ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸವೇನು ಆಗಿಲ್ಲ. ಆತಂಕ ಪಡುವ ಅಗತ್ಯ ಇಲ್ಲ.
ಹವಾಮಾನದ ಬದಲಾವಣೆಯಿಂದ ಅಸ್ವಸ್ಥರಾಗಿದ್ದು, ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ಇಟ್ಟಿದ್ದಾರೆ ಎನ್ನಲಾಗಿದೆ. ಮಗ ರಾಹುಲ್ ಗಾಂಧಿ ಹಾಗೂ ಮಗಳು ಪ್ರಿಯಾಂಕಾ ಗಾಂಧಿ ತಾಯಿಯ ಆರೋಗ್ಯ ಕಾಳಜಿ ವಹಿಸಿದ್ದಾರೆ.
ಈ ಹಿಂದೆಯೂ ಜನವರಿ ತಿಂಗಳಲ್ಲಿ ಶೀತ ವಾತಾವರಣದಿಂದಾಗಿ ಉಸಿರಾಟಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಯಿಂದಾಗಿ, 6 ದಿನಗಳ ಕಾಲ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಬಳಕ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದರು.
ಸೋನಿಯಾಗಾಂಧಿ ಅನಾರೋಗ್ಯದ ಹಿನ್ನಲೆ
ಸೋನಿಯಾ ಗಾಂಧಿ ಅವರು ದೀರ್ಘಕಾಲದ ಅಸ್ತಮಾ, ಹಾಗೂ ಎದೆನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. 2011 ರಲ್ಲಿ ಅವರು ಅಮೆರಿಕಾದಲ್ಲಿ ಗಂಭೀರ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಗರ್ಭಕಂಠದ ಕ್ಯಾನ್ಸರ್ ಗೆ ಅವರು ಯಶಸ್ವೀ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದಲೂ ಆಗಾಗ್ಗೆ ಅವರು ವಿದೇಶದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೋವಿಡ್ ಸಮಯದಲ್ಲೂ ಅನೇಕ ಬಾರಿ ಆರೋಗ್ಯ ಕೈಕೊಟ್ಟಿತ್ತು.
ದಶಕಗಳ ಕಾಲ ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಪ್ರತಿಬಿಧಿಸಿದ್ದ ಅವರು , 2024 ರ ಫೆಬ್ರವರಿಯಲ್ಲಿ ರಾಜಸ್ಥಾನದಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆಯಾಗಿದ್ದರು. ಇದು ಸಕ್ರಿಯ ಚುನಾವಣಾ ರಾಜಕೀಯದಿಂದ ಮೇಲ್ಮನೆಯತ್ತ ಬದಲಾದ ಪ್ರಮುಖ ಹಂತವಾಗಿದೆ.

