Dailyhunt
ತಂದೆ ಮಾಡಿರುವ ಆರೋಪಗಳನ್ನು ಬೆಂಬಲಿಸೊಲ್ಲ, ಕಪಿಲ್-ಧೋನಿಯ ಕ್ಷಮೆ ಯಾಚಿಸುವೆ ಎಂದ ಯುವರಾಜ್ ಸಿಂಗ್: ಏನಿದು ವಿವಾದ?

ತಂದೆ ಮಾಡಿರುವ ಆರೋಪಗಳನ್ನು ಬೆಂಬಲಿಸೊಲ್ಲ, ಕಪಿಲ್-ಧೋನಿಯ ಕ್ಷಮೆ ಯಾಚಿಸುವೆ ಎಂದ ಯುವರಾಜ್ ಸಿಂಗ್: ಏನಿದು ವಿವಾದ?

Vijay Karnataka 1 week ago

ನ್ನ ಕ್ರಿಕೆಟ್ ವೃತ್ತಿಜೀವನವನ್ನು ಕಪಿಲ್ ದೇವ್ ಮತ್ತು ತನ್ನ ಮಗನ ವೃತ್ತಿ ಜೀವನವನ್ನು ಮಹೇಂದ್ರ ಸಿಂಗ್ ಧೋನಿ ಹಾಳುಗೆಡವಿದ್ದರು ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದರು. ತಂದೆಯ ಈ ಹೇಳಿಕೆಗೆ ಯುವರಾಜ್ ಸಿಂಗ್ ಅವರು ಕಪಿಲ್ ಮತ್ತು ಧೋನಿ ಅವರ ಕ್ಷಮೆ ಯಾಚಿಸಿದ್ದಾರೆ.

ಸ್ಪೋರ್ಟ್ಸ್ ತಕ್ ನ ಪಾಡ್ ಕಾಸ್ಟ್ ನ ಟೀಸರ್ ನಲ್ಲಿ ಯುವರಾಜ್ ಸಿಂಗ್ ಈ ಅವರು ಈ ಬಗ್ಗೆ ಮಾತನಾಡಿದ್ದು, "ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಅವರ ಕ್ಷಮೆಯಾಚಿಸಲು ನಾನು ಬಯಸುತ್ತೇನೆ. ಈ ರೀತಿ ಮಾತನಾಡುವುದು ಸರಿಯಿಲ್ಲ.'' ಎಂದು ನಾನು ಅಪ್ಪನಿಗೆ ಹೇಳಿರುವುದಾಗಿ ಹೇಳಿಕೆ ನೀಡಿದ್ದಾರೆ.

ಏನು ಹೇಳಿದ್ದರು ಯೋಗರಾಜ್?

ಮೊದಲಿನಿಂದಲೂ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಅವರ ವಿರುದ್ಧ ಯೋಗರಾಜ್ ಸಿಂಗ್ ಅವರು ಕಿಡಿಕಾರುತ್ತಲೇ ಇದ್ದಾರೆ. ಯುವರಾಜ್ ಸಿಂಗ್ ಅವರು ಭಾರತ ತಂಡದಿಂದ ಹೊರಬೀಳಲು ಧೋನಿಯೇ ಕಾರಣ. ಧೋನಿಯಿಂದಾಗಿಯೇ ಯುವಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಹಾಳಾಯಿತು ಎಂದು ಬಹಳಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಈ ಎಲ್ಲಾ ಹೇಳಿಕೆಗಳನ್ನು ಯುವರಾಜ್ ಸಿಂಗ್ ಅವರು ಅಲ್ಲಗೆಳೆಯುತ್ತಾ ಬಂದಿದ್ದರು.

ಇನ್ನು ಭಾರತ ಕ್ರಿಕೆಟ್ ನ ದಂತಕೆತೆ ಕಪಿಲ್ ದೇವ್ ಅವರ ಬಗ್ಗೆಯೂ ಯೋಗರಾಜ್ ಸಿಂಗ್ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು. 1980 ರ ದಶಕದ ಆರಂಭದಲ್ಲಿ ಭಾರತ ತಂಡ ಮಾಜಿ ನಾಯಕ ಕಪಿಲ್ ದೇವ್ ಅವರು ತಮ್ಮ ವೃತ್ತಿಜೀವನವನ್ನು ಹಾಳು ಮಾಡಿದ್ದರು. ಅವರು ನನಗೆ ಬೆದರಿಕೆ ಹಾಕಿದ್ದರಿಂದ ಅವರನ್ನು ಎದುರಿಸಲು ಒಮ್ಮೆ ಪಿಸ್ತೂಲ್‌ನೊಂದಿಗೆ ಅವರ ಮನೆಗೆ ಹೋಗಿದ್ದೆ ಎಂದು ಯೋಗರಾಜ್ ಹೇಳಿದ್ದರು. ಈ ಬಗ್ಗೆ ಕಪಿಲ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ `ಯಾರು ಯೋಗರಾಜ್?' ಎಂದು ಮರು ಪ್ರಶ್ನೆ ಹಾಕಿದ್ದರು. ಆ ಪ್ರಶ್ನೆಯನ್ನು ಅವರು ನಿರ್ಲಕ್ಷಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

ಇದೀಗ ತಂದೆಯ ಈ ಆರೋಪಿಗಳ ಬಗ್ಗೆ ಯುವರಾಜ್ ಸಿಂಗ್ ಅವರು ಮಾತನಾಡಿದ್ದು, ಯುವರಾಜ್ ಸಿಂಗ್ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಅವರ ಕ್ಷಮೆಯಾಚಿಸಿದ್ದಾರೆ.ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿರುವ ಈ ಸಂಚಿಕೆಯು ಯುವರಾಜ್ ಅವರ ಮೊದಲ ವಿವರವಾದ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದೆ. ಎರಡು ನಿಮಿಷಗಳ ಟೀಸರ್‌ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ರಿಷಭ್ ಪಂತ್ ಮತ್ತು ಹದಿಹರೆಯದ ಪ್ರತಿಭೆ ವೈಭವ್ ಸೂರ್ಯವಂಶಿ ಸೇರಿದಂತೆ ಹಲವಾರು ಕ್ರಿಕೆಟ್ ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ.

ವೈಟ್ ಬಾಲ್ ಸ್ಪೆಷಲಿಸ್ಟ್ ಯುವಿ

ಭಾರತ ತಂಡ 2008ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಯುವರಾಜ್ ಸಿಂಗ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಭಾರತದ ವೈಟ್ ಬಾಲ್ ಕ್ರಿಕೆಟ್ ಸ್ಪೆಷಲಿಸ್ಟ್ ಆಗಿದ್ದ ಅವರು 304 ಏಕದಿನ ಪಂದ್ಯಗಳಿಂದ 36.55 ಸರಾಸರಿಯಲ್ಲಿ 8701 ರನ್ ಕಲೆ ಹಾಕಿದ್ದರು. ಅದರಲ್ಲಿ 14 ಶತಕ ಮತ್ತು 52 ಅರ್ಧಶತಕಗಳಿದ್ದವು. 111 ವಿಕೆಟ್ ಪಡೆದಿದ್ದರು. ಇನ್ನು 58 ಟಿ20 ಪಂದ್ಯಗಳಿಂದ 28.02 ಸರಾಸರಿಯಲ್ಲಿ 1177 ರನ್ ಪೇರಿಸಿದ್ದರು. 28 ವಿಕೆಟ್ ಗಳನ್ನೂ ಪಡೆದಿದ್ದರು. ಇದರೊಂದಿಗೆ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು 1900 ರನ್ ಮತ್ತು 9 ವಿಕೆಟ್ ಗಳಿಸಿದ್ದರು. 2019ರಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದೀಗ ಮೆಂಟರ್ ಆಗಿ ಯುವ ಕ್ರಿಕೆಟಿಗರನ್ನು ತರಬೇತುಗೊಳಿಸುವ ಕಾರ್ಯದಲ್ಲಿ ಮುಗ್ನರಾಗಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka