ಬ್ರಹ್ಮಾಂಡ ಎನ್ನುವುದು ನಿಗೂಢ ವಿಸ್ಮಯಗಳ ಭಂಡಾರ. ಬಾಹ್ಯಾಕಾಶ ನಮ್ಮನ್ನು ಬೆಚ್ಚಿಬೀಳಿಸುವಂತಹ ಅಚ್ಚರಿಗಳನ್ನು ನೀಡುತ್ತಲೇ ಇರುತ್ತದೆ. ಖಗೋಳ ಭೌತಶಾಸ್ತ್ರವು ನಕ್ಷತ್ರಗಳ ಬಗ್ಗೆ, ಗ್ರಹಗಳ ಬಗ್ಗೆ ಅಷ್ಟೇ ಏಕೆ ಇಡೀ ಬ್ರಹ್ಮಾಂಡದ ಬಗ್ಗೆ ಕೆಲವು ಖಚಿತ ಸಿದ್ಧಾಂತಗಳನ್ನು ಒತ್ತಿ ಹೇಳುತ್ತದೆ.
ಈ ಸಿದ್ಧಾಂತಗಳ ಆಧಾರದ ಮೇಲೆಯೇ ಇಡೀ ಬ್ರಹ್ಮಾಂಡ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವೊಂದು ಖಗೋಳೀಯ ವಸ್ತುಗಳು ಈ ಸಿದ್ದಾಂತಕ್ಕೆ ಸವಾಲು ಎಸೆಯುತ್ತವೆ.
TOI-5205b ಎಂಬ ಎಕ್ಸೋಪ್ಲ್ಯಾನೆಟ್ ಕೂಡ ಆಧುನಿಕ ಭೌತಶಾಸ್ತ್ರದ ಈ ನಿಯಮಗಳಿಗೆ ಸವಾಲುಗಳನ್ನು ಒಡ್ಡುತ್ತಿದೆ. ಖಗೋಳ ವಿಜ್ಞಾನಿಗಳಿಂದ "ಫಾರ್ಬಿಡನ್ ಪ್ಲ್ಯಾನೆಟ್" ಎಂದು ಕರೆಸಿಕೊಂಡಿರುವ ಈ TOI-5205b ಗ್ರಹದ ಮೇಲೆ, ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸಿದರೆ ಇದು ಅಸ್ತಿತ್ವದಲ್ಲೇ ಇರಬಾರದು. ಇದೇ ಕಾರಣಕ್ಕೆ ಕೆಲವರು ಇದನ್ನು "ನಿಷೇಧಿತ ಗ್ರಹ" ಎಂದು ಕರೆದಿದ್ದಾರೆ. ಖಗೋಳ
ವಿಜ್ಞಾನಿಗಳ ನಿದ್ದೆಗೆಡಿಸಿರುವ ಆ ನಿಗೂಢ ಗ್ರಹದ ಕಥೆ ಏನು? ನೋಡೋಣ ಬನ್ನಿ.
TOI-5205b ಗ್ರಹ ನಮ್ಮ ಸೌರಮಂಡಲದ ಅತಿ ದೊಡ್ಡ ಗ್ರಹವಾದ ಗುರು ಗ್ರಹದಷ್ಟೇ ಬೃಹತ್ತಾಗಿದೆ. ಆದರೆ ಅಚ್ಚರಿಯ ವಿಚಾರವೆಂದರೆ ಈ ದೈತ್ಯ ಗ್ರಹ ಒಂದು ಸಣ್ಣ ಕೆಂಪು ಕುಬ್ಜ ನಕ್ಷತ್ರವೊಂದನ್ನು ಸುತ್ತುತ್ತಿದೆ. ಈ ಗ್ರಹದ ಗಾತ್ರ ಮತ್ತು ಅದರ ಮಾತೃ ನಕ್ಷತ್ರವಾದ TOI-5205 ಗಾತ್ರವನ್ನು ತಾಳೆ ಹಾಕಿದಾಗ, TOI-5205b ನಿಜಕ್ಕೂ ಅಸ್ತಿತ್ವದಲ್ಲಿರಬಾರದು. ಇದು ಪ್ರಸ್ತುತ ಖಗೋಳ ವಿಜ್ಞಾನದ ನಿಯಮಗಳಿಗೆ ತದ್ವಿರುದ್ಧ ಇದೆ ಎಂಬುದು ಸ್ಪಷ್ಟ. 2022ರಲ್ಲಿ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಲಾವಾ ಮಳೆಯಾಗುವ ಗ್ರಹ ಪತ್ತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಏನಂತಾರೆ ಸಂಶೋಧಕರು?
ನಮ್ಮ ಸೌರಮಂಡಲದಿಂದ ಸರಿಸುಮಾರು 280 ಜ್ಯೋತಿರ್ವರ್ಷ ದೂರದಲ್ಲಿರುವ TOI-5205b ಹೆಸರಿನ ಎಕ್ಸೋಪ್ಲ್ಯಾನೆಟ್, TOI-5205 ಹೆಸರಿನ ಕೆಂಪು ಕುಬ್ಜ ನಕ್ಷತ್ರವನ್ನು ಸುತ್ತುತ್ತಿದೆ. ಈ ನಕ್ಷತ್ರ ನಮ್ಮ ಸೂರ್ಯನ ದ್ರವ್ಯರಾಶಿಯ ಕೇವಲ ಶೇ. 40ರಷ್ಟು ಗಾತ್ರವನ್ನು ಹೊಂದಿದ್ದು, ಇಷ್ಟು ಚಿಕ್ಕ ನಕ್ಷತ್ರವನ್ನು TOI-5205b ಹೇಗೆ ಸುತ್ತುತ್ತಿದೆ ಎಂಬುದೇ ಖಗೋಳ ವಿಜ್ಞಾನಿಗಳಿಗೆ ತಿಳಿಯದ ವಿಚಾರವಾಗಿದೆ. ಏಕೆಂದರೆ TOI-5205b ಏನಿಲ್ಲವೆಂದರೂ ಗಾತ್ರದಲ್ಲಿ ನಮ್ಮ ಗುರುಗ್ರಹದಷ್ಟು ದೊಡ್ಡದಾಗಿದೆ.ಈ ಕುರಿತು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಖ್ಯಾತ ಖಗೋಳ ಭೌತಶಾಸ್ತ್ರಜ್ಞೆ ಅಂಜಲಿ ಪಿಯೆಟ್ಟೆ ನೇತೃತ್ವದ ಸಂಶೋಧಕರ ತಂಡ ಆಳವಾದ ಅಧ್ಯಯನ ನಡೆಸಿದ್ದು, ಈ ಸಂಶೋಧನೆಗಾಗಿ ಈ ತಂಡ ಜಗತ್ತಿನ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಾಧುನಿಕ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಕಲೆಹಾಕಿದ ಡೇಟಾವನ್ನು ಬಳಸಿಕೊಂಡಿದೆ. 2024ರಲ್ಲಿ "ದಿ ಆಸ್ಟ್ರೋಫಿಸಿಕಲ್ ಜರ್ನಲ್"ನಲ್ಲಿ ಪ್ರಕಟವಾದ ವರದಿಯಲ್ಲಿ
ಬಾಲ ಇರುವ WASP-69 b ಹೆಸರಿನ ಎಕ್ಸೋಪ್ಲ್ಯಾನೆಟ್ ಪತ್ತೆ ಆಗಿದ್ದನ್ನು ಉಲ್ಲೇಖ ಮಾಡಲಾಗಿತ್ತು.
ಸಾಮಾನ್ಯವಾಗಿ ಬ್ರಹ್ಮಾಂಡದಲ್ಲಿ ನಕ್ಷತ್ರಗಳು ತಮ್ಮ ಸುತ್ತ ಒಂದು ನಿರ್ದಿಷ್ಟ ಪ್ರಮಾಣದ ಅನಿಲ ಮತ್ತು ಧೂಳಿನ ದಟ್ಟವಾದ ಮೋಡಗಳನ್ನು ಹೊಂದಿರುತ್ತವೆ. ಈ ಮೋಡಗಳು ಕಾಲಾನಂತರದಲ್ಲಿ ಒಂದಾಗಿ ಸೇರಿ ಗ್ರಹಗಳಾಗಿ ರೂಪುಗೊಳ್ಳುತ್ತವೆ. ದೊಡ್ಡ ನಕ್ಷತ್ರಗಳ ಸುತ್ತ ದೊಡ್ಡ ಗ್ರಹಗಳು ರೂಪುಗೊಳ್ಳುವುದು ಬ್ರಹ್ಮಾಂಡದ ನಿಯಮ. ಆದರೆ ಈ TOI-5205 ಸ್ಟಾರ್ ಸಿಸ್ಟಮ್‌ನ ಕೇಂದ್ರದಲ್ಲಿರುವುದು ಕೇವಲ ಒಂದು ಸಣ್ಣ ನಕ್ಷತ್ರ. ಇದರ ಸುತ್ತ ಗುರು ಗ್ರಹದಂತಹ ಬೃಹತ್ ಗ್ರಹ ರೂಪುಗೊಳ್ಳಲು ಬೇಕಾದಷ್ಟು ಧೂಳು ಮತ್ತು ಅನಿಲದ ಪ್ರಮಾಣವೇ ಇಲ್ಲ.
ಕೋರ್ ಅಕ್ರಿಶನ್ ಮಾಡೆಲ್‌ಗೆ ತದ್ವಿರುದ್ಧ:
ಗ್ರಹಕಾಯಗಳ ರಚನೆಯ ಕುರಿತ ಮೋರ್ ಅಕ್ರಿಶನ್ ಮಾಡೆಲ್ ಪ್ರಕಾರ ಗುರು ಗ್ರಹದಂತಹ ಬೃಹತ್ ಅನಿಲ ಗ್ರಹಗಳು ರೂಪುಗೊಳ್ಳಬೇಕಾದರೆ, ನಕ್ಷತ್ರದ ಸುತ್ತ ಇರುವ ಧೂಳು ಮತ್ತು ಅನಿಲದ ಡಿಸ್ಕ್‌ನಲ್ಲಿ, ಕನಿಷ್ಠ 10 ಭೂಮಿಗಳ ಗಾತ್ರದಷ್ಟು ತೂಕವಿರುವ ಒಂದು ಗಟ್ಟಿಯಾದ ಬಂಡೆಯಂತಹ ತಿರುಳು ರೂಪುಗೊಳ್ಳಬೇಕು. ಈ ಬೃಹತ್ ತಿರುಳು ರೂಪುಗೊಂಡ ನಂತರವಷ್ಟೇ ಅದು ತನ್ನ ಪ್ರಬಲವಾದ ಗುರುತ್ವಾಕರ್ಷಣಾ ಶಕ್ತಿಯಿಂದ ಸುತ್ತಮುತ್ತಲಿನ ಅಪಾರ ಪ್ರಮಾಣದ ಅನಿಲವನ್ನು ತನ್ನತ್ತ ಸೆಳೆದುಕೊಂಡು ಒಂದು ದೈತ್ಯ ಗ್ರಹವಾಗಿ ಬೆಳೆಯಲು ಸಾಧ್ಯ.ಆದರೆ TOI-5205b ಗ್ರಹದ ವಿಚಾರದಲ್ಲಿ ಈ ಎಲ್ಲಾ ಲೆಕ್ಕಾಚಾರಗಳು ಸಂಪೂರ್ಣವಾಗಿ ಉಲ್ಟಾ ಆಗಿವೆ. ಈ ಗ್ರಹ ಸುತ್ತುತ್ತಿರುವ ಕೆಂಪು ಕುಬ್ಜ ನಕ್ಷತ್ರವು ಅತ್ಯಂತ ಚಿಕ್ಕದಾಗಿದ್ದು, ಅದರ ಸುತ್ತಮುತ್ತಲಿನ ಧೂಳು ಮತ್ತು ಅನಿಲದ ಪ್ರಮಾಣ ಕೂಡ ತೀರಾ ಅಲ್ಪವಾಗಿದೆ. ಅಂದರೆ ಇಂತಹ ಒಂದು ಸಣ್ಣ ನಕ್ಷತ್ರದ ಸುತ್ತ ಗುರು ಗ್ರಹದಂತಹ ಒಂದು ಬೃಹತ್ ಗ್ರಹ ರೂಪುಗೊಳ್ಳಲು ಬೇಕಾದ ಕಚ್ಚಾ ವಸ್ತುಗಳೇ ಇರುವುದಿಲ್ಲ. ನಿಯಮಗಳ ಪ್ರಕಾರ ಈ ನಕ್ಷತ್ರದ ಬಳಿ ಕೇವಲ ಭೂಮಿಯಷ್ಟು ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡದಾದ ಗ್ರಹಗಳು ಮಾತ್ರ ರೂಪುಗೊಳ್ಳಲು ಸಾಧ್ಯವಿದೆ.
TOI-5205b ಬ್ರಹ್ಮಾಂಡದ ನಿಯಮಗಳಿಗೆ ಸವಾಲು ಹಾಕುತ್ತಿದ್ದು, ಇದೇ ಕಾರಣಕ್ಕೆ ಈ ಗ್ರಹವನ್ನು ವಿಜ್ಞಾನಿಗಳು "ಅಸ್ತಿತ್ವದಲ್ಲಿ ಇರಬಾರದ ಗ್ರಹ" ಎಂದು ಕರೆದಿದ್ದಾರೆ. ಈ ನಿಗೂಢ ಗ್ರಹದ ಗಾತ್ರ ಮಾತ್ರವಲ್ಲದೇ, ಅದರೊಳಗಿನ ವಾತಾವರಣ ಕೂಡ ವಿಜ್ಞಾನಿಗಳಿಗೆ ಮತ್ತೊಂದು ದೊಡ್ಡ ಯಕ್ಷಪ್ರಶ್ನೆಯನ್ನು ಮುಂದಿಟ್ಟಿದೆ. ಈ ದೈತ್ಯ ಗ್ರಹದ ವಾತಾವರಣದಲ್ಲಿ ಕಾರ್ಬನ್ ಮತ್ತು ಆಕ್ಸಿಜನ್‌ನಂತಹ ಭಾರವಾದ ಮೂಲವಸ್ತುಗಳ ಪ್ರಮಾಣ ಅಚ್ಚರಿಪಡುವ ರೀತಿಯಲ್ಲಿ ಬಹಳ ಕಡಿಮೆ ಇದೆ.
ಈ ಕುರಿತು ಮಾತನಾಡಿರುವ ಸಂಶೋಧನಾ ತಂಡದ ಪ್ರಮುಖ ಸದಸ್ಯೆ ಅಂಜಲಿ ಪಿಯೆಟ್ಟೆ, "ಒಂದು ಗ್ರಹವು ತಾನು ಸುತ್ತುವ ನಕ್ಷತ್ರಕ್ಕಿಂತಲೂ ಕಡಿಮೆ ಮೆಟಾಲಿಸಿಟಿ ಹೊಂದಿರುವುದು ಅತ್ಯಂತ ಅಪರೂಪ. ಇದುವರೆಗೆ ಅಧ್ಯಯನ ಮಾಡಲಾದ ಎಲ್ಲಾ ದೈತ್ಯ ಗ್ರಹಗಳಿಗಿಂತ ಈ ನಿಷೇಧಿತ
TOI-5205b ಗ್ರಹವನ್ನು ಈ ಪ್ರಮಾಣ ಸಂಪೂರ್ಣವಾಗಿ ಭಿನ್ನವಾಗಿ ನಿಲ್ಲುವಂತೆ ಮಾಡಿದೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾಂಡದ ಅಚ್ಚರಿಗಳನ್ನು ತಿಳಿದುಕೊಳ್ಳಲು ಮನುಷ್ಯನ ಬುದ್ಧಿಮತ್ತೆ ಇನ್ನು ಬೆಳೆಯಬೇಕಿದೆ ಎಂಬುದಕ್ಕೆ TOI-5205b ಒಂದು ಜ್ವಲಂತ ಉದಾಹರಣೆ.
ಒಟ್ಟಿನಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ ಎಂಬ ವಿಜ್ಞಾನಿಗಳ ಬಲವಾದ ನಂಬಿಕೆಯನ್ನು ಸುಳ್ಳಾಗಿಸಿ, TOI-5205b ಎಕ್ಸಪ್ಲ್ಯಾನೆಟ್ ಈ ಬ್ರಹ್ಮಾಂಡದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಬ್ರಹ್ಮಾಂಡದ ಒಡಲಲ್ಲಿ ಅದೆಷ್ಟು ನಿಗೂಢ ಗ್ರಹಗಳ ಸಮೂಹ ಇರುವುದು ನಮ್ಮ ಅರಿವಿಗೆ ಬರಲಿವೆಯೋ? ಅನಂತ ವಿಶ್ವದ ಕತ್ತಲಲ್ಲಿ ಇನ್ನೆಷ್ಟು ನಿಗೂಢ ರಹಸ್ಯಗಳು ಅಡಗಿ ಕುಳಿತಿವೆಯೋ ಎಂಬುದನ್ನು ನಾವು ನೀವೆಲ್ಲಾ ಕಾದುನೋಡಬೇಕಿದೆ.

