ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕರಾರುವಾಕ್ಕು ಬೌಲಿಂಗ್ ನ ಅರಿವು ಮೂಡಿಸಿದ್ದರು. ಇದೀಗ ಅದೇ ಮದ್ದನ್ನು ಗುಜರಾತ್ ಬೌಲರ್ ಗಳು ಆರ್ ಸಿಬಿ ಬ್ಯಾಟರ್ ಗಳಿಗೆ ಅರೆದರು. ಅರ್ಶದ್ ಖಾನ್, ರಶೀದ್ ಖಾನ್ ಅವರ ಬಿಗು ಬೌಲಿಂಗ್ ದಾಳಿಯ ನೆರವಿನಿಂದ ಶುಭಮನ್ ಗಿಲ್ ಪಡೆ ರಜತ್ ಪಾಟಿದಾರ್ ಬಳಗವನ್ನು 4 ವಿಕೆಟ್ ಗಳಿಂದ ಪರಾಭವಗೊಳಿಸಿತು.
ಈ ಮೂಲಕ ಆಡಿದ 9 ಪಂದ್ಯಗಳಲ್ಲಿ 5ನ್ನು ಗೆದ್ದಿರುವ ಗುಜರಾತ್ ಟೈಟಾನ್ಸ್ 10 ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿ ಯಲ್ಲಿ 5ನೇ ಸ್ಥಾನದಲ್ಲೇ ಮುಂದುವರಿದಿದೆ. ಈ ಸೋಲಿನಿಂದಾಗಿ ಆರ್ ಸಿಬಿಯ ಸ್ಥಾನದಲ್ಲೂ ಏನೂ ಬದಲಾವಣೆಯಾಗಿಲ್ಲ. ಆದರೆ ನಿರಂತರ ಎರಡು ಪಂದ್ಯಗಳನ್ನು ಗೆದ್ದಿದ್ದ ಹಾಲಿ ಚಾಂಪಿಯನ್ಸ್ ತಂಡದ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿತು.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಪ್ರಿಲ್ 30ರ ಗುರುವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.2 ಓವರ್ ಗಳಲ್ಲಿ 155 ರನ್ ಗೆ ಸರ್ವಪತನಗೊಂಡಿತು. ಗುಜರಾತ್ ಟೈಟಾನ್ಸ್ ತಂಡ ಈ ಮೊತ್ತವನ್ನುಇನ್ನೂ 25 ಎಸೆತಗಳು ಬಾಕಿ ಉಳಿದಿರುವಂತೆ 4 ವಿಕೆಟ್ ಕಳೆದುಕೊಂಡು ತಲುಪಿತು.
(ಸ್ಕೋರ್ ಕಾರ್ಡ್)
ಸಾಯಿ ಸುದರ್ಶನ್(5 ಎಸೆತದಲ್ಲಿ 6 ರನ್)ಅವರ ವಿಕೆಟ್ ಅನ್ನು ಬೇಗನೇ ಪಡೆದರೂ ಶುಭಮನ್ ಗಿಲ್(18 ಎಸೆತದಲ್ಲಿ 43 ರನ್) ಮತ್ತು ಜೋಸ್ ಬಟ್ಲರ್(19 ಎಸೆತದಲ್ಲಿ 39) ಅವರು ವೇಗವಾಗಿ ರನ್ ಪೇರಿಸಿದ್ದು ಆರ್ ಸಿಬಿಗೆ ಕಂಟಟಕವಾಯಿತು. ಆರ್ ಸಿಬಿ ಪಾಳಯದಲ್ಲಿ ಭುವನೇಶ್ವರ್ ಕುಮಾರ್ ಅವರು ಎದುರಾಳಿ ಬ್ಯಾಟರ್ ಗಳಲ್ಲಿ ನಡುಕ ಹುಟ್ಟಿಸಿದರೂ ಜೋಶ್ ಹ್ಯಾಜಲ್ ವುಡ್ ದುಬಾರಿಯಾಗಿ ಪರಿಣಮಿಸಿದರು. 11ನೇ ಓವರ್ ನಲ್ಲಿ ಗುಜರಾತ್ ನ 5 ವಿಕೆಟ್ ಗಳನ್ನು ಉರುಳಿಸಿದ ಆರ್ ಸಿಬಿ ಗೆಲುವಿನ ಹಳಿಗೆ ಮರಳುವ ಸೂಚನೆ ನೀಡಿತ್ತು. ಆದರೆ ರಾಹುಲ್ ತೆವಾಟಿಯಾ ಅಜೇಯ 27 ರನ್ ಹೊಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಗುಜರಾತ್ ಬಿಗು ದಾಳಿ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಗೆ ಗುಜರಾತ್ ಜೈಟಾನ್ಸ್ ಬೌಲರ್ ಗಳು ಮೊನಚಾದ ಬೌಲಿಂಗ್ ನ ರುಚಿ ತೋರಿಸಿದರು. ದೇವದತ್ ಪಡಿಕ್ಕಲ್ (24 ಎಸೆತದಲ್ಲಿ 40 ರನ್) ಮತ್ತು ವಿರಾಟ್ ಕೊಹ್ಲಿ (13 ಎಸೆತದಲ್ಲಿ 28) ಅವರನ್ನು ಹೊರತುಪಡಿಸಿದರೆ ಬೇರೆಯವರ ಬ್ಯಾಟಿನಿಂದ ತೃಪ್ತಿದಾಯಕ ರನ್ ಬರಲಿಲ್ಲ. ಉತ್ತಮವಾಗಿ ಆಡುತ್ತಿದ್ದ ನಾಯಕ ರಜತ್ ಪಾಟೀದಾರ್ (15 ಎಸೆತದಲ್ಲಿ 19 ರನ್) ಅವರು ಸಹ ವಿವಾದಾತ್ಮಕ ಕ್ಯಾಚ್ ಗೆ ಔಟಾಗಿದ್ದು ಆರ್ ಸಿಬಿುಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಗುಜರಾತ್ ಪರ ಅರ್ಶದ್ ಖಾನ್ 3 ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ತಲಾ 2 ವಿಕೆಟ್ ಕಬಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಸಿರಾಜ್ ಮತ್ತು ರಬಾಡಾ ಹಂಚಿಕೊಂಡರು.ಸಂಕ್ಷಿಪ್ತ ಸ್ಕೋರ್
- ರಾಯಲ್ ಚಾಲೆಂಜರ್ಸ್ ಬೆಂಗಳೂುರು 19.2 ಓವರ್ ಗಳಲ್ಲಿ 155/10, ದೇವದತ್ ಪಡಿಕ್ಕಲ್ 40(24), ವಿರಾಟ್ ಕೊಹ್ಲಿ 28(13), ರಜತ್ ಪಾಟಿದಾರ್ 19(15), ಶೆಫರ್ಡ್ 17(15), ಅರ್ಶದ್ ಖಾನ್ 22ಕ್ಕೆ 3, ರಶೀದ್ ಖಾನ್ 19ಕ್ಕೆ 2, ಜೇಸನ್ ಹೋಲ್ಡರ್ 29ಕ್ಕೆ 2.
- ಗುಜರಾತ್ ಟೈಟಾನ್ಸ್ 15.5 ಓರ್ ಗಳಲ್ಲಿ 158/6, ಶುಭಮನ್ ಗಿಲ್ 43(18), ಜೋಸ್ ಬಟ್ಲರ್ 39(19), ರಾಹುಲ್ ತೆವಾಟಿಯಾ 27(17), ಭುವನೇಶ್ವರ್ ಕುಮಾರ್ 28ಕ್ಕೆ 3, ರೊಮಾರಿಯೋ ಶೆಫರ್ಡ್ 30ಕ್ಕೆ 2.

