Davanagere and Bagalkot By Poll : ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಾಳೆ (ಏಪ್ರಿಲ್ 9) ನಡೆಯಲಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಇದರ ಫಲಿತಾಂಶ ಮೇ ನಾಲ್ಕರಂದು ನಡೆಯಲಿದೆ. ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಾತಿನ ಒಂದು ಕ್ವಿಕ್ ಝಲಕ್ ಹೀಗಿದೆ:
ಅಸ್ಸಾಂ, ಕೇರಳ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯೂ ನಾಳೆ ನಡೆಯಲಿದೆ. ಬಾಗಲಕೋಟೆಯಲ್ಲಿ ತೀವ್ರ ಪೈಪೋಟಿ ಇರುವ ಸಾಧ್ಯತೆ ಇದೆ ಎನ್ನುವ ವರದಿಯನ್ನು ಆಧರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಿರುಸಿನ ಪ್ರಚಾರವನ್ನು ನಡೆಸಿದ್ದರು. ಡಿಕೆ ಶಿವಕುಮಾರ್, ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ಉಪಚುನಾವಣೆಯ ಪ್ರಚಾರದ ವೇಳೆ, ರಾಜಕೀಯ ನಾಯಕರ ಬಿರುಸಿನ ಮಾತುಗಾರಿಕೆಯ ಒಂದು ಝಲಕ್ ಹೀಗಿದೆ..ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

ಬಿಜೆಪಿಯ ಮಾಜಿ ಕೇಂದ್ರ ಸಚಿವರು, ಸಂಸದರು, ರಾಜ್ಯಾಧ್ಯಕ್ಷರು, ಮುಸ್ಲಿಂ ಸಮುದಾಯವನ್ನು ಎಷ್ಟು ಕೆಟ್ಟದಾಗಿ ಮಾತನಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾವು ಗೌರವ ಕೊಟ್ಟು ಅಲ್ಪಸಂಖ್ಯಾತರಿಗೆ ಬಜೆಟ್'ನಲ್ಲಿ ಹಣ ಒದಗಿಸಿದರೆ, ಬಿಜೆಪಿಯವರು ಅದನ್ನು ಮುಸ್ಲಿಂ ಬಜೆಟ್ ಎಂದರು. ಒಬ್ಬ ಒಬಿಸಿ ಹುಡುಗನಿಗೆ ಚಪ್ಪಲಿ ತೋರಿಸುತ್ತಾರೆ, ಅದು ಬಿಜೆಪಿಯ ಸಂಪ್ರದಾಯ. ಬಿಜೆಪಿಯವರು ಚಪ್ಪಲಿ ತೋರಿಸಿದ್ದು ನನಗಲ್ಲ, ಅಹಿಂದಾಗೆ. ಬಿಜಾಪುರದಲ್ಲಿ ಯತ್ನಾಳ್ ಎನ್ನುವ ಒಂದು ಕೋತಿಯಿದೆ, ಅದೇ ರೀತಿಯಲ್ಲಿ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಎನ್ನುವ ಕೋತಿಯಿದೆ.
ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಳಪಾಡ್

ನಮ್ಮ ಸಮುದಾಯಕ್ಕೆ ಕೆಲವೊಂದು ತಪ್ಪಾಗಿರುವುದು ಹೌದು. ಕಾಂಗ್ರೆಸ್ ಪಾರ್ಟಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಯಾರೀ ಅವರು ಇಮ್ರಾನ್ ಪಾಷಾ, ಯಾರೋ ಹೇಳಿದ್ರು ಅಂತ ಅದನ್ನೇ ಫಾಲೋ ಮಾಡೋಕೆ ಆಗುತ್ತಾ. ದಾಡಿ ಇರುವವರು, ಟೊಪ್ಪಿ ಹಾಕಿದವರೆಲ್ಲಾ ಒಳ್ಳೆಯ ಮುಸ್ಲಿಮರಾಗಲ್ಲ. ದೇವರು ಕೊಟ್ಟಂತಹ ಮಾತನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದನ್ನು ಕಲಿಯಬೇಕು. ಸುಳ್ಳು ಹೇಳಬಾರದು, ಬಡ್ಡಿ ತಗೋಬಾರದು, ನಮಾಜ್ ಮಾಡಬೇಕು, ಒಳ್ಳೆಯ ರೀತಿಯ ಜೀವನವನ್ನು ಮಾಡಬೇಕು ಎಂದು ನಮ್ಮ ಧರ್ಮದಲ್ಲಿದೆ. ಯಾರು ಟೊಪ್ಪಿ ಹಾಕಿಕೊಂಡು ಮಾತನಾಡಿದಾನೋ, ಅವನ ಹಿಸ್ಟರಿ ತೆಗೆದರೆ ನಿಮಗೆಲ್ಲಾ ಗೊತ್ತಾಗಿ ಬಿಡುತ್ತದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಈ ಪರಿಸ್ಥಿತಿಯಲ್ಲಿ ಬಿಜೆಪಿಯವರ ಮುಖವಾಡ ಕಳಚಿದೆ. ನಾವು ಯುವಕರಿಗೆ ಹಾಗೂ ಮಹಿಳೆಯರಿಗೆ ನೀಡುತ್ತಿರುವ ಕಾರ್ಯಕ್ರಮ ನಿಲ್ಲಿಸಲು ಮೊದಲಿನಿಂದಲೂ ದೊಡ್ಡ ಸಂಚು ರೂಪಿಸಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ. ಅಧಿಕಾರ ಬದಲಾವಣೆ ವಿಚಾರದಲ್ಲಿ ನನ್ನ ಹಾಗೂ ಸಿಎಂ ಹೇಳಿಕೆ ಹೊರತಾಗಿ ಬೇರೆಯವರ ಮಾತು ಗೌಣ. ಜೋಶಿ ಅವರು ನಮ್ಮ ರಾಜ್ಯದ ಹಿತಕ್ಕೆ ಸಹಾಯ ಮಾಡಬೇಕು. ಕೊಲ್ಲಿ ರಾಷ್ಟ್ರಗಳಿಂದ ಇಂಧನ ತಂದ ಎರಡು ಹಡಗುಗಳು ಗುಜರಾತಿಗೆ ಹೋಗಿದ್ದು ಯಾಕೆ? ಮಂಗಳೂರು, ಕೇರಳ ಬಂದರಿಗೆ ಯಾಕೆ ಬರಲಿಲ್ಲ?
ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಸಂವಿಧಾನ ವಿರೋಧಿ-ಮಹಿಳಾ ವಿರೋಧಿ-ರೈತ ಕಾರ್ಮಿಕರ ವಿರೋಧಿ-ಹಿಂದುಳಿದವರ-ದಲಿತರ ವಿರೋಧಿಯಾಗಿರುವುದು ಮಾತ್ರವಲ್ಲ, ಕೇಂದ್ರದ ಮೋದಿ ಸರ್ಕಾರ ಕನ್ನಡ ವಿರೋಧಿಯಾಗಿ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಬಿಜೆಪಿ ರಾಜ್ಯದಲ್ಲಿ ಒಂಬತ್ತು ವರ್ಷ ಅಧಿಕಾರ ನಡೆಸಿದ್ದರೂ ಒಮ್ಮೆಯೂ ಜನಾಭಿಪ್ರಾಯ ಪಡೆದು ಅಧಿಕಾರಕ್ಕೆ ಬರಲಿಲ್ಲ. ರಾಜ್ಯದ ಜನತೆ ಬಿಜೆಪಿಗೆ ಯಾವತ್ತೂ ಪೂರ್ಣ ಬಹುಮತ ಕೊಟ್ಟಿಲ್ಲ. ಎಂಟು ಜನ ಶಾಸಕರಿಗೆ ಕೋಟ್ಯಾಂತರ ರೂಪಾಯಿ ಕೊಟ್ಟು ರಾಜೀನಾಮೆ ಕೊಡಿಸಿ ಬಳಿಕ ಚುನಾವಣೆಯಲ್ಲೂ 25-30 ಕೋಟಿ ಖರ್ಚು ಮಾಡಿ ಅಧಿಕಾರ ಪಡೆದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ತಮ್ಮ ವಿಶಿಷ್ಟ ಸಂಸ್ಕೃತಿ, ಪರಂಪರೆ, ಕಲೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿರುವ ದೈವಜ್ಞ ಸಮುದಾಯ ಹಾಗೂ ಚಿನ್ನ ಬೆಳ್ಳಿ ಕಾರ್ಮಿಕರ ಅಭಿವೃದ್ಧಿಗೆ ನಮ್ಮ ಪಕ್ಷ ಸದಾ ಬದ್ಧವಾಗಿದೆ. ಕ್ಷೇತ್ರದ ಎಲ್ಲಾ ಸಮಾಜ, ವರ್ಗಗಳೂ ಕೂಡ ಬಿಜೆಪಿ ಬೆಂಬಲಿಸುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ. ಗ್ಯಾರಂಟಿಗಳೇ, ಕಾಂಗ್ರೆಸ್ಸಿನಲ್ಲಿ ಈ ಬಾರಿ ಸೋಲಿಗೆ ಕಾರಣವಾಗುತ್ತದೆ. ದಾವಣಗೆರೆಯಲ್ಲಿ, ಮುಸ್ಲಿಂ ಸಮುದಾಯದವರ ಬೆನ್ನಿಗೆ ಕಾಂಗ್ರೆಸ್ ನಿಲ್ಲಲಿಲ್ಲ. ನಮ್ಮ ಗೆಲುವು ಎರಡೂ ಕ್ಷೇತ್ರದಲ್ಲಿ ನಿಶ್ಚಿತ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ರಾಜ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳು ಜನರಿಗೆ ಇಷ್ಟವಾಗಿದ್ದರೆ ಮುಖ್ಯಮಂತ್ರಿಗಳು ಬಂದು ಐದು ದಿನ ಬಾಗಲಕೋಟೆಯಲ್ಲಿ ಪ್ರಚಾರ ಮಾಡುವ ಅಗತ್ಯ ಬೀಳುತ್ತಿರಲಿಲ್ಲ. ದೇವೇಗೌಡರ ಒಳ್ಳೆಯತನ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಬೆಳೆದಿದೆ. 2006ರಲ್ಲಿ ದೇವೇಗೌಡರು ಕಟುವಾದ ತೀರ್ಮಾನ ಕೈಗೊಂಡಿದ್ದರೆ, ಕಾಂಗ್ರೆಸ್ ಪಕ್ಷ ಎನ್ನುವುದೇ ಇರುತ್ತಿರಲಿಲ್ಲ. ಮಾತು ಎತ್ತಿದರೆ ನಾನು ಹಿಂದುಳಿದ ನಾಯಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ಎಷ್ಟು ಜನ ಹಿಂದುಳಿದ ನಾಯಕರನ್ನು ಬೆಳೆಸಿದ್ದಾರೆ ಎಂಬುದನ್ನು ಹೇಳಲಿ.
ವಿಪಕ್ಷದ ನಾಯಕ ಆರ್.ಅಶೋಕ್

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ಹಾಗೂ ಮೂರು ವರ್ಷದಲ್ಲಿ ಮೂವತ್ತು ಹಗರಣಗಳು ನಡೆದಿವೆ. ವಾಲ್ಮೀಕಿ ನಿಗಮದ ಹಗರಣ, ಗುತ್ತಿಗೆದಾರರು ಮಾಡಿರುವ 60% ಕಮಿಷನ್ ಆರೋಪ, ಲಿಕ್ಕರ್ ಲಾಬಿ ಮಾಡಿ ಸಚಿವರು ಕೋಟಿಗಟ್ಟಲೆ ಹಣವನ್ನು ದೆಹಲಿಗೆ ಕಳಿಸಿರುವುದು ಸೇರಿದಂತೆ ಹಲವಾರು ಹಗರಣಗಳು ನಡೆದಿವೆ. ಸಿದ್ದರಾಮಯ್ಯ ಬಾದಾಮಿಗೆ ಬಂದು ಬಿರಿಯಾನಿ ತಿಂದು ಚುನಾವಣೆ ಎದುರಿಸಿದರು. ಇವರ ತವರು ಮೈಸೂರಿನ ಅಭಿವೃದ್ಧಿ ಮಾಡದೆ 30 ಸಾವಿರ ಮತಗಳಿಂದ ಸೋತರು. ಆಗ ಬಾದಾಮಿ ಇವರ ಕೈ ಹಿಡಿಯಿತು. ಅಂತಹ ಬಾದಾಮಿಗೆ ಕೈ ಕೊಟ್ಟು ಓಡಿಹೋದರು.

