ಬೆಂಗಳೂರು: ಯೋಗೀಶ್ ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೆ ಅವರ ಮಕ್ಕಳಾದ ವೈಶಾಲಿ, ದೀಪಾಲಿ" ಇದು ನ್ಯಾಯ ಎತ್ತಿ ಹಿಡಿದ ನ್ಯಾಯಾಂಗ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಮುಂದುವರೆದು, ಕಾರ್ಯಕರ್ತರಿಗೆ ಕೃತಜ್ಞತೆ ಜತೆಗೆ ಮಹತ್ವದ ಮನವಿ ಮಾಡಿದ್ದಾರೆ.
"ನ್ಯಾಯವನ್ನು ಎತ್ತಿಹಿಡಿದ ಗೌರವಾನ್ವಿತ ನ್ಯಾಯಾಂಗಕ್ಕೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ" ಎಂದು ಮಕ್ಕಳು ಸೇರಿ ಕುಟುಂಬಸ್ಥರು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಬೆಂಬಲ ನಮಗೆ ಅಮೂಲ್ಯ
"ಈ ಸುದೀರ್ಘ ಪಯಣದಲ್ಲಿ ನಮ್ಮೊಂದಿಗೆ ಅಚಲವಾದ ನಂಬಿಕೆ ಮತ್ತು ಬೆಂಬಲದೊಂದಿಗೆ ನಿಂತ ನಮ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪ್ರತಿಯೊಬ್ಬ ಬೆಂಬಲಿಗರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನಮಗೆ ಅಮೂಲ್ಯವಾಗಿದೆ" ಎಂದು ಸ್ಮರಿಸಿದ್ದಾರೆ.ಸಂಭ್ರಮಾಚರಣೆ, ಮೆರವಣಿಗೆ ಮಾಡದಂತೆ ವಿನಂತಿ
ಬೆಂಬಲಿಗರು ಹಾಗೂ ಕಾರ್ಯಕರ್ತರಲ್ಲಿ ವಿನಮ್ರ ಮನವಿ ಮಾಡಿರುವ ಅವರು, "ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆ, ಮೆರವಣಿಗೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಕಾರ್ಯಕ್ರಮಗಳನ್ನು ನಡೆಸದಂತೆ ಎಲ್ಲರಿಗೂ ನಮ್ಮ ವಿನಮ್ರ ಮನವಿ. ಈ ಸಮಯದಲ್ಲಿ ನೀವು ನೀಡಬಹುದಾದ ಅತ್ಯುತ್ತಮ ಬೆಂಬಲವೆಂದರೆ ಶಾಂತಿ, ಸಂಯಮ ಮತ್ತು ಗೌರವವನ್ನು ಕಾಪಾಡುವುದು" ಎಂದು ಕೋರಿದ್ದಾರೆ.ಶಾಸಕ ವಿನಯ್ ಕುಲಕರ್ಣಿ ಅವರು ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ಪ್ರಕ್ರಿಯೆಗಳ ಸಮಯದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವೇಳೆ, ಅವರ ಪುತ್ರಿಯರಾದ ದೀಪಾಲಿ ಮತ್ತು ವೈಶಾಲಿ ಅವರು ತಂದೆಯ ಪರವಾಗಿ ನಿಂತು, ತಮ್ಮ ತಂದೆಯ ಜನಸೇವೆ ಹಾಗೂ ಕುಟುಂಬದ ಸ್ಥೈರ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಜಾಮೀನು ದೊರೆತ ನಂತರ, ಬೆಂಬಲಿಗರು ಬೀದಿಗಿಳಿದು ಸಂಭ್ರಮಾಚರಣೆ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಈ ಜವಾಬ್ದಾರಿಯುತ ಸಂದೇಶವನ್ನು ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಶಾಸಕರ ಅಭಿಮಾನಿಗಳು ಹಾಗೂ ಬೆಂಬಲಿಗರು ಶಾಂತಿ ಕಾಯ್ದುಕೊಳ್ಳುವ ಭರವಸೆ ನೀಡುತ್ತಿದ್ದಾರೆ.

