ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಚನಾವಣೋತ್ತರ ಹಿಂಸಾಚಾರ ತೀವ್ರಗೊಂಡಿದ್ದು, ಹಿರಿಯ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರ ಆಪ್ತ ಕಾರ್ಯದರ್ಶಿ ಚಂದ್ರನಾಥ್ ರತ್ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಕೋಲ್ಕೊತಾ ಹೊರವಲಯದ ಮಧ್ಯಮ್ ಗ್ರಾಮದಲ್ಲಿ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಚಂದ್ರನಾಥ್ ಅವರ ಬೆನ್ನತ್ತಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ.
ತಲೆ, ಎದೆ ಮತ್ತು ಕಾಲಿಗೆ ಗುಂಡು ತಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರನಾಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ನೀಡುವ ಮೊದಲೇ ಅವರು ಕೊನೆಯುಸಿರೆಳೆದರು. ಮೋಟಾರ್ ಸೈಕಲ್‌ನಲ್ಲಿ ಬಂದ ಆಗುಂತಕರು ಕಾರಿನಲ್ಲಿ ಕುಳಿತಿದ್ದ ಚಂದ್ರನಾಥ್ ಅವರ ಮೇಲೆ ಅತ್ಯಂತ ಸಮೀಪದಿಂದಲೇ ಗುಂಡು ಹಾರಿಸಿದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಈ ಘಟನೆಯು ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ತೀವ್ರಗೊಳಿಸುವ ನಿರೀಕ್ಷೆಯಿದೆ. ಸಿಆರ್‌ಪಿಎಫ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಳಿಕೋರರ ಪತ್ತೆಗೆ ಜಾಲ ಬೀಸಲಾಗಿದೆ.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುವೇಂದು ಅಧಿಕಾರಿ ಭವಾನಿಪುರ ಕ್ಷೇತ್ರದಲ್ಲಿ ಸೋಲಿಸಿದ್ದರು. ಅಲ್ಲದೆ 15 ವರ್ಷಗಳ ಬಳಿಕ ಮಮತಾ ಬ್ಯಾನರ್ಜಿ ಆಡಳಿತ ಇದ್ದು, ಪ್ರಥಮ ಬಾರಿಗೆ ಬಿಜೆಪಿ ಚುನಾವಣೆಯಲ್ಲಿ ಬಹುಮತ ಸಾಧಿಸಿತ್ತು. ಹೀಗಾಗಿ ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಸುವೇಂದು ಅಧಿಕಾರಿ ಹೇಳಿದ್ದು, ಕಾನೂನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ.
ಸುವೇಂದು ಅಧಿಕಾರಿ ಹೇಳಿದ್ದೇನು?
ಚಂದ್ರನಾಥ್ ಅವರಿಗಷ್ಟೇ ಅಲ್ಲದೆ, ನಮ್ಮ ಕಾರ್ಯಕರ್ತರೊಬ್ಬರಿಗೆ ಬಸಿರ್ಹತ್ ನಲ್ಲಿ ಗುಂಡು ಹಾರಿಸಲಾಗಿದೆ. ಬಾರಾನಗರದಲ್ಲಿ ಒಬ್ಬರಿಗೆ ಚೂರಿ ಇರಿಯಲಾಗಿದೆ ಎಂದಿದ್ದಾರೆ.
ಇನ್ನು ಟಿಎಂಸಿ ವಿರುದ್ಧವೂ ಕಿಡಿಕಾರಿದ ಅವರು, ಇದು '15 ವರ್ಷಗಳ ಮಹಾ ಜಂಗಲ್ ರಾಜ್ ನ ಫಲಿತಾಂಶ. ಬಿಜೆಪಿ ಇಲ್ಲಿನ ಗೂಂಡಾಗಳ ಶುದ್ಧೀಕರಣ ಕಾರ್ಯ ಪ್ರಾರಂಭಿಸುತ್ತದೆ ಎಂದಿದ್ದಾರೆ.
ಕ್ರಮಕ್ಕೆ ಆಯೋಗ ಸೂಚನೆ
ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗ ಕ್ರಿಮಿನಲ್‌ಗಳ ವಿರುದ್ಧ ಕ್ರಮಕ್ಕೆ ಸೂಚಿಸಿದೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿರುವ ಆಯೋಗ ಹಿಂಸಾಚಾರ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ನಿರ್ದೇಶನ ನೀಡಿದೆ.ಪಕ್ಷದ ಮೂಲಗಳ ಪ್ರಕಾರ, ಉತ್ತರ 24 ಪರಗಣ ಜಿಲ್ಲೆಯ ಜೆಸ್ಸೋರ್ ರಸ್ತೆಯ ದೊಹರಿಯಾ ಬಳಿ ರಥ್ ಅವರು ಕೋಲ್ಕತ್ತಾದಿಂದ ತಮ್ಮ ಫ್ಲಾಟ್ ಗೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ, ದಾಳಿಯಾಗಿದೆ. ದಾಳಿಕೋರರು ಮೊದಲು ಕಾರಿನ ಮುಂಭಾಗದ ವಿಂಡ್ ಶೀಲ್ಡ್ ಗೆ ಗುಂಡು ಹಾರಿಸಿದರು. ನಂತರ ಮುಂದಿನ ಸೀಟಲ್ಲಿ ಕುಳಿತಿದ್ದ ರಥ್ ಅವರ ಮೇಲೆ ಪದೇ ಪದೇ ಗುಂಡು ಹಾರಿಸಿ ಕೊಲ್ಲಲಾಗಿದೆ. ಹಲವಾರು ಗುಂಡುಗಳು ಎದೆಗೆ ತಗುಲಿದ ಕಾರಣ ಅತಿಯಾದ ರಕ್ತಸ್ರಾವ ಆಗಿತ್ತು ಎಂದು ಬಿಜೆಪಿ ನಾಯಕರು ಪಿಟಿಐಗೆ ತಿಳಿಸಿದ್ದಾರೆ.
ದಾಳಿ ವೇಳೆ ಕಾರಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಗಾಯಗಳಾಗಿದ್ದು, ನಂತರ ಅವರನ್ನು ಬೇರೆ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ಯಲಾಗಿದೆ.
ಬಿಜೆಪಿ ಶಾಸಕಿ ತರುಣ್ ಜ್ಯೋತಿ ಮಾತನಾಡಿ, ನಾವು ಶಾಂತಿಯನ್ನು ಬೋಧಿಸುತ್ತಿದ್ದೇವೆ ಆದರೆ ಟಿಎಂಸಿ ತನ್ನ ದೊಡ್ಡ ಪ್ರಮಾದವನ್ನೇ ಮಾಡಿದೆ ಎಂದಿದ್ದಾರೆ.
ಇನ್ನು ಇದೇ ವೇಳೆ ಚಂದ್ರನಾಥ್ ಹತ್ಯೆಯನ್ನು ಟಿಎಂಸಿ ಖಂಡಿಸಿದೆ. ಕಳೆದ 3 ದಿನಗಳಲಿ ಚುನಾವಣೋತ್ತರವಾಗಿ ಟಿಎಂಸಿಯ ಮೂವರು ಕಸರ್ಯಕರ್ತರ ಸಾವನ್ನೂ ವಿರೋಧಿಸುತ್ತೇವೆ ಎಂದಿದ್ದಾರೆ. ಪ್ರಜಾಪ್ರಭುತ್ವ ದಲ್ಲಿ ಹಿಂಸಾಚಾರ ಮತ್ತು ರಾಜಕೀಯ ಹತ್ಯೆಗಳಿಗೆ ಸ್ಥಾನವಿಲ್ಲ. ಆದಷ್ಟು ಬೇಗ ಹೊಣೆಗಾರರನ್ನು ಶಿಕ್ಷಿಸಬೇಕು ಎಂದು ಹೇಳಿದೆ.

