Dailyhunt Logo
  • Light mode
    Follow system
    Dark mode
    • Play Story
    • App Story
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಕೆ ಎಲ್ ರಾಹುಲ್ ವಿಭಿನ್ನ ಸಿದ್ಧತೆ: ತೇವಾಂಶದ ಸ್ಪೆಷಲ್ ಪಿಚ್ ನಲ್ಲಿ ಅಭ್ಯಾಸ ನಡೆಸಿದ್ದೇಕೆ?

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಕೆ ಎಲ್ ರಾಹುಲ್ ವಿಭಿನ್ನ ಸಿದ್ಧತೆ: ತೇವಾಂಶದ ಸ್ಪೆಷಲ್ ಪಿಚ್ ನಲ್ಲಿ ಅಭ್ಯಾಸ ನಡೆಸಿದ್ದೇಕೆ?

Vijay Karnataka 1 week ago

ಶ್ರೀಲಂಕಾ ತಂಡವನ್ನು ಶ್ರೀಲಂಕಾದಲ್ಲಿ ಸೋಲಿಸುವುದೆಂದರೆ ಸಿಂಹವನ್ನು ಅದರ ಗುಹೆಯೊಳಗೆ ಕಟ್ಟಿಹಾಕಿದಂತೆಯೇ ಎಂಬ ಮಾತಿದೆ. ಇದೇ ಕಾರಣಕ್ಕೆ ವಿಶ್ವದ ಘಟಾನುಘಟಿ ತಂಡಗಳಿಗೂ ಲಂಕನ್ನರು ಚಳ್ಳೇ ಹಣ್ಣು ತಿನ್ನಿಸಿದ್ದಾರೆ. ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡದ ಉಪನಾಯಕ ಕೆ.ಎಲ್.

ರಾಹುಲ್ ಅವರು, ವಿಭಿನ್ನ ರೀತಿಯಲ್ಲಿ ಅಭ್ಯಾಸ ನಡೆಸುತ್ತಿರುವ ವೀಡಿಯೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಬ್ಯಾಟರ್‌ಗಳು ಸುಸಜ್ಜಿತ ಪಿಚ್‌ಗಳಲ್ಲಿ ಅಭ್ಯಾಸ ಮಾಡುತ್ತಾರೆ. ಆದರೆ ರಾಹುಲ್ ಅವರು ಮುಂಬೈನಲ್ಲಿ ತೇವಾಂಶ ಹಾಗೂ ಕೆಸರಿನಿಂದ ಕೂಡಿದ ಪಿಚ್‌ನಲ್ಲಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಈ ಪಿಚ್‌ನಲ್ಲಿ ಚೆಂಡು ಗ್ರಿಪ್ ಆಗಿ, ತೀವ್ರವಾಗಿ ಟರ್ನ್ ಆಗುವುದರ ಜೊತೆಗೆ, ಕೆಲವೊಮ್ಮೆ ಕೆಳಮಟ್ಟದಲ್ಲೇ ಸಾಗುತ್ತಿತ್ತು. ಶ್ರೀಲಂಕಾದ ಸ್ಪಿನ್ನರ್‌ಗಳನ್ನು ಎದುರಿಸುವಾಗ ಎದುರಾಗಬಹುದಾದ ಅನಿರೀಕ್ಷಿತ ಸವಾಲುಗಳಿಗೆ ಸಮರ್ಪಕ ಉತ್ತರ ನೀಡಲು ರಾಹುಲ್ ಅವರು ಈ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ.

ಆಗಸ್ಟ್ 7ರಿಂದ ಪ್ರಾರಂಭವಾಗಲಿರುವ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಭಾರತೀಯ ಟೆಸ್ಟ್ ತಂಡ ಆಗಸ್ಟ್ 4ರಂದು ಶ್ರೀಲಂಕಾ ತಲುಪಿದೆ. ಉಪನಾಯಕನಾಗಿರುವ ರಾಹುಲ್, 2015 ಮತ್ತು 2017ರ ಶ್ರೀಲಂಕಾ ಟೆಸ್ಟ್ ಪ್ರವಾಸಗಳಲ್ಲಿ ಆಡಿದ ಅನುಭವ ಹೊಂದಿರುವ ತಂಡದ ಏಕೈಕ ಬ್ಯಾಟರ್ ಆಗಿದ್ದಾರೆ.


ತೇವಾಂಶವಿರುವ ಪಿಚ್ ಯಾಕೆ?

ಮುಂಬೈನ ಮಳೆಗಾಲದಲ್ಲಿ ತೇವಾಂಶವಿರುವ ಪಿಚ್‌ಗಳಲ್ಲಿ ಅಭ್ಯಾಸ ಮಾಡುವುದರ ಹಿಂದೆ ಸ್ಪಷ್ಟ ಉದ್ದೇಶವಿದೆ. ಇಂತಹ ಪಿಚ್‌ಗಳಲ್ಲಿ ಚೆಂಡು ಗ್ರಿಪ್ ಆಗಿ ಸ್ಕಿಡ್ ಆಗಬಹುದು ಅಥವಾ ನಿಂತು ಬರಬಹುದು. ಗಾಲೆ ಮತ್ತು ಕೊಲಂಬೋದ ಹಳೆಯ ಪಿಚ್‌ಗಳಲ್ಲಿ ಬ್ಯಾಟರ್‌ಗಳು ಎದುರಿಸುವ ಸವಾಲುಗಳನ್ನೇ ಇದು ಹೋಲುತ್ತದೆ.

ಇಂತಹ ಅನಿರೀಕ್ಷಿತ ಪಿಚ್‌ಗಳಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳು ಮತ್ತು ಥ್ರೋಡೌನ್‌ಗಳನ್ನು ಎದುರಿಸುವ ಮೂಲಕ ರಾಹುಲ್ ತಮ್ಮ ಬ್ಯಾಟಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಸಾಫ್ಟ್ ಹ್ಯಾಂಡ್ಸ್‌ನಿಂದ ಆಡುವುದು, ತೀವ್ರ ಟರ್ನ್ ಹಾಗೂ ಅಸಮಪಾರ್ಶ್ವದ ಬೌನ್ಸ್ ವಿರುದ್ಧ ಕೊನೆಕ್ಷಣದಲ್ಲಿ ಬ್ಯಾಟ್ ಬೀಸುವುದು ಮತ್ತು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಅವರು ರೂಢಿಸಿಕೊಳ್ಳುತ್ತಿದ್ದಾರೆ. ಈ ಅಭ್ಯಾಸವು ನಿಖರವಾದ ಫುಟ್‌ವರ್ಕ್ ಮತ್ತು ತಾಳ್ಮೆಯನ್ನು ಹೆಚ್ಚಿಸಲು ನೆರವಾಗುತ್ತದೆ, ಇದು ಶ್ರೀಲಂಕಾದ ಪಿಚ್‌ಗಳಲ್ಲಿ ನಿರ್ಣಾಯಕವಾಗಲಿದೆ. ಶ್ರೀಲಂಕಾದಲ್ಲಿ ರಾಹುಲ್ ಅವರ ಟೆಸ್ಟ್ ದಾಖಲೆ ಉತ್ತಮವಾಗಿದ್ದು 8 ಇನ್ನಿಂಗ್ಸ್‌ಗಳಲ್ಲಿ 1 ಶತಕ, 2 ಅರ್ಧಶತಕಗಳನ್ನು ಬಾರಿಸಿದ್ದಾರೆ.

WTC ಫೈನಲ್ ದೃಷ್ಟಿಯಿಂದ ಮುಖ್ಯ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ದೃಷ್ಟಿಯಿಂದಲೂ ಈ ಸರಣಿ ಭಾರತ ತಂಡಕ್ಕೆ ಅತ್ಯಂತ ಪ್ರಮುಖವಾಗಿದೆ. 2025-27ರ ಆವೃತ್ತಿಯ ಅಂಕಪಟ್ಟಿಯಲ್ಲಿ ಭಾರತ 48.15 ಶೇಕಡಾವಾರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (87.50), ದಕ್ಷಿಣ ಆಫ್ರಿಕಾ (75.00) ಮತ್ತು ನ್ಯೂಜಿಲೆಂಡ್ (72.22) ಮೊದಲ ಮೂರು ಸ್ಥಾನಗಳಲ್ಲಿವೆ. ಶ್ರೀಲಂಕಾದಲ್ಲಿ ನಡೆಯಲಿರುವ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದಲ್ಲಿ ಮಾತ್ರ ಭಾರತಕ್ಕೆ ಮುಂದಿನ ಹಾದಿ ಸುಗಮವಾಗಲಿದೆ. ಇಲ್ಲವಾದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 2 ಟೆಸ್ಟ್ ಮತ್ತು ಆಸೀಸ್ ವಿರುದ್ಧ ನಡೆಯಲಿರುವ 5 ಟೆಸ್ಟ್ ಪಂದ್ಯಗಳೆಲ್ಲವನ್ನೂ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಭಾರತ ತಂಡ ತಲುಪುವ ಸಾಧ್ಯತೆಯೇ ಹೆಚ್ಚು.

2027ರಲ್ಲಿ ದಿ ಓವಲ್‌ನಲ್ಲಿ ನಡೆಯಲಿರುವ ಫೈನಲ್‌ಗೆ ಮೊದಲ ಎರಡು ತಂಡಗಳು ಮಾತ್ರ ಅರ್ಹತೆ ಪಡೆಯುವುದರಿಂದ ಪ್ರತಿ ಅಂಕವೂ ಮುಖ್ಯವಾಗಿದೆ. ಪ್ರಸ್ತುತ 41.67 ಶೇಕಡಾವಾರು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿರುವ ಶ್ರೀಲಂಕಾ, ತವರು ನೆಲದಲ್ಲಿ ಸದಾ ಅಪಾಯಕಾರಿ ತಂಡವಾಗಿದ್ದು, ಭಾರತಕ್ಕೆ ಶುಭಾರಂಭ ಮಾಡುವುದು ಅತ್ಯಗತ್ಯವಾಗಿದೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka