ಹೊಸದಿಲ್ಲಿ: ನಿರೀಕ್ಷೆಯಂತೆ ಅಮೆರಿಕ-ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಒಪ್ಪಂದ, ಜಾಗತಿಕ ಶಾಂತಿಪ್ರಿಯರಲ್ಲಿ ನೆಮ್ಮದಿ ತಂದಿದೆ. ಜಗತ್ತು ಒಂದು ರೀತಿಯ ಸಮಾಧಾನವನ್ನು ಕಂಡಿದೆ. ಆದರೆ ಭಾರತದಲ್ಲಿ ಈ ಬೆಳವಣಿಗೆ ರಾಜಕೀಯ ಅಸಮಾಧಾನಕ್ಕೆ ಕಾರಣವಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆಗಳನ್ನು ಆಯೋಜಿಸಿದ್ದಾಗಿ ಪಾಕಿಸ್ತಾನ ಘೋಷಿಸಿರುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬೀಳಲು ಕಾರಣವಾಗಿದೆ.
ಹೌದು, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರನಿರ್ವಹಿಸಿರುವುದು, ಭಾರತೀಯ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಅವಕಾಶ ಒದಗಿಸಿದೆ. ಅದರಲ್ಲೂ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಭಾರತದ ತಟಸ್ಥ ನಿಲುವನ್ನು ಅತ್ಯಂತ ಕಠೋರವಾಗಿ ಪ್ರಶ್ನಿಸುತ್ತಿದ್ದ ಕಾಂಗ್ರೆಸ್, ಈಗ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ದೊರೆತ ಮನ್ನಣೆಗಾಗಿ ಮೋದಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿದೆ.
ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಜೈರಾಮ್ ರಮೇಶ್, ಸಂಘರ್ಷದಲ್ಲಿ ನಿರತ ದೇಶಗಳು, ಶಾಂತಿ ಮಾತುಕತೆಗಳಿಗಾಗಿ ಪಾಕಿಸ್ತಾನದ ಮೇಲೆ ನಂಬಿಕೆ ಇರಿಸಿದ್ದು, ಭಾರತದ ವಿದೇಶಾಂಗ ನೀತಿಯ ವೈಫಲ್ಯಕ್ಕೆ ಸಾಕ್ಷಿ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಮೋದಿ ಸರ್ಕಾರದ ಮೌನವನ್ನೂ ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಕ್ರೋಶದ ನುಡಿಗಳು:
"ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ಸುದೀರ್ಘ ಅವಧಿಗೆ ಸಂಘರ್ಷದಲ್ಲಿ ನಿರತವಾಗಿದ್ದವು. ಆದರೆ ಈಗ ಪಾಕಿಸ್ತಾನವೂ ಉಭಯ ರಾಷ್ಟ್ರಗಳ ನಡುವೆ ಸಂಧಾನ ಮಾಡಿಸಿರುವುದಾಗಿ ಹೇಳಿದೆ. ಇದು ಭಾರತದ ವಿದೇಶಾಂಗ ನೀತಿಯ ವೈಫಲ್ಯವಲ್ಲದೇ ಮತ್ತಿನ್ನೇನು?" ಎಂದು ಕಾಂಗ್ರೆಸ್ ಸಂಪರ್ಕ ಇಲಾಖೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಖಾರವಾಗಿ ಪ್ರಶ್ನಿಸಿದ್ದಾರೆ.ಮುಂದುವರೆದು, "ಅಮೆರಿಕ-ಇರಾನ್ ಕದನ ವಿರಾಮ ಜಾರಿಯಲ್ಲಿ ಪಾಕಿಸ್ತಾನ ನಿರ್ವಹಿಸಿದ ಪಾತ್ರ, ಪ್ರಧಾನಿ ಮೋದಿ ಅವರ ಅತ್ಯಂತ ವೈಯಕ್ತಿಕಗೊಳಿಸಿದ ರಾಜತಾಂತ್ರಿಕತೆಯ ಸಾರ ಮತ್ತು ಶೈಲಿ ಎರಡಕ್ಕೂ ತೀವ್ರ ಹಿನ್ನಡೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನ ಅನಾಯಾಸವಗಿ ಜಾಗತಿಕ ವೇದಿಕೆಯಲ್ಲಿ ಮಹತ್ವದ ಸ್ಥಾನದಲ್ಲಿ ಕುಳಿತಿರುವುದಕ್ಕೆ, ಮೋದಿ ಸರ್ಕಾರದ ದುರ್ಬಲ ವಿದೇಶಾಂಗ ನೀತಿಯೇ ಕಾರಣ" ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
"ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಪಾಕಿಸ್ತಾನವನ್ನು "ದಲಾಲ್" ಎಂದು ಮೂದಲಿಸಿದರು. ಆದರೆ ಈಗ ಅದೇ ರಾಷ್ಟ್ರ ಜಾಗತಿಕ ನೆಮ್ಮದಿಯನ್ನು ಕೆಡಿಸಿದ್ದ ಅಮೆರಿಕ-ಇರಾನ್ ಯುದ್ಧ ನಿಲ್ಲಿಸಿದ್ದಾಗಿ ಪ್ರತಿಪಾದಿಸುತ್ತಿದೆ. ನಮ್ಮ ಸ್ವಯಂ ಘೋಷಿತ ವಿಶ್ವಗುರು (ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ)ವಿನ ನಕಲಿ ಇಮೇಜ್ ಈಗ ಜಗತ್ತಿನ ಮುಂದೆ ಬಹಿರಂಗಗೊಂಡಿದೆ. ಅವರ ಸ್ವಯಂ ಘೋಷಿತ 56 ಇಂಚಿನ ಎದೆ ಕುಗ್ಗಿ ಕುಗ್ಗಿದೆ" ಎಂದು ಜೈ ರಾಮ್ ರಮೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ನಿಲುವನ್ನು ಈ ಹಿಂದೆ ಟೀಕಿಸಿದ್ದ ಲೋಕಸಭೆ ವಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, "ಭಾರತದ ವಿದೇಶಾಂಗ ನೀತಿ ಯುನಿವರ್ಸಲ್ ಜೋಕ್" ಎಂದು ಕರೆದಿದ್ದರು. ಈಗ ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನ ಮಧ್ಯಸ್ಥಿಕೆವಹಿಸಿರುವುದು, ಮೋದಿ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬೀಳಲು ಅವಕಾಶ ಒದಗಿಸಿದೆ.
ಆದರೆ ಅಮೆರಿಕ-ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಒಪ್ಪಂದ ವಿಚಾರದಲ್ಲಿ, ಪಾಕಿಸ್ತಾನದ ರಾಜತಾಂತ್ರಿಕತೆ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಹೇಳಲು ಬರುವುದಿಲ್ಲ. ಏಕೆಂದರೆ, ಪ್ರಸ್ತುತ ಕದನ ವಿರಾಮ ಒಪ್ಪಂದವನ್ನೂ ಒಪ್ಪಿಕೊಂಡಿದ್ದರೂ, ಲೆಬನಾನ್ ಮೇಲಿನ ದಾಳಿಯನ್ನು ಮುಂದುವರೆಸುವುದಾಗಿ ಇಸ್ರೇಲ್ ಸ್ಪಷ್ಟನೆ ನೀಡಿದೆ. ಆದರೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು, ಲೆಬನಾನ್ ಮೇಲಿನ ದಾಳಿಯೂ ನಿಲ್ಲಲಿದೆ ಎಂದು ಪ್ರತಿಪಾದಿಸಿದ್ದರು.

