ಅಹಮದಾಬಾದ್: ಟೆಸ್ಟ್ ಪಂದ್ಯದಲ್ಲಿ ಒಂದು ದಿನಕ್ಕೆ 90 ಓವರ್ ಗಳೆಂದು ನಿಗದಿಯಾಗಿದ್ದರೂ ಮಂದ ಬೆಳಕಿ(Bad Light) ನಿಂದಾಗಿ ಬಹಳಷ್ಟು ವೇಳೆ ಕಡ್ಡಾಯ 85 ಓವರ್ ಗಳನ್ನೂ ಆಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಪಂದ್ಯ ಸ್ಥಗಿತಗೊಳ್ಳುವ ಸಮಸ್ಯೆಯನ್ನು ನಿಯಂತ್ರಿಸಲು, ಕೆಂಪು ಚೆಂಡಿನ ಬದಲಾಗಿ ಪಿಂಕ್ (ಗುಲಾಬಿ) ಬಣ್ಣ ಚೆಂಡನ್ನು ಬಳಸುವ ಪ್ರಾಯೋಗಿಕ ಯೋಜನೆಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅನುಮೋದನೆ ನೀಡಿದೆ.
ಅಹಮದಾಬಾದ್‌ನಲ್ಲಿ ನಡೆದ ಐಸಿಸಿಯ ವಾರ್ಷಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪಂದ್ಯದ ಓವರ್‌ಗಳನ್ನು ಪೂರ್ಣಗೊಳಿಸಲು ಫ್ಲಡ್‌ಲೈಟ್‌ಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಎರಡೂ ತಂಡಗಳು ಒಪ್ಪಿಗೆ ಸೂಚಿಸಿದರೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ.
ಎರಡು ದಿನಗಳ ಕಾಲ ನಡೆದ ಈ ಸಭೆಯಲ್ಲಿ ಹಲವು ಪ್ರಮುಖ ನಿಯಮಗಳ ಬದಲಾವಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಟೆಸ್ಟ್ ಪಂದ್ಯದ ಪಾನೀಯ ವಿರಾಮ(Drink Break) ವೇಳೆ ಮುಖ್ಯ ತರಬೇತುದಾರರು ಮೈದಾನಕ್ಕೆ ಪ್ರವೇಶಿಸಲು ಅನುಮತಿ, ಅಕ್ರಮ ಬೌಲಿಂಗ್ ಶೈಲಿಯನ್ನು ಪರಿಶೀಲಿಸಲು ಪಂದ್ಯದ ಅಧಿಕಾರಿಗಳಿಗೆ ಹಾಕ್-ಐ (Hawk-Eye) ಡೇಟಾ ಲಭ್ಯವಾಗುವಂತೆ ಮಾಡುವುದು ಮತ್ತು ಲೆಗ್-ಸೈಡ್ ವೈಡ್ ಪ್ರಾಯೋಗಿಕ ನಿಯಮವನ್ನು ಕಾಯಂಗೊಳಿಸುವುದು ಇದರಲ್ಲಿ ಸೇರಿವೆ. ಇದರೊಂದಿಗೆ, ಸದಸ್ಯತ್ವದ ಜವಾಬ್ದಾರಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕ್ರಿಕೆಟ್ ಕೆನಡಾವನ್ನು ಅಮಾನತುಗೊಳಿಸಲಾಗಿದೆ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಚುನಾವಣೆಯ ಮೇಲ್ವಿಚಾರಣೆಗೆ ಹಿರಿಯ ಐಸಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಹೊಸ ನಿಯಮ ಹೇಗೆ ಕೆಲಸ ಮಾಡುತ್ತದೆ?
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ದಿನಕ್ಕೆ 90 ಓವರ್‌ಗಳನ್ನು ನಿಗದಿಪಡಿಸಲಾಗಿರುತ್ತದೆ. ಪಂದ್ಯವು ಸಾಂಪ್ರದಾಯಿಕ ಕೆಂಪು ಚೆಂಡಿನಲ್ಲೇ ಆರಂಭವಾಗುತ್ತದೆ. ಒಂದು ವೇಳೆ ಕೆಂಪು ಚೆಂಡಿನಲ್ಲಿ 75 ಓವರ್‌ಗಳು ಮುಗಿದ ನಂತರ ಮಂದಬೆಳಕಿನ ಸಮಸ್ಯೆ ಎದುರಾಗಿ, ಉಳಿದ 15 ಓವರ್‌ಗಳನ್ನು ಆಡಿಸಲು ಸಾಧ್ಯವಾಗದಿದ್ದರೆ, ಆಗ ಫ್ಲಡ್‌ಲೈಟ್‌ಗಳನ್ನು ಆನ್ ಮಾಡಿ ಪಿಂಕ್ ಚೆಂಡಿನ ಮೂಲಕ ಆ ಓವರ್‌ಗಳನ್ನು ಪೂರ್ಣಗೊಳಿಸಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಸಮಯ ವ್ಯರ್ಥವಾಗುವುದನ್ನು ತಡೆಯಲು ಈ ಮಾದರಿಯನ್ನು ರೂಪಿಸಲಾಗಿದೆ.ತಂಡಗಳು ಒಪ್ಪುತ್ತವಾ ಎಂಬುದೇ ಪ್ರಶ್ನೆ
ಆದರೆ, ಎಲ್ಲಾ ತಂಡಗಳು ಈ ನಿಯಮಕ್ಕೆ ಒಗ್ಗಿಕೊಳ್ಳುತ್ತವೆಯೇ ಎಂಬುದು ಸದ್ಯಕ್ಕಿರುವ ಕುತೂಹಲ. ಏಕೆಂದರೆ, ಪಿಂಕ್ ಚೆಂಡು ಹೆಚ್ಚು ಸ್ವಿಂಗ್ ಮತ್ತು ಸೀಮ್ ಮೂವ್‌ಮೆಂಟ್ ಹೊಂದುವುದರಿಂದ ಪಂದ್ಯದ ಗತಿಯೇ ಬದಲಾಗುವ ಸಾಧ್ಯತೆ ಇಲ್ಲದಿಲ್ಲ. ಜೊತೆಗೆ ಸಂಜೆ ವೇಳೆ ಹೊನಲು ಬೆಳಕಿನಲ್ಲಿ ಚೆಂಡು ವಿಭಿನ್ನವಾಗಿ ವರ್ತಿಸುತ್ತದೆ. ಇದೂ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಈ ಹಿಂದೆ ಭಾರತೀಯ ಆಟಗಾರರು ತಮ್ಮ ತಾಯ್ನಾಡಿನಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲು ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. ಈ ಪ್ರಾಯೋಗಿಕ ಯೋಜನೆಯ ಜೊತೆಗೆ, ಮಂದಬೆಳಕಿನಿಂದ ಸಮಯ ವ್ಯರ್ಥವಾಗುವುದನ್ನು ತಡೆಯಲು ಅಗತ್ಯವಿರುವ ಲೈಟಿಂಗ್ ತಂತ್ರಜ್ಞಾನದ ಸಂಶೋಧನೆಗಾಗಿ ಮೇರಿಲಿಬೋನ್ ಕ್ರಿಕೆಟ್ ಕ್ಲಬ್ (MCC) ಜೊತೆಗೆ ಜಂಟಿಯಾಗಿ ಧನಸಹಾಯ ನೀಡಲು ಐಸಿಸಿ ಒಪ್ಪಿಕೊಂಡಿದೆ.ಕೋಚ್ ಗಳಿಗೆ ಮೈದಾನ ಪ್ರವೇಶಕ್ಕೆ ಅವಕಾಶ
ಟಿ20 ಕ್ರಿಕೆಟ್‌ನ ಸ್ಟ್ರಾಟಜಿಕ್ ಟೈಮ್-ಔಟ್ ಮಾದರಿಯಲ್ಲೇ, ಇನ್ನು ಮುಂದೆ ಟೆಸ್ಟ್ ಕ್ರಿಕೆಟ್‌ನ ನಿಗದಿತ ಡ್ರಿಂಕ್ಸ್ ವಿರಾಮದ ವೇಳೆ ಮುಖ್ಯ ಕೋಚ್ ಗಳು ಅಥವಾ ಅವರು ಸೂಚಿಸುವ ಪ್ರತಿನಿಧಿಗಳು ಮೈದಾನಕ್ಕೆ ತೆರಳಿ ಆಟಗಾರರೊಂದಿಗೆ ಚರ್ಚಿಸಲು ಅವಕಾಶ ನೀಡಲಾಗಿದೆ. ಹಾಗೆಯೇ, ಟಿ20 ಪಂದ್ಯಗಳಲ್ಲಿ 15 ನಿಮಿಷಗಳ ವಿರಾಮವನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ವಿರಾಮದ ಬಳಿಕ ಬ್ಯಾಟರ್‌ಗಳು ತಕ್ಷಣವೇ ಆಟಕ್ಕೆ ಸಿದ್ಧರಾಗಿರಬೇಕು ಎಂದು ಸೂಚಿಸಲಾಗಿದೆ.ಬೌಲಿಂಗ್ ಶೈಲಿಯ (ಚಕ್ಕಿಂಗ್) ಮೇಲಿನ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಲು, ಶಂಕಾಸ್ಪದ ಬೌಲಿಂಗ್ ಶೈಲಿಯನ್ನು ವರದಿ ಮಾಡುವ ಮುನ್ನ ಅಧಿಕಾರಿಗಳು ಹಾಕ್-ಐ ಮಾಹಿತಿಯನ್ನು ಪರಿಶೀಲಿಸಲು ಐಸಿಸಿ ಅವಕಾಶ ಮಾಡಿಕೊಟ್ಟಿದೆ. ಈ ಎಲ್ಲಾ ಪರಿಷ್ಕೃತ ನಿಯಮಗಳು 2026ರ ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ.

