ವಿಜಯಪುರ : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಎರಡೂ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಕ್ಕಾ, ಅನುಮಾನವೇ ಬೇಡ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್ ಅವರಿಂದ ಪ್ರಚಾರ ಮಾಡಿಸುವ ಅನಿವಾರ್ಯತೆ, ಬಿಜೆಪಿಗೆ ಬರಬಾರದಿತ್ತು ಎಂದು ಸಚಿವರು ಲೇವಡಿ ಮಾಡಿದ್ದಾರೆ.
ನಮ್ಮ ಸರ್ಕಾರದ ಗ್ಯಾರಂಟಿಗಳೇ ಕಾಂಗ್ರೆಸ್ಸಿಗೆ ಮುಳುವಾಗಲಿದೆ ಎನ್ನುವುದು ಬಿಜೆಪಿಯ ಭ್ರಮೆ. ಗ್ಯಾರಂಟಿ ಪಡೆದುಕೊಂಡ ಮಹಿಳೆಯರೇ ನಮಗೆ ವೋಟ್ ಹಾಕಿದರೆ, ಗೆಲುವಿನ ಅಂತರ ಹದಿನೈದು ಸಾವಿರ ಮೇಲೆ ಆಗಲಿದೆ ಎಂದು ಎಂಬಿ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಉಪಚುನಾವಣೆ ನಾವು ಗೆಲ್ಲುತ್ತೇವೆ
ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಜಯೇಂದ್ರ ಅಂದು ಕೊಂಡಿದ್ದಾರೆ, ಅದು ಅವರ ಭ್ರಮೆ. ಹಣ ಹಂಚಿ ಚುನಾವಣೆ ಮಾಡುವ ರೂಢಿ ವಿಜಯೇಂದ್ರಗೆ ಚೆನ್ನಾಗಿ ಗೊತ್ತಿದೆ. ಅವರು ಮಾಡುತ್ತಿರುವ ಕೆಲಸವೇ ಅದು, ಕಲೆಕ್ಷನ್ ಮತ್ತು ಡಿಸ್ಟ್ರಿಬ್ಯೂಷನ್ ಎಂದು ಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದ್ದಾರೆ. ಉಪಚುನಾವಣೆಯ ನಂತರ ವಿಜಯೇಂದ್ರ ಮನೆಗೆ ಹೋಗುವುದು ನಿಶ್ಚಿತ ಎಂದು ಸಚಿವರು ಹೇಳಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆ, ಏಪ್ರಿಲ್ ಒಂಬತ್ತರಂದು ನಡೆಯಲಿದ್ದು, ಮೇ ನಾಲ್ಕಕ್ಕೆ ಫಲಿತಾಂಶ ಹೊರಬೀಳಲಿದೆ.ಯಡಿಯೂರಪ್ಪನವರ ಸಹಿ ಫೋರ್ಜರಿ ಮಾಡುವ ವಿಜಯೇಂದ್ರ
"ಯಡಿಯೂರಪ್ಪನವರ ಸಹಿಯನ್ನು ವಿಜಯೇಂದ್ರ ಫೋರ್ಜರಿ ಮಾಡುತ್ತಾರೆ ಎನ್ನುವ ಆರೋಪ ಅವರ ಮೇಲಿತ್ತಲ್ಲವೇ? ಆರೋಪ ಮಾಡಿದ್ದು ನಾನಲ್ಲ, ಬಸನಗೌಡ ಪಾಟೀಲ್ ಯತ್ನಾಳ್. ಮಾರಿಷಸ್, ಸಿಂಗಾಪುರ, ದುಬೈ ಮತ್ತು ಇತರ ಕಡೆ, ಹತ್ತು ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದರು. ವಿಜಯೇಂದ್ರ ಅವರು ಬಿಜೆಪಿಯ ಪವರ್'ಫುಲ್ ಲೀಡರ್ ಆಗಿದ್ದರೆ, ಅವರ ಪಾರ್ಟಿಗೆ, ಉಚ್ಚಾಟಿತ ಯತ್ನಾಳ್ ಅವರ ಅವಶ್ಯಕತೆ ಯಾಕೆ ಬೇಕಿತ್ತು" ಎಂದು ಎಂಬಿ ಪಾಟೀಲ್ ಪ್ರಶ್ನಿಸಿದ್ದಾರೆ.ವಿಜಯೇಂದ್ರ ಬದಲಾಗುವುದು ನಿಶ್ಚಿತ ಎಂದ ಎಂಬಿ ಪಾಟೀಲ್
ಯತ್ನಾಳ್ ಪ್ರಚಾರಕ್ಕಾದರೂ ಹೋಗಲಿ, ವಿಜಯೇಂದ್ರ ಆದರೂ ಹೋಗಲಿ, ಅಲ್ಲಿ ಗೆಲ್ಲುವುದು ನಾವೇ. ಅಲ್ಲಿಗೆ, ಯತ್ನಾಳ್ ಪ್ರಚಾರಕ್ಕೆ ಹೋದರೂ, ಬಾಗಲಕೋಟೆಯಲ್ಲಿ ಬಿಜೆಪಿ ಸೋತಿತು ಎನ್ನುವ ಮಾತು ಬರುವುದು ಪಕ್ಕಾ. ನಿಶ್ಚಿತವಾಗಿ ಈ ಚುನಾವಣೆ ಮುಗಿದ ನಂತರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕುತ್ತಾರೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಎಂಬಿ ಪಾಟೀಲ್, ವಿಶ್ವಾಸದ ಮಾತನ್ನಾಡಿದ್ದಾರೆ.ಬಿರುಸಿನ ಪ್ರಚಾರ ಮಾಡಿದ್ದ ಸಿಎಂ ಸಿದ್ದರಾಮಯ್ಯ
ಬಾಗಲಕೋಟೆಗೆ ಸೀಮಿತವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಬಿರುಸಿನ ಪ್ರಚಾರವನ್ನು ನಡೆಸಿದ್ದರು. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಯತ್ನಾಳ್ ಅವರಿಗೆ ಆಪ್ತರಾಗಿರುವ ಹಿನ್ನಲೆಯಲ್ಲಿ ಪ್ರಚಾರ ಮತ್ತು ರೋಡ್'ಶೋವನ್ನು ಯತ್ನಾಳ್ ನಡೆಸಿದ್ದರು. ಯತ್ನಾಳ್ ಪ್ರಚಾರಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿತ್ತು. ನೆಕ್-ಟು-ನೆಕ್ ಫೈಟ್ ಇರುವ ಸಾಧ್ಯತೆಯಿದೆ ಎನ್ನುವ ಆಂತರಿಕ ಸಮೀಕ್ಷೆಯ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಬಿರುಸಿನ ಪ್ರಚಾರವನ್ನು ಮಾಡಿದ್ದರು.
