Dailyhunt
ವಿಶಾಖಪಟ್ಟಣದಲ್ಲಿ ಕ್ರಿಕೆಟ್ ದುರ್ಘಟನೆ; ರನೌಟ್ ತೀರ್ಪಿಗೆ ಶುರುವಾದ ಜಗಳ ಅಂಪೈರ್ ಕೊಲೆಯಲ್ಲಿ ಅಂತ್ಯ

ವಿಶಾಖಪಟ್ಟಣದಲ್ಲಿ ಕ್ರಿಕೆಟ್ ದುರ್ಘಟನೆ; ರನೌಟ್ ತೀರ್ಪಿಗೆ ಶುರುವಾದ ಜಗಳ ಅಂಪೈರ್ ಕೊಲೆಯಲ್ಲಿ ಅಂತ್ಯ

Vijay Karnataka 1 week ago

ಕ್ರಿಕೆಟ್ ಜಗತ್ತು ಬೆಚ್ಚಿಬೀಳುವಂತಹ ದುರಂತವೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ವರದಿಯಾಗಿದೆ. ಸ್ಥಳೀಯ ಪಂದ್ಯದ ವೇಳೆ ನಡೆದ ಕ್ಷುಲ್ಲಕ ರನ್-ಔಟ್ ವಿವಾದವು ಅಂಪೈರ್ ನ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. 21 ವರ್ಷದ ಡೋಲಾ ಅಜಿತ್ ಬಾಬು ಮೃತಪಟ್ಟ ಅಂಪೈರ್. ಪಂದ್ಯದ ಪ್ರೇಕ್ಷಕನಾಗಿದ್ದ ಕಿಶೋರ್ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ಏಪ್ರಿಲ್ 5ರಂದು ರಾತ್ರಿ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದೆ. ಪಂದ್ಯಾವಳಿಯಲ್ಲಿ ಡೋಲಾ ಅಜಿತ್ ಬಾಬು ಮತ್ತು ಬುಡುಮುರಿ ಚಿರಂಜೀವಿ ಅಂಪೈರ್ ಗಳಾಗಿ ಕಾರ್ಯ ನಿರ್ವಹಿಸಿದ್ದರು. ಪಂದ್ಯ ನಡೆಯುತ್ತಿದ್ದ ವೇಳೆ ರನೌಟ್ ವಿವಾದಕ್ಕೆ ಸಂಬಂಧಿಸಿ ಆಟಗಾರರ ನಡುವೆ ವಾಗ್ವಾದವಾಗಿದೆ. ಅದು ಅದು ಹೊಯ್ ಕೈ ವರೆಗೂ ಹೋಗಿದೆ. ಈ ವೇಳೆ ಇಬ್ಬರು ಅಂಪೈರ್ ಗಳೂ ಆಟಗಾರರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

ಮೈದಾನದ ಹೊರಹೋದ ಜಗಳ

ಆದರೆ ವಿವಾದ ಇಲ್ಲಿಗೇ ಮುಗಿದಿಲ್ಲ. ಜಗಳ ಮೈದಾನದ ಹೊರಗೂ ನಡೆದಿದೆ. ಪಂದ್ಯ ನಡೆಯುತ್ತಿದ್ದಾಗ ಪ್ರೇಕ್ಷಕರಲ್ಲಿ ಒಬ್ಬನಾಗಿದ್ದ ಕಾಂತ ಕಿಶೋರ್(26 ವರ್ಷ) ಎಂಬಾತ ಕೋಪಗೊಂಡು ಅಂಪೈರ್ ಮತ್ತು ಆಟಗಾರರನ್ನು ನಿಂದಿಸಲು ಪ್ರಾರಂಭಿಸಿದ. ಪಂದ್ಯದ ನಂತರ 'ವಿಷಯವನ್ನು ಇತ್ಯರ್ಥಪಡಿಸಲು'ಆತ ಅಂಪೈರ್‌ಗಳನ್ನು ಬೇರೆ ಸ್ಥಳಕ್ಕೆ ಕರೆಸಿದ್ದಾನೆ. ಆತ ಹೇಳಿದ ಸ್ಥಳಕ್ಕೆ ಅಂಪೈರ್ ಗಳಾಗಿದ್ದ ಅಜಿತ್ ಬಾಬು ಮತ್ತು ಚಿರಂಜೀವಿ ಮತ್ತು ಇತರರು ಹೋಗಿದ್ದರು. ಅಲ್ಲಿ ಸಮಸ್ಯೆ ಇತ್ಯರ್ಥವಾಗುವ ಬದಲು ಮತ್ತೊಂದು ವಾಗ್ವಾದ ಪ್ರಾರಂಭವಾಯಿತು.

ಮಾತಿಗೆ ಮಾತು ಬೆಳೆದು ಹಿಂಸಾಚಾರಕ್ಕೆ ತಿರುಗಿತು. ಈ ವೇಳೆ ಕಿಶೋರ್ ಇದ್ದಕ್ಕಿದ್ದಂತೆ ಚಾಕುವನ್ನು ಹೊರತೆಗೆದು ಇಬ್ಬರು ಅಂಪೈರ್‌ಗಳ ಮೇಲೆ ಹಲ್ಲೆ ನಡೆಸಿದರು. ಅಜಿತ್ ಬಾಬು ಅವರ ಎದೆಗೆ ಇರಿದಿದ್ದರಿಂದ ಅವರು ತಕ್ಷಣವೇ ಪ್ರಜ್ಞೆ ತಪ್ಪಿದರು. ಈ ದಾಳಿ ವೇಳೆ ಮಧ್ಯೆ ಪ್ರವೇಶಿಸಿದ ಚಿರಂಜೀವಿ ಮತ್ತು ಇನ್ನೊಬ್ಬ ವ್ಯಕ್ತಿ ಕೂಡ ಗಾಯಗೊಂಡರು. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಅಜಿತ್ ಬಾಬು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ಟೈಂಸ್ ನೌ ವರದಿ ಮಾಡಿದೆ.

ಆರೋಪಿಗಾಗಿ ಹುಡುಕಾಟ

ಕಿಶೋರ್ ಈ ಹಿಂದೆ ಸಹ ಪಂದ್ಯಗಳು ನಡೆಯುತ್ತಿದ್ದಾಗ ಪ್ರೇಕ್ಷಕರೊಂದಿಗೆ ಕೆಟ್ಟದಾಗಿ ವರ್ತಿಸಿದ್ದ. ಪಾನಮತ್ತರಾಗಿ ಹಲ್ಲೆ ಸಹ ನಡೆಸಿದ್ದ. ಅಜಿತ್ ಬಾಬು ಅವರ ಜೊತೆಯೂ ಅದೇ ರೀತಿ ಅವನು ಕೂಗಾಡಲು ಮತ್ತು ಜಗಳವಾಡಲು ಪ್ರಾರಂಭಿಸಿದನು. ಇದ್ದಕ್ಕಿದ್ದಂತೆ, ಅವನು ತನ್ನ ಜೇಬಿನಿಂದ ಚಾಕುವನ್ನು ತೆಗೆದುಕೊಂಡು ಡೋಲಾ ಅಜಿತ್‌ನ ಎದೆಗೆ ಇರಿದನು ಎಂದು ಸಾವಿಗೀಡಾದ ಅಜಿತ್ ಬಾಬು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿದ್ದವರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದರೂ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ತಲೆಮರೆಸಿರುವ ಕಿಶೋರ್ ಗಾಗಿ ಪೊಲೀಸರು ಇದೀಗ ಶೋಧ ನಡೆಸುತ್ತಿದ್ದಾರೆ. ಅಜಿತ್ ಬಾಬು ಅವರ ತಂದೆ ಡೋಲಾ ಅಪ್ಪಲ ರಾಜು ನೀಡಿರುವ ದೂರು ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka