Dailyhunt
ಶೃಂಗೇರಿ ಬೆನ್ನಲ್ಲೇ ಕುತೂಹಲ ಕೆರಳಿಸಿದ ಜಯನಗರ ಕ್ಷೇತ್ರ! ಮತ ಎಣಿಕೆ ಗೊಂದಲ ಬಗ್ಗೆ ಕೋರ್ಟ್‌ ತೀರ್ಪು ಏನಾಗಲಿದೆ?

ಶೃಂಗೇರಿ ಬೆನ್ನಲ್ಲೇ ಕುತೂಹಲ ಕೆರಳಿಸಿದ ಜಯನಗರ ಕ್ಷೇತ್ರ! ಮತ ಎಣಿಕೆ ಗೊಂದಲ ಬಗ್ಗೆ ಕೋರ್ಟ್‌ ತೀರ್ಪು ಏನಾಗಲಿದೆ?

Vijay Karnataka 1 week ago

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತ ಎಣಿಕೆಯಲ್ಲಿ ಅನ್ಯಾಯ ಆಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದ ಬಿಜೆಪಿಯ ಡಿಎನ್‌ ಜೀವರಾಜ್ ಅವರಿಗೆ ಕೊನೆಗೂ ಜಯ ಸಿಕ್ಕಿದೆ. ಟಿಡಿ ರಾಜೇಗೌಡ ವಿರುದ್ಧ ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಬೆನ್ನಲ್ಲೇ ಜಯ ನಗರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.


ಜಯ ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಈಗಾಗಲೇ ನ್ಯಾಯಾಲಯದಲ್ಲಿದೆ. ಜಯ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ವಿರುದ್ಧ 16 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಸಿ ಕೆ ರಾಮಮೂರ್ತಿ ಅವರು 57,797 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ನ ಸೌಮ್ಯ ರೆಡ್ಡಿ ಪಡೆದ ಮತಗಳು 57,781. ಈ ಮೂಲಕ ಗೆಲುವಿನ ಅಂತರ ಕೇವಲ 16 ಮತಗಳಾಗಿದ್ದವು.ಆದರೆ ಇದನ್ನು ಪ್ರಶ್ನಿಸಿ ಸೌಮ್ಯಾ ರೆಡ್ಡಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಅವರನ್ನು ವಿಜೇತರನ್ನಾಗಿ ಘೋಷಿಸಿದ್ದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸೌಮ್ಯ ರೆಡ್ಡಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
827 ಅಂಚೆ ಮತಗಳನ್ನು ಮರು ಎಣಿಕೆ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು.

ಸೌಮ್ಯ ರೆಡ್ಡಿ ಆಕ್ಷೇಪಗಳೇನು?

ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬುದು ಸೌಮ್ಯ ರೆಡ್ಡಿ ಆಕ್ಷೇಪವಾಗಿತ್ತು. ಮರು ಎಣಿಕೆಯ ಸಂದರ್ಭದಲ್ಲಿ ಅಂಚೆ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಷ್ಟೇ ಅಲ್ಲದೆ ಮತ ಎಣಿಕೆಯ ವೇಳೆ ಅನಧಿಕೃತ ಹಸ್ತಕ್ಷೇಪ ನಡೆದಿದೆ.ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮತ ಎಣಿಕೆ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಕೈ ನಾಯಕರು ಆರೋಪ ಮಾಡಿದ್ದರು.

ಸೌಮ್ಯ ರೆಡ್ಡಿ ಅವರು ಫಲಿತಾಂಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿಯನ್ನು ಸೌಮ್ಯ ರೆಡ್ಡಿ ಸಲ್ಲಿಸಿದ್ದರು. ಅಲ್ಲದೆ ರಾಮಮೂರ್ತಿ ಅವರ ಆಯ್ಕೆಯನ್ನು ರದ್ದುಗೊಳಿಸಬೇಕೆಂದು ಕೋರಿದ್ದರು.

ಈ ಪ್ರಕರಣದಲ್ಲಿ ಡಿವಿಡಿಗಳು ಹಾಗೂ ಪೂರಕ ದಾಖಲೆಗಳನ್ನು ಸಾಕ್ಷ್ಯವಾಗಿ ದಾಖಲಿಸಿಕೊಳ್ಳಲು ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ, ಸಿಕೆ ರಾಮಮೂರ್ತಿ ಅವರು ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಆದೇಶದ ವಿರುದ್ಧ ಸಿ.ಕೆ. ರಾಮಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.


ಮಾರ್ಚ್‌ 2 ರಿಂದ ಈ ಅರ್ಜಿಯನ್ನು ಪ್ರತಿ ದಿನ ವಿಚಾರಣೆ ನಡೆಸಿ, ಒಂದು ತಿಂಗಳಲ್ಲಿ ಅರ್ಜಿ ವಿಲೇವಾರಿ ಮಾಡಲು ಆದೇಶಿಸಿ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶ ಮಹತ್ವ ಪಡೆದುಕೊಂಡಿದೆ.

ಶೃಂಗೇರಿಯಲ್ಲಿ ನಡೆದ ಪ್ರಕರಣ ಮರುಕಳಿಸುತ್ತಾ?

ಸದ್ಯ ಈ ಕುತೂಹಲವಂತೂ ಇದ್ದೇ ಇದೆ. ಶೃಂಗೇರಿಯಲ್ಲಿ ಜೀವರಾಜ್ ಅವರು ಮೂರು ವರ್ಷಗಳ ಕಾಲ ಅಧಿಕಾರವನ್ನು ಅನುಭವಿಸಲು ಆಗಿರಲಿಲ್ಲ. ಆದರೆ ಇದೀಗ ಅವರನ್ನು ಚುನಾವಣಾ ಆಯೋಗ ಶಾಸಕ ಎಂದು ಘೋಷಣೆ ಮಾಡಿದೆ. ಆದರೆ ಶೃಂಗೇರಿಯಲ್ಲಿ ಓಟ್ ಚೋರಿ ಅಲ್ಲ, ಓಟ್ ಡಕಾಯಿತಿ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಆದರೆ ಈ ನಡೆವೆಯೇ ಸ್ಪೀಕರ್ ಕಚೇರಿಯಲ್ಲಿ ಜೀವರಾಜ್ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಇದೀಗ ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಏನಾಗಲಿದೆ? ಎಂಬ ಕುತೂಹಲ ಇದೀಗ ಕೆರಳಿದೆ. ನ್ಯಾಯಾಲಯದ ಆದೇಶ ನಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸದಲ್ಲಿ ಸೌಮ್ಯ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Vijay Karnataka