ಬೆಂಗಳೂರು: ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನೆಲದ ಕಾನೂನು ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಆದರೆ, ಇವರೇ ನಿಯಮ ಉಲ್ಲಂಘನೆ ಮಾಡಿದರೆ ಬೇಲಿಯೇ ಎದ್ದು ಹೊಲ ಮೈದಂತೆ ಆಗುತ್ತದೆ. ಆದರೆ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಸೇರಿವೆ.
ಸರ್ಕಾರಿ ವಾಹನಗಳು ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಪ್ರಕರಣಗಳು ನಾಲ್ಕು ವರ್ಷಗಳಲ್ಲಿ 85,844 ಪ್ರಕರಣಗಳು ವರದಿಯಾಗಿವೆ. ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಸಹಜವಾಗಿದೆ. ಇದರ ವಿರುದ್ಧ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಅಲ್ಲದೆ, ದಂಡ ಹಾಕಲಾಗುತ್ತದೆ. ಸಿಗ್ನಲ್ ಉಲ್ಲಂಘನೆ, ಹೆಲ್ಮೆಟ್ ರಹಿತ ಪ್ರಯಾಣ ಸೇರಿದಂತೆ ವಿವಿಧ ಸ್ವರೂಪದ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ಇದ್ದಾರೆ. ಅಲ್ಲದೆ, ಸರ್ಕಾರಿ ವಾಹನಗಳು ಒಳಗೊಂಡಿವೆ.
ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ
ಪೊಲೀಸ್ ವಾಹನಗಳು ಅಥವಾ ಸರ್ಕಾರಿ ವಾಹನಗಳು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕವಾಗಿಯೂ ಚರ್ಚೆ ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೆಲವೊಂದು ವಿಡಿಯೋಗಳು ಹರಿದಾಡುತ್ತಿವೆ. ಇದನ್ನು ಮುಂದಿಟ್ಟುಕೊಂಡು ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಪ್ರಶ್ನೆ ಮಾಡುತ್ತಾರೆ. ಆದರೆ, ಗೃಹ ಇಲಾಖೆ ನೀಡಿರುವ ಅಂಕಿ- ಅಂಶಗಳು ಸರ್ಕಾರಿ ವಾಹನಗಳ ವಿರುದ್ಧನೂ ಕ್ರಮ ಆಗುತ್ತಿರುವುದನ್ನು ತೋರಿಸಿವೆ.ಯಾವ ವರ್ಷದಲ್ಲಿ ಎಷ್ಟು ಪ್ರಕರಣ?
2023ಪೊಲೀಸ್ ಇಲಾಖೆ - 21
ಸರ್ಕಾರಿ ಇತರ ಇಲಾಖೆ- 1055
2024
ಪೊಲೀಸ್ ಇಲಾಖೆ - 1494
ಸರ್ಕಾರಿ ಇತರ ಇಲಾಖೆ - 35,832
2025
ಪೊಲೀಸ್ ಇಲಾಖೆ - 1251
ಸರ್ಕಾರಿ ಇತರ ಇಲಾಖೆ - 38282
2026
ಪೊಲೀಸ್ ಇಲಾಖೆ - 600
ಸರ್ಕಾರಿ ಇತರ ಇಲಾಖೆ - 7309
ಎಷ್ಟು ದಂಡ ವಸೂಲಿ?
ಸರ್ಕಾರಿ ಹಾಗೂ ಪೊಲೀಸ್ ವಾಹನಗಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. 2023 ರಲ್ಲಿ ₹5,41,500 ದಂಡ ವಸೂಲಿ ಮಾಡಲಾಗಿದೆ. 2024 ರಲ್ಲಿ 17.48 ದಂಡ ವಸೂಲಿ ಮಾಡಲಾಗಿದೆ. ಇನ್ನು 2024 ರಲ್ಲಿ 2.9 ಕೋಟಿ ಹಾಗೂ 2026 ರಲ್ಲಿ 40 ಲಕ್ಷ ದಂಡ ವಸೂಲಾತಿ ಮಾಡಲಾಗಿದೆ.ದಂಡ ಪಾವತಿ ಖಜಾನೆಯಿಂದಲೇ?
ನಿಯಮ ಉಲ್ಲಂಘಿಸಿದ ಸರ್ಕಾರಿ ವಾಹನಗಳ ದಂಡದ ಮೊತ್ತವನ್ನು ಸರ್ಕಾರಿ ಖಜಾನೆಯಿಂದ ಪಾವತಿಸಲಾಗುತ್ತಿಲ್ಲ ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ. ಮೋಟಾರು ವಾಹನ ಕಾಯ್ದೆ ರೀತ್ಯಾ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಚಾಲಕರುಗಳೇ ನಿಯಮ ಉಲ್ಲಂಘನಾ ದಂಡದ ಮೊತ್ತವನ್ನು ಪಾವತಿಸಬೇಕಾಗುತ್ತದೆ.ನಿಯಮ ಉಲ್ಲಂಘನೆ ಮಾಡಿದ ಸರ್ಕಾರಿ ವಾಹನಗಳ ಚಾಲಕರುಗಳೇ ನಿಯಮ ಉಲ್ಲಂಘನಾ ದಂಡದ ಮೊತ್ತವನ್ನು ಪಾವತಿಸುವ ಕುರಿತು ಯಾವುದೇ ಮಾರ್ಗಸೂಚಿಗಳನ್ನು ಅಥವಾ ಆದೇಶಗಳನ್ನು ಹೊರಡಿಸಿಲ್ಲ ಎಂಬುವುದನ್ನು ಇಲಾಖೆ ತಿಳಿಸಿದೆ.
ತಾರತಮ್ಯ ಇದ್ಯಾ?
ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸಾರ್ವಜನಿಕ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ, ಸರ್ಕಾರಿ ವಾಹನಗಳು ನಿಯಮ ಉಲ್ಲಂಘನೆ ಮಾಡಿದರೂ ಕ್ರಮ ಆಗುತ್ತಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಇದೆ. ಆದರೆ, ಇದಕ್ಕೆ ಗೃಹ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.ಸಂಚಾರ ನಿಯಮಗಳ ಪಾಲನೆಯು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದ್ದು, ನಿಯಮ ಪಾಲನೆಯು ಸರ್ಕಾರಿ ನೌಕರರಿಗೂ ಮತ್ತು ಎಲ್ಲಾ ಸಾರ್ವಜನಿಕರಿಗೂ ಒಂದೇ ಆಗಿರುತ್ತದೆ. ಕಾನೂನು ಉಲ್ಲಂಘನೆ ಚಟುವಟಿಕೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸುವ ಸಂದರ್ಭದಲ್ಲಿ ಮಾತ್ರ ಅಂತಹ ವಾಹನಗಳ ವಿರುದ್ಧ ಬಾಕಿ ಇರುವ ದಂಡದ ಮೊತ್ತವನ್ನು ಪರಿಶೀಲಿಸಿ, ಬಾಕಿ ಇರುವ ದಂಡ ಮೊತ್ತವನ್ನು ಸಂಗ್ರಹಿಸಲು ಕ್ರಮ ವಹಿಸಲಾಗಿರುತ್ತದೆ ಎಂದಿದೆ.
ದಂಡವನ್ನು ಸಂಗ್ರಹಿಸುವ ಉದ್ದೇಶದಿಂದ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಿ ದಂಡವನ್ನು ಪಾವತಿಸುವಂತೆ ಒತ್ತಾಯಿಸುತ್ತಿರುವುದಿಲ್ಲ. ಬಾಕಿ ಉಳಿಸಿಕೊಂಡಿರುವ ದಂಡದ ಮೊತ್ತವನ್ನು ವಸೂಲಿ ಮಾಡಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ ಎಂದು ಗೃಹ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.

