ಅಹಮದಾಬಾದ್: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅವರ ವಿಕೆಟ್ ಪತನದ ರೀತಿ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಜೇಸನ್ ಹೋಲ್ಡರ್ ಹಿಡಿದ ವಿವಾದಾತ್ಮಕ ಕ್ಯಾಚ್, ಪಂದ್ಯದ ಗತಿಯನ್ನೇ ಬದಲಿಸಿತು ಎಂಬ ಆರೋಪಗಳು ಕೇಳಿಬರುತ್ತಿವೆ.
ಸದ್ಯ ನಿಯಮ ಮುಂದಿಟ್ಟು ಮಾಜಿ ಅಂಪೈರ್, ಹಿರಿಯ ಆಟಗಾರರು ಕಿಡಿಕಾರಿದ್ದಾರೆ.
ಹೋಲ್ಡರ್ ಅವರು ಕ್ಯಾಚ್ ಹಿಡಿದು ಸ್ಲೈಡ್ ಮಾಡುವಾಗ ಚೆಂಡು ನೆಲಕ್ಕೆ ತಾಗಿತ್ತು ಎಂಬುದು ಆರ್‌ಸಿಬಿ ಆಟಗಾರರ ವಾದವಾಗಿತ್ತು. ಈ ತೀರ್ಪು ಹೊರಬರುತ್ತಿದ್ದಂತೆ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂಪೈರ್ ತೀರ್ಪಿನಿಂದ ಕೆಂಡಾಮಂಡಲರಾಗಿದ್ದರು. ಅವರು ಮೈದಾನದ ಅಧಿಕಾರಿಯೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬಂತು. ಅವರ ಬೆನ್ನಲ್ಲೇ ಮುಖ್ಯ ಕೋಚ್ ಆಂಡಿ ಫ್ಲವರ್ ಕೂಡ ಅಂಪೈರ್ ಬಳಿ ತೆರಳಿ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಆದರೆ, ಥರ್ಡ್ ಅಂಪೈರ್ ಮಾತ್ರ ಪಾಟಿದಾರ್ ಔಟ್ ಎಂದು ಪಟ್ಟುಹಿಡಿದರು.
ಮಾಜಿ ಅಂಪೈರ್ ಹೇಳಿದ್ದೇನು?
ಈ ವಿವಾದಾತ್ಮಕ ಕ್ಯಾಚ್ ಕುರಿತು ಮಾತನಾಡಿದ ಅನಿಲ್ ಚೌಧರಿ, "ಕ್ಯಾಚ್ ಹಿಡಿಯುವಾಗ ಎರಡು ಪ್ರಮುಖ ಅಂಶಗಳನ್ನು ಗಮನಿಸಬೇಕು. ಮೊದಲನೆಯದು ಕ್ಯಾಚ್ ಮೇಲಿನ ನಿಯಂತ್ರಣ, ಎರಡನೆಯದು ದೇಹದ ಚಲನೆ. ಹೋಲ್ಡರ್ ತನ್ನ ದೇಹವನ್ನು ನಿಯಂತ್ರಣಕ್ಕೆ ತರುವ ಮುನ್ನವೇ ಅವರ ಅಂಗೈ ಕೆಳಮುಖವಾಗಿತ್ತು ಮತ್ತು ಚೆಂಡು ಸ್ಪಷ್ಟವಾಗಿ ನೆಲಕ್ಕೆ ತಾಗಿತ್ತು. ನನ್ನ ಪ್ರಕಾರ ಅದು ನಾಟ್ ಔಟ್. ಟಿವಿ ಅಂಪೈರ್ ಅಲ್ಲಿ ಏನು ನೋಡಿದರೋ ನನಗೆ ಗೊತ್ತಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಎಂಸಿಸಿ ನಿಯಮ ಉಲ್ಲೇಖಿಸಿದ ಆಕಾಶ್ ಚೋಪ್ರಾ
ಚೋಪ್ರಾ ವಾದದ ಪ್ರಕಾರ, ಹೋಲ್ಡರ್ ಚೆಂಡನ್ನು ಹಿಡಿದ ನಂತರ ಸ್ಲೈಡ್ ಮಾಡುವಾಗ ಅವರ ದೇಹದ ಮೇಲೆ ಅವರಿಗೆ ನಿಯಂತ್ರಣವಿರಲಿಲ್ಲ ಮತ್ತು ಆ ಸಮಯದಲ್ಲಿ ಚೆಂಡು ನೆಲಕ್ಕೆ ತಾಗಿತ್ತು. "ನನ್ನ ಪ್ರಕಾರ ಅದು ಸ್ಪಷ್ಟವಾಗಿ ನಾಟ್ ಔಟ್. ಹೋಲ್ಡರ್ ಸ್ಲೈಡ್ ಮಾಡುವಾಗ ಚೆಂಡು ನೆಲಕ್ಕೆ ತಾಗಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು" ಎಂದು ಚೋಪ್ರಾ ಹೇಳಿದ್ದಾರೆ.
ದೊಡ್ಡ ಗಣೇಶ್ ಕಿಡಿ
ಕನ್ನಡಿಗ ಹಾಗೂ ಮಾಜಿ ವೇಗಿ ದೊಡ್ಡ ಗಣೇಶ್ ಕೂಡ ಅಂಪೈರ್‌ಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. "ಇಂದಿನ ಕಾಲದಲ್ಲಿ ಇಷ್ಟೊಂದು ತಂತ್ರಜ್ಞಾನ ಲಭ್ಯವಿದ್ದರೂ ಇಂತಹ ತಪ್ಪು ನಿರ್ಧಾರಗಳು ಹೊರಬರುತ್ತಿರುವುದು ನಂಬಲಾಗುತ್ತಿಲ್ಲ. ಅದು ಸ್ಪಷ್ಟವಾಗಿ ನೆಲಕ್ಕೆ ತಾಗಿರುವ ಕ್ಯಾಚ್ ಆಗಿತ್ತು. ಅಂಪೈರ್‌ಗಳಿಗೆ ಇದು ಹೇಗೆ ಔಟ್ ಎಂದು ಕಂಡಿತು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಈ ನಿರ್ಧಾರ ಆರ್‌ಸಿಬಿ ತಂಡದ ಲಯವನ್ನೇ ಹಾಳುಮಾಡಿತು" ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
