'ಶ್ರೀ ಗಂಧದ ಗುಡಿ' ಧಾರಾವಾಹಿಗೆ ಹೊಸ ಪಾತ್ರ ಪ್ರವೇಶವಾಗಿದೆ. ಪಾತ್ರದ ಹೆಸರು ಅನಿತಾ. ಹರಿಶ್ಚಂದ್ರನ ಕಣ್ಣಿಗೆ ಬಿದ್ದಿರುವ ಅನಿತಾಳ ಜಪ ಜೋರಾಗಿದೆ. ಈ ಹೆಸರು ಚಂದನಾ ಮನಸ್ಸಿನಲ್ಲಿ ಪ್ರೀತಿಯ ಕಿಚ್ಚು ಹೊತ್ತಿಸಿದೆ. ಹರಿ ಚೆಲ್ಲಾಟಕ್ಕೆ ಚಂದನಾ ಹೊಟ್ಟೆಕಿಚ್ಚಿನಿಂದ ಕುದುಯುತ್ತಿದ್ದಾಳೆ.
Advertisement
ಅಷ್ಟಕ್ಕೂ ಹೊಸ ಟ್ರ್ಯಾಕ್‌ಗೆ ಬಂದಿರುವ ಈ ಅನಿತಾ ಎಂಬ ಪಾತ್ರ ಮಾಡುತ್ತಿರುವ ನಟಿ ಯಾರು ಎಂಬುವುದಕ್ಕೆ ಉತ್ತರ ಶ್ರಾವ್ಯ ಮರವಂತೆ.
ಏನಿದು ಹೊಸ ಟ್ರ್ಯಾಕ್?
'ಶ್ರೀ ಗಂಧದಗುಡಿ' ಧಾರಾವಾಹಿಯ ಕೊನೆಯ ಸಹೋದರ ಮಯೂರನ ಕಾಲೇಜು ಕಹಾನಿಯ ನಾಯಕಿ ಅನಿತಾ. ಅಪ್ಪಿತಪ್ಪಿ ಬಸ್ ನಿಲ್ದಾಣದಲ್ಲಿ ಸಿಕ್ಕ ಹರಿಶ್ಚಂದ್ರನ ಜೊತೆಗೆ ಮಾತುಕತೆ ಮಾಡುತ್ತಾಳೆ. ಅಲ್ಲಿಯೇ ನಿಂತಿದ್ದ ಮಯೂರ ಮತ್ತು ಹರಿ ಪತ್ನಿ ಚಂದನಾ ಎದೆಗೆ ಕಹಿಯ ಅನುಭವ ನೀಡುತ್ತೆ ಈ ದೃಶ್ಯ. ಹರಿ ಹತ್ತಿರ ಫೋನ್ ನಂಬರ್ ಕೇಳಿದ ಅನಿತಾ ವರ್ತನೆ ಕಂಡು ಚಂದನಾಗೆ ಹೊಟ್ಟೆ ಉರಿ ಶುರುವಾಗಿದೆ. ಇದು ಹರಿಯ ಬಗೆಗಿನ ಪ್ರೀತಿನಾ ಎಂಬುವುದು ಎಲ್ಲರಿಗೂ ಇರುವ ಡೌಟ್. ಹರಿ ಮಾತ್ರ ಈ ಸೀನ್ ಸಖತ್ ಎಂಜಾಯ್ ಮಾಡುತ್ತಿದ್ದಾನೆ. ಅಷ್ಟಕ್ಕೂ ಈ ಅನಿತಾ ಪಾತ್ರ ಹರಿಯ ಜೋಡಿ ಅಲ್ವೇ ಅಲ್ಲ. ಮಯೂರನಿಗೆ ಜೊತೆಯಾಗೋಕೆ ಬಂದ ಪಾತ್ರವಿದು.
ರಿಯಾಲಿಟಿ ಶೋ ಪ್ರತಿಭೆ ಅನಿತಾ ಪಾತ್ರಧಾರಿ
'ಶ್ರೀ ಗಂಧದಗುಡಿ' ಧಾರಾವಾಹಿಯಲ್ಲಿ ಅನಿತಾ ಪಾತ್ರ ಮಾಡುತ್ತಿರುವ ನಟಿ ಶ್ರಾವ್ಯ ಮರವಂತೆ. ಇವರು ಜನಪ್ರಿಯ ಕನ್ನಡ ರಿಯಾಲಿಟಿ ಶೋ 'ಡ್ರಾಮಾ ಜ್ಯೂನಿಯರ್ಸ್' ಪ್ರತಿಭೆ. 'ಡಿಕೆಡಿ ಲಿಟಲ್ ಮಾಸ್ಟರ್ಸ್'ನ ಡ್ಯಾನ್ಸಿಂಗ್ ಚೆಲುವೆ. ಹೌದು, ಜೀ ಕನ್ನಡ ವಾಹಿಮಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ರಾಮಾ ಜ್ಯೂನಿಯರ್ಸ್ ಸೀಸನ್-2' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಬಣ್ಣಹಚ್ಚಿದರು ಶ್ರಾವ್ಯ. ಈ ಸೀಸನ್‌ನ ರನ್ನರ್ ಅಪ್ ಸ್ಥಾನ ಅಲಂಕರಿಸಿದ್ದರು. ಅಲ್ಲಿಂದ ಸೀದಾ ಎಂಟ್ರಿಯಾಗಿದ್ದು ಇದೇ ವಾಹಿನಿಯ ಡ್ಯಾನ್ಸ್ ಶೋ 'ಡಿಕೆಡಿ ಲಿಟಲ್ ಮಾಸ್ಟರ್ಸ್'ಗೆ. ಇಲ್ಲಿಯೂ ಕೂಡ ರನ್ನರ್ ಅಪ್ ಸ್ಥಾನ ಪಡೆಯುವ ಮೂಲಕ ಬಾಲ್ಯದಲ್ಲಿಯೇ ಪರಿಪೂರ್ಣ ನಟಿಯಾಗುವ ಎಲ್ಲಾ ಅರ್ಹತೆ ಸಂಪಾದಿಸಿದರು.
ಯಕ್ಷಗಾನ ಕಲಾವಿದೆ
3 ವರ್ಷದ ಮಗು ಇರುವಾಗಲೇ ಯಕ್ಷಗಾನ ಕುಣಿತದ ತಯಾರಿ ಮಾಡುವುದಕ್ಕೆ ಪ್ರಾರಂಭಿಸಿದ್ದರು ನಟಿ ಶ್ರಾವ್ಯ ಮರವಂತೆ. ಇವರ ತಂದೆ ಕೂಡ ಯಕ್ಷಗಾನ ಕಲಾವಿದರು. ಅಪ್ಪನಂತೆ ಮಗಳು ಕೂಡ ಈ ಅಮೋಘ ಕಲೆಯನ್ನ ಕರಗತ ಮಾಡಿಕೊಂಡಿದ್ದಾರೆ. ಜೊತೆಗೆ ಮಾಡ್ಲಿಂಗ್‌ನಲ್ಲೂ ಆಸಕ್ತಿ ಹೊಂದಿರುವ ಶ್ರಾವ್ಯ ಮರವಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯ 'ಶ್ರೀ ಗಂಧದಗುಡಿ' ಧಾರಾವಾಹಿ ಮೂಲಕ ಧಾರಾವಾಹಿ ಜರ್ನಿ ಶುರು ಮಾಡಿದ್ದಾರೆ.