್‌ರಷ್ಟಿದ್ದ ಒಳಹರಿವು 15,376 ಕ್ಯುಸೆಕ್‌ಗೆ ಹೆಚ್ಚಳವಾಗಿತ್ತು. ಲಿಂಗನಮಕ್ಕಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 137.4 ಎಂ.ಎಂ ಮಳೆ ಸುರಿದಿದೆ. ಆಗುಂಬೆಯಲ್ಲಿ 186.2 ಮಿ.ಮೀ., ಹುಲಿಕಲ್‌ನಲ್ಲಿ 170 ಮಿ.ಮೀ. ಮಳೆಯಾಗಿದೆ.


ತುಂಗಭದ್ರಾ ಡ್ಯಾಂ ಒಳಹರಿವು ಆರಂಭ

ಇತ್ತ, ''ಮಲೆನಾಡು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯ ಪರಿಣಾಮ, ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ತುಂಗಭದ್ರಾ ಜಲಾಶಯಕ್ಕೂ ಒಳಹರಿವು ಆರಂಭವಾಗಿದೆ,'' ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ 2 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು ಭಾನುವಾರ ಸಂಜೆ ಬಳಿಕ ಡ್ಯಾಂಗೆ ಹರಿದು ಬರಲಾರಂಭಿಸಿದೆ. ತಿಂಗಳ ಬಳಿಕ ನೀರು ಹರಿದು ಬರುತ್ತಿರುವುದರಿಂದ ಡೆಡ್‌ ಸ್ಟೋರೇಜ್‌ ಮಟ್ಟಕ್ಕೆ ನೀರಿನ ಪ್ರಮಾಣ ಏರಿಕೆಯಾಗಲಿದೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರಾಜವಾಳ ಸಮೀಪವಿರುವ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಸುಮಾರು ಮೂರು ಸಾವಿರ ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. ಬ್ಯಾರೇಜ್‌ಗೆ ಬರುತ್ತಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ, ಅಷ್ಟೇ ಪ್ರಮಾಣದ ನೀರನ್ನು ವಿದ್ಯುತ್‌ ಉತ್ಪಾದನಾ ಘಟಕದ ಪವರ್‌ ಹೌಸ್‌ ಗೇಟ್‌ ಮೂಲಕ ನದಿಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯದಿಂದ ಈಗಾಗಲೇ ಸುಮಾರು 6 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಟ್ಟಿದ್ದು, ಮಳೆಯ ತೀವ್ರತೆ ಮುಂದುವರಿದಿರುವ ಹಿನ್ನೆಲೆ, ಮುಂದಿನ ಎರಡು ದಿನಗಳಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಂಬುತ್ತಿದೆ ಕೃಷ್ಣೆಯ ಒಡಲು, ಹಿಪ್ಪರಗಿ ಬ್ಯಾರೇಜ್‌ಗೆ ಅಧಿಕ ನೀರು

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣೆಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಭಾನುವಾರ 30 ಸಾವಿರ ಕ್ಯುಸೆಕ್‌ ಒಳಹರಿವು ದಾಖಲಾಗಿದೆ. ಬ್ಯಾರೇಜ್‌ನ ಹತ್ತು ಗೇಟ್‌ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ಸೋಮವಾರ ಐವತ್ತು ಸಾವಿರ ಕ್ಯುಸೆಕ್‌ವರೆಗೆ ನೀರು ಹರಿದು ಬರಲಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಕೊಯ್ನಾದಲ್ಲಿ11.6 ಸೆಂ.ಮೀ., ಮಹಾಬಳೇಶ್ವರ 16.0 ಸೆಂ.ಮೀ., ನವುಜಾ 17.9. ಸೆಂ.ಮೀ., ತರಾಳಿ 8.1 ಸೆಂ.ಮೀ., ವಾರಣಾ 7.2 ಸೆಂ.ಮೀ., ರಾಧಾನಗರಿಯಲ್ಲಿ23.8 ಸೆಂ.ಮೀ. ಮಳೆಯಾಗಿದೆ. ಭಾನುವಾರ ಬೆಳಗ್ಗೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 42625 ಕ್ಯುಸೆಕ್‌ ನೀರು ಬಿಡಲಾಗಿದೆ.

ಮಹಾ ಮಳೆಗೆ ಚಿಕ್ಕೋಡಿ ಭಾಗದಲ್ಲಿ 7 ಸೇತುವೆಗಳು ಜಲಾವೃತ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೃಷ್ಣೆ, ದೂಧಗಂಗಾ, ವೇದಗಂಗಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗದ ಏಳು ಕೆಳಹಂತದ ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.

ಕಳೆದ ಒಂದು ವಾರದ ಹಿಂದಷ್ಟೇ ಸಂಪೂರ್ಣ ಬರಿದಾಗಿದ್ದ ಕೃಷ್ಣಾ, ವೇದಗಂಗಾ, ದೂಧಗಂಗಾ, ಮಹಾರಾಷ್ಟ್ರದ ಕೊಯ್ನಾ ಜಲಾನಯನ ಮತ್ತು ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ, ರಾಜಾಪುರ ಬ್ಯಾರೇಜ್‌ ಮೂಲಕ ಕೃಷ್ಣಾ ನದಿಗೆ 47 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದೆ. ಇದರೊಂದಿಗೆ ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರು ಸೇರಿ, ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್‌ಗೆ ಭಾನುವಾರ ಒಟ್ಟು ಸುಮಾರು 60 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದುಬರುತ್ತಿದೆ.
ಹೀಗೆ ನದಿಗಳ ನೀರಿನ ಮಟ್ಟ ದಿಢೀರ್‌ ಏರಿಕೆಯಾಗಿದ್ದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯ ಯಡೂರ-ಕಲ್ಲೋಳ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜಾಪುರ-ಜುಗೂಳ ಸೇತುವೆಗಳು ಮುಳುಗಡೆಯಾಗಿದೆ. ಇನ್ನು ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಯ ಭೋಜ-ಕಾರದಗಾ ಸೇತುವೆ, ವೇದಗಂಗಾ ನದಿಯ ಭೋಜವಾಡಿ-ಕುನ್ನೂರ ಮತ್ತು ಭೋಜವಾಡಿ-ಗಜಬರವಾಡಿ, ಅಕ್ಕೋಳ-ಸಿದ್ನಾಳ, ಭಿವಸಿ-ಜತ್ರಾಟ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಮಳೆ ಮುಂದುವರಿದಿರುವುದರಿಂದ ಮತ್ತಷ್ಟು ಕೆಳಹಂತದ ಸೇತುವೆಗಳು ಮುಳುಗುವ ಭೀತಿ ಎದುರಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka