Dailyhunt Logo
  • Light mode
    Follow system
    Dark mode
    • Play Story
    • App Story
ವಿಶೇಷ ಸಂಸತ್ ಅಧಿವೇಶನದ ಸುಳಿವು : ಬೆನ್ನಲ್ಲೇ ಪ್ರಧಾನಿ ಮೋದಿಗೆ ಖರ್ಗೆ ಪತ್ರ, ಅದರಲ್ಲೇನಿದೆ?

ವಿಶೇಷ ಸಂಸತ್ ಅಧಿವೇಶನದ ಸುಳಿವು : ಬೆನ್ನಲ್ಲೇ ಪ್ರಧಾನಿ ಮೋದಿಗೆ ಖರ್ಗೆ ಪತ್ರ, ಅದರಲ್ಲೇನಿದೆ?

Vijay Karnataka 2 weeks ago

ಹೊಸದಿಲ್ಲಿ : ಹಾಲಿ ಇರುವ ಲೋಕಸಭೆ ಸದಸ್ಯ ಬಲವಾದ 543 ಅನ್ನು ಮುಂದಿನ 25 ವರ್ಷ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು. ಹಾಲಿ ಇರುವ ಕ್ಷೇತ್ರಗಳಲ್ಲೇ ಮಹಿಳೆಯರಿಗೆ ಮೀಸಲು ನೀಡಬೇಕು ಹಾಗೂ 2029ರ ಲೋಕಸಭೆ ಚುನಾವಣೆಯಿಂದಲೇ ಮಹಿಳಾ ಮೀಸಲು ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆ ವಿಧೇಯಕ ಮಂಡಿಸಲು ಸರಕಾರ ಮತ್ತೊಮ್ಮೆ ವಿಶೇಷ ಅಧಿವೇಶನ ಕರೆಯಲು ಮುಂದಾಗಿದೆ ಎಂಬ ವರದಿ ಬೆನ್ನಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಖರ್ಗೆ, ''ಪ್ರಸ್ತಾವಿತ ಕ್ಷೇತ್ರ ಪುನರ್‌ ವಿಂಗಡಣೆ ವಿಧೇಯಕ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ರಾಜಕೀಯ ಪಕ್ಷಗಳು, ರಾಜ್ಯ ಸರಕಾರಗಳಿಗೆ ಹೆಚ್ಚಿನ ಸಮಯ ನೀಡಬೇಕು. ವಿಧೇಯಕ ಮಂಡನೆಗೂ ಮೊದಲು ವಿಧೇಯಕ ಕುರಿತು ಮತ್ತಷ್ಟು ವಿಸ್ತೃತ ಚರ್ಚೆಗೆ ಸರ್ವಪಕ್ಷ ಸಭೆ ಕರೆದು ಸಮಾಲೋಚನೆ ನಡೆಸಬೇಕು'' ಎಂದು ಆಗ್ರಹಿಸಿದ್ದಾರೆ.

ವಿಶೇಷ ಅಧಿವೇಶನದ ಸುಳಿವು ನೀಡಿದ ಸಚಿವ ಕಿರಣ್ ರಿಜಿಜು

''ಸಂಸತ್‌ ಮುಂಗಾರು ಅಧಿವೇಶನವನ್ನೂ ಇನ್ನೂ ಮುಂದೂಡಿಲ್ಲ. ಯಾವುದಾದರೂ ಮಹತ್ವದ ವಿಷಯ ಕುರಿತು ಚರ್ಚೆ ನಡೆಸುವ ಅಗತ್ಯ ಕಂಡು ಬಂದರೆ ಮತ್ತೊಮ್ಮೆ ಅಧಿವೇಶನ ಕರೆಯಲಾಗುವುದು,'' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜುಜು ಹೇಳಿಕೆ, ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಯನ್ನು ದಟ್ಟವಾಗಿಸಿದೆ.

ಟಿವಿ ಸಂದರ್ಶನದಲ್ಲಿಮಾತನಾಡಿದ ರಿಜಿಜು, ವಿಶೇಷ ಅಧಿವೇಶನ ಕರೆಯುವ ಕುರಿತು ನೇರವಾಗಿ ಉತ್ತರ ನೀಡಲಿಲ್ಲ. ''ನಿರ್ದಿಷ್ಟ ಅವಧಿಗೆ ನಡೆದ ಅಧಿವೇಶನ ಮುಂದೂಡಿಕೆಯಾದ ಬಳಿಕ ಔಪಚಾರಿಕವಾಗಿ ಅಂತ್ಯಗೊಳಿಸಲು ಮತ್ತೊಮ್ಮೆ ಅಧಿವೇಶನ ಕರೆಯುವುದು ಸಂಸದೀಯ ವ್ಯವಸ್ಥೆಯಲ್ಲಿ ಹೊಸದೇನಲ್ಲ. ಅದು ಸರಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ,'' ಎಂದು ಹೇಳಿದರು.

ಪ್ರಧಾನಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆಗಿರುವ ಖರ್ಗೆ,''ಕೇಂದ್ರ ಸಂಸದೀಯ ವ್ಯವಹಾರ ಸಚಿವರು ಟಿವಿ ಸಂದರ್ಶನವೊಂದರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ವಿಧೇಯಕ ಮಂಡಿಸಲು ವಿಶೇಷ ಅಧಿವೇಶನ ಕರೆಯುವ ಸುಳಿವು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳ ಪರವಾಗಿ ಮೂರು ಬೇಡಿಕೆ ಮಂಡಿಸಿರುವೆ,'' ಎಂದು ತಿಳಿಸಿದರು.

ಸಚಿವ ರಿಜಿಜು ಹೇಳಿದಂತೆ ಸರಕಾರಕ್ಕೆ ವಿಶೇಷ ಅಧಿವೇಶನ ಕರೆಯುವ ಉದ್ದೇಶವಿದ್ದರೆ ಕೂಡಲೇ ಸರ್ವಪಕ್ಷ ಸಭೆ ಕರೆಯಿರಿ. ಇದು ದೇಶದ ದೃಷ್ಟಿಯಿಂದ ಅತ್ಯಂತ ಮಹತ್ವದ ವಿಷಯವಾಗಿದೆ. ಮಂಡನೆಗೂ ಮೊದಲು ಪ್ರಸ್ತಾವಿತ ಕ್ಷೇತ್ರ ಪುನರ್‌ ವಿಂಗಡಣೆ ವಿಧೇಯಕದ ಕುರಿತು ಸಮಗ್ರ ಚರ್ಚೆ ನಡೆಸಿ. ಕರಡು ವಿಧೇಯಕ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಪ್ರತಿಪಕ್ಷಗಳಿಗೆ ಸಮಯ ಅವಕಾಶ ನೀಡಿ. ಕಳೆದ ಏಪ್ರಿಲ್‌ 17ರಂದು ಏಕಾಏಕಿ ಅಧಿವೇಶನ ಕರೆದಂತೆ ದಬ್ಬಾಳಿಕೆ ಪ್ರಯತ್ನವನ್ನು ಮತ್ತೊಮ್ಮೆ ಮಾಡಬೇಡಿ,'' ಎಂದು ಮೋದಿಗೆ ಬರೆದ ಪತ್ರದಲ್ಲಿ ಖರ್ಗೆ ಒತ್ತಾಯಿಸಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka