Thursday, 04 Mar, 9.16 am ವಿಜಯವಾಣಿ

ಮುಖಪುಟ
20 ವರ್ಷಗಳ ಹಿಂದೆ ಪಾಕ್‌ ಗಡಿಹೊಕ್ಕ ಮೂಕ ಬಾಲಕಿಯ ಕಥೆಯಿದು. ಕೊನೆಗೂ ಸಿಕ್ಕಿತು ಅಮ್ಮನ ಮನೆ. ಕಣ್ಣೀರಧಾರೆ.

ನಾಂದೇಡ್ (ಮಹಾರಾಷ್ಟ್ರ): ಇದು ಸುಮಾರು 20 ವರ್ಷಗಳ ಹಿಂದೆ ನಡೆದ ಘಟನೆ. ಏಳೆಂಟು ವರ್ಷದ ಮಹಾರಾಷ್ಟ್ರದ ಬಾಲೆ ಮಾತು ಬಾರದ ರಾಧಾ ಅದ್ಹೇಗೋ ತಪ್ಪಿಸಿಕೊಂಡು ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿಬಿಟ್ಟಳು. ದಿಕ್ಕೆಟ್ಟು ಹೋದ ಈ ಬಾಲಕಿಗೆ ಏನು ಮಾಡಬೇಕು ಎನ್ನುವುದೇ ತಿಳಿಯಲಿಲ್ಲ.

ಎರಡು ದಶಕ ಭಾರತ ಹಾಗೂ ತವರಿಗಾಗಿ ಕಣ್ಣೀರು ಸುರಿಸುತ್ತಿದ್ದ ಈ ಬಾಲಕಿ, ಇದೀಗ 28 ವರ್ಷದ ಯುವತಿ. ಅಂತೂ ಇಂತೂ ಭಾರತಕ್ಕೆ ಬಂದು, ಅಮ್ಮನ ಮನೆಗಾಗಿ ತಡಕಾಡುತ್ತಿದ್ದ ಈಕೆಗೆ ಕೊನೆಗೂ ಅಮ್ಮನ ಮನೆ ಸಿಕ್ಕಿದೆ. ಮಗಳನ್ನು ಅಮ್ಮ ಗುರುತು ಹಿಡಿಯುವುದು ಕಷ್ಟವಾದರೂ, ಬಾಲಕಿ ಮಾತ್ರ ಅಮ್ಮನ ಗುರುತು ಹಿಡಿದಿದ್ದಾಳೆ. ತನ್ನ ಕರುಳ ಕುಡಿಗಾಗಿ ಎರಡು ದಶಕ ಕಣ್ಣೀರು ಸುರಿಸಿದ ಈ ತಾಯಿ ಮಗಳನ್ನು ಅಪ್ಪಿ ಮುದ್ದಾಡಿದ್ದಾಳೆ.

ಡಿಎನ್‌ಎ ಪರೀಕ್ಷೆಯ ನಂತರ ಇದು ಆಕೆಯ ತವರು ಮನೆಯೇ ಎನ್ನುವುದು ಸಾಬೀತಾದ ಕಾರಣ, ರಾಧಾಳನ್ನು ಮನೆಗೆ ಕಳುಹಿಸಲಾಗಿದೆ. ಈಕೆಯ ಸನ್ನೆಯ ಮಾತು ಅಮ್ಮ ಸೇರಿದಂತೆ ಅಲ್ಲಿರುವವರಿಗೆ ಯಾರಿಗೂ ಅರ್ಥವಾಗದೇ ಹೋದರೂ ರಾಧಾಳ ತವರಲ್ಲಿ ಖುಷಿಯ ಕಣ್ಣೀರಧಾರೆಯಾಗಿದೆ.

ಆಗಿದ್ದೇನು?: ಅಚಾನಕ್‌ ಆಗಿ ಪಾಕಿಸ್ತಾನದ ಗಡಿ ಹೊಕ್ಕಿಬಿಟ್ಟಿದ್ದ ಬಾಲಕಿ ತಾನಿಲ್ಲೆದ್ದೇನೆ, ಇದ್ಯಾವ ಊರು ಏನೂ ಅರಿಯದೇ ಕಂಗಾಲಾಗಿ ಹೋದಳು. ಟ್ಟಿದಾನಿಗಿಂದಲೂ ರೈಲು ನಿಲ್ದಾಣದ ಆಸುಪಾಸಿನಲ್ಲಿಯೇ ವಾಸವಾಗಿದ್ದ ರಾಧಾಳಿಗೆ ಅಲ್ಲಿ ರೈಲೊಂದು ಕಂಡಿತು. ಕೂಡಲೇ ಅವಳು ಆ ರೈಲನ್ನು ಹತ್ತಿದಳು. ಅದು ಪಾಕಿಸ್ತಾನದ ಲಾಹೋರ್‌ನ ಸಂಜೋತಾ ಎಕ್ಸ್‌ಪ್ರೆಸ್‌ ರೈಲಾಗಿತ್ತು.


ಎಲ್ಲರೂ ಇಳಿದರೂ ಈ ಬಾಲಕಿಗೆ ಮಾತ್ರ ಏನು ಮಾಡಬೇಕು ಎಂದೇ ತಿಳಿಯಲಿಲ್ಲ. ಅಕ್ಷರಶಃ ಬೆದರಿ ಹೋಗಿದ್ದಳು. ಕಣ್ಣೀರು ಸುರಿಸುತ್ತಾ ಕುಳಿತುಬಿಟ್ಟಳು. ಅದೇ ವೇಳೆ ಈಕೆ ಪಾಕಿಸ್ತಾನದ ಪೊಲೀಸರ ಕಣ್ಣಿಗೆ ಬಿದ್ದಿದ್ದಾಳೆ. ಅವರು ಹೆಸರು, ಊರು, ವಿಳಾಸ ಎಲ್ಲಾ ಕೇಳಿದ್ದಾರೆ. ಅವರು ಏನು ಹೇಳುತ್ತಿದ್ದಾರೆ ಎನ್ನುವುದು ಈ ಬಾಲಕಿಗೆ ತಿಳಿಯಲೇ ಇಲ್ಲ, ಏಕೆಂದರೆ ಅವಳಿಗೆ ಮಾತನಾಡಲೂ ಬರುತ್ತಿರಲಿಲ್ಲ, ಕಿವಿಯೂ ಕೇಳಿಸುತ್ತಿರಲಿಲ್ಲ.

ಬಾಲಕಿ ಕಿವುಡಿ ಹಾಗೂ ಮೂಕಿ ಎನ್ನುವುದು ಪೊಲೀಸರಿಗೆ ತಿಳಿಯಿತು. ಭಾರತದವಳು ಇರಬೇಕು ಎಂದು ಆಕೆಯ ವೇಷಭೂಷಣ ನೋಡಿ ಪೊಲೀಸರಿಗೆ ಅನ್ನಿಸಿತು. ಅವರು ಬಾಲಕಿಯನ್ನು ಲಾಹೋರ್​ನ ಇದಾಹಿ ಪ್ರತಿಷ್ಠಾನಕ್ಕೆ ಒಪ್ಪಿಸಿದರು. ಮಕ್ಕಳನ್ನು ನೋಡಿಕೊಳ್ಳುವ ಸಂಸ್ಥೆ ಅದು. ಅಲ್ಲಿ ಬಾಲಕಿಯ ಹೆಸರು ಗೊತ್ತಿಲ್ಲದ ಕಾರಣ, ರಾಧಾ ಗೀತಾ ಆದಳು. ಅಲ್ಲಿ ಅವಳನ್ನು ದತ್ತು ಪಡೆದು ಸಾಕಲಾಯಿತು.

ಹತ್ತಾರು ವರ್ಷ ಗೀತಾ ಪಾಕಿಸ್ತಾನದಲ್ಲಿಯೇ ಕಳೆದಳು. ಅದು 2015ರ ಸಮಯ. ಆಗ ವಿದೇಶಾಂಗ ವ್ಯವಹಾರಗಳ ಸಚಿವಾಗಿ ಸುಷ್ಮಾ ಸ್ವರಾಜ್​ ಅಧಿಕಾರ ಸ್ವೀಕರಿಸಿದ್ದರು. ಭಾರತದ ಓರ್ವ ಬಾಲಕಿ ಪಾಕಿಸ್ತಾನದಲ್ಲಿ ಸಿಲುಕಿರುವುದು ಅವರಿಗೆ ತಿಳಿಯಿತು. ಕೂಡಲೇ ಅವರು ಪಾಕಿಸ್ತಾನವನ್ನು ಸಂಪರ್ಕಿಸಿ ಮಧ್ಯಪ್ರದೇಶದ ಇಂದೋರ್​ಗೆ ಕರೆತಂದರು. ಇಂದೋರ್‌ನಲ್ಲಿರುವ ಶ್ರವಣ ದೋಷ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಆನಂದ್ ಸೇವಾ ಸಮಾಜ ಎಂಬ ಸ್ವಯಂ ಸೇವಾಸಂಸ್ಥೆಯಲ್ಲಿ ಆಶ್ರಯ ಒದಗಿಸಿದರು.

ಸುಷ್ಮಾ ಸ್ವರಾಜ್ ಅವರು ಈಕೆಯನ್ನು 'ಹಿಂದೂಸ್ತಾನ್ ಕಿ ಬೇಟಿ' (ಭಾರತದ ಮಗಳು) ಎಂದು ಕರೆದಿದ್ದರು. ಜತೆಗೆ ಆಕೆಯ ಪಾಲಕರನ್ನು ಪೋಷಕರನ್ನು ಹುಡುಕಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಸಾಕಷ್ಟು ಪ್ರಯತ್ನ ಕೂಡ ನಡೆಸಿದ್ದರು. ಆದರೆ ಎಲ್ಲವೂ ವಿಫಲವಾಗಿತ್ತು.

ಅಚ್ಚರಿಯ ಎಂದರೆ ಪಾಲಕರಿಗಾಗಿ ಸುಷ್ಮಾ ಸ್ವರಾಜ್​ ಅವರು ಪ್ರಯತ್ನ ಮಾಡುತ್ತಿರುವಾಗಲೇ ಅನೇಕ ಮಂದಿ ತಾವೇ ಈಕೆಯ ಪಾಲಕರು ಎಂದು ಹೇಳಿಕೊಂಡು ಬಂದಿದ್ದರು. ಆದರೆ ಗೀತಾ ಯಾರನ್ನೂ ಗುರುತ ಹಿಡಿದಿರಲಿಲ್ಲ. ಅನುಮಾನದ ಹಿನ್ನೆಲೆಯಲ್ಲಿ ಗೀತಾಳನ್ನು ಯಾರೊಟ್ಟಿಗೂ ಕಳಿಸಿರಲಿಲ್ಲ.
ಈ ನಡುವೆಯೇ ಸುಷ್ಮಾ 2019ರ ಆಗಸ್ಟ್​ 6ರಂದು ಕೊನೆಯುಸಿರೆಳೆದರು. ಮಧ್ಯಪ್ರದೇಶ ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆ ಈಕೆಯ ಮನೆ ಮತ್ತು ಕುಟುಂಬದವರ ಪತ್ತೆಗಾಗಿ ಪ್ರಯತ್ನಿಸುತ್ತಲೇ ಇತ್ತು.

ಇದೀಗ ಗೀತಾಳ ಕುಟುಂಬದವರನ್ನು ಹುಡುಕೊಂಡು ಮಹಾರಾಷ್ಟ್ರದ ನಾಂದೇಡ್‌ಗೆ ಬರಲಾಗಿದೆ. ಸ್ವಯಂ ಸೇವಾ ಸಂಸ್ಥೆಯ ಸಂಜ್ಞಾ ಭಾಷಾ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರ ನೆರವಿನೊಂದಿಗೆ ನಾಂದೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ, 'ನನ್ನ ಪಾಲಕರನ್ನು ಹುಡುಕುವ ಪ್ರಯತ್ನದಲ್ಲಿದ್ದೇನೆ. ನನ್ನ ಮನೆ ಇಲ್ಲೇ ರೈಲ್ವೆ ನಿಲ್ದಾಣದ ಬಳಿ ಇದ್ದ ನೆನಪು. ಸಮೀಪದಲ್ಲಿ ನದಿ ಇತ್ತು. ದೇವಸ್ಥಾನವಿತ್ತು' ಎಂದು ಮಾಹಿತಿ ಹಂಚಿಕೊಂಡಿದ್ದಳು.

ತನ್ನ ಕುಟುಂಬ ಮಹಾರಾಷ್ಟ್ರದಲ್ಲಿರುವ ಬಗ್ಗೆ ಆಕೆಗೆ ತುಂಬ ನಂಬಿಕೆ ಇದೆ. , ಹಲವು ಚಿತ್ರಗಳನ್ನು ತೋರಿಸಿ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಹೋಲಿಕೆ ಎಂಬಂತೆ ನಾಂದೇಡ್‍ನಲ್ಲಿ ಕೆಲವು ಸಂಘಟನೆಗಳ ಸಹಕಾರದೊಂದಿಗೆ ಗೀತಾ ಕುಟುಂಬಸ್ಥರ ಪತ್ತೆ ಕಾರ್ಯ ನಡೆಯುತ್ತಲೇ ಇತ್ತು. ಕೊನೆಗೂ ಗೀತಾಳ ಅಮ್ಮನ ಮನೆ ಸಿಕ್ಕಿದೆ.

ಇಷ್ಟು ದಿನ ಗೀತಾ ನೋಡಿಕೊಳ್ಳುತ್ತಿದ್ದ ಸಂಸ್ಥೆ ಆಕೆಗೆ ಶಿಕ್ಷಣ ನೀಡುತ್ತಿದೆ. 10ನೇ ತರಗತಿ ಪಾಸ್ ಆಗುವುದು ಆಕೆ ಗುರಿ. ಹಿಂದಿ, ಇಂಗ್ಲೀಷ್ ಮತ್ತು ಮರಾಠಿಯನ್ನು ಗೀತಾ ಕಲಿಯುತ್ತಿದ್ದಾಳೆ. 10ನೇ ತರಗತಿ ಪಾಸ್ ಆದಮೇಲೆ ಕೆಲಸ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸಂಸ್ಥೆ ಹೇಳಿದೆ.

ಬಾಗಲಕೋಟೆ ಬಳಿ ಭೀಕರ ಅಪಘಾತ: ಮದುವೆಗೆ ಹೋದವರು ಬೆಂಕಿಯಲ್ಲಿ ದಹನವಾದರು

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top