Dailyhunt Logo
  • Light mode
    Follow system
    Dark mode
    • Play Story
    • App Story
ರಸ್ತೆ ಅಪಘಾತ ಪರಿಹಾರ ಹೆಚ್ಚಳ: ಮೃತ ವ್ಯಕ್ತಿಯ ತಮ್ಮನಿಗೂ ಪಾಲು ಪಡೆಯುವ ಹಕ್ಕಿದೆ; ನೆರವು ಘೋಷಿಸಿದ ಕರ್ನಾಟಕ ಹೈಕೋರ್ಟ್

ರಸ್ತೆ ಅಪಘಾತ ಪರಿಹಾರ ಹೆಚ್ಚಳ: ಮೃತ ವ್ಯಕ್ತಿಯ ತಮ್ಮನಿಗೂ ಪಾಲು ಪಡೆಯುವ ಹಕ್ಕಿದೆ; ನೆರವು ಘೋಷಿಸಿದ ಕರ್ನಾಟಕ ಹೈಕೋರ್ಟ್

Vijay Karnataka 5 days ago

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೇಲೆ ಅವಲಂಬಿತನಾಗಿದ್ದ ಕಿರಿಯ ಸಹೋದರನಿಗೂ (ತಮ್ಮ) ಪರಿಹಾರ ಮೊತ್ತದಲ್ಲಿ ಪ್ರತ್ಯೇಕ ಪಾಲು ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಣ್ಣನ ಅಕಾಲಿಕ ಮರಣದಿಂದ ತಮ್ಮನೂ ಆರ್ಥಿಕ ಪೋಷಣೆ ಹಾಗೂ ಅಣ್ಣನ ಪ್ರೀತಿ ಮಮಕಾರದಿಂದ ವಂಚಿತನಾಗುತ್ತಾನೆ ಎಂಬುದನ್ನು ಎತ್ತಿಹಿಡಿದಿರುವ ನ್ಯಾಯಾಲಯ, ಆತನಿಗೂ ಪರಿಹಾರ ನೀಡಲು ಆದೇಶಿಸಿದೆ.

ಇದರೊಂದಿಗೆ, ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಆಂಧ್ರಪ್ರದೇಶ ಮೂಲದ ಬಿ.ಟೆಕ್ ವಿದ್ಯಾರ್ಥಿಯೊಬ್ಬನ ಕುಟುಂಬಕ್ಕೆ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (ಎಂಎ‌ಸಿಟಿ) ಈ ಹಿಂದೆ ಘೋಷಿಸಿದ್ದ 23,78,000 ರೂ. ಪರಿಹಾರದ ಮೊತ್ತವನ್ನು ಹೈಕೋರ್ಟ್ 39,45,000 ರೂ. ಗಳಿಗೆ ಹೆಚ್ಚಳ ಮಾಡಿದೆ.

ಪರಿಹಾರ ಮೊತ್ತ ಹೆಚ್ಚಿಸುವಂತೆ ಕೋರಿ ಆಂಧ್ರಪ್ರದೇಶದ ಅನಂತಪುರ ಮೂಲದ ಮೃತ ವಿದ್ಯಾರ್ಥಿಯ ಪೋಷಕರಾದ ಚಾಕಲಿ ರಾಮಾಂಜಿನಪ್ಪ, ಸಿ. ಶಿವಮ್ಮ ಹಾಗೂ ಸಹೋದರ ಚಾಕಲಿ ಲೋಕೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಬಿ.ಟೆಕ್ ವಿದ್ಯಾರ್ಥಿ ಕೌಶಲರಹಿತ ಕಾರ್ಮಿಕನಲ್ಲ

ಈ ಹಿಂದೆ ವಿಚಾರಣೆ ನಡೆಸಿದ್ದ ಎಂಎ‌ಸಿಟಿ, ಮೃತ ಗಣೇಶ್ ಅವರ ಕಾಲ್ಪನಿಕ ಮಾಸಿಕ ಆದಾಯವನ್ನು 15 ಸಾವಿರ ರೂ. ಎಂದು ಪರಿಗಣಿಸಿತ್ತು. ಆದರೆ ಇದನ್ನು ಒಪ್ಪದ ಹೈಕೋರ್ಟ್, "ಮೃತ ಗಣೇಶ್ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ, ಹೀಗಾಗಿ ಆತನನ್ನು ಕೌಶಲರಹಿತ ಕಾರ್ಮಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೈಕೋರ್ಟ್‌ನ ವಿವಿಧ ತೀರ್ಪುಗಳ ಅನ್ವಯ ಇಂಜಿನಿಯರಿಂಗ್/ಬಿ.ಟೆಕ್ ವಿದ್ಯಾರ್ಥಿಗಳ ಕಾಲ್ಪನಿಕ ಮಾಸಿಕ ಆದಾಯವನ್ನು ಕನಿಷ್ಠ 25 ಸಾವಿರ ರೂ. ಎಂದು ಪರಿಗಣಿಸಬೇಕಾಗುತ್ತದೆ" ಎಂದು ಸ್ಪಷ್ಟಪಡಿಸಿದೆ.

ಪ್ರೀತಿ-ವಾತ್ಸಲ್ಯ, ಒಡನಾಟ ನಷ್ಟಕ್ಕಾಗಿ ತಮ್ಮನಿಗೂ ಸಿಕ್ತು ಪರಿಹಾರ

ಮೃತ ವಿದ್ಯಾರ್ಥಿಯ ಸಾವಿನಿಂದ ಉಂಟಾದ 'ಪ್ರೀತಿ-ವಾತ್ಸಲ್ಯ, ಒಡನಾಟ ನಷ್ಟ'ಕ್ಕಾಗಿ ಎಂಎಸಿಟಿ ಈ ಹಿಂದೆ ತಂದೆ-ತಾಯಿಗೆ ತಲಾ 40 ಸಾವಿರ ರೂ. ಪರಿಹಾರ ಘೋಷಿಸಿತ್ತು. ಹೈಕೋರ್ಟ್ ಇದನ್ನು ತಲಾ 44 ಸಾವಿರ ರೂ.ಗಳಿಗೆ ಹೆಚ್ಚಿಸಿದೆ. ಇದರ ಜತೆಗೆ, ಮೃತನ ಅವಲಂಬಿತನಾಗಿದ್ದ ಕಿರಿಯ ಸಹೋದರನೂ ತನ್ನ ಅಣ್ಣನ ಪ್ರೀತಿ - ವಾತ್ಸಲ್ಯವನ್ನು ಕಳೆದುಕೊಂಡಿರುವುದರಿಂದ ಆತನಿಗೂ 44 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಶೇ. 6ರಷ್ಟು ಬಡ್ಡಿಯೊಂದಿಗೆ ಪಾವತಿಗೆ ಸೂಚನೆ

ಪರಿಹಾರ ಮೊತ್ತವನ್ನು 23.78 ಲಕ್ಷ ರೂ.ಗಳಿಂದ 39.45 ಲಕ್ಷ ರೂ.ಗೆ ಹೆಚ್ಚಿಸಿರುವುದರಿಂದ, ಹೆಚ್ಚುವರಿಯಾಗಿರುವ 15,67,000 ರೂ. ಮೊತ್ತವನ್ನು ವಾರ್ಷಿಕ ಶೇ. 6ರಷ್ಟು ಬಡ್ಡಿಯೊಂದಿಗೆ ಮೃತನ ಕುಟುಂಬಕ್ಕೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗಿದೆ.

ಹಣದ ಹಂಚಿಕೆ ಹೇಗೆ?

ಹೈಕೋರ್ಟ್ ಆದೇಶದ ಪ್ರಕಾರ, ಹೆಚ್ಚಳವಾಗಿರುವ ಒಟ್ಟು ಪರಿಹಾರ ಮೊತ್ತದಲ್ಲಿ ಮೃತನ ಸಹೋದರ ₹44 ಸಾವಿರ ಮತ್ತು ಅದಕ್ಕೆ ತಕ್ಕ ಬಡ್ಡಿಯನ್ನು ಮಾತ್ರ ಪಡೆಯಲು ಅರ್ಹನಾಗಿರುತ್ತಾನೆ. ಉಳಿದ ಒಟ್ಟು ಮೊತ್ತವನ್ನು ಮೃತನ ತಂದೆ-ತಾಯಿ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಏನಿದು ಪ್ರಕರಣ?

ಆಂಧ್ರಪ್ರದೇಶದ ಅನಂತಪುರ ಮೂಲದ ಬಿ.ಟೆಕ್ ವಿದ್ಯಾರ್ಥಿ ಚಾಕಲಿ ಗಣೇಶ್, ಬೆಂಗಳೂರಿನ ಮಾಲ್ ಒಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದ. 2021ರ ಜುಲೈ 18ರಂದು ಯಲಹಂಕದ ಅಲ್ಲಾಳಸಂದ್ರ ಸೇತುವೆಯ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದಾಗ, ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಆತನ ಬೈಕ್ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಣೇಶ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜುಲೈ 19ರಂದು ಮೃತಪಟ್ಟಿದ್ದ.

ಮಗನ ಸಾವಿನಿಂದ ಕಂಗೆಟ್ಟಿದ್ದ ಕುಟುಂಬ ಪರಿಹಾರ ಕೋರಿ ಎಂಎಸಿಟಿ ಮೊರೆ ಹೋಗಿತ್ತು. 2022ರ ಸೆಪ್ಟೆಂಬರ್ 16ರಂದು ಆದೇಶ ನೀಡಿದ್ದ ಎಂಎಸಿಟಿ, ಭವಿಷ್ಯದ ಆದಾಯ, ಪ್ರೀತಿ-ವಾತ್ಸಲ್ಯದ ನಷ್ಟ ಹಾಗೂ ಅಂತ್ಯಸಂಸ್ಕಾರದ ವೆಚ್ಚ ಎಲ್ಲವೂ ಸೇರಿ ಒಟ್ಟು 23,78,000 ರೂ. ಪರಿಹಾರವನ್ನು ಘೋಷಿಸಿತ್ತು. ಆದರೆ ಈ ಮೊತ್ತವು ಕಡಿಮೆಯಾಯಿತು ಎಂದು ಆಕ್ಷೇಪಿಸಿ ಕುಟುಂಬಸ್ಥರು ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಹೈಕೋರ್ಟ್ ಪರಿಹಾರ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka