Dailyhunt Logo
  • Light mode
    Follow system
    Dark mode
    • Play Story
    • App Story
ತೀವ್ರ ಸ್ವರೂಪ ಪಡೆದ ರೇವಣ್ಣ- ಹಾಸನ ಜಿಲ್ಲಾಧಿಕಾರಿ ವಾಕ್ಸಮರ,  ಕೆರಳಿದ ಸಂಘಟನೆಗಳು

ತೀವ್ರ ಸ್ವರೂಪ ಪಡೆದ ರೇವಣ್ಣ- ಹಾಸನ ಜಿಲ್ಲಾಧಿಕಾರಿ ವಾಕ್ಸಮರ, ಕೆರಳಿದ ಸಂಘಟನೆಗಳು

Vijay Karnataka 3 weeks ago

ಹಾಸನ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೀಸಲಾತಿ ವಿಚಾರವಾಗಿ ಶಾಸಕ ಎಚ್‌.ಡಿ. ರೇವಣ್ಣ ಮತ್ತು ಜಿಲ್ಲಾಧಿಕಾರಿ ಕೆ.ಎಸ್‌.ಲತಾ ಕುಮಾರಿ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಮಹಿಳಾ ಆಯೋಗದ ಅಂಗಳ ತಲುಪಿದೆ.ಗ್ರಾಮ ಪಂಚಾಯಿತಿ ವಾರ್ಡ್‌ಗಳ ಮೀಸಲಾತಿ ನಿಗದಿಯಲ್ಲಿ ಆಡಳಿತ ಪಕ್ಷದ ರಾಜಕೀಯ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಲಾಗಿದೆ.

ತಹಸೀಲ್ದಾರ್‌ ಅವರ ಶಿಫಾರಸುಗಳನ್ನು ಕಡೆಗಣಿಸಿ ಮೀಸಲು ಬದಲಾಯಿಸಲಾಗಿದೆ. ಇಂಥ ಡಿಸಿಯನ್ನು ಎಲ್ಲಿಂದ ಹಿಡಿದುಕೊಂಡು ಬಂದಿದ್ದಾರೋ ಗೊತ್ತಿಲ್ಲ ಎಂದು ಶಾಸಕ ಎಚ್‌.ಡಿ. ರೇವಣ್ಣ ಜಿಲ್ಲಾಧಿಕಾರಿ ವಿರುದ್ಧ ಬಹಿರಂಗವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಜಿಲ್ಲಾಧಿಕಾರಿ ಲತಾ ಕುಮಾರಿ ಕೂಡ ತಮ್ಮ ಎಕ್ಸ್‌ ಖಾತೆಯಲ್ಲಿ''ನಿಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಗಲಿಲ್ಲವೆಂದರೆ ನಿಮ್ಮನ್ನು ದ್ವೇಷಿಸುತ್ತಾರೆ'' ಪೋಸ್ಟ್‌ ಹಂಚಿಕೊಂಡು ಪರೋಕ್ಷವಾಗಿ ಮಾಜಿ ಎಚ್‌.ಡಿ.ರೇವಣ್ಣ ಅವರಿಗೆ ಟಾಂಗ್‌ ನೀಡಿದ್ದರು.

ರೇವಣ್ಣ ಹೇಳಿಕೆಗೆ ಖಂಡನೆ:

ಇದೆಲ್ಲದರ ನಡುವೆ ''ಜಿಲ್ಲಾಧಿಕಾರಿಯನ್ನು ಎಲ್ಲಿಂದ ಹಿಡ್ಕೊಂಡು ಬಂದ್ರೋ'' ಎಂಬ ಶಾಸಕ ರೇವಣ್ಣ ಅವರ ಮಾತು ಜಿಲ್ಲಾದ್ಯಂತ ಪರ-ವಿರುದ್ಧ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಶಾಸಕ ಎಚ್‌.ಡಿ.ರೇವಣ್ಣ ಏಕಾಂಗಿಯಾಗಿ ಬ್ಯಾಟಿಂಗ್‌ ಮಾಡುತ್ತಿದ್ದರೆ, ದಸಂಸ ಸಂಘಟನೆಗಳು ಕೆರಳಿ ನಿಂತಿವೆ. ಅಧಿಕಾರಿ ನಿಂದಿಸಿದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ಸಂದೇಶವನ್ನು ನೀಡಿವೆ. ಸ್ವತಃ ಜಿಲ್ಲಾಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್‌ ಎಂ.ಪಟೇಲ್‌ ಅವರು ಶಾಸಕರ ಹೇಳಿಕೆ ಖಂಡಿಸಿದ್ದಾರೆ.

ರಾಜ್ಯ ಮಟ್ಟದಲ್ಲಿ ಸದ್ದು:

ಸದ್ಯಕ್ಕೀಗ ಡಿಸಿ-ಶಾಸಕರ ನಡುವಿನ ವಿವಾದ ಸರಕಾರದ ಮಟ್ಟಕ್ಕೂ ಮುಟ್ಟಿದೆ. ಈ ವಿಷಯದಲ್ಲಿ ಯಾರದ್ದು ತಪ್ಪು-ಸರಿ ಎಂಬುದಕ್ಕಿಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪಿದ್ದರೆ ಪ್ರಶ್ನಿಸಲು ಅವಕಾಶ ಇರುವಾಗ ಟೀಕೆ ಮಾಡಿ ನಿಂದಿಸುವುದು ಸಮಂಜಸವೇ ಎಂಬುದು ಜನತೆಯ ಪ್ರಶ್ನೆಯಾಗಿದೆ. ಸರಕಾರಿ ಅಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿ ಇರುವ ಜಿಲ್ಲಾಧಿಕಾರಿ ತಪ್ಪು ಮಾಡಿದ್ದಾರೆ ಎನ್ನುವುದಾದರೆ ಮುಖ್ಯಕಾರ್ಯದರ್ಶಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಅವಕಾಶವಿದೆ. ಅದಕ್ಕೂ ಮಿಗಿಲಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟಕ್ಕೂ ಅವಕಾಶವಿದೆ. ಈ ಮಾರ್ಗವನ್ನು ಬಿಟ್ಟು ಶಾಸಕ ಎಚ್‌.ಡಿ.ರೇವಣ್ಣ ವಾಕ್ಸಮರ ನಡೆಸಿದ್ದು ಸರಿಯೇ? ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಜಿಲ್ಲಾಧಿಕಾರಿ ಸಹ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದಿತ್ತು. ಶಾಸಕರ ವಿರುದ್ಧ ಹೇಳಿಕೆ ನೀಡಿದ್ದು ತಪ್ಪು ಎಂದು ವಾದಿಸುವವರು ಇದ್ದಾರೆ. ಆದರೆ ''ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೇನೆ, ಹೊರತು ನಾನಾಗೇ ಪ್ರತಿಕ್ರಿಯಿಸಿಲ್ಲ. ಕಾನೂನು ವ್ಯಾಪ್ತಿಯಲ್ಲೇ ನನ್ನ ಕೆಲಸ. ಲಘುವಾಗಿ ಮಾತನಾಡಿರುವುದರಿಂದ ಘನತೆಗೆ ಚ್ಯುತಿಯಾಗಿದೆ'' ಎಂಬುದು ಜಿಲ್ಲಾಧಿಕಾರಿ ಲತಾಕುಮಾರಿ ಪ್ರತಿಕ್ರಿಯೆಯಾಗಿದೆ.

ಕೆರಳಿದ ಸಂಘಟನೆಗಳು:

ಏತನ್ಮಧ್ಯೆ, ಜಿಲ್ಲಾಧಿಕಾರಿ ಲತಾಕುಮಾರಿ ವಿರುದ್ಧ ಅವಮಾನಕರ ಪದ ಬಳಕೆ ಮಾಡಿ ನಿಂದಿಸಿರುವ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಂಘಟನೆಗಳು, ದಲಿತ ವಿಮೋಚನಾ ಮಾವನ ಹಕ್ಕುಗಳ ವೇದಿಕೆ, ಪ್ರಗತಿಪರ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿವೆ. ಮಹಿಳಾ ಅಧಿಕಾರಿ ಎನ್ನುವುದನ್ನು ಅರಿಯದೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಧರ್‌ ಕಲಿವೀರ್‌ ಖಂಡಿಸಿದ್ದಾರೆ.

ಮಹಿಳಾ ಆಯೋಗಕ್ಕೆ ದೂರು:

ಆ.28ರಂದು ನಗರದಲ್ಲಿ ಸಭೆ ನಡೆಸಿರುವ ದಸಂಸ ಸಂಘಟನೆಗಳು, ಶಾಸಕ ರೇವಣ್ಣ ವಿರುದ್ಧ ಮಹಿಳಾ ಆಯೋಗಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗಕ್ಕೆ ದೂರು ನೀಡುವ ಸಂಬಂಧ ಚರ್ಚೆ ನಡೆಸಿವೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಡಿಸಿ ನಡುವಿನ ವಾಕ್ಸಮರ ಮತ್ಯಾವ ಸ್ವರೂಪ ಪಡೆಯುವುದೋ ಎಂಬ ಕುತೂಹಲ ಕೆರಳಿಸಿದೆ.

ಜಿಲ್ಲಾಧಿಕಾರಿಗಳು ಪ್ರಾಮಾಣಿಕರು. ಅವರ ಬಗ್ಗೆ ಶಾಸಕ ಎಚ್‌.ಡಿ.ರೇವಣ್ಣ ಅವರು ಟೀಕೆ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಸಲ್ಲದು ಎಂದಿದ್ದಾರೆ ಶ್ರೇಯಸ್‌ ಎಂ.ಪಟೇಲ್‌, ಸಂಸದ ಹಾಸನ

ಜಿಲ್ಲಾಧಿಕಾರಿಯಾಗಿ ಜನಪ್ರತಿನಿಧಿಗಳಿಗೆ ಗೌರವ ನೀಡುವುದನ್ನು ಕಲಿಯಲಿ. ನನ್ನನ್ನೇ ಅಗೌರವಿಸುವವರು ಜನಸಾಮಾನ್ಯರಿಗೆ ಯಾವ ರೀತಿ ಬೆಲೆ ಕೊಡುತ್ತಾರೆ. ಸರಕಾರ ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇನೆ ಎಂದಿದ್ದಾರೆ ಎಚ್‌.ಡಿ.ರೇವಣ್ಣ ಶಾಸಕರು.

ಜಾತಿ ಆಧಾರದಲ್ಲಿ ಜಿಲ್ಲಾಧಿಕಾರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ತೇಜೋವಧೆ ಮಾಡಿರುವುದು ಖಂಡನೀಯ ಎಂದಿದ್ದಾರೆ ಮರಿಜೋಸೆಫ್‌, ಮಾನವ ಹಕ್ಕುಗಳ ವೇದಿಕೆ , ಪ್ರಗತಿಪರ ಸಂಘಟನೆ ಮುಖಂಡ. ಹಾಸನ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka