Dailyhunt Logo
  • Light mode
    Follow system
    Dark mode
    • Play Story
    • App Story
ಟೆಂಡರ್ ಮೂಲಕ ಶೂ ಮತ್ತು ಸಾಕ್ಸ್ ವಿತರಣೆಗೆ ಮುಂದಾದ ಸರ್ಕಾರ: ರಾಜ್ಯದ ಬೊಕ್ಕಸಕ್ಕೆ 30 ಕೋಟಿ ಉಳಿತಾಯದ ನಿರೀಕ್ಷೆ!

ಟೆಂಡರ್ ಮೂಲಕ ಶೂ ಮತ್ತು ಸಾಕ್ಸ್ ವಿತರಣೆಗೆ ಮುಂದಾದ ಸರ್ಕಾರ: ರಾಜ್ಯದ ಬೊಕ್ಕಸಕ್ಕೆ 30 ಕೋಟಿ ಉಳಿತಾಯದ ನಿರೀಕ್ಷೆ!

Vijay Karnataka 1 week ago

ಬೆಂಗಳೂರು: 2026-27ನೇ ಸಾಲಿನಲ್ಲಿ ರಾಜ್ಯದ ಶಾಲೆಗಳಿಗೆ ಟೆಂಡ‌ರ್ ಮೂಲಕ ಶೂ, ಸಾಕ್ಸ್ ವಿತರಿಸಲು ಸರ್ಕಾರ ಮುಂದಾಗಿರುವುದರಿಂದ ಬೊಕ್ಕಸಕ್ಕೆ 30 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆಯಿದೆ.2017-18ನೇ ಸಾಲಿನಿಂದ ಟೆಂಡರ್ ಪ್ರಕ್ರಿಯೆ ಕಳ ಬದಲು ಆಯಾ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಆಧರಿಸಿ ಎಸ್‌ಡಿಎಂಸಿಗೆ ಅನುದಾನ ನೀಡಲಾಗುತ್ತಿತ್ತು.

ಆದರೆ, ಈ ಬಾರಿ ಟೆಂಡ‌ರ್ ಪ್ರಕ್ರಿಯೆ ಮೂಲಕ ಶೂ, ಸಾಕ್ಸ್ ಖರೀದಿಗೆ ಇಲಾಖೆ ಮುಂದಾಗಿದೆ.

ವಿದ್ಯಾ ವಿಕಾಸ ಯೋಜನೆಯಡಿ ರಾಜ್ಯದ 36.56 ಲಕ್ಷ ವಿದ್ಯಾರ್ಥಿಗಳಿಗೆ ಸುಮಾರು 104 ಕೋಟಿರೂ. ವೆಚ್ಚದಲ್ಲಿ ಶೂ, ಸಾಕ್ಸ್ ಹಾಗೂ ಅಗತ್ಯವಿರುವ ಜಿಲ್ಲೆಗಳಿಗೆ ವಿತರಿಸಲು ಸರ್ಕಾರ ಸಜ್ಜಾಗಿತ್ತು. ಇದಕ್ಕಾಗಿ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 265 ರೂ., 6 ರಿಂದ 8ನೇ ತರಗತಿ ಮಕ್ಕಳಿಗೆ ತಲಾ 295 ರೂ., 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂ. ನಿಗದಿಪಡಿಸಲಾಗಿತ್ತು. ಆದರೆ, ಕೇಂದ್ರೀಕೃತ ಖರೀದಿ ಮೂಲಕ ಒಬ್ಬರೇ ಪೂರೈಕೆದಾರರಿಂದ ಶೂ, ಸಾಕ್ಸ್ ಖರೀದಿಸಲಾಗುತ್ತಿದ್ದು, ಪ್ರತಿಯೊಂದಕ್ಕೆ 195 ರೂ. ನಿಗದಿಪಡಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಮೀಸಲಿಟ್ಟಿದ್ದ ಅನುದಾನದಲ್ಲಿ ಸುಮಾರು 30 ಕೋಟಿ ರೂ. ಉಳಿತಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಈ ಯೋಜನೆ ಆರಂಭಿಸಿದ ಆರಂಭಿಕ ವರ್ಷಗಳಲ್ಲಿ ಟೆಂಡರ್ ಮೂಲಕವೇ ಶೂ, ಸಾಕ್ಸ್ ಖರೀದಿಸಲಾಗುತ್ತಿತ್ತು. ಆದರೆ, ಟೆಂಡರ್ ವಿಳಂಬ, ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಟೆಂಡರ್ ಕೈಬಿಡಲಾಗಿತ್ತು. ಪ್ರತಿ ಶಾಲೆಗೂ ಏಕರೂಪದ ಶೂ, ಸಾಕ್ಸ್ ಪೂರೈಕೆಯಾಗುವುದಿಲ್ಲ ಹಾಗೂ ಎಸ್‌ಡಿಎಂಸಿ ಬೇಡಿಕೆಗೆ ತಕ್ಕಂತೆ ಸ್ಥಳೀಯ ಕಂಪನಿಗಳು ಪೂರೈಸಲು ಕಷ್ಟವಾದರೆ ವಿತರಣೆ ವಿಳಂಬವಾಗಲಿದೆ ಎಂಬ ಕಾರಣದಿಂದ ಸರ್ಕಾರ 8 ವರ್ಷಗಳ ಬಳಿಕ ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಗೆ ಮುಂದಾಗಿದೆ.

ಜು.31ರೊಳಗೆ ಪೂರೈಕೆಗೆ ಕ್ರಮ

2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದಿದೆ. ಈಗ ಶಾಲೆಗಳಿಗೆ ಶೂ, ಸಾಕ್ಸ್ ಪೂರೈಕೆಯಾಗದ ಹಿನ್ನೆಲೆಯಲ್ಲಿ ವಿತರಣೆಗೆ ವೇಗ ನೀಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಜಿಲ್ಲಾ, ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಅನುಷ್ಠಾನ ಸಮಿತಿ ರಚನೆಗೆ ಸೂಚಿಸಲಾಗಿದ್ದು, ಈ ಸಮಿತಿಗಳ ಮೂಲಕ ಜು.31ರೊಳಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಶೂ, ಸಾಕ್ಸ್ ಹಾಗೂ ಚಪ್ಪಲಿ ಪೂರೈಸಲು ಇಲಾಖೆ ಸಿದ್ಧತೆ ನಡೆಸಿದೆ.

ಉಪನಿರ್ದೇಶಕರು, ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಸಮಿತಿಯು ಟೆಂಡರ್‌ ಷರತ್ತಿನಲ್ಲಿರುವ ನಿಯಮಗಳನ್ವಯ ಶೂ, ಸಾಕ್ಸ್ ಪರಿಶೀಲಿಸಿ, ಬದಲಾವಣೆಗಳಿದ್ದರೆ ಸರಬರಾಜುದಾರರ ಜತೆ ಸಮನ್ವಯ ಸಾಧಿಸಲಿದೆ. ಜತೆಗೆ, ತಾಲೂಕು, ಶಾಲಾ ಮಟ್ಟದ ಸಮಿತಿಗಳ ಪ್ರಗತಿ ಪರಿಶೀಲಿಸಿ ಪ್ರತಿ ಗುರುವಾರ(ಜು.2ರಂದು) ಶಿಕ್ಷಣ ಇಲಾಖೆಯ ಆಯುಕ್ತಾಲಯಕ್ಕೆ ವರದಿ ಸಲ್ಲಿಸಲಿದೆ.

ತಾಲೂಕು ಮಟ್ಟದ ಸಮಿತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಇರಲಿದ್ದು, ತಾಲೂಕು ವ್ಯಾಪ್ತಿಯಲ್ಲಿ ಹಂಚಿಕೆಯಾಗುವ ಶೂ, ಸಾಕ್ಸ್‌ಗಳ ಅಳತೆಗಳಲ್ಲಿ ವ್ಯತ್ಯಾಸವಿದ್ದರೆ ಸೂಕ್ತ ಸಮಯದಲ್ಲಿ ಬದಲಾವಣೆ ಮಾಡಲು ನೋಡಲ್ ಅಧಿಕಾರಿ ನೇಮಿಸಿ ಶೀಘ್ರ ವಿತರಣೆಗೆ ಕ್ರಮ ವಹಿಸಲಿದೆ. ಶಾಲಾ ಮಟ್ಟದ ಸಮಿತಿಯಲ್ಲಿ ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಹಿರಿಯ ಅಥವಾ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಇರಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಸೂಕ್ತ ಅಳತೆಯ ಶೂ, ಸಾಕ್ಸ್ ಒದಗಿಸುವ ಜತೆಗೆ, ತಾಲೂಕು ಶಿಕ್ಷಣಾಧಿಕಾರಿ ಜತೆ ಸಮನ್ವಯ ಸಾಧಿಸಿ ಸೂಕ್ತ ಸಮಯದಲ್ಲಿ ಮಕ್ಕಳಿಗೆ ತಲುಪಿಸಲು ಕ್ರಮ ಜರುಗಿಸಲಿದೆ.

ಗುಣಮಟ್ಟಕ್ಕೆ ಆದ್ಯತೆ

ಶಾಲೆಗಳಿಗೆ ಪೂರೈಕೆಯಾದ ಶೂ, ಸಾಕ್ಸ್‌ಗಳು ದೀರ್ಘಕಾಲ ಬಾಳಿಕೆ ಜತೆಗೆ, ಎಲ್ಲಾ ಹವಾಮಾನ ಸಹಿಸುವ ಗುಣಮಟ್ಟ ಹೊಂದಿರುವ ಬಗ್ಗೆ ಶೀಘ್ರ ಬದಲಾವಣೆ ಮಾಡಲು ಕೂಡ ಇಲಾಖೆ ಕ್ರಮ ಶಿಕ್ಷಣ ಇಲಾಖೆ ಖಚಿತಪಡಿಸಿಕೊಳ್ಳಲಿದೆ. ಪೂರೈಕೆಯಾದ ಶೂ, ಸಾಕ್ಸ್, ಚಪ್ಪಲಿಗಳಲ್ಲಿ ಲೋಪದೋಷಗಳಿದ್ದರೆ ಶೀಘ್ರ ಬದಲಾವಣೆ ಮಾಡಲು ಕೂಡ ಇಲಾಖೆ ಕ್ರಮ ವಹಿಸಿದೆ. ಸರಬರಾಜುದಾರರಿಂದ ಪೂರೈಕೆಯಾದ ಬಳಿಕ ಸೂಕ್ತ ಸಮಯದೊಳಗೆ ಶಾಲೆಗಳಿಗೆಗಳಿಗೆ ವಿತರಣೆಯಾಗದಿದ್ದರೆ ಆಯಾ ವ್ಯಾಪ್ತಿಯ ಶಿಕ್ಷಣಾಧಿಕಾರಿ, ಜಿಲ್ಲಾ ಉಪನಿರ್ದೇಶಕರು ಹಾಗೂ ಶಾಲೆಗಳ ಮುಖ್ಯ ಶಿಕ್ಷಕರೇ ಹೊಣೆ ಎಂದು ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಈ ಬಾರಿ ಚಪ್ಪಲಿ ಪೂರೈಕೆ

ಶೂ, ಸಾಕ್ಸ್ ಜತೆಗೆ ಈ ಬಾರಿ ಅಗತ್ಯವಿರುವ ಜಿಲ್ಲೆಗಳಿಗೆ ಚಪ್ಪಲಿ ಪೂರೈಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಶೂ ಧರಿಸಲು ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಟೆಂಡರ್‌ಗೂ ಮೊದಲೇ ಚಪ್ಪಲಿ ಅಗತ್ಯವಿರುವ ಶಾಲೆಗಳು, ಮಕ್ಕಳ ಸಂಖ್ಯೆ ಮಾಹಿತಿ ಕಲೆಹಾಕಿದ್ದ ಶಿಕ್ಷಣ ಇಲಾಖೆ, ಬೇಡಿಕೆಯಿರುವ ಕಡೆಗಳಿಗೆ ಶೂ ಬದಲು ಚಪ್ಪಲಿ ಪೂರೈಸಲು ಮುಂದಾಗಿದೆ.

"ಈಗಾಗಲೇ ಶೂ, ಸಾಕ್ಸ್ ವಿತರಣೆಗೆ ವೇಗ ನೀಡಲು ಕ್ರಮ ವಹಿಸಲಾಗಿದೆ. ಜುಲೈ 31ರೊಳಗೆ ರಾಜ್ಯದ ಎಲ್ಲಾ ಶಾಲೆಗಳಿಗೂ ಶೂ, ಸಾಕ್ಸ್ ಹಾಗೂ ಬೇಡಿಕೆ ಬಂದಿರುವ ಶಾಲೆಗಳಿಗೆ ಚಪ್ಪಲಿಗಳು ಪೂರೈಕೆಯಾಗಲಿವೆ."
- ಸುರಳ್ಳರ್ ವಿಕಾಸ್ ಕಿಶೋರ್, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ
Dailyhunt
Disclaimer: This content has not been generated, created or edited by Dailyhunt. Publisher: Vijay Karnataka