ರಾಮ ಮತ್ತು ಹನುಮಂತನ ನಡುವಿನ ಸಂಬಂಧವು ಅನನ್ಯವಾದ ಸಂಬಂಧವಾಗಿದೆ. ಅವರಿಬ್ಬರ ಸಂಬಂಧಕ್ಕೆ ಸರಿಸಾಟಿಯಾಗಿ ನಾವು ಯಾರನ್ನು ತರಲು ಸಾಧ್ಯವಿಲ್ಲ ಎನ್ನುವ ನಂಬಿಕೆಯಿದೆ. ರಾಮನನ್ನು ಮರ್ಯಾದಾ ಪುರುಷೋತ್ತಮ ಮತ್ತು ವಿಷ್ಣುವಿನ ಅವತಾರ ಎಂದು ಪೂಜಿಸಲಾಗುತ್ತದೆ, ಆದರೆ ತನ್ನ ಪರಮ ಭಕ್ತ ಮತ್ತು ಶಕ್ತಿಯತನಾದ ಹನುಮಂತನನ್ನು ಮಹಾದೇವನ ಅವತಾರ ಎಂದೂ ಕರೆಯಲಾಗುತ್ತದೆ.
ಹನುಮಂತನು ರಾಮನಿಗೆ ಪರಮ ಭಕ್ತನಾಗುವುದಲ್ಲದೇ ಬೇರೇನನ್ನು ಬಯಸಲಿಲ್ಲ. ಅವನು ರಾಮನ ಪ್ರೀತಿಯನ್ನು, ಅಕ್ಕರೆಯನ್ನು ಮಾತ್ರ ಬಯಸಿದ್ದನು. ಇಡೀ ವಿಶ್ವವು ರಾಮನ ಆಣತಿಯಂತೆ ಕಾರ್ಯನಿರ್ವಹಿಸುತ್ತಿತ್ತು. ರಾಮ ಮತ್ತು ಹನುಮಂತನಲ್ಲಿ ಯಾರು ದೊಡ್ಡವರು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ.?
1. ಶ್ರೀರಾಮನ ಜನನ:
ಧರ್ಮಗ್ರಂಥಗಳ ಪ್ರಕಾರ, ತ್ರೇತಾಯುಗದಲ್ಲಿ ಚೈತ್ರ ಮಾಸದ ಹುಣ್ಣಿಮೆಯ ಒಂಬತ್ತನೇ ದಿನದಂದು, ಪುನರ್ವಸು ನಕ್ಷತ್ರ ಮತ್ತು ಕರ್ಕಾಟಕ ಲಗ್ನದಲ್ಲಿ, ಅಯೋಧ್ಯೆಯ ಅರಮನೆಯಲ್ಲಿ ರಾಜ ದಶರಥ ಮತ್ತು ತಾಯಿ ಕೌಸಲ್ಯೆಯ ಮಗನಾಗಿ ರಾಮನು ಜನಿಸುತ್ತಾನೆ. ರಾಮನನ್ನು ವಿಷ್ಣು ದೇವನ ಏಳನೇ ಅವತಾರವೆಂದು ಪರಿಗಣಿಸಲಾಗುತ್ತದೆ ಮತ್ತು ಮಾನವ ರೂಪವನ್ನು ತೆಗೆದುಕೊಳ್ಳುವ ಮೂಲಕ ಧರ್ಮವನ್ನು ಮರು ಸ್ಥಾಪನೆ ಮಾಡಿದನು. ಅವರ ಜೀವನದ ಘಟನೆಗಳು ಒಂದು ನಿರ್ದಿಷ್ಟ ಸಮಯದೊಳಗೆ ಸಂಭವಿಸುತ್ತವೆ. ಅಂದರೆ ಅವರ ಅವತಾರವು ಒಂದು ಅವಧಿಗೆ ಸೀಮಿತವಾಗಿದೆ ಎಂದು ಪರಿಗಣಿಸಲಾಗುತ್ತದೆ.
2. ಹನುಮಂತನ ಜನನ:
ಮತ್ತೊಂದೆಡೆ, ಹನುಮಂತನ ಜನನವು ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಸಂಭವಿಸಿದೆ ಎನ್ನುವ ನಂಬಿಕೆಯಿದೆ. ಇದನ್ನು ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಇದಲ್ಲದೇ, ಇನ್ನಿತರ ಕೆಲವೊಂದು ನಂಬಿಕೆಗಳ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಹನುಮಂತನ ಜನ್ಮ ದಿನವನ್ನು ಹನುಮಾನ್ ಜಯಂತಿಯೆಂದು ಆಚರಿಸಲಾಗುವುದು. ಹನುಮಂತನನ್ನು ಅಮರ ಎಂದು ಪರಿಗಣಿಸಲಾಗುತ್ತದೆ. ಅವರು ತ್ರೇತಾಯುಗದಲ್ಲಿಯೂ ಜನಿಸಿದರು, ಆದರೆ ಅನೇಕ ನಂಬಿಕೆಗಳ ಪ್ರಕಾರ, ಹನುಮಂತನು ರಾಮನು ಜನಿಸುವುದಕ್ಕಿಂತಲೂ ಮೊದಲೇ ಜನಿಸಿದನು ಎಂದು ಹೇಳಲಾಗುತ್ತದೆ. ಹನುಮಂತನು ಶಿವನ ಅವತಾರವಾಗಿದ್ದಾನೆ. ಹಾಗೂ ಅವನು ಅಮರತ್ವದ ವರವನ್ನು ಪಡೆದುಕೊಂಡಿದ್ದಾನೆ.
3. ರಾಮ ಮತ್ತು ಹನುಮಂತನ ನಡುವಿನ ಸಂಬಂಧ:
'ರಾಮನಿಲ್ಲದೆ ಹನುಮಂತನು ಅಪೂರ್ಣ, ಹನುಮಂತನಿಲ್ಲದೆ ರಾಮನು ಅಪೂರ್ಣ'. ಈ ರೀತಿ ಹೇಳಿರುವುದನ್ನು ನೀವು ಗಮನಿಸಿರಬಹುದು. ಆಧ್ಯಾತ್ಮಿಕವಾಗಿ ನೋಡುವುದಾದರೆ, ಭಗವಾನ್ ರಾಮನು ಆದರ್ಶಗಳು ಮತ್ತು ದೇವರನ್ನು ಸಾಕಾರಗೊಳಿಸುತ್ತಾನೆ, ಆದರೆ ಹನುಮನು ಭಕ್ತಿ ಮತ್ತು ಸೇವೆಯನ್ನು ಸಾಕಾರಗೊಳಿಸುತ್ತಾನೆ. ರಾಮನು ನಮಗೆ ಬದುಕುವ ಮಾರ್ಗವನ್ನು ತೋರಿದರೆ, ಹನುಮಂತನು ಅದನ್ನು ಅನುಸರಿಸುವಂತೆ ನಮ್ಮನ್ನು ಪ್ರೇರೇಪಿಸುತ್ತಾನೆ.
4. ರಾಮನನ್ನು ಸ್ವಾಗತಿಸಲು ಭೂಮಿಗೆ ಬಂದ ದೇವರು, ದೇವತೆಗಳು:
ಕೆಲವು ಉಪನಿಷತ್ತುಗಳಲ್ಲಿ ಹೇಳಿರುವ ಪ್ರಕಾರ, ಎಲ್ಲಾ ದೇವರು ಮತ್ತು ದೇವತೆಗಳು ರಾಮನು ಭೂಮಿಯಲ್ಲಿ ಜನಿಸುವುದಕ್ಕೂ ಮುನ್ನ ಆತನನ್ನು ಭೂಮಿಗೆ ಆಹ್ವಾನಿಸುವುದಕ್ಕಾಗಿ ಭೂಲೋಕಕ್ಕೆ ಆಗಮಿಸಿ ವೇದಿಕೆಯನ್ನು ಸಿದ್ಧಪಡಿಸಿದ್ದರು ಎನ್ನಲಾಗುವುದು. ಅವರಲ್ಲಿ ಸೂರ್ಯನ ಮಗ ಸುಗ್ರೀವ, ಇಂದ್ರನ ಮಗನಾದ ವಾಲಿ, ಶಿವನ ರುದ್ರಾವತಾರವಾಗಿ ಹನುಮಂತನು ಭೂಮಿಗೆ ಆಗಮಿಸುತ್ತಾರೆ. ರಾಮನು ಭೂಮಿಯ ಮೇಲೆ ಜನಿಸಿದಾಗ ಹನುಮಂತ ಮತ್ತು ಶಿವನು ಕೋತಿಯ ರೂಪದಲ್ಲಿ ಕಾಣಿಸಿಕೊಂಡರು.
5. ಧಾರ್ಮಿಕ ನಂಬಿಕೆಗಳಲ್ಲಿ ಹನುಮಂತನ ಅಸ್ಥಿತ್ವ:
ಕೆಲವು ಧಾರ್ಮಿಕ ಕಥೆಗಳ ಪ್ರಕಾರ, ಹನುಮಂತನು ತನ್ನ ಬಾಲ್ಯದಲ್ಲಿ ಸೂರ್ಯನನ್ನು ಹಣ್ಣಾಗಿ ನುಂಗಲು ಪ್ರಯತ್ನಿಸಿದನು, ಇದು ಅವನ ಅಸಾಧಾರಣ ಶಕ್ತಿಗಳಿಗೆ ಸಾಕ್ಷಿಯಾಗಿದೆ. ಈ ಘಟನೆಯು ಅವನ ಆರಂಭಿಕ ಅಸ್ತಿತ್ವವನ್ನು ಸಹ ಪ್ರತಿಬಿಂಬಿಸುತ್ತದೆ, ಇದು ಶ್ರೀರಾಮನ ಜನಿಸುವುದಕ್ಕೂ ಮೊದಲು ಸಂಭವಿಸಿದೆ ಘಟನೆ ಎನ್ನುವ ನಂಬಿಕೆಯಿದೆ. ಇದರ ಆಧಾರದ ಮೇಲೆ, ಹನುಮಂತನನ್ನು ಶ್ರೀರಾಮನಿಗಿಂತ ಹಿರಿಯವನೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವರು ಮೊದಲೇ ಜನಿಸಿದರು ಮತ್ತು ಇಂದಿಗೂ ಜೀವಂತವಾಗಿದ್ದಾರೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಭಗವಾನ್ ರಾಮನ ಅವತಾರವು ಸೀಮಿತ ಅವಧಿಯ ತನಕ ಮಾತ್ರ ಇತ್ತು. ನಂತರ ಅವನು ತನ್ನ ದೇಹವನ್ನು ತೊರೆದು ತನ್ನ ದೈವಿಕ ರೂಪವನ್ನು ಪಡೆದುಕೊಂಡನು.
ರಾಮ ಮಗತ್ತು ಹನುಮಂತನಿಗೆ ಸಂಬಂಧಿಸಿದಂತೆ ನಾನಾ ಕಥೆಗಳನ್ನು ನಾವು ನೋಡಬಹುದು ಹಾಗೂ ಓದಬಹುದು. ಅವರಿಗೆ ಸಂಬಂಧಿಸಿದ ಪ್ರತಿಯೊಂದು ಕಥೆಗಳು ಭಿನ್ನ ಭಿನ್ನವಾದ ಮಾಹಿತಿಯನ್ನು ಒದಗಿಸುತ್ತದೆ. ಕೆಲವೊಂದು ನಂಬಿಕೆಗಳು ಮತ್ತು ಕಥೆಗಳು ಶ್ರೀರಾಮನಿಗಿಂತ ಹನುಮಂತನೇ ಮೊದಲು ಜನಿಸಿದವನೆಂದು ಹೇಳುತ್ತದೆ.

