ಹೊಸದಿಲ್ಲಿ: ಇತ್ತೀಚಿನ ರಾಜ್ಯಮಟ್ಟದ ಚುನಾವಣೆಗಳ ನಂತರ ರಾಜಕೀಯ ಬಲಾಬಲಗಳನ್ನು ಮರುರೂಪಿಸಲಾಗುತ್ತಿದ್ದು, ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ರಾಜ್ಯಸಭೆಯ 27 ಸ್ಥಾನಗಳಿಗಾಗಿ ಚುನಾವಣೆ ಅಡ್ಡ ಮತದಾನದ ಸಾಧ್ಯತೆಗಳ ಕಾರಣಕ್ಕೆ ಹೆಚ್ಚು ರ್ಚೆಗೀಡಾಗಿದೆ.ಜೂನ್ 18 ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಸಜ್ಜಾಗಿದ್ದು, ನಿನ್ನೆ (ಮೇ 31-ಭಾನುವಾರ) ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆದಿದೆ.
ರಾಜ್ಯಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಬಗ್ಗೆ ಈ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ, ಈ ಚುನಾವಣೆಯಲ್ಲಿ ತನ್ನ ರಾಜ್ಯಸಭಾ ಬಲ 150 ದಾಟುವ ಮತ್ತು ಸದನದಲ್ಲಿ
ಮೂರನೇ ಎರಡರಷ್ಟು ಬಹುಮತಕ್ಕೆ ಹತ್ತಿರ ಬರುವ ದೃಢ ವಿಶ್ವಾಸ ಹೊಂದಿದೆ. ಪ್ರಸ್ತುತ ಮೇಲ್ಮನೆಯಲ್ಲಿ 148 ಸಂಸದರನ್ನು ಹೊಂದಿರುವ ಎನ್‌ಡಿಎ ಚುನಾವಣೆ ನಡೆಯುವ ಒಟ್ಟು 27 ಸ್ಥಾನಗಳಲ್ಲಿ 17-18 ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮತ್ತು ಕೇಂದ್ರ ಸಚಿವರಾದ ಜಾರ್ಜ್ ಕುರಿಯನ್ ಮತ್ತು ರವನೀತ್ ಸಿಂಗ್ ಬಿಟ್ಟು ಸೇರಿದಂತೆ ಹಲವಾರು ಪ್ರಮುಖ ನಾಯಕರ ಅಧಿಕಾರಾವಧಿ ಅಂತ್ಯಗೊಳ್ಳುತ್ತಿರುವ ಕಾರಣಕ್ಕೆ ಈ ಚುನಾವಣೆ ನಡೆಯಲಿದೆ.
ಅಡ್ಡ ಮತದಾನದ ಬಗ್ಗೆ ಕಳವಳ:
ಪ್ರತಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವು ಒಂದು ಪ್ರಮುಖ ಕಳವಳವಾಗಿದೆ. ಈ ಬಾರಿ, ರಾಜಕೀಯ ವೀಕ್ಷಕರು ಮಧ್ಯಪ್ರದೇಶದಲ್ಲಿ ಅಡ್ಡ ಮತದಾನ ನಡೆಯುವ ಸಾಧ್ಯತೆಯನ್ನು ಗುರುತಿಸಿದ್ದಾರೆ. ಇಲ್ಲಿ ಬಿಜೆಪಿ 2 ಮತ್ತು ಕಾಂಗ್ರೆಸ್ 1 ಸ್ಥಾನಗಳನ್ನು ಗೆಲ್ಲುವುದು ಪಕ್ಕಾ. ಆದರೆ ಆರು ಹೆಚ್ಚುವರಿ ಮತಗಳು ಇರುವುದರಿಂದ ಅಡ್ಡ ಮತದಾನದ ಅಪಾಯ ಇದ್ದೇ ಇದೆ.ಖರ್ಗೆ ಪುನರಾಗಮನ:
ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 4 ಸಂಸದರು ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್ ತನ್ನ ಸಂಖ್ಯಾಬಲದ ಆಧಾರದ ಮೇಲೆ ಮೂರು ಸ್ಥಾನಗಳಲ್ಲಿ ಸುಲಭವಾಗಿ ಜಯಗಳಿಸಲಿದ್ದು, ಮಲ್ಲಿಕಾರ್ಜುನ ಖರ್ಗೆ ಪುನರಾಯ್ಕೆ ಆಗುವುದು ಖಚಿತವಾಗಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣಕ್ಕೆ ಹೆಚ್‌ಡಿ ದೇವೇಗೌಡ ರಾಜ್ಯಸಭೆ ಪುನರಾಯ್ಕೆ ಖಚಿತ ಆಗಿದೆ.ಅದೇ ರೀತಿ ರಾಜಸ್ಥಾನದಲ್ಲಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಬಿಜೆಪಿ ಪಾಳಯದಿಂದ ರವನೀತ್ ಸಿಂಗ್ ಬಿಟ್ಟು ಅವರನ್ನು ಅಭ್ಯರ್ಥಿಯಾಗಿ ಪರಿಗಣಿಸಲಾಗುತ್ತಿದ್ದು, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ವಕ್ತಾರ ಪವನ್ ಖೇರಾ ಅವರ ಉಮೇದುವಾರಿಕೆಯನ್ನು ಪರಿಗಣಿಸುತ್ತಿದೆ.
ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ:
ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗುವ ನಿರೀಕ್ಷೆಯಿದೆ. ಜೂನ್ 21ರಂದು ತನ್ನ ಏಕೈಕ ಸಂಸದ ಶಕ್ತಿಸಿನ್ಹ್ ಗೋಹಿಲ್ ಅವರ ಅವಧಿ ಮುಗಿದ ನಂತರ, ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಯಾವುದೇ ರಾಜ್ಯಸಭಾ ಪ್ರಾತಿನಿಧ್ಯವಿಲ್ಲದಂತಾಗಿದೆ. ಪಕ್ಷ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದರೆ 46 ಶಾಸಕರ ಬೆಂಬಲದ ಅಗತ್ಯವಿದ್ದು, ಅದರ ಬಳಿ ಕೇವಲ 12 ಶಾಸಕರ ಬೆಂಬಲ ಇದೆ.ಜಾರ್ಖಂಡ್‌ನಲ್ಲಿ, ಕಾಂಗ್ರೆಸ್‌ನ ಭರವಸೆ ಆಡಳಿತಾರೂಢ ಜೆಎಂಎಂ ಮೇಲೆ ನಿಂತಿದೆ. ಶಿಬು ಸೊರೆನ್ ಅವರ ನಿಧನದ ನಂತರ ಖಾಲಿ ಉಳಿದಿರುವ ಒಂದು ಸ್ಥಾನ ಸೇರಿದಂತೆ ಇಲ್ಲಿ ಎರಡು ಸ್ಥಾನಗಳನ್ನು ಆಯ್ಕೆ ಮಾಡಲಾಗುತ್ತಿದೆ. ಜೆಎಂಎಂ ಈ ಸ್ಥಾನಗಳಲ್ಲಿ ಒಂದನ್ನು ತಮಗೆ ನೀಡುತ್ತದೆ ಎಂದು ಕಾಂಗ್ರೆಸ್ ಅಂದಾಜಿಸಿದೆ.
ರಾಜ್ಯಸಭಾ ಚುನಾವಣೆ:
ರಾಜ್ಯಸಭೆಗೆ ಇಂದು (ಜೂನ್ 1-ಸೋಮವಾರ) ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 8 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಂದು ಸ್ಪಷ್ಟಪಡಿಸಲಾಗಿದೆ. ಈ ಸುತ್ತಿನಲ್ಲಿ, 24 ಸ್ಥಾನಗಳ ಅವಧಿ ಪೂರ್ಣಗೊಂಡಿದೆ. ಅಲ್ಲದೇ ಮೂರು ಮೂರು ಸ್ಥಾನಗಳಿಗೆಉಪಚುನಾವಣೆಗಳು ನಡೆಯಲಿವೆ. ಬಿಜೆಪಿ ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ನಿರೀಕ್ಷೆಯಿದೆ.

