Dailyhunt
ಸರಕಾರಿ ಕೆಲಸ ಕೊಡಿಸುವುದಾಗಿ 20 ಲಕ್ಷ ರೂ ಪಂಗನಾಮ; ನಕಲಿ ಸಂದರ್ಶನ ನಡೆಸಿದ್ದಲ್ಲದೆ, ಆದೇಶ ಪತ್ರವನ್ನೂ ನೀಡಿದ್ದರು!

ಸರಕಾರಿ ಕೆಲಸ ಕೊಡಿಸುವುದಾಗಿ 20 ಲಕ್ಷ ರೂ ಪಂಗನಾಮ; ನಕಲಿ ಸಂದರ್ಶನ ನಡೆಸಿದ್ದಲ್ಲದೆ, ಆದೇಶ ಪತ್ರವನ್ನೂ ನೀಡಿದ್ದರು!

Vijay Karnataka 1 week ago

ಬೆಂಗಳೂರು: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ ವಂಚಕನೊಬ್ಬ ಗುತ್ತಿಗೆದಾರರೊಬ್ಬರಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಮನುಕುಮಾರ್‌ ಎಂಬುವವರು ನೀಡಿದ ದೂರಿನನ್ವಯ ಹಣಕಾಸು ಇಲಾಖೆ ನೌಕರ ಎಂದು ಹೇಳಿಕೊಂಡಿರುವ ಎಂ.ಸಿ. ಗಿರೀಶ್‌ ಮತ್ತಿತರರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆರೋಪಿ ಗಿರೀಶ್‌ ಮತ್ತು ತಂಡವು ನೇಮಕಾತಿ ನೆಪದಲ್ಲಿ ಕಬ್ಬನ್ ಪಾರ್ಕ್ ಬಳಿ ಇರುವ ಚನ್ನಬಸಪ್ಪ ಅಡಿಯೋರಿಯಂನಲ್ಲಿ ನಕಲಿ ಸಂದರ್ಶನ ನಡೆಸಿದ್ದು ಮಾತ್ರವಲ್ಲದೆ ನಕಲಿ ನೇಮಕಾತಿ ಪತ್ರವನ್ನು ನೀಡಿ ವಂಚಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವರ್ತೂರಿನ ಮನುಕುಮಾರ್‌ ಅವರಿಗೆ ಸ್ನೇಹಿತರ ಮೂಲಕ 2025ರ ಜೂನ್‌ನಲ್ಲಿ ಗಿರೀಶ್‌ ಪರಿಚಯವಾಗಿದ್ದ. ಮೂವತ್ತು ಲಕ್ಷ ರೂಪಾಯಿ ನೀಡಿದರೆ ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಗಿರೀಶ್‌ ಭರವಸೆ ನೀಡಿದ್ದ. ತನ್ನ ಪತ್ನಿಗೆ ಕೆಲಸ ಕೊಡಿಸುವ ಸಲುವಾಗಿ ಹಣ ಕೊಡಲು ಮನುಕುಮಾರ್‌ ಒಪ್ಪಿದ್ದರು. ಮಾತುಕತೆ ಬಳಿಕ ಮನುಕುಮಾರ್‌, ಕಬ್ಬನ್‌ಪಾರ್ಕ್ ನ ನಿವೃತ್ತ ಸರಕಾರಿ ನೌಕರರ ಸಂಘದ ಹತ್ತಿರ ಇರುವ ಕಬ್ಬನ್‌ ಕೆಫೆ ಬಳಿ 15 ಲಕ್ಷ ರೂಪಾಯಿಗಳನ್ನು ಹಂತ ಹಂತವಾಗಿ ನಗದು ರೂಪದಲ್ಲಿ ಗಿರೀಶ್‌ಗೆ ಕೊಟ್ಟಿದ್ದರು. ಇದಕ್ಕೂ ಮೊದಲು ಐದು ಲಕ್ಷ ರೂಗಳನ್ನು ಗಿರೀಶ್‌ ಪ್ರತ್ಯೇಕವಾಗಿ ಪಡೆದಿದ್ದ.

ನಕಲಿ ಸಂದರ್ಶನ ಮಾಡಿ ನಂಬಿಸಿದ

ಐಎಎಸ್‌ ಅಧಿಕಾರಿ ಹರ್ಷವರ್ಧನ್‌ ಎಂಬುವವರ ಹೆಸರಿನಲ್ಲಿ ಸುಳ್ಳು ಸಂದರ್ಶನ ಪತ್ರ ಸೃಷ್ಟಿಸಿದ್ದ ಗಿರೀಶ್‌, ಈ ಪತ್ರವನ್ನು ಮನುಕುಮಾರ್‌ಗೆ ನೀಡಿ ಪತ್ನಿಯನ್ನು ಸಂದರ್ಶನಕ್ಕೆ ಕರೆತರುವಂತೆ ತಿಳಿಸಿದ್ದ. ಅಲ್ಲದೆ, ವಿಧಾನಸೌಧದ ಬದಲಿಗೆ ಕಬ್ಬನ್‌ಪಾರ್ಕ್ ನ ಸಚಿವಾಲಯ ಕ್ಲಬ್‌ನಲ್ಲಿರುವ ಚನ್ನಬಸಪ್ಪ ಆಡಿಟೋರಿಯಂನಲ್ಲಿ ಸಂದರ್ಶನ ನಿಗದಿ ಮಾಡಿದ್ದ. ಈ ವೇಳೆ ಮಹಿಳೆ ಸೇರಿದಂತೆ ಐವರು ಸಂದರ್ಶನ ನಡೆಸಿದ್ದರು. 2025ರ ಅಕ್ಟೋಬರ್‌ 9ರಂದು ನಕಲಿ ನೇಮಕಾತಿ ಆದೇಶ ನೀಡಿ ವಂಚಿಸಲಾಗಿತ್ತು ಎಂದು ಮನುಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಂಚಕ ಗಿರೀಶ್‌ ನ ನಡೆಯ ಬಗ್ಗೆ ಮನುಕುಮಾರ್ ಗೆ ಮೊದಲು ತಿಳಿಯಲಿಲ್ಲ. ಯಾಕೆಂದರೆ ಯಾವುದೇ ಅನುಮಾನ ಬಾರದಂತೆ ಈ ವಂಚಕ ತಂಡ ನಡೆದುಕೊಂಡಿತ್ತು. ಈ ತಂಡವು ನಕಲಿ ನೇಮಕಾತಿ ಆದೇಶ ಪತ್ರ ನೀಡಿ ಮೋಸ ಮಾಡಿದೆ ಎಂದು ತಡವಾಗಿ ಗೊತ್ತಾಗಿತ್ತು. ಆದರೆ ಹಣ ವಾಪಸ್‌ ಕೊಡುವುದಾಗಿ ಸಬೂಬು ಹೇಳಿ ತಪ್ಪಿಸಿಕೊಂಡಿತ್ತು. ಈ ನಿಟ್ಟಿನಲ್ಲಿ ತಡವಾಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಗಿರೀಶ್‌ನ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka