ಚೆನ್ನೈ : ಬೆಳ್ಳಿತೆರೆಯಿಂದ ರಾಜಕೀಯಕ್ಕೆ ಬಂದು ಮೊದಲ ಪ್ರಯತ್ನದಲ್ಲೇ ಗೆದ್ದು ಸದ್ದು ಮಾಡುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ಅವರ ಆಡಳಿತ ದಿನವೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದನ್ನು ಮಾಡುತ್ತಿದೆ. ಇತ್ತೀಚೆಗೆ, ಅವರ ಪಾರ್ಟಿಯ (TVK) ಅಭಿಮಾನಿಗಳು, ಭಾವೀ ಪ್ರಧಾನಿ ಎಂದು ಬಿಂಬಿಸಿ, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರು.
ಈಗ, ವಿಜಯ್ ಅವರ ಒಂದು ನಡೆ, ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದನ್ನು ಮಾಡುತ್ತಿದೆ. ತನ್ನನ್ನು ನೋಡಲು ಬಂದಿದ್ದ ವೃದ್ದೆಯ ಪ್ರೀತಿಗೆ ಕರಗಿದ ಸಿಎಂ ವಿಜಯ್, ತಾವು ಧರಿಸಿಕೊಂಡಿದ್ದ ದುಬಾರಿ ಡಿಯೋರ್ (Christian Dior) ಸನ್‌ಗ್ಲಾಸ್, ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ನಡೆಗೆ, ವೃದ್ದೆ ಮೂಕವಿಸ್ಮಿತರಾಗಿದ್ದಾರೆ.
ವೃದ್ದೆಗೆ ಕೂಲಿಂಗ್ಲಾಸ್ ತೊಡಿಸಿದ ತಮಿಳುನಾಡು ಸಿಎಂ ವಿಜಯ್ ಜೋಸೆಫ್
ಸಿಎಂ ವಿಜಯ್ ಅವರ ಜನಪ್ರಿಯತೆ ಮತ್ತು ಸಾರ್ವಜನಿಕ ಸಂಪರ್ಕ ಅವರ ರಾಜಕೀಯ ಜೀವನದಲ್ಲೂ ಪ್ರಮುಖವಾಗಿ ಹೈಲೆಟ್ ಆಗುತ್ತಿದೆ. ಅಧಿಕೃತ ಪ್ರವಾಸದ ವೇಳೆ, ತಮ್ಮ ವಾಹನವನ್ನು ನಿಲ್ಲಿಸಲು ಹೇಳಿ, ವೃದ್ದೆಯೊಬ್ಬರಿಗೆ, ತಾನು ಧರಿಸಿದ್ದ ಸನ್‌ಗ್ಲಾಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೂಲಿಂಗ್ಲಾಸ್ ಅನ್ನು ತಾವೇ ಖುದ್ದಾಗಿ, ವೃದ್ದೆಗೆ ಸಿಎಂ ವಿಜಯ್ ತೊಡಿಸಿದ್ದಾರೆ. ಇದರ ವಿಡಿಯೋ ಮತ್ತು ಇಮೇಜ್, ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.ಸೇಲಂ ಜಿಲ್ಲೆಯಲ್ಲಿರುವ ಮೆಟ್ಟೂರು, ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಪರಿಶೀಲಿಸಲು ವಿಜಯ್ ಹೋಗಿದ್ದರು. ಜೊತೆಗೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ಟೂರು ಸ್ಟ್ಯಾನ್ಲಿ ಜಲಾಶಯದ ಗೇಟ್'ಗಳನ್ನು ತೆರೆದರು. ಆ ಕಾರ್ಯಕ್ರಮದ ನಂತರ, ವಿಮಾನ ನಿಲ್ದಾಣಕ್ಕೆ ಹಿಂದಿರುಗುವ ವೇಳೆ, ರಸ್ತೆಬದಿಯ ತೋಟದ ಮನೆಯೊಂದರ ಬಳಿ ವಾಹನವನ್ನು ಸಡನ್ನಾಗಿ ನಿಲ್ಲಿಸಿದರು.
ಕಾರಿನಿಂದ ಕೆಳಗಿಳಿದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ದೆಯರ ತಂಡದ ಬಳಿಗೆ ಹೋಗಿ ಅವರ ಕಷ್ಟಸುಖವನ್ನು ವಿಚಾರಿಸಿದರು. ಆ ವೃದ್ದೆಯರಲ್ಲಿ ಚೆಲ್ಲಮ್ಮ ಎನ್ನುವವರೂ ಒಬ್ಬರು. ವಿಜಯ್ ಅವರ ಮತ್ತು ಬೆಂಗಾವಲು ಪಡೆಯ ಕಾರು ನಿಂತ ಕೂಡಲೇ ಜನರು ಸೇರಲಾರಂಭಿಸಿದರು. ಬಂದಿದ್ದು ಯಾರೆಂದು ಸರಿಯಾಗಿ ತಿಳಿಯಲು ಚೆಲ್ಲಮ್ಮ ಅವರ ಬಳಿಗೆ ತೆರಳಿದರು.
ವೃದ್ದೆ ಚೆಲ್ಲಮ್ಮಗೆ ತಾವೇ ಕೂಲಿಂಗ್ಲಾಸ್ ತೊಡಿಸಿದ ಸಿಎಂ ವಿಜಯ್
ವೃದ್ದೆ ಚೆಲ್ಲಮ್ಮ ತನ್ನನ್ನು ನೋಡಲು ಬಂದಿದ್ದು ಎನ್ನುವುದು ತಿಳಿಯುತ್ತಿದ್ದಂತೆಯೇ, ಸಿಎಂ ವಿಜಯ್ ಅವರ ಕೈಯನ್ನು ಹಿಡಿದು, ಇಬ್ಬರೂ ತೋಟದ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಇದು, ತೆರೆಯ ಮೇಲೆ ನೋಡುತ್ತಿದ್ದ ವಿಜಯ್ ಎನ್ನುವುದನ್ನು ಅರಿತ ವೃದ್ದೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ವೃದ್ದೆಯ ಅಭಿಮಾನಕ್ಕೆ ಮನಸೋತ ವಿಜಯ್, ತಾವು ಧರಿಸಿದ್ದ ಕೂಲಿಂಗ್ಲಾಸ್ ಅನ್ನು ಅವರಿಗೆ ತೊಡಿಸಿದರು. ಚೆಲ್ಲಮ್ಮ ಪ್ರಕಾರ, ಸಿಎಂ ವಿಜಯ್ ಜೊತೆಗಿನ ಈ ಕ್ಷಣ, ಕೋಟಿ ರೂಪಾಯಿ ಗೆದ್ದಷ್ಟು ಸಂತೋಷವನ್ನು ತಂದಿದೆ ಎಂದು ಖುಷಿ ಪಟ್ಟರು." ವಿಜಯ್ ಅವರ ಸಿನಿಮಾದಲ್ಲಿ ಕಾಣಿಸುವಂತೆಯೇ ಇದ್ದರು, ಮೊದಲು ಹೋಗಿ ಊಟ ಮಾಡಲು ನನಗೆ ಸೂಚಿಸಿದರು. ಯಾರಾದರೂ ಅವರಿಗೆ ತೊಂದರೆ ಕೊಡಲು ಬಂದರೆ, ನಾನು ಅವರ ಪರವಾಗಿ ನಿಲ್ಲುತ್ತೇನೆ. ಸಿನಿಮಾದಲ್ಲಿ ಯಾರಾದರೂ ಅವರಿಗೆ ಹೊಡೆದರೆ ನನಗೆ ಕೋಪ ಬರುತ್ತಿತ್ತು" ಎಂದು ಚೆಲ್ಲಮ್ಮ, ಅಭಿಮಾನದಿಂದ ಹೇಳಿದ್ದಾರೆ.

