`15ರ ಹರೆಯದ ವೈಭವ್ ಸೂರ್ಯವಂಶಿಯನ್ನು ಕಣಕ್ಕಿಳಿಸಿದ್ದು ಸರಿಯಾಗಿದೆ. ಆದರೆ ಅದಕ್ಕಾಗಿ ಟಿ20 ವಿಶ್ವಕಪ್ ನಲ್ಲಿ ಅದ್ಭುತ ಆಟವಾಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟದ್ದು ಎಷ್ಟು ಸರಿ?`ಯಾವಾಗಲೂ ಸಂಜು ಸ್ಯಾಮ್ಸನ್ ಅವರನ್ನೇ ಏಕೆ ಗುರಿ ಮಾಡಲಾಗುತ್ತದೆ?' ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯಗಳಿಂದ ಹೊರಬಿದ್ದ ಸಂಜು ಸ್ಯಾಮ್ಸನ್ ಅವರನ್ನು ಇದೀಗ ಜಿಂಬಾಬ್ವೆ ಪ್ರವಾಸದಿಂದಲೂ ಹೊರಗಿಟ್ಟಿರುವ ಔಚಿತ್ಯದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಪುಂಖಾನುಪುಂಖವಾಗಿ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಲೇ ಇದ್ದಾರೆ.
ಈ ಬಗ್ಗೆ ಇದೇ ಮೊದಲ ಬಾರಿಗೆ ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರು ಮಾತನಾಡಿದ್ದು, ಕೆಲವೊಮ್ಮೆ ಕೆಲವು ಆಟಗಾರರ ಫಾರ್ಮ್ ಅನ್ನು ಗಮನಿಸಬೇಕಾಗುತ್ತದೆ ಎಂದು ತಂಡದ ಮ್ಯಾನೇಜ್ ಮೆಂಟ್ ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಅವರು ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲೇ ಕಣಕ್ಕೆ ಮರಳುವ ಸಾಧ್ಯತೆಗಳು ಇಲ್ಲದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಾಟಿಂಗ್ ಹ್ಯಾಮ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಪರಾಭವಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಅವರಿಗೆ ಸ್ಪಷ್ಟನೆ ನೀಡಿದ್ದೇನೆ. ಆದರೆ ಆ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ``ಸಂಜು ಸ್ಯಾಮ್ಸನ್‌ಗೆ ಬೇಕಾಗಿದ್ದ ಸ್ಪಷ್ಟತೆಯನ್ನು ನಾನು ಈಗಾಗಲೇ ಅವರಿಗೆ ನೀಡಿದ್ದೇನೆ ಮತ್ತು ಆ ಸಂಭಾಷಣೆಯು ಕೋಚ್ ಹಾಗೂ ಆಟಗಾರನ ನಡುವೆ ಮಾತ್ರ ಇರಲಿದೆ. ಸ್ಪಷ್ಟತೆಯ ವಿಷಯಕ್ಕೆ ಬಂದರೆ, ನಾವು ಸಂಪೂರ್ಣ ಸ್ಪಷ್ಟವಾಗಿದ್ದೇವೆ. ವಿಶ್ವಕಪ್ ಸಮಯದಲ್ಲಿ ಸಂಜು ಭಾರತಕ್ಕಾಗಿ ಮಾಡಿದ್ದು ಅದ್ಭುತವಾದದ್ದು. ಆದರೆ ಕೆಲವೊಮ್ಮೆ ನೀವು ನಿರ್ದಿಷ್ಟ ಆಟಗಾರನ ಪ್ರಸ್ತುತ ಫಾರ್ಮ್ ಅನ್ನು ಸಹ ಗಮನಿಸಬೇಕಾಗುತ್ತದೆ." ಎಂದು ತಿಳಿಸಿದರು.
ಇಂಗ್ಲೆಂಡ್ ನಲ್ಲೇ ಕಂಬ್ಯಾಕ್?
ಇದೇವೇಳೆ ಈ ಸರಣಿಯಲ್ಲೇ ಸಂಜು ಅವರ ಪುನರಾಗಮನ ಸಾಧ್ಯತೆಗಳು ಇಲ್ಲದಿಲ್ಲ ಎಂದು ಹೇಳಿದರು. "ಅವರು ಈ ಸರಣಿಯಲ್ಲಿ ಪುನರಾಗಮನ ಮಾಡಲು ಸಾಧ್ಯವೇ ಇಲ್ಲ ಎಂಬಂತಹ ಯಾವುದೇ ಕಠಿಣ ನಿಯಮಗಳೇನೂ ಇಲ್ಲ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಎಂದರೆ ಅಂತಿಮವಾಗಿ ಫಲಿತಾಂಶ ಮುಖ್ಯ. ಆದ್ದರಿಂದ, ನಮಗೆ ಉತ್ತಮ ಫಲಿತಾಂಶಗಳನ್ನು ನೀಡಲು ಯಾವ ಸಂಯೋಜನೆ ಸೂಕ್ತ ಎಂದು ಅನಿಸುತ್ತದೆಯೋ, ನಾವು ಆ ಸಂಯೋಜನೆಯನ್ನು, ಆ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸುತ್ತೇವೆ. ಪ್ರತಿಯೊಬ್ಬರೂ ಭಾರತ ತಂಡದ ಪರ ಆಡಲು ತಮ್ಮ ಸ್ಥಾನವನ್ನು ಗಳಿಸಿಕೊಳ್ಳಬೇಕು ಎಂಬುದನ್ನು ನಾನು ಯಾವಾಗಲೂ ಬಲವಾಗಿ ನಂಬುತ್ತೇನೆ" ಎಂದು ಗಂಭೀರ್ ಮಾಗಹಿತಿ ನೀಡಿದರು.ಇಂಗ್ಲೆಂಡ್ ಪ್ರವಾಸದಲ್ಲಿ ಭಾರತಕ್ಕೆ ಇನ್ನೂ ಎರಡು ಟಿ20 ಪಂದ್ಯಗಳು ಬಾಕಿ ಉಳಿದಿವೆ. ವೈಭವ್ ಸೂರ್ಯವಂಶಿ ಆಡಿದ ಎರಡು ಪಂದ್ಯಗಳಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದರೂ, ಕೇವಲ ಎರಡು ವೈಫಲ್ಯಗಳ ನಂತರ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಭಾರತ ತಂಡವು ಸ್ಯಾಮ್ಸನ್‌ಗೆ ಜಾಗ ಮಾಡಿಕೊಡಬೇಕಾದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಅವರನ್ನು ಹೊರಗೆ ಕುಳ್ಳಿರಿಸಬೇಕಾಗಬಹುದು. ತಿಲಕ್ ವರ್ಮಾ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ, ಈ ಕ್ರಮಾಂಕವು ಸ್ಯಾಮ್ಸನ್‌ಗೆ ಹೊಸದೇನಲ್ಲ. ಹೀಗಾಗಿ ಅಲ್ಲಿ ಅವರಿಗೆ ಮಿಂಚಲು ಅವಕಾಶ ಇದ್ದೇ ಇದೆ.
ಚರ್ಚೆಗೆ ಗ್ರಾಸವಾಗಿರುವುದೇಕೆ?
ಟಿ20 ವಿಶ್ವಕಪ್ ಗೆಲುವಿನ ಅಭಿಯಾನದಲ್ಲಿ ಸ್ಯಾಮ್ಸನ್ ಭಾರತದ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ ಐರ್ಲೆಂಡ್ ವಿರುದ್ಧದ ಒಂದೆರಡು ಪಂದ್ಯಗಳಲ್ಲಿನ ಕಳಪೆ ಪ್ರದರ್ಶನವು ಅವರು ತಂಡದಿಂದ ಹೊರಬೀಳುವಂತೆ ಮಾಡಿತು. ಇಷ್ಟೇ ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಿಂದಲೂ ಅವರನ್ನು ಕೈಬಿಡಲಾಯಿತು ಮತ್ತು ಅವರ ಜಾಗದಲ್ಲಿ ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡಿದರು. ಅದ್ಭುತ ಐಪಿಎಲ್ ಪ್ರದರ್ಶನದ ನಂತರ ವೈಭವ್ ಅವರಿಗೆ ಮ್ಯಾನೇಜ್‌ಮೆಂಟ್‌ನಿಂದ ಭಾರಿ ಬೆಂಬಲವಿದ್ದಿದ್ದರಿಂದ ಅದು ಮ್ಯಾನೇಜ್‌ಮೆಂಟ್‌ಗೆ ಅತ್ಯಂತ ಸಂಕೀರ್ಣವಾದ ಪರಿಸ್ಥಿತಿಯಾಗಿತ್ತು. ವೈಭವ್ ಅವರ ಸೇರ್ಪಡೆಗಾಗಿ ಸಂಜು ಸ್ಯಾಮ್ಸನ್ ಅಥವಾ ಅಭಿಷೇಕ್ ಶರ್ಮಾ ಇಬ್ಬರಲ್ಲಿ ಒಬ್ಬರು ಜಾಗ ಬಿಟ್ಟುಕೊಡಬೇಕಾಗಿತ್ತು, ಅಂತಿಮವಾಗಿ ಈ ತೂಗುಗತ್ತಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಮೇಲೆ ಬಿತ್ತು. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
