ಚೆನ್ನೈ : ಸರ್ಕಾರ ರಚಿಸಲು ಜೋಸೆಫ್ ವಿಜಯ್ ಹಕ್ಕು ಮಂಡಿಸಿದರೂ, ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಇದಕ್ಕೆ ಒಪ್ಪದೇ, 118 ಶಾಸಕರ ಬೆಂಬಲ ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಜೊತೆಗೆ, ಹಳೆಯ ವಿಧಾನಸಭೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಿದ್ದಾರೆ.
ಈ ನಡುವೆ, ವಿಜಯ್'ಗೆ ಬೆಂಬಲ ಸಾಬೀತು ಪಡಿಸಲು ಹೇಳುವ ಕಾನೂನು ರಾಜ್ಯಪಾಲರಿಗೆ ಇದೆಯೇ ಎನ್ನುವುದು ಚರ್ಚೆಯಲ್ಲಿದೆ.
ತಮಿಳುನಾಡಿನಲ್ಲಿ ಎರಡು ದ್ರಾವಿಡ ಪಾರ್ಟಿಗಳ ಪ್ರಾಬಲ್ಯವನ್ನು ಮುರಿದು, 108 ಸ್ಥಾನವನ್ನು ಗೆದ್ದಿರುವ ಟಿವಿಕೆ ಪಾರ್ಟಿಗೆ, ಇನ್ನೂ ಹನ್ನೊಂದು ಸ್ಥಾನದ ಅವಶ್ಯಕತೆಯಿದೆ. 108 ಸ್ಥಾನ ಗೆದ್ದಿದ್ದರೂ, ವಿಜಯ್ ಎರಡು ಸ್ಥಾನದಲ್ಲಿ ಗೆದ್ದಿರುವ ಹಿನ್ನಲೆಯಲ್ಲಿ, ಪ್ರಾಕ್ಟಿಕಲ್ ಆಗಿ, ವಿಜಯ್'ಗೆ ಇನ್ನೂ ಹನ್ನೊಂದು ಸ್ಥಾನದ ಅವಶ್ಯಕತೆಯಿದೆ. ಹಾಗಾಗಿ, ಇಷ್ಟು ಶಾಸಕರ ಬೆಂಬಲ ಸದ್ಯಕ್ಕೆ ನಿಮಗಿಲ್ಲ, ಹಾಗಾಗಿ, ಸರ್ಕಾರ ರಚಿಸಲು ಆಹ್ವಾನಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಹಾಗಾದರೆ, ಮುಂದೇನು?
ಟಿವಿಕೆ ಶಾಸಕರು ಐಷಾರಾಮಿ ರೆಸಾರ್ಟಿಗೆ ಸ್ಥಳಾಂತರ
ಎಐಎಡಿಎಂಕೆಯ 47 ಶಾಸಕರ ಪೈಕಿ, 30 ಶಾಸಕರು ಟಿವಿಕೆಗೆ ಬೆಂಬಲಿಸಲು ಸಿದ್ದವಿದ್ದರೂ, ಬುಧವಾರ (ಮೇ. 6) ತಡರಾತ್ರಿ, ತಡರಾತ್ರಿ ಪಾರ್ಟಿ ಇದಕ್ಕೆ ಸ್ಪಷ್ಟನೆಯನ್ನು ನೀಡಿದೆ. ನಮ್ಮ ಯಾವ ಶಾಸಕರೂ, ಟಿವಿಕೆಗೆ ಹೋಗುವುದಿಲ್ಲ ಎಂದು ಹೇಳಿದೆ. ಕಾಂಗ್ರೆಸ್ಸಿನ ಐದು ಶಾಸಕರ ಬೆಂಬಲದ ನಂತರವೂ, ವಿಜಯ್'ಗೆ ಇನ್ನೂ, ಆರು ಶಾಸಕರ ಬೆಂಬಲದ ಅವಶ್ಯಕತೆಯಿದೆ. ಹಾಗಾಗಿ, ಪ್ರಮಾಣವಚನ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು, ಟಿವಿಕೆಯ ಎಲ್ಲಾ ಶಾಸಕರನ್ನು ಚೆನ್ನೈ ಹೊರವಲಯದ ಐಷಾರಾಮಿ ಮಾಮಲ್ಲಪುರಂನಲ್ಲಿರುವ ಫೋರ್ ಪಾಯಿಂಟ್ಸ್ ರೆಸಾರ್ಟಿಗೆ ಸ್ಥಳಾಂತರಿಸಲಾಗಿದೆ.ಸದನದಲ್ಲಿ ಬಹುಮತ ಸಾಬೀತು ಮಾಡಲು ರಾಜ್ಯಪಾಲರು ಸೂಚಿಸಬಹುದು
ಏನಿದು ಎಸ್‌ಆರ್ ಬೊಮ್ಮಾಯಿ ಪ್ರಕರಣ, 1994ರ ವಿದ್ಯಮಾನ
1994ರಲ್ಲಿ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕದ ಎಸ್.ಆರ್.ಬೊಮ್ಮಾಯಿ ಪ್ರಕರಣ ಮತ್ತು ಇಂದಿನ ತಮಿಳುನಾಡಿನ ಪ್ರಕರಣಕ್ಕೆ ನಿದರ್ಶನವಾಗಬಹುದು. ಎಸ್.ಆರ್.ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣವು ಸರ್ವೋಚ್ಚ ನ್ಯಾಯಾಲಯಾದ ಮೆಟ್ಟಲೇರಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ನಿರ್ದಿಷ್ಟ ಅವಧಿಯಲ್ಲಿ ( 7 - 15 ದಿನದೊಳಗೆ) ಬಹುಮತವನ್ನು ಸಾಬೀತು ಮಾಡಲು ರಾಜ್ಯಪಾಲರು ಸೂಚಿಸಬೇಕು. ಇದು, ಸದನದಲ್ಲಿ ನಡೆಯುವ ಪ್ರಕ್ರಿಯೆ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಈ ಪ್ರಕರಣದಲ್ಲಿ ಆದೇಶವನ್ನು ನೀಡಿತ್ತು.ಸಂವಿಧಾನ ಏನು ಹೇಳುತ್ತೆ, ರಾಜ್ಯಪಾಲರಿಗೆ ಅಧಿಕಾರದ ಬೌಂಡರಿ ಏನು?
ಸರ್ಕಾರದ ಸಂಖ್ಯಾಬಲದ ಪರೀಕ್ಷೆ ಸದನದಲ್ಲಿ ನಡೆಯಬೇಕೇ ಹೊರತು ರಾಜಭವನದಲ್ಲಿ ಅಲ್ಲ ಎಂದು ಸುಪ್ರೀಂ, ಬೊಮ್ಮಾಯಿ ಪ್ರಕರಣದಲ್ಲಿ ಹೇಳಿತ್ತು. ಒಂದು ವೇಳೆ, ಹಕ್ಕು ಮಂಡನೆ ಮಾಡುವ ಪಾರ್ಟಿಯು ಕೊಡುವ ಶಾಸಕರ ಬೆಂಬಲದ ಪತ್ರದ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಆಗದೇ ಇದ್ದಲ್ಲಿ, ಶಾಸಕರ ಭೌತಿಕ ಪರಿಶೀಲನೆ (Physical Verification) ನಡೆಸುವ ಅಥವಾ ವೈಯಕ್ತಿಕ ಬೆಂಬಲ ಪತ್ರವನ್ನು ರಾಜ್ಯಪಾಲರು ಕೇಳಬಹುದು. ಹಾಗಾಗಿ, ಸದ್ಯದ ತಮಿಳುನಾಡು ಕೇಸಿನಲ್ಲಿ, ರಾಜ್ಯಪಾಲರು, ಟಿವಿಕೆ ಯಾವಯಾವ ಪಾರ್ಟಿಗಳ ಜೊತೆ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಿದೆಯೋ, ಆ ಪಾರ್ಟಿಗಳ ನಾಯಕರ ಸಹಿ ಇರುವ ಅಧಿಕೃತ ದಾಖಲೆ ಬರುವವರೆಗೆ ರಾಜ್ಯಪಾಲರು ಕಾಯಬಹುದು.

