Dailyhunt
ತಡಿಯಂಡಮೋಲ್ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡು 72 ಗಂಟೆಗಳ ಕಾಲ ಕಳೆದ ಶರಣ್ಯ ರೋಚಕ ಸಾಹಸಗಾಥೆ!

ತಡಿಯಂಡಮೋಲ್ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡು 72 ಗಂಟೆಗಳ ಕಾಲ ಕಳೆದ ಶರಣ್ಯ ರೋಚಕ ಸಾಹಸಗಾಥೆ!

Vijay Karnataka 1 week ago

ಕೊಗು: ಮಡಿಕೇರಿಯ ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ಸುಮಾರು 72 ಗಂಟೆಗಳ ಕಾಲ ಕೇವಲ ಒಂದು ಬಾಟಲಿ ನೀರಿನ ಸಹಾಯದಿಂದ ಬದುಕುಳಿದ ಕೇರಳದ ಟೆಕ್ಕಿ ಶರಣ್ಯ ಅವರ ಸಾಹಸಗಾಥೆ ನಿಜಕ್ಕೂ ರೋಚಕವಾಗಿದೆ.

ಶರಣ್ಯ ಬಳಿ ಇದ್ದದ್ದು ಕೇವಲ 500 ಮಿಲಿ ಲೀಟರ್ ನೀರು ಮಾತ್ರ!

ಕೋಝಿಕ್ಕೋಡ್ ಮೂಲದ 36 ವರ್ಷದ ಶರಣ್ಯ ಅವರು ಏಪ್ರಿಲ್ 2 ರಂದು ಕೊಡಗಿನ ಅತಿ ಎತ್ತರದ ಶಿಖರವಾದ ತಡಿಯಂಡಮೋಲ್ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದರು.
15 ಜನರ ತಂಡದೊಂದಿಗೆ ಬೆಟ್ಟ ಏರಿದ್ದ ಶರಣ್ಯ, ವಾಪಸ್ ಇಳಿಯುವಾಗ ದಾರಿ ತಪ್ಪಿ ತಂಡದಿಂದ ಬೇರ್ಪಟ್ಟಿದ್ದರು. ಬೇರೆ ಮಾರ್ಗದಲ್ಲಿ ತೆರಳಿದ್ದರು. ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಮತ್ತು ಫೋನ್ ಚಾರ್ಜ್ ಖಾಲಿಯಾಗಿದ್ದರಿಂದ ಅವರು ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿದ್ದರು. ಅವರ ಬಳಿ ಇದ್ದದ್ದು ಕೇವಲ 500 ಮಿಲಿ ಲೀಟರ್ ನೀರು ಮಾತ್ರ.

ದಟ್ಟ ಅರಣ್ಯದಲ್ಲಿ ಕಾಡು ಪ್ರಾಣಿಗಳ ಭೀತಿ ಮತ್ತು ಸುರಿಯುವ ಮಳೆಯ ನಡುವೆಯೂ ಎದೆಗುಂದದ ಶರಣ್ಯ, ಮೊದಲ ರಾತ್ರಿಯನ್ನು ಹಳ್ಳದ ಪಕ್ಕದಲ್ಲಿ ಕಳೆದರು. ಎರಡನೇ ದಿನ ಡ್ರೋನ್ ಮೂಲಕ ತಮ್ಮನ್ನು ಹುಡುಕಬಹುದು, ಸುಲಭವಾಗಿ ಕನಲಿ ಎಂಬ ಆಶಯದೊಂದಿಗೆ ಬಯಲು ಪ್ರದೇಶದಲ್ಲಿ ಸಮಯ ಕಳೆದರು. ಮೂರನೇ ದಿನ ಮಳೆ ಜೋರಾಗಿದ್ದರಿಂದ ಬಟ್ಟೆ ಒಣಗಿಸಿಕೊಳ್ಳಲು ಮತ್ತು ಚಳಿಯಿಂದ ರಕ್ಷಿಸಿಕೊಳ್ಳಲು ಒಂದು ಬಂಡೆಯ ಆಶ್ರಯ ಪಡೆದಿದ್ದರು.

ಧೈರ್ಯ ಕಳೆದುಕೊಳ್ಳದ ಶರಣ್ಯ

ಸಾಮಾನ್ಯವಾಗಿ ಇಷ್ಟೊತ್ತಿಗಾಗಲೇ ಭಯ ಶುರುವಾಗಿ ಬಿಡುತ್ತದೆ. ಎಂಥವರಿಗಾದ್ರು ಎದೆ ನಡುಗುತ್ತದೆ. ಮೂರು ದಿನಗಳ ಕಾಲ ಹಸಿವು ಮತ್ತು ನಿದ್ರೆಯಿಲ್ಲದೆ ಕಳೆದಿದ್ದರೂ, ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಅರಣ್ಯ ಇಲಾಖೆ, ಪೊಲೀಸ್, ನಕ್ಸಲ್ ವಿರೋಧಿ ಪಡೆ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯದವರನ್ನೊಳಗೊಂಡ ಒಟ್ಟು 9 ತಂಡಗಳು ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ್ದವು. ಅಂತಿಮವಾಗಿ ಭಾನುವಾರ ಮಧ್ಯಾಹ್ನ ಸ್ಥಳೀಯ ನಿವಾಸಿಗಳು ಶರಣ್ಯ ಅವರ ಕೂಗನ್ನು ಕೇಳಿಸಿಕೊಂಡು ಅವರನ್ನು ಪತ್ತೆಹಚ್ಚಿದರು.

ಅರಣ್ಯದ ಅತ್ಯಂತ ದುರ್ಗಮ ಪ್ರದೇಶದಲ್ಲಿ ಪತ್ತೆಯಾದ ಶರಣ್ಯ ಅವರು ಯಾವುದೇ ದೊಡ್ಡ ಗಾಯಗಳಿಲ್ಲದೆ ಸುರಕ್ಷಿತವಾಗಿ ಮರಳಿದ್ದಾರೆ. ಪ್ರಾಣಾಪಾಯದ ಸ್ಥಿತಿಯಲ್ಲೂ ಅವರು ತೋರಿದ ಮಾನಸಿಕ ಸ್ಥೈರ್ಯ ಮತ್ತು ತಾಳ್ಮೆಯೇ ಅವರ ಜೀವ ಉಳಿಸಿದೆ ಎಂದು ರಕ್ಷಣಾ ತಂಡದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನಿಖೆಯ ನಂತರ ಶರಣ್ಯ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರ ಕುಟುಂಬಕ್ಕೆ ಒಪ್ಪಿಸಲಾಯಿತು.

ಶರಣ್ಯ ಪತ್ತೆ ಮಾಡಿದ ತಂಡಕ್ಕೆ ಡಿಸಿಎಂ ಅಭಿನಂದನೆ

ಕೊಡಗಿನ ತಡಿಯಂಡಮೊಳ್‌ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಶರಣ್ಯ ಅವರನ್ನು ಪತ್ತೆ ಮಾಡಿದ ಅಧಿಕಾರಿಗಳು ಹಾಗೂ ಬುಡಕಟ್ಟು ಜನರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಅಭಿನಂದಿಸಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಶರಣ್ಯ ಅವರ ತಾಯಿ ಒರ್ಕಟ್ಟೇರಿಯ ಪ್ರಚಾರ ಸಭೆಯಲ್ಲಿ ಭೇಟಿ ಮಾಡಿ, ತಮ್ಮ ಪುತ್ರಿಯನ್ನು ಪತ್ತೆ ಮಾಡಲು ನೆರವಾಗುವಂತೆ ಕೋರಿದ್ದರು. ಡಿಸಿಎಂ ವೇದಿಕೆಯಿಂದಲೇ ರಾಜ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸೂಚನೆ ನೀಡಿದ್ದರು.'

'ಶರಣ್ಯ ಅವರನ್ನು ಭಾನುವಾರ ಸಂಜೆಯೇ ಪತ್ತೆ ಮಾಡಿ, ರಕ್ಷಣೆ ಮಾಡಲಾಗಿದೆ. ದೇವರ ನಾಡಿನ ಅಯ್ಯಪ್ಪಸ್ವಾಮಿ ಹಾಗೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಮ್ಮ ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಬುಡಕಟ್ಟು ಜನರನ್ನು ಒಳಗೊಂಡ 170 ಜನರ ತಂಡವು ಪತ್ತೆ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. ಶರಣ್ಯ ಅವರು ಪರಿಸ್ಥಿತಿಯನ್ನು ಧೈರ್ಯವಾಗಿ ನಿಭಾಯಿಸಿದ್ದಾರೆ. ಪತ್ತೆ ಮಾಡಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು,'' ಎಂದು ಡಿಸಿಎಂ ಹೇಳಿದ್ದಾರೆ
Dailyhunt
Disclaimer: This content has not been generated, created or edited by Dailyhunt. Publisher: Vijay Karnataka