Dailyhunt
RC ವಾಹನ ಮಾಲೀಕರ ಹೆಸರು ಅಧಿಕೃತವಾಗಿ ಬದಲಾಗುವವರೆಗೂ ಅವರೇ ಜವಾಬ್ದಾರರು: ಮೃತರ ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

RC ವಾಹನ ಮಾಲೀಕರ ಹೆಸರು ಅಧಿಕೃತವಾಗಿ ಬದಲಾಗುವವರೆಗೂ ಅವರೇ ಜವಾಬ್ದಾರರು: ಮೃತರ ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

Vijay Karnataka 1 week ago

ಬೆಂಗಳೂರು: ವಾಹನ ಮಾರಾಟದ ಬಳಿಕವೂ ಅದರ ನೋಂದಣಿ ಪ್ರಮಾಣಪತ್ರ (ಆರ್‌ಸಿ)ದಲ್ಲಿ ಮಾಲೀಕರ ಹೆಸರು ಅಧಿಕೃತವಾಗಿ ಬದಲಾಗುವವರೆಗೂ ಆ ವಾಹನದ ಜವಾಬ್ದಾರಿ ನೋಂದಾಯಿತ ಮಾಲೀಕನ ಮೇಲಿರಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.ವಾಹನ ಅಘಾತವಾಗಿ ವ್ಯಕ್ತಿಯೊಬ್ಬರು ಮೃತಪಟ್ಟು ವಾಹನದ ಮಾಲೀಕ ಮತ್ತು ಖರೀದಿದಾರರಿಗೆ ಸಮನಾಗಿ ಪರಿಹಾರ ಪಾವತಿಸಲು ನಿರ್ದೇಶನ ನೀಡಿದ್ದ ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ) ಆದೇಶ ಪ್ರಶ್ನಿಸಿ ವಾಹನದ ಮಾಲೀಕ ವಿ.ಸುನೀಲ್‌ ಕುಮಾರ್‌ ಮತ್ತು ವಾಹನದ ಖರೀದಿದಾರ ಶಬ್ರೀಜ್‌ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ಕುಟುಂಬದವರು ಸಲ್ಲಿಸಿದ್ದ ಮೂರು ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ಜಿ ಪಂಡಿತ್‌ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, 'ಅಪಘಾತವಾದ ಬೈಕ್‌ ನೋಂದಣಿ ಇನ್ನೂ ಸುನಿಲ್‌ ಕುಮಾರ್‌ ಹೆಸರಲ್ಲೇ ಇರುವುದರಿಂದ ಪರಿಹಾರ ಪಾವತಿಸುವ ಜವಾಬ್ದಾರಿ ಅವರದ್ದೇ ಆಗಿದೆ' ಎಂದು ನ್ಯಾಯಾಲಯ ಆದೇಶಿಸಿದೆ.

''ಪರಿಹಾರ ಲೆಕ್ಕಾಚಾರದಲ್ಲಿ ನ್ಯಾಯಾಧಿಕರಣ ಮೃತರ ವಾರ್ಷಿಕ ಆದಾಯದ ಸರಾಸರಿ 2.9 ಲಕ್ಷ ರೂ.ಗಳೆಂದು ಪರಿಗಣಿಸಿ ತಪ್ಪೆಸಗಿದೆ. ಅಪಘಾತಕ್ಕೂ ಮುನ್ನ ಸಲ್ಲಿಸಲಾದ ಆದಾಯ ತೆರಿಗೆ ಪಾವತಿಯ ದಾಖಲೆಗಳ ಪ್ರಕಾರ ಪರಿಗಣಿಸಬೇಕು. ಆದಾಯದಲ್ಲಿಕ್ರಮೇಣ ಹೆಚ್ಚಳ ಕಂಡು ಬಂದರೆ ಮಾತ್ರ. ನಿರಂತರ ಆದಾಯವೇ ಪರಿಹಾರ ಲೆಕ್ಕಾಚಾರದ ಮೂಲವಾಗಿದೆ,'' ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?

ಮಾರತ್‌ಹಳ್ಳಿಯ ಸುನಿಲ್‌ ಕುಮಾರ್‌ ಎಂಬುವರು ಅಪಘಾತಕ್ಕೆ ಕಾರಣವಾಗಿದ್ದ ಬೈಕ್‌ ಖರೀದಿಸಿದ್ದರು. ಬಳಿಕ ಅದನ್ನು ಶಬ್ರೀಜ್‌ಗೆ ಮಾರಾಟ ಮಾಡಿದ್ದರು. 2020ರ ಜೂ.18ರಂದು ಬೈಕ್‌ ಡಿಕ್ಕಿಯಿಂದ ಹನುಮಂತ ಎಂಬುವರು ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ನ್ಯಾಯಾಧಿಕರಣ 33 ಲಕ್ಷ ರೂ. ಪರಿಹಾರ ನಿಗದಿಪಡಿಸಿ, ಅದನ್ನು ಸುನೀಲ್‌ ಕುಮಾರ್‌ ಮತ್ತು ಶಬ್ರೀಜ್‌ ಜಂಟಿಯಾಗಿ ಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಸುನಿಲ್‌ಕುಮಾರ್‌ ಮತ್ತು ಶಬ್ರೀಜ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಮೃತ ಹನುಮಂತ ಅವರ ಕುಟುಂಬದವರು ಮೃತರ ಆದಾಯ ತೆರಿಗೆ ವಿವರಗಳನ್ನು ಉಲ್ಲೇಖಿಸಿ ಹೆಚ್ಚಿನ ಪರಿಹಾರ ಕೋರಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ಮುಟ್ಟಿನ ರಜೆ ಪ್ರಶ್ನಿಸಿ ಮತ್ತೊಂದು ಅರ್ಜಿ ಸಲ್ಲಿಕೆ

ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯಿದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋುತುಚಕ್ರದ ಸಮಯದಲ್ಲಿಮಾಸಿಕ ಒಂದು ದಿನದ ವೇತನ ಸಹಿತ ರಜೆ ನೀಡುವ ಸಂಬಂಧ ಸರಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಎಂಪ್ಲಾಯರ್ಸ್‌ ಅಸೋಸಿಯೇಷನ್‌ ಹೊಸದಾಗಿ ಹೈಕೋರ್ಟ್‌ನಲ್ಲಿಮತ್ತೊಂದು ಅರ್ಜಿ ಸಲ್ಲಿಸಿದೆ.

ಈಗಾಗಲೇ ಸರಕಾರದ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್‌ ಅಸೋಸಿಯೇಷನ್‌, ಬೆಂಗಳೂರು ಹೋಟೆಲ್ಸ್‌ ಅಸೋಸಿಯೇಷನ್‌ ಮತ್ತು ವಿವಿಧ ಖಾಸಗಿ ವಲಯಗಳಲ್ಲಿಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಎಲ್ಲಾಅರ್ಜಿಗಳು ನ್ಯಾಯಮೂರ್ತಿ ಅನಂತ ರಮನಾಥ್‌ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿದ್ದವು.

ಅರ್ಜಿದಾರರು, ಸರಕಾರ ಹಾಗೂ ಮಧ್ಯಂತರ ಅರ್ಜಿದಾರರ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಲ್ಲಾಮಧ್ಯಂತರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿತು. ಅಲ್ಲದೆ, ಬೆಂಗಳೂರು ಎಂಪ್ಲಾಯರ್ಸ್‌ ಅಸೋಸಿಯೇಷನ್‌ ಅರ್ಜಿಗೆ ಸಂಬಂಧಿಸಿದಂತೆ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.

ಇದೇ ವೇಳೆ ಸರಕಾರದ ಕ್ರಮ ಸಮರ್ಥಿಸಿ ಹಾಗೂ ಉದ್ಯೋಗಸ್ಥ ಮಹಿಳೆಯರ ಪರ ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ಎಐಸಿಸಿಟಿಯು), ಆಲ್‌ ಇಂಡಿಯಾ ಡೆಮಾಕ್ರಟಿಕ್‌ ವುಮೆನ್ಸ್‌ ಅಸೋಸಿಯೇಷನ್‌ (ಎಐಡಿಡಬ್ಲ್ಯುಧಿಎ) ಸಂಘಟನೆಗಳು ಹಾಗೂ 15 ಮಂದಿ ಮಹಿಳಾ ವಕೀಲರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka