Dailyhunt Logo
  • Light mode
    Follow system
    Dark mode
    • Play Story
    • App Story
ಯಶ್‌ಗೆ ಕನಸು ಕಟ್ಟುವುದು ಗೊತ್ತಿದೆ; ಕನ್ನಡದ ನಟನ ಸಿನಿಮಾ ಬಗ್ಗೆ ʻಟಾಕ್ಸಿಕ್‌ʼ ರಿವ್ಯೂ ಮಧ್ಯೆ ಕರವೇ ಅಧ್ಯಕ್ಷ ನಾರಾಯಣಗೌಡ್ರು ಪೋಸ್ಟ್‌ ವೈರಲ್‌!

ಯಶ್‌ಗೆ ಕನಸು ಕಟ್ಟುವುದು ಗೊತ್ತಿದೆ; ಕನ್ನಡದ ನಟನ ಸಿನಿಮಾ ಬಗ್ಗೆ ʻಟಾಕ್ಸಿಕ್‌ʼ ರಿವ್ಯೂ ಮಧ್ಯೆ ಕರವೇ ಅಧ್ಯಕ್ಷ ನಾರಾಯಣಗೌಡ್ರು ಪೋಸ್ಟ್‌ ವೈರಲ್‌!

Vijay Karnataka 1 week ago

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ರಿಲೀಸ್‌ ಆಗಿ ಎರಡು ದಿನಗಳು ಕಳೆದಿವೆ. ಚಿತ್ರದ ಕತೆ ಕುರಿತು ಅಭಿಮಾನಿಗಳು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಹುತೇಕವಾಗಿ ಟಾಕ್ಸಿಕ್‌ ಸಿನಿಮಾ ರಿವ್ಯೂ ಮಿಶ್ರ ಅಭಿಪ್ರಾಯಗಳನ್ನು ಒಳಗೊಂಡಿದೆ.

ಕೆಲವರು ಸಿನಿಮಾದ ಮೇಕಿಂಗ್‌ ಮೆಚ್ಚಿಕೊಂಡಿದ್ದರೆ, ಕೆಲವರು ಚಿತ್ರ ಕತೆ ಆಕರ್ಷಕವಾಗಿಲ್ಲ ಎಂದು ಹೇಳುತ್ತಿದ್ದಾರೆ.

ಈ ಮಧ್ಯೆ ಟಾಕ್ಸಿಕ್‌ ಸಿನಿಮಾ ಬಿಡುಗಡೆಯಾದ ದಿನ ಅಂದರೆ ಆ.26 (ಬುಧವಾರ) ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ್ರು, ಸಿನಿಮಾಗೆ ಶುಭಹಾರೈಸಿ ಮಾಡಿದ ಎಕ್ಸ್‌ ಪೋಸ್ಟ್‌ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಚಿತ್ರ ಬಿಡುಗಡೆಗೂ ಮುನ್ನ ತಮ್ಮನ್ನು ಭೇಟಿ ಮಾಡಿದ್ದ ನಟ ಯಶ್‌ ಅವರ ಬಗ್ಗೆ, ನಾರಾಯಣಗೌಡ್ರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಕರವೇ ರಾಜ್ಯಾಧ್ಯಕ್ಷ, ಟಾಕ್ಸಿಕ್‌ ಸಿನಿಮಾ ಯಶಸ್ವಿಯಾಗಲಿ ಎಂದು ಶುಭಹಾರೈಸಿದ್ದಾರೆ. ಅಲ್ಲದೇ ಯಶ್‌ ಅವರಲ್ಲಿರುವ ಕನ್ನಡತವನ್ನು ನಾರಾಯಣಗೌಡ್ರು ಹಾಡಿಹೊಗಳಿದ್ದಾರೆ.

ಕರವೇ ಅಧ್ಯಕ್ಷರು ಹೇಳಿದ್ದೇನು?

"ಯಶ್ ನಿರ್ಮಾಣ, ನಟನೆಯ ಟಾಕ್ಸಿಕ್‌ ಚಿತ್ರ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಕುರಿತು ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಚಿತ್ರ ಹೊಸ ದಾಖಲೆಗಳನ್ನು ಸೃಷ್ಟಿಸಲಿ ಎಂದು ನಾನು ಹಾರೈಸುತ್ತೇನೆ. ಯಶ್‌ ನಾವೆಲ್ಲ ನೋಡನೋಡುತ್ತಿದ್ದಂತೆ ಎತ್ತರಕ್ಕೆ ಬೆಳೆದ ನಟ. ತಾವು ಬೆಳೆಯುವ ಜೊತೆಗೆ ಕನ್ನಡ ಚಿತ್ರರಂಗವನ್ನೂ ಅವರು ಬೆಳೆಸಿದ್ದಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಹಿನ್ನೆಲೆಯ ಮೈಸೂರಿನ ಪಡುವಾರಹಳ್ಳಿಯ ಹುಡುಗ ಇಷ್ಟು ಎತ್ತರಕ್ಕೆ ಏರಬಹುದು ಎಂದು ಬಹುಶಃ ಯಾರೂ ಊಹಿಸಿರಲಿಲ್ಲವೇನೋ? ಬಹುಶಃ ಯಶ್‌ ಅವರೊಬ್ಬರ ಹೊರತಾಗಿ" ಎಂದು ನಾರಾಯಣಗೌಡ್ರು ತಮ್ಮ ಅಧಿಕೃತ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮುಂದುವರೆದು, "ಯಶ್‌ ವಿಷಯದಲ್ಲಿ ನನಗೆ ತುಂಬ ಇಷ್ಟವಾಗುವುದು ಅವರ ಕನಸುಗಾರಿಕೆ ಮತ್ತು ಸಾಹಸ ಮನೋಭಾವ. ನಮ್ಮ ಸುತ್ತಮುತ್ತ ಆಗಾಗ ನಾವು ನೋಡುವ ಜನರನ್ನು ಗಮನಿಸಿ. ನಮ್ಮಿಂದ ಎಲ್ಲಾಗುತ್ತೆ? ಇದೆಲ್ಲ ನಾವು ಮಾಡಕ್ಕೆ ಆಗುತ್ತಾ? ಅದೆಲ್ಲಾ ಸಾಧ್ಯನಾ? ಎಂಬಂಥ ನೈರಾಶ್ಯದ ಮಾತುಗಳನ್ನೇ ನಾವು ಕೇಳುತ್ತೇವೆ. ಯಶ್‌ ಈ ರೀತಿಯ ನಿರಾಶಾವಾದಿಯಲ್ಲ, ಕನಸು ಕಟ್ಟುವುದು ಅವರಿಗೆ ಗೊತ್ತಿದೆ, ಅದನ್ನು ನನಸು ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳುವ ಮನೋಸ್ಥೈರ್ಯ, ಸಂಕಲ್ಪವೂ ಅವರಿಗೆ ಇದೆ" ಎಂದು ಕರವೇ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಯಶ್‌ ಅಭಿನಯದ ಮೊಗ್ಗಿನ ಮನಸು ಸಿನಿಮಾ ಬಿಡುಗಡೆ ಸಂದರ್ಭ ಎನಿಸುತ್ತದೆ. ಅವರೊಮ್ಮೆ ನಮ್ಮ ಗಾಂಧಿನಗರದ ಕಚೇರಿಗೆ ಬಂದಿದ್ದರು. ಅವರ ಸಿನಿಮಾಗೆ ಪ್ರಮುಖ ಥಿಯೇಟರ್‌ ಸಿಗದೇ ಇರುವ ಬಗ್ಗೆ ಹೇಳಿದರು. ಥಿಯೇಟರ್‌ ಮಾಲೀಕರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಡಲು ವಿನಂತಿಸಿದ್ದರು. ನಾನು ಥಿಯೇಟರ್‌ ಮಾಲೀಕರ ಜೊತೆ ಮತಾಡಿ ಸಮಸ್ಯೆ ಬಗೆಹರಿಸಿದ್ದೆ. ಈಗ ಕಾಲ ನೋಡಿ ಹೇಗೆ ಬದಲಾಗಿದೆ. ಒಂದು ಥಿಯೇಟರ್‌ ಗಾಗಿ ಕಾತರಿಸುತ್ತಿದ್ದ ಯಶ್‌ ಅವರ ಟಾಕ್ಸಿಕ್ ಸಿನಿಮಾ ಒಟ್ಟು 12,000 ಸ್ಕ್ರೀನ್‌ ಗಳಲ್ಲಿ ಬಿಡುಗಡೆಯಾಗಿದೆ! ಅದೂ ಕೂಡ ಜಗತ್ತಿನಾದ್ಯಂತ. ಇದು ಕನ್ನಡಿಗರು ಹೆಮ್ಮೆಪಡಬೇಕಾದ ವಿಷಯ" ಎಂದು ನಾರಾಯಣಗೌಡ್ರು ಹೇಳಿದ್ದಾರೆ.

ಯಶ್‌ ಕನ್ನಡಾಭಿಮಾನಕ್ಕೆ ಸಲಾಂ:

"ಯಶ್‌ ನಮ್ಮ ಹಲವಾರು ಕಾರ್ಯಕ್ರಮಗಳಿಗೆ ಬಂದಿದ್ದಾರೆ. ಅಪ್ಪಟ ಕನ್ನಡಾಭಿಮಾನಿ. ಅವರು ಹೊರರಾಜ್ಯಗಳಿಗೆ ಹೋದಾಗ, ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ತಮ್ಮ ಕನ್ನಡತನವನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ಅವರ ಕೆಜಿಎಫ್‌ ಸಿನಿಮಾ ಬಿಡುಗಡೆಗೂ ಮುನ್ನ ಅವರು ಅಷ್ಟು ದೊಡ್ಡ ಸಿನಿಮಾ ಮಾಡಿದ್ದಾರೆ ಎಂಬುದನ್ನು ಯಾರೂ ನಂಬಲು ಸಾಧ್ಯವಿರಲಿಲ್ಲ. ಆ ಸಿನಿಮಾ ಬಿಡುಗಡೆಗೂ ಒಂದು ಸಣ್ಣ ಅಡ್ಡಿ ಉಂಟಾಗಿತ್ತು. ನಿರ್ಮಾಪಕರೊಬ್ಬರು ತಡೆಯಾಜ್ಞೆ ತಂದಿದ್ದರು. ಕನ್ನಡದ ಸಿನಿಮಾ ಒಂದು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುವಾಗ ಅಡ್ಡಿ ಮಾಡುವುದು ಸರಿಯಲ್ಲ ಎಂದು ನಾನು ಆ ನಿರ್ಮಾಪಕರೊಂದಿಗೆ ಮಾತನಾಡಿ, ಅರ್ಜಿ ಹಿಂದಕ್ಕೆ ಪಡೆಯುವಂತೆ ಮಾಡಿದ್ದೆ. ಕೆಜಿಎಫ್‌ ಬಿಡುಗಡೆಯಾಯಿತು. ಯಶ್‌ ಎಂಬ ಮಹಾಸಾಹಸಿ ಇಡೀ ದೇಶಕ್ಕೆ ಪರಿಚಯವಾದರು. ಅದಾದ ನಂತರ ಕೆಜಿಎಫ್-2, ಟಾಕ್ಸಿಕ್‌ ಮುಂದೆ ಬರಲಿರುವ ರಾಮಾಯಣ ಎಲ್ಲವೂ ಯಶ್‌ ಅವರ ಮಹತ್ವಾಕಾಂಕ್ಷೆಯ ಯೋಜನೆಗಳೇ" ಎಂದು ಕರವೇ ಅಧ್ಯಕ್ಷರು ಹೇಳಿದ್ದಾರೆ.

"ಕನಸು ಕಾಣುವುದು ಸುಲಭ. ಆದರೆ ಆ ಕನಸುಗಳ ಹಿಂದೆ ಬಿದ್ದು ತಾನು ಅಂದುಕೊಂಡಿದ್ದನ್ನು ಮಾಡುವುದು ಕಷ್ಟ. ಅದು ಎಲ್ಲರಿಗೂ ಸಾಧ್ಯವಿಲ್ಲ. ನಿರಾಶಾವಾದ, ಅಲ್ಪತೃಪ್ತಿ ಇದ್ದರೆ ಇದೆಲ್ಲ ಸಾಧ್ಯವಾಗುವುದಿಲ್ಲ. ಯಶ್‌ ಇದೆಲ್ಲವನ್ನು ಮೆಟ್ಟಿ ನಿಂತು ಬೆಳೆದಿದ್ದಾರೆ, ಇನ್ನೂ ಬೆಳೆಯುತ್ತಿದ್ದಾರೆ. ಅವರಿಗೆ ಮತ್ತೊಮ್ಮೆ ಶುಭಾಶಯಗಳು" ಎಂದು ನಾರಾಯಣಗೌಡ್ರು ತಮ್ಮ ಎಕ್ಸ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಟಾಕ್ಸಿಕ್‌ ಸಿನಿಮಾ ಬಗ್ಗೆ ವಿದೇಶಗಳಲ್ಲಿರುವ ಕನ್ನಡಿಗರ ಪ್ರತಿಕ್ರಿಯೆಗಳು ಕೂಡ ಕುತೂಹಲಕಾರಿಯಾಗಿದ್ದು, ಜರ್ಮನಿ, ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Vijay Karnataka