ಒಮ್ಮೆ ಪಂದ್ಯ ರಾಜಸ್ಥಾನ ರಾಯಲ್ಸ್ ಪರ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ಕಡೆಗೆ. ಕೊನೇ ಓವರ್ ವರೆಗೂ ಚಂಚಲೆಯಾಗಿದ್ದ ವಿಜಯ ಲಕ್ಷ್ಮೀ ಕೊನೆಗೂ ಒಲಿದಿದ್ದು ರಾಜಸ್ಥಾನ ರಾಯಲ್ಸ್ ಕಡೆಗೆ! ಧ್ರುವ್ ಜ್ಯುರೆಲ್, ಯಶಸ್ವಿ ಜೈಸ್ವಾಲ್ ಅವರ ಆಕರ್ಷಕ ಅರ್ಧಶತಕದ ಬಳಿಕ ರವಿ ಬಿಷ್ಣೋಯಿ ಅವರ ಮ್ಯಾಜಿಕ್ ಸ್ಪೆಲ್ ಗೆ ನಿರುತ್ತರವಾದ ಗುಜರಾತ್ ಜೈಂಟ್ಸ್ ತಂಡ 6 ರನ್ ಗಳಿಗೆ ಪರಾಭವ ಅನುಭವಿಸಿತು.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಪ್ರಿಲ್ 4ರ ಶನಿವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಇದಕ್ಕುತ್ತರವಾಗಿ ಗುಜರಾತ್ ಜೈಂಟ್ಸ್ ತಂಡ ಅಷ್ಟೇ ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 204 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
(ಸ್ಕೋರ್ ಕಾರ್ಡ್)
ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ
ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಕುಮಾರ್ ಕುಶಾಗ್ರ ಅವರ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಅವರು ಮೊದಲ ವಿಕೆಟ್ ಗೆ 8 ಓವರ್ ಗಳಲ್ಲಿ 78 ರನ್ ಬಾಚಿದರು. ಸಾಯಿ ಸುದರ್ಶನ್ ಅವರು ಕೇವಲ 44 ಎಸೆತದಲ್ಲಿ 73 ರನ್ ಗಳಿಸಿದರು. ತಂಡವನ್ನು ಜಯದ ಕಡೆಗೆ ಕೊಂಡೊಯ್ಯುತ್ತಿದ್ದ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದು ರವಿ ಬಿಷ್ಣೋಯಿ.11ನೇ ಓವರ್ ನಲ್ಲಿ ಸಾಯಿ ಸುದರ್ಶನ್ ಅವರನ್ನು ತುಷಾರ್ ದೇಶಪಾಂಡೆಗೆ ಕ್ಯಾಚ್ ಕೊಡಿಸಿದ ರವಿ ಬಿಷ್ಣೋಯಿ ಅವರು 13ನೇ ಓವರ್ ನಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ವಾಶಿಂಗ್ಟನ್ ಸುಂದರ್ ಅವರ ವಿಕೆಟ್ ಪಡೆವ ಮೂಲಕ ಗುಜರಾತ್ ಕೈಯಲ್ಲಿದ್ದ ಪಂದ್ಯವನ್ನು ರಾಜಸ್ಥಾನ ತೆಕ್ಕೆಗೆ ಸೆಳೆದರು.
ಪಂದ್ಯಕ್ಕೆ ರೋಚಕತೆ ತಂದ ರಶೀದ್- ರಬಾಡಾ
ಇನ್ನೇನು ರಾಜಸ್ಥಾನ ಗೆಲುವು ಹತ್ತಿರವಾಗುತ್ತಿದೆ ಎಂದ ಹಂತದಲ್ಲಿ ರಶೀದ್ ಖಾನ್ ಮತ್ತು ಕಗಿಸೋ ರಬಾಡ ಅವರು 45 ರನ್ ಗಳ ಜೊತೆಯಾಟ ಆಡುವ ಮೂಲಕ ಪಂದ್ಯಕ್ಕೆ ರೋಚಕತೆಯನ್ನು ತಂದಿದ್ದರು. ಕೊನೆಯ ಎರಡು ಓವರ್ ಗಳಲ್ಲಿ ಜೋಫ್ರಾ ಆರ್ಚರ್ ಮತ್ತು ತುಷಾರ್ ದೇಶಪಾಂಡೆ ಬಿಗು ಬೌಲಿಂಗ್ ದಾಳಿ ನಡೆಸಿದ ರಾಜಸ್ಥಾನ ರಾಯಲ್ಸ್ ಬೌಲರ್ ಗಳು ಗುಜರಾಜ್ ಜೈಂಟ್ಸ್ ಜಯದ ಆಸೆಗೆ ತಣ್ಣೀರೆರಚಿದರು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ(18 ಎಸೆತದಲ್ಲಿ 31) ಮತ್ತು ಯಶಸ್ವಿ ಜೈಸ್ವಾಲ್(36 ಎಶೆತದಲ್ಲಿ 55) ಅವರು ಉತ್ತಮ ಆರಂಭ ಒದಗಿಸಿದರು ಇವರಿಬ್ಬರು ಪವಪ್ ಪ್ಲೇನ 6 ಓವರ್ ಗಳಲ್ಲಿ 69 ರನ್ ಕಲೆ ಹಾಕಿದರು. ಮಾತ್ರವಲ್ಲದೆ ಐಪಿಎಲ್ ನಲ್ಲಿ ಅತಿ ವೇಗವಾಗಿ 500 ರನ್ ಗಳ ಜೊತೆಯಾಟ ಆಡಿದ ಭಾರತೀಯ ಜೋಡಿ ಎಂಬ ದಾಖಲೆ ನಿರ್ಮಿಸಿದರು. ಧ್ರುವ್ ಜ್ಯುರೆಲ್ ಅವರು ಕೇವಲ 45 ಎಸೆತಗಳಲ್ಲಿ 75 ರನ್ ಬಾರಿಸಿದರು. ಇದರಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ಗಳಿದ್ದವು. ಗುಜರಾತ್ ಪರ ಕಗಿಸೋ ರಬಾಡಾ 2 ವಿಕೆಟ್, ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ಧ ಕೃಷ್ಣ, ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಕಾರ್ಡ್
- ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 210/6, ವೈಭವ್ ಸೂರ್ಯವಂಶಿ 31(18), ಯಶಸ್ವಿ ಜೈಸ್ವಾಲ್ 55(36), ಧ್ರುವ್ ಜ್ಯುರೆಲ್ 75(42), ಕಗಿಸೊ ರಬಾಡ 42ಕ್ಕೆ 2, ಅಶೋಕ್ ಶರ್ಮಾ 37ಕ್ಕೆ 1, ರಶೀದ್ ಖಾನ್ 39ಕ್ಕೆ 1.

