ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಡುವೆ ಮುನಿಸು ವಿಚಾರ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯ ವೇದಿಕೆಯಲ್ಲಿ ಉಭಯ ನಾಯಕರು ಯಾವುದೇ ಮಾತುಕತೆ ನಡೆಸಿದೆ ಅಂತರ ಕಾಯ್ದುಕೊಂಡಿರುವುದು ರಾಜಕೀಯ ಪಾಳಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಮುನಿಸಿದೆ ಎಂಬ ವದಂತಿಗೆ ಈ ವಿಡಿಯೋ ಇಂಬು ಕೊಟ್ಟಂತಿದೆ.
ಸಿದ್ದರಾಮಯ್ಯ ಜೊತೆಗೆ ಅಂತರದ ವಿಡಿಯೋ ವಿಚಾರವಾಗಿ ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, 'ಈ ವಿಡಿಯೋ ಮಾತ್ರವಲ್ಲ, ಹಳೆ ವಿಡಿಯೋ ನೋಡಿದ್ರು ಹೀಗೆ ಇರ್ತಾವೆ. ಹತ್ತು ವರ್ಷದ ಹಿಂದಿನ ವಿಡಿಯೋ ಹೀಗೆ ಇವೆ. ಈಗಾಗಲೇ ಮಾಧ್ಯಮಗಳು ಈ ವಿಚಾರವಾಗಿ ಸುದ್ದಿ ಮಾಡಿವೆ. ಹಳೆ ವಿಡಿಯೋ ಹಾಗೂ ಈ ವಿಡಿಯೋದಲ್ಲಿ ಯಾವುದೇ ವ್ಯತ್ಯಾಸ ಕಾಣಲು ಸಾಧ್ಯವಿಲ್ಲ ಎಂದರು.
ನಮ್ಮ ನಡುವೆ ಮುಂದೆಯೂ ಹೀಗೆ ಇರುತ್ತದೆ. ಹಿರಿಯರು ಬಂದ್ರೆ ಏಳಬೇಕು ಅಂತ ದೂರ ಕುಳಿತುಕೊಂಡಿದ್ದೆ. ಹತ್ತು ವರ್ಷದಿಂದ ನಾವು ಹೀಗೆ ಇದ್ದೇವೆ. ಇದರಲ್ಲಿ ಬೇರೆ ಏನೂ ಗೊಂದಲ ಇಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಕ್ಯಾಬಿನೆಟ್ ವಿಸ್ತರಣೆ ವಿಳಂಬ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವಿಚಾರವಾಗಿ ನಾವು ಏನು ಮಾಡಲು ಆಗುವುದಿಲ್ಲ. ಸಂಪುಟ ವಿಸ್ತರಣೆ ಮಾಡುವರೆಗೆ ತಡೆಯಲೇಬೇಕು. ಎಲ್ಲ ಕೂಡಿ ಮೀಟಿಂಗ್ ಮಾಡಲೇಬೇಕು. ಒಂದು ತಿಂಗಳು ತಡವಾಗಿದೆ ಎಂದರು.
ಎಸ್ ಐ ಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಧಾನಮಂಡಲ ಅಧಿವೇಶನ ನಡೆಯುತ್ತದೆ. ಕ್ಯಾಬಿನೆಟ್ ವಿಸ್ತರಣೆ ಆದ್ರೆ ಸ್ವಲ್ಪ ಬುಡ ಅಲ್ಲಾಡೆ ಅಲ್ಲಾಡುತ್ತೆ. ಆದರೆ ಆ ಮೇಲೆ ಎಲ್ಲ ಸರಿ ಹೋಗುತ್ತೆ. ಎರಡ್ಮೂರು ದಿನ ಅಲ್ಲಾಡುವುದೆ, ಏನು ಮಾಡಲು ಆಗಲ್ಲ. ಆದರೆ ಸಿಎಂ ಇವರೆ ಇರ್ತಾರೆ, ಹೊಸ ಸಿಎಂ ಬರಲ್ಲ. ಹೊಸಬರಿಗೆ ಸಚಿವ ಸ್ಥಾನ ಕೋಡುವುದು ಸಿಎಂ ಹಾಗೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ಸುಧಾಕರ್ ಕುಟುಂಬಕ್ಕೆ ಟಿಕೆಟ್ ಕೊಡಿ
ಡಿ ಸುಧಾಕರ್ ಅವರ ನಿಧನದಿಂದ ತೆರವಾದ ಹಿರಿಯೂರು ಕ್ಷೇತ್ರಕ್ಕೆ ಉಪ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸ್ಥಳೀಯ ಕಾಂಗ್ರೆಸ್ ನಾಯಕರ ನಿಯೋಗ ಭೇಟಿ ಮಾಡಿದೆ. ಸುಧಾಕರ್ ಪುತ್ರ ಸುಹಾಸ ನೇತೃತ್ವದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗಿತು. ಸತೀಶ್ ಜಾರಕಿಹೊಳಿಯ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗ, ಸುಧಾಕರ್ ಅವರ ಕುಟುಂಬಕ್ಕೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದೆ.
