ಬಾಗಲಕೋಟೆ: ಬಾಗಲಕೋಟೆ ಉಪ ಕದನದ ಪ್ರಚಾರ ಅಬ್ಬರಕ್ಕೆ ಮತ್ತಷ್ಟು ವೇಗ ನೀಡಲು ಎರಡನೇ ಹಂತದ ಪ್ರಚಾರಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ 2028ರ ವಿಧಾನಸಭೆ ಚುನಾವಣೆಗೂ ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಈಗಲೇ ಘೋಷಣೆ ಮಾಡಿದ್ದಾರೆ.
ಬಾಗಲಕೋಟೆ ಕ್ಷೇತ್ರದ ಬೇವಿನಮಟ್ಟಿ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಪ್ರಚಾರ ಸಭೆ ನಡೆಸಿದ ಮುಖ್ಯಮಂತ್ರಿಗಳು, ಈ ಎರಡು ವರ್ಷ ಉಮೇಶಗೆ ವಿಧಾನಸೌಧಕ್ಕೆ ಕಳುಹಿಸಿಕೊಡಿ. ಮುಂದಿನ 2028ಕ್ಕೂ ಅವರಿಗೆ ಟಿಕೆಟ್ ಎಂದು ಘೋಷಿಸಿದರು.ಈಗ ನಡೆಯುತ್ತಿರುವ ಎರಡೂ ಕ್ಷೇತ್ರಗಳ ಉಪ ಚುನಾವಣೆ ಅವಧಿ ಎರಡು ವರ್ಷಕ್ಕೆ ಮಾತ್ರ ನಡೆಯುತ್ತಿದೆ. ದಾವಣಗೆರೆಯಲ್ಲಿ ಶಾಮನೂರ ಅವರ ಮೊಮ್ಮಗ ಸಮರ್ಥಗೆ ಟಿಕೆಟ್ ಕೊಟ್ಟಿದ್ದೇವೆ. ಬಾಗಲಕೋಟೆಯಲ್ಲಿ ದಿ. ಮೇಟಿ ಅವರ ಪುತ್ರ ಉಮೇಶಗೆ ಟಿಕೆಟ್ ಕೊಟ್ಟಿದ್ದೇವೆ. ಎರಡು ಕಡೆಗೆ ನಾವು ಗೆದ್ದೇ ಗೆಲ್ಲುತ್ತೇವೆ. ಉಮೇಶ ಮೇಟಿಗೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ ಕೊಡಿ. ಇದು ಎರಡು ವರ್ಷಕ್ಕೆ ಮಾತ್ರ. 2028ಕ್ಕೂ ನಾವೇ ಗೆಲ್ಲುತ್ತೇವೆ. 2028ಕ್ಕೆ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಉಮೇಶ ಮೇಟಿಗೆ ಕೊಡುತ್ತೇವೆ ಎಂದು ಎರಡು ವರ್ಷ ಮೊದಲೇ ಟಿಕೆಟ್ ಘೋಷಿಸಿದರು.
ಇದರಿಂದ ಎಚ್.ವೈ. ಮೇಟಿ ಅವರ ನಿಧನದಿಂದ ಅನುಕಂಪದ ಮೇಲೆ ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತಾರೆ ಎನ್ನುವ ಕಾರಣಕ್ಕೆ ಟಿಕೆಟ್ ಪೈಪೋಟಿಯಿಂದ ಹಿಂದೆ ಸರಿದಿದ್ದ ಎಂಟತ್ತು ಜನ ಟಿಕೆಟ್ ಆಕಾಂಕ್ಷಿಗಳಿಗೆ ಮುಂದಿನ 2028ರ ಸಾರ್ವತ್ರಿಕ ಚುನಾವಣೆಗೂ ಉಮೇಶ ಮೇಟಿ ಅವರಿಗೆ ಟಿಕೆಟ್ ಘೋಷಣೆ ಮಾಡಿರುವುದು ಅವರೆಲ್ಲರ ಆಕಾಂಕ್ಷೆಗೆ ತಣ್ಣೀರು ಎರಚಿದಂತಾಗಿದೆ.
ಇನ್ನಷ್ಟು ಓದಿ

