Dailyhunt Logo
  • Light mode
    Follow system
    Dark mode
    • Play Story
    • App Story
ಸರ್ಕಾರದಿಂದ ಭೂಸ್ವಾಧೀನ: ಭೂಮಿ ಮಾಲೀಕರ ಪರ ಹೈಕೋರ್ಟ್‌ ಮಹತ್ವದ ಆದೇಶ; ಮೂಲ ಪರಿಹಾರ ಜತೆ ಮಾನಸಿಕ ನಷ್ಟದ ಪರಿಹಾರಕ್ಕೆ ಸೂಚನೆ

ಸರ್ಕಾರದಿಂದ ಭೂಸ್ವಾಧೀನ: ಭೂಮಿ ಮಾಲೀಕರ ಪರ ಹೈಕೋರ್ಟ್‌ ಮಹತ್ವದ ಆದೇಶ; ಮೂಲ ಪರಿಹಾರ ಜತೆ ಮಾನಸಿಕ ನಷ್ಟದ ಪರಿಹಾರಕ್ಕೆ ಸೂಚನೆ

Vijay Karnataka 6 days ago

ಬೆಂಗಳೂರು: ಅಭಿವೃದ್ಧಿ ಕಾರ್ಯಗಳಿಗಾಗಿ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳಿಗೆ ಮೂಲ ಪರಿಹಾರದ ಜತೆಗೆ ಮಾನಸಿಕ ನಷ್ಟಕ್ಕಾಗಿ (ಸೊಲಾಷಿಯಂ) ಹೆಚ್ಚುವರಿ ಪರಿಹಾರ ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.ಭೂ ಸ್ವಾಧೀನಕ್ಕಾಗಿ ಪರಿಹಾರ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯಗಾರರು ಹೊರಡಿಸಿದ ಆದೇಶ ರದ್ದು ಮಾಡಬೇಕು ಮತ್ತು ಮಾರುಕಟ್ಟೆ ಮೌಲ್ಯದ ಪರಿಹಾರದ ಹೊರತಾಗಿಯೂ ಭಾವನಾತ್ಮಕ ಪರಿಹಾರ ಹಾಗೂ ಸ್ವಾಧೀನದ ದಿನದಿಂದ ಬಡ್ಡಿ ಪಾವತಿ ಮಾಡಬೇಕು ಎಂದು ಕೋರಿ ಭೂ ಮಾಲೀಕರಾದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಮರಾವತಿ ಗ್ರಾಮದ ಮೃತ ಜಿ.

ಸಿದ್ದರಾಮಯ್ಯನವರ ವಾರಸುದಾರರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

''ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಕಾಯಿದೆಯಡಿ ಭೂಮಿ ಕಳೆದುಕೊಂಡವರಿಗೂ ಭೂಸ್ವಾಧೀನ ಕಾಯಿದೆಯ ಸೆಕ್ಷನ್‌ 23(2)ರಡಿ ಮಾನಸಿಕ ನಷ್ಟ ಅಥವಾ ಭಾವನಾತ್ಮಕ ಪರಿಹಾರ ಮತ್ತು ಸೆಕ್ಷನ್‌ 28ರಡಿ ಬಡ್ಡಿ ಪಡೆಯುವ ಕಾನೂನುಬದ್ಧ ಹಕ್ಕು ಇರಲಿದೆ,'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮಾನಸಿಕ ನಷ್ಟಕ್ಕೆ ಪರಿಹಾರ

''ಭೂ ಕಳೆದುಕೊಂಡವರಿಗೆ ಪರಿಹಾರ ನೀಡುವ ಸಂಬಂಧದ ಆದೇಶಗಳಲ್ಲಿ ಮಾನಸಿಕ ನಷ್ಟಕ್ಕೆ ಪರಿಹಾರ ಹಾಗೂ ಬಡ್ಡಿ ನಮೂದಿಸಿಲ್ಲಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸಂವಿಧಾನದ 14 ಮತ್ತು 300ರ 'ಎ' ವಿಧಿಗಳ ಉಲ್ಲಂಘನೆಯಾಗುತ್ತದೆ,'' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸಂತ್ರಸ್ತರಿಗೆ ಕಾನೂನುಬದ್ಧವಾಗಿ ಸಿಗಬೇಕಾದ ಭಾವನಾತ್ಮಕ ನಷ್ಟ ಮತ್ತು ಬಡ್ಡಿ ಸೌಲಭ್ಯಗಳನ್ನು ಲೆಕ್ಕಹಾಕಿ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಈ ಸಂಬಂಧ ಉಭಯ ಪಕ್ಷಕಾರರು ಯಾವುದೇ ಅಧಿಸೂಚನೆಗೆ ಕಾಯದೆ, 2026ರ ಸೆ.10ರಂದು ನೇರವಾಗಿ ವಿಶೇಷ ಭೂಸ್ವಾಧೀನ ಅಧಿಕಾರಿ ಎದುರು ಹಾಜರಾಗುವಂತೆ ನ್ಯಾಯಪೀಠ ಸೂಚನೆ ನೀಡಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka