Dailyhunt
ರಣ್‌ಬೀರ್ ಕಪೂರ್‌ ಮೊಗದಲ್ಲಿ 'ರಾಮನ ಮುಗ್ಧತೆ ಇಲ್ಲ': ಒರಿಜಿನಲ್ ಲಕ್ಷ್ಮಣ ಸುನೀಲ್ ಲಹ್ರಿ ನೇರ ನುಡಿ

ರಣ್‌ಬೀರ್ ಕಪೂರ್‌ ಮೊಗದಲ್ಲಿ 'ರಾಮನ ಮುಗ್ಧತೆ ಇಲ್ಲ': ಒರಿಜಿನಲ್ ಲಕ್ಷ್ಮಣ ಸುನೀಲ್ ಲಹ್ರಿ ನೇರ ನುಡಿ

Vijay Karnataka 1 week ago

ನಿತೇಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ 'ರಾಮಾಯಣ' ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದರಲ್ಲಿ ರಣ್‌ಬೀರ್ ಕಪೂರ್‌ 'ಶ್ರೀರಾಮ'ನ ಅವತಾರ ತಾಳಿದ್ದಾರೆ. 'ರಾಮಾಯಣ' ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ನಿರ್ವಹಿಸಿರುವ ಶ್ರೀರಾಮನ ಲುಕ್‌ ಮಾತ್ರ ರಿವೀಲ್ ಆಗಿದೆ.

ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್‌ ಲುಕ್‌ ಇನ್ನೂ ರಿವೀಲ್ ಆಗಿಲ್ಲ. ಟೀಸರ್‌ನಲ್ಲಿ ಗ್ರಾಫಿಕ್ಸ್ ಹಾಗೂ ವಿಶುವಲ್ಸ್ ಅದ್ಧೂರಿಯಾಗಿದೆ. 'ರಾಮಾಯಣ' ಸಿನಿಮಾದ ಟೀಸರ್‌ ಟ್ರೆಂಡಿಂಗ್‌ನಲ್ಲಿರುವಾಗಲೇ ಅಪಸ್ವರವೂ ಎದ್ದಿದೆ.

ಒರಿಜಿನಲ್ ಲಕ್ಷ್ಮಣ

'ರಾಮಾಯಣ' ಸಿನಿಮಾದ ಬಗ್ಗೆ ಅಪಸ್ವರ ಎತ್ತಿರೋದು ಬೇರೆ ಯಾರೋ ಅಲ್ಲ.. ಒರಿಜಿನಲ್‌ ಲಕ್ಷ್ಮಣ ಸುನೀಲ್‌ ಲಹ್ರಿ.! ರಮಾನಂದ್‌ ಸಾಗರ್‌ ಅವರ ಐಕಾನಿಕ್‌ ಟಿವಿ ಸೀರೀಸ್‌ 'ರಾಮಾಯಣ'ದಲ್ಲಿ ಸುನೀಲ್‌ ಲಹ್ರಿ ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದರು. ಇದೀಗ ಹೊಸ 'ರಾಮಾಯಣ' ಚಿತ್ರದಲ್ಲಿನ ರಾಮನ ಬಗ್ಗೆ ಸುನೀಲ್ ಲಹ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

ಸುನೀಲ್ ಲಹ್ರಿ ಹೇಳಿದ್ದೇನು?

''ರಾಮನಾಗಿ ರಣ್‌ಬೀರ್ ಕಪೂರ್‌ ಓಕೆ. ಆದರೆ, ರಣ್‌ಬೀರ್ ಮೊಗದಲ್ಲಿ ರಾಮನ ಮುಗ್ಧತೆ ಕೊಂಚ ಕಮ್ಮಿ ಇದೆ. ಅರುಣ್ ಗೋವಿಲ್ ಅವರಲ್ಲಿದ್ದ ಪ್ರಶಾಂತತೆ, ತಾಳ್ಮೆ ರಣ್‌ಬೀರ್ ಕಪೂರ್‌ರಲ್ಲಿ ಕಾಣುತ್ತಿಲ್ಲ. ಆದರೆ, ಪಾತ್ರಕ್ಕೆ ರಣ್‌ಬೀರ್ ಕಪೂರ್‌ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆ ನನಗಿದೆ'' ಎಂದು ಸಂದರ್ಶನವೊಂದರಲ್ಲಿ ಸುನೀಲ್ ಲಹ್ರಿ ಹೇಳಿದ್ದಾರೆ.

''ರಣ್‌ಬೀರ್ ಕಪೂರ್ ಸ್ವಲ್ಪ ಒರಟಾಗಿ ಕಾಣುತ್ತಾರೆ. ಲಕ್ಷ್ಮಣ ಅಥವಾ ಭರತ ಪಾತ್ರಕ್ಕೆ ರಣ್‌ಬೀರ್ ಕಪೂರ್ ಹೆಚ್ಚು ಸೂಕ್ತವೆನಿಸುತ್ತಾರೆ. ಇಂತಹ ಪಾತ್ರಕ್ಕೆ ಫ್ರೆಶ್‌ ಫೇಸ್‌ನ ಹಾಕಿಕೊಳ್ಳುವುದೇ ಸರಿ. ಯಾಕಂದ್ರೆ, ಹೊಸ ನಟನಿಗೆ ಯಾವುದೇ ಇಮೇಜ್ ಅಥವಾ ವಿವಾದದ ಹಿನ್ನಲೆ ಇರುವುದಿಲ್ಲ'' ಎಂದು ಸುನೀಲ್ ಲಹ್ರಿ ಅಭಿಪ್ರಾಯ ಪಟ್ಟಿದ್ದಾರೆ.

ರಮಾನಂದ್ ಸಾಗರ್ ಅವರ 'ರಾಮಾಯಣ'

1987 ರಿಂದ 1988 ರವರೆಗೆ ದೂರದರ್ಶನದಲ್ಲಿ ಪ್ರಸಾರವಾದ ಐಕಾನಿಕ್ ಟಿವಿ ಸೀರೀಸ್‌ 'ರಾಮಾಯಣ'. ರಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ'ದಲ್ಲಿ ಶ್ರೀರಾಮನಾಗಿ ಅರುಣ್ ಗೋವಿಲ್‌, ಲಕ್ಷ್ಮಣನಾಗಿ ಸುನೀಲ್ ಲಹ್ರಿ ಅಭಿನಯಿಸಿದ್ದರು.

ಎರಡು ಭಾಗಗಳಾಗಿ ತೆರೆಗೆ ಬರಲಿದೆ 'ರಾಮಾಯಣ'

ಬರೋಬ್ಬರಿ 4000 ಕೋಟಿ ರೂಪಾಯಿ ಬಜೆಟ್‌ನಲ್ಲಿ 'ರಾಮಾಯಣ' ತಯಾರಾಗುತ್ತಿದ್ದು, ಇದರಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್‌, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ರಾವಣ ಆಗಿ ಯಶ್, ಹನುಮಾನ್ ಆಗಿ ಸನ್ನಿ ಡಿಯೋಲ್, ಲಕ್ಷ್ಮಣ ಆಗಿ ರವಿ ದುಬೆ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗ ಅಕ್ಟೋಬರ್ 2026ಕ್ಕೆ, ಎರಡನೇ ಭಾಗ 2027ಕ್ಕೆ ರಿಲೀಸ್ ಆಗಲಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka