Wednesday, 02 Dec, 11.56 pm ವಿಜಯವಾಣಿ

ಮುಖಪುಟ
2ನೇ ಅಲೆ ತಡೆಗಾಗಿ ಮತ್ತೆ ರಾತ್ರಿ ಕರ್ಫ್ಯೂ?; ವರ್ಷಾಚರಣೆ ಸಂಭ್ರಮಕ್ಕೆ ಕಡಿವಾಣ ಅಗತ್ಯ

ಬೆಂಗಳೂರು: ವಿಶ್ವದ ಮೊದಲ ಕರೊನಾ ಲಸಿಕೆ ಜನಬಳಕೆಗೆ ಮುಕ್ತವಾಗುತ್ತಿರುವ ಸಂದರ್ಭದಲ್ಲೇ, ಕರೊನಾ 2ನೇ ಅಲೆಯ ಆತಂಕದ ಕಾರಣದಿಂದಾಗಿ ರಾಜ್ಯದಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಸಾಧ್ಯತೆ ಗೋಚರಿಸಿದೆ. ಇದರ ಜತೆ, ಹೊಸ ವರ್ಷಾಚರಣೆ, ಪಾರ್ಟಿಗಳಿಗೆ ಬ್ರೇಕ್​ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ಕರೊನಾ ಕುರಿತ ತಾಂತ್ರಿಕ ಸಲಹಾ ಸಮಿತಿ(ಟಿಎಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಜನವರಿಯಲ್ಲಿ ರಾಜ್ಯಕ್ಕೂ ಕರೊನಾ 2ನೇ ಅಲೆ ಹಬ್ಬುವ ಆತಂಕವಿರುವುದರಿಂದ ಅಕ್ಟೋಬರ್​ನಲ್ಲಿ ಸೋಂಕು ತೀವ್ರವಾಗಿದ್ದಾಗ ಇದ್ದ ಸ್ಥಿತಿಯಲ್ಲೇ ಆರೋಗ್ಯ ಸೇವೆಗಳನ್ನು ಅಣಿಗೊಳಿಸಬೇಕೆಂದು ಟಿಎಸಿ ಸೂಚಿಸಿದೆ. ರಾಜ್ಯದಲ್ಲಿ ಸದ್ಯ ಕಡಿಮೆ ಸಂಖ್ಯೆಯಲ್ಲಿ ಹೊಸ ಪ್ರಕರಣ ಹಾಗೂ ಸಾವು ಸಂಭವಿಸುತ್ತಿವೆ. ಆದರೆ ಇದೇ ರೀತಿ ಕನಿಷ್ಠ ಹಂತಕ್ಕೆ ಬಂದಿದ್ದ ಅಮೆರಿಕ, ಆಸ್ಟ್ರೇಲಿಯಾ, ಯುರೋಪ್ ದೇಶಗಳಲ್ಲಿ ಸೋಂಕು ಏರಿಕೆಯತ್ತ ಸಾಗಿದೆ. ಇತ್ತ ದೆಹಲಿ, ಗುಜರಾತ್, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಎಲ್ಲ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಟಿಎಸಿ ಶಿಫಾರಸು ಮಾಡಿದೆ. ಈ ಶಿಫಾರಸಿನ ಅನ್ವಯವೇ ಆರೋಗ್ಯ ಇಲಾಖೆ ವರದಿಯೊಂದನ್ನು ಸಿದ್ಧಪಡಿಸಿಕೊಂಡಿದೆ.

2-3 ದಿನದಲ್ಲಿ ಸಿದ್ಧವಾಗಬೇಕು: ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಲಭ್ಯತೆಯನ್ನು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಪಷ್ಟವಾಗಿ ರೂಪಿಸಲು ತಯಾರಿ ನಡೆಸಬೇಕೆಂದು ತಾಂತ್ರಿಕ ಸಲಹಾ ಸಮಿತಿ ತಿಳಿಸಿದೆ. ಕರೊನಾ ಎರಡನೇ ಅಲೆ ಆರಂಭವಾಗುತ್ತಿದೆ ಎಂಬುದು ತಿಳಿದ ಕೂಡಲೇ 2-3 ದಿನದ ಅವಧಿಯಲ್ಲಿ ಇಡೀ ವ್ಯವಸ್ಥೆ ಸಿದ್ಧವಾಗಿರುವಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದೆ.

2ನೇ ಅಲೆ ಪತ್ತೆ ಹೇಗೆ?: ಈವರೆಗೆ ಎರಡನೇ ಅಲೆ ಆರಂಭವಾಗಿರುವ ಪ್ರದೇಶಗಳಲ್ಲಿನ ಅಂಕಿ ಅಂಶಗಳನ್ನು ಸಮಿತಿ ಅಧ್ಯಯನ ನಡೆಸಿದೆ. ಪ್ರಕರಣಗಳು ಕನಿಷ್ಠಕ್ಕೆ ಬಂದ 3-4 ತಿಂಗಳ ಅಂತರದಲ್ಲಿ ಎರಡನೇ ಅಲೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ 2021ರ ಜನವರಿಯಲ್ಲಿ ಕರ್ನಾಟಕದಲ್ಲಿ ಆರಂಭವಾಗಬಹುದೆಂದು ಲೆಕ್ಕ ಹಾಕಲಾಗಿದೆ. ಎರಡನೇ ಅಲೆ ಬಂದಿದೆ ಎಂಬುದನ್ನು ಅಳೆಯಲು ಮಾನದಂಡವನ್ನೂ ತಾಂತ್ರಿಕ ಸಲಹಾ ಸಮಿತಿ ನಿಗದಿ ಮಾಡಿದೆ. ಪ್ರತಿ ಏಳು ದಿನಗಳ ಸರಾಸರಿ ಕರೊನಾ ಪ್ರಕರಣಗಳ ಮೇಲೆ ನಿಗಾ ವಹಿಸಿರಬೇಕು. ವೈರಸ್ ಎಷ್ಟು ಪ್ರಮಾಣದಲ್ಲಿ ಹಬ್ಬಿದೆ ಎಂಬುದನ್ನು ಅಳೆಯಲು ಸಹಾಯಕವಾಗುವ ರಿಪ್ರೊಡಕ್ಷನ್ ನಂಬರ್(ಆರ್0) ಕುರಿತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕಣ್ಣಿಡುವುದರ ಮೂಲಕ ಎರಡನೇ ಅಲೆ ಹಬ್ಬಿದೆಯೇ ಎಂಬುದನ್ನು ದೃಢೀಕರಿಸಬಹುದು. ಸೋಂಕು ಮಾಹಿತಿ ತಂಡವು ನಿಗಾ ವಹಿಸಿ, ಎರಡನೇ ಅಲೆ ಆರಂಭವಾಗುತ್ತಿರುವ ಸೂಚನೆ ಸಿಕ್ಕ ಕೂಡಲೆ ಆರೋಗ್ಯ ಇಲಾಖೆಯನ್ನು ಎಚ್ಚರಿಸಬೇಕು ಎಂದು ಹೇಳಿದೆ.

ಕಾರ್ಯಕ್ರಮಕ್ಕೆ ಕಡಿವಾಣ: ಸಾಮೂಹಿಕ ಸಭೆ-ಸಮಾರಂಭಗಳು, ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಮೂಲಕ ಸೋಂಕು ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವನ್ನು ಸಮಿತಿ ಶಿಫಾರಸಿನಲ್ಲಿ ಉಲ್ಲೇಖಿಸಿದೆ. ಜತೆಗೆ ಮದುವೆ ಸಮಾರಂಭಗಳಲ್ಲಿ 100 ಅಥವಾ ಕಡಿಮೆ ಜನರಿಗೆ ಹಾಗೂ ಅಂತ್ಯಕ್ರಿಯೆ ವೇಳೆ 20-50 ಜನರಿಗೆ ಅವಕಾಶ ನೀಡುವಂತೆ ತಿಳಿಸಿದೆ.

ಕೆಲ ಗಂಟೆಗಳ ಜೈಲು ಶಿಕ್ಷೆ ?: ಮಾರುಕಟ್ಟೆಗಳು, ಬಸ್ ನಿಲ್ದಾಣಗಳು, ವಾಣಿಜ್ಯ ಪ್ರದೇಶಗಳು, ಬಸ್​ಗಳು, ಟ್ರಾಫಿಕ್ ಜಂಕ್ಷನ್ ಮುಂತಾದ ಕಾರ್ಯನಿರತ ಪ್ರದೇಶಗಳಲ್ಲಿ ಮಾಸ್ಕ ಧರಿಸದೆ ನಿಯಮ ಉಲ್ಲಂಘಿಸುವವರಿಗೆ ಹೆಚ್ಚಿನ ದಂಡ ವಿಧಿಸಬೇಕೆಂದು ಸಮಿತಿ ಸಲಹೆ ನೀಡಿದೆ. ಜತೆಗೆ, ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದವರಿಗೆ ಕೆಲ ಗಂಟೆಗಳ ಜೈಲು ಶಿಕ್ಷೆಯನ್ನು ಮಧ್ಯಪ್ರದೇಶದಲ್ಲಿ ನೀಡಲಾಗುತ್ತಿದೆ. ಅಂತಹ ಕ್ರಮವನ್ನು ಇಲ್ಲಿಯೂ ಜಾರಿಗೆ ತರಬೇಕು ಎಂದು ತಿಳಿಸಿದೆ. ಈ ಕುರಿತು ಚಿಂತನೆ ನಡೆದಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

1ರಿಂದ 8 ಶಾಲೆ ಡೌಟ್

ಸಲಹಾ ಸಮಿತಿಯ ಸಲಹೆ ಗಮನಿಸಿದರೆ ಈ ಶೈಕ್ಷಣಿಕ ವರ್ಷ 1ರಿಂದ 8ನೇ ತರಗತಿ ನಡೆಯುವ ಸಾಧ್ಯತೆಯೇ ಇಲ್ಲ. ಡಿಸೆಂಬರ್ ಕಡೆಯ ವಾರದಲ್ಲಿ ಕರೊನಾ ಸ್ಥಿತಿ ಗಮನಿಸಿ ಜನವರಿಯಿಂದ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಮುಂದಾಗಬಹುದು. ಮೊದಲಿಗೆ 12ನೇ ಹಾಗೂ 10ನೇ ತರಗತಿ ಆರಂಭಿಸಿ ನಂತರದಲ್ಲಿ 11 ಹಾಗೂ 9ನೇ ತರಗತಿ ಆರಂಭಿಸಬಹುದೆನ್ನಲಾಗುತ್ತಿದೆ.

ಪ್ರಮುಖ ಶಿಫಾರಸುಗಳು

  • ಡಿ.26ರಿಂದ ಜ.1ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿ, ಕಾರ್ಯಕ್ರಮ, ಉತ್ಸವಗಳಿಗೆ ನಿರ್ಬಂಧ ಕಠಿಣವಾಗಲಿ
  • ಮಾಸ್ಕ್ ಧರಿಸದವರಿಗೆ ಕೆಲವು ಗಂಟೆ ಜೈಲು ಶಿಕ್ಷೆ ಆಗಲಿ, ನಿಯಮ ಉಲ್ಲಂಘಿಸುವವರಿಗೆ ದಂಡದ ಮೊತ್ತ ಹೆಚ್ಚಲಿ

ಮದ್ಯ ಪರವಾನಗಿ ಬಿಗಿ

ಹೊಸ ವರ್ಷ ಹಾಗೂ ಕ್ರಿಸ್​ವುಸ್ ವೇಳೆ ಮದ್ಯ ಮಾರಾಟ ಮಾಡಲು (ಒಂದು ದಿನಕ್ಕೆ ಸೀಮಿತ) ನೀಡಲಾಗುತ್ತಿದ್ದ ಪರವಾನಗಿಯನ್ನು ಈ ಬಾರಿ ಕರೊನಾ ಕಾರಣದಿಂದಾಗಿ ನಿಲ್ಲಿಸಲಾಗಿದೆ. ಪ್ರತಿ ವರ್ಷ ಈ ಒಂದು ದಿನದ ಅನುಮತಿಯಿಂದಾಗಿಯೇ ಅಬಕಾರಿ ಇಲಾಖೆಗೆ 5-6 ಕೋಟಿ ರೂ.ಆದಾಯ ಬರುತ್ತಿತ್ತು.

ಮಧ್ಯರಾತ್ರಿಗೆ ಬ್ರೇಕ್

ಹೊಸ ವರ್ಷಾಚರಣೆಯ ರಾತ್ರಿ ವೇಳೆ ಪಾರ್ಟಿ ಹೆಸರಿನಲ್ಲಿ ಮೋಜು, ಮಸ್ತಿ ನಡೆಯುತ್ತದೆ. ಇದರಿಂದ ಕರೊನಾ ಹರಡಬಹುದೆಂದು ಅಂದಾಜಿಸಿರುವ ಸಮಿತಿ, ಹೊಸ ವರ್ಷದ ಮುನ್ನಾ ದಿನಕ್ಕೆ ಮಾತ್ರ ಸೀಮಿತವಾಗದೆ ಡಿ.26ರಿಂದ ಜ.1ರವರೆಗೆ (ಒಂದು ವಾರ) ನೈಟ್ ಕರ್ಫ್ಯೂ ಜಾರಿಗೊಳಿಸುವಂತೆ ಹೇಳಿದೆ. ಬೆಂಗಳೂರಿನಲ್ಲಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಹಾಗೂ ವಿವಿಧ ನಗರಗಳ ಪ್ರಮುಖ ಸ್ಥಳಗಳಲ್ಲಿ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಸಂಪೂರ್ಣ ಲಾಕ್​ಡೌನ್ ವಿಧಿಸುವಂತೆ ಸಲಹೆ ನೀಡಲಾಗಿದೆ. ಸರ್ಕಾರದ ನಿರ್ಧಾರ ಕಾದುನೋಡಬೇಕಿದೆ.

ಕರ್ನಾಟಕದ ಕರೊನಾ ಪಾಸಿಟಿವಿಟಿ ದರ ಶೇ.1.2 ಇದೆ. ಆದರೆ ರಾಜ್ಯದಲ್ಲಿ ಎರಡನೇ ಅಲೆ ಎದುರಾಗಬಹುದೆಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಒಂದೆರಡು ದಿನಗಳಲ್ಲಿ ಸಭೆ ನಡೆಸಿ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ರ್ಚಚಿಸಿ ಮುಂದಿನ ಕ್ರಮ ನಿರ್ಧರಿಸಲಾಗುತ್ತದೆ. ನೈಟ್ ಕರ್ಫ್ಯೂ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ.

| ಡಾ. ಕೆ. ಸುಧಾಕರ್ ಆರೋಗ್ಯ ಸಚಿವ

ತಾಂತ್ರಿಕ ಸಲಹಾ ಸಮಿತಿ ಶಿಫಾರಸುಗಳ ಆಧಾರದ ಮೇಲೆ ಕರಡು ವರದಿ ಸಿದ್ಧಪಡಿಸಲಾಗಿದೆ. ಇದರ ಕುರಿತು ಸಚಿವರ ಮಟ್ಟದಲ್ಲಿ ರ್ಚಚಿಸಿ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಸಾವಿನ ಸಂಖ್ಯೆ ಕಡಿಮೆ ಮಾಡಲು ಮತ್ತು ಸಕ್ರೀಯ ಪ್ರಕರಣಗಳನ್ನು ನಿಯಂತ್ರಿಣದಲ್ಲಿಡುವಲ್ಲಿ ಆರೋಗ್ಯ ಇಲಾಖೆ ಉತ್ತಮ ಕಾರ್ಯ ಮಾಡಿದೆ.

| ಪಂಕಜ್ ಕುಮಾರ್ ಪಾಂಡೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top