Dailyhunt Logo
  • Light mode
    Follow system
    Dark mode
    • Play Story
    • App Story
ಆಳವಾಗಿ ಕಾನೂನು ಅಧ್ಯಯನ ಮಾಡಿದ್ದರು ಪ್ರೊ.ಸಿ.ಕೆ.ಎನ್.ರಾಜಾ: ಸುತ್ತೂರು ಶ್ರೀ

ಆಳವಾಗಿ ಕಾನೂನು ಅಧ್ಯಯನ ಮಾಡಿದ್ದರು ಪ್ರೊ.ಸಿ.ಕೆ.ಎನ್.ರಾಜಾ: ಸುತ್ತೂರು ಶ್ರೀ

ಮೈಸೂರು:ಕಾನೂನು ತಜ್ಞರಾಗಿದ್ದ ಪ್ರೊ.ಸಿ.ಕೆ.ಎನ್.ರಾಜಾ ಅವರು ಕಾನೂನು ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮಾಡಿ ಸಂವಿಧಾನದ ಬಗ್ಗೆ ಅಧಿಕೃತವಾಗಿ ಮಾತನಾಡುತ್ತಿದ್ದರು ಎಂದು ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.'ಪರಂಪರೆ' ಸಂಘಟನೆಯಿಂದ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದ್ದ ಪ್ರೊ.ಸಿ.ಕೆ.ಎನ್.ರಾಜಾ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾನೂನು, ಸಂವಿಧಾನದಂತಹ ಗಂಭೀರ ವಿಷಯಗಳ ಕುರಿತು ಮಾತನಾಡುತ್ತಿದ್ದ ರಾಜಾ ಅವರು, ಹಾಸ್ಯಪ್ರಜ್ಞೆಯನ್ನು ಕರಗತ ಮಾಡಿಕೊಂಡಿದ್ದರು.
ಎದುರು ಇರುವವರನ್ನು ಹಾಸ್ಯಮಾಡಿ ನಗಿಸುತ್ತಿದ್ದರು. ಹಾಸ್ಯಗಳು ನವೀರಾಗಿ, ವಿಡಂಬನಾತ್ಮಕವಾಗಿ ಇರುತ್ತಿದ್ದವು ಎಂದು ನೆನಪು ಮಾಡಿಕೊಂಡರು.ಜನರಲ್ಲಿ ಕಾನೂನು ಪ್ರಜ್ಞೆ ಮೂಡಿಸಬೇಕು ಎಂದು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಲ್ಲದೆ ಕಾರ್ಯಕ್ರಮಗಳಲ್ಲಿಯೂ ಜಾಗೃತಿ ಮೂಡಿಸುತ್ತಿದ್ದರು. ಕುಲಪತಿ ಮಾಡುತ್ತೇವೆ ಎಂದರೂ ಒಪ್ಪದ ಅವರು, ಪ್ರಾಧ್ಯಾಪಕ ವೃತ್ತಿಯನ್ನು ಪ್ರೀತಿಸುತ್ತಿದ್ದರು. ಶೈಕ್ಷಣಿಕ, ಆಡಳಿತ, ಬರವಣಿಗೆಯಲ್ಲಿ ಹಾಸ್ಯ ಪ್ರಜ್ಞೆ ಹೇಗೆ ಮೂಡಿಸಬೇಕು ಎಂದು ತಿಳಿದಿದ್ದ ಅವರು ಮಾದರಿ ಪ್ರಾಧ್ಯಾಪಕರಾಗಿದ್ದರು ಎಂದರು. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ವಿ.ಗುರುಪ್ರಸಾದ್ ಮಾತನಾಡಿ, ಸಂವಿಧಾನ, ಕಾನೂನು, ಹಾಸ್ಯದ ವಿಷಯಗಳನ್ನು ಮೈಗೂಡಿಸಿಕೊಂಡಿದ್ದ ಸಿ.ಕೆ.ಎನ್.ರಾಜಾ ಅವರು, ಕ್ರೀಡಾ ಪಟುವೂ ಆಗಿದ್ದರು. ಟೆನಿಸ್ ಅವರ ನೆಚ್ಚಿನ ಆಟವಾಗಿತ್ತು. ತಮ್ಮ ಶಿಷ್ಯರನ್ನು ಪಠ್ಯದ ಜತೆಗೆ ಆಟಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು ಎಂದರು.ಕುಟುಂಬ ಪ್ರೀತಿ ಇದ್ದ ಅವರು ಧಾರವಾಡದಲ್ಲಿ ಇದ್ದಾಗ ಕೇವಲ 15 ದಿನಗಳಲ್ಲಿ ಕಾದಂಬರಿಯೊಂದನ್ನು ಬರೆದಿದ್ದರು. ಭಾರತ-ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ತಮ್ಮ ಮನೆ ನಾಯಿಗೆ ಭುಟ್ಟೋ ಎಂದು ಹೆಸರಿಟ್ಟು ಬೈಯುತ್ತಿದ್ದರು ಎಂದು ಹೇಳಿದರು.ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಪ್ರೊ.ಪ್ರಧಾನ್ ಗುರುದತ್ತ ಮಾತನಾಡಿ, ಕಾನೂನು ಕುರಿತು ಸಾಮಾನ್ಯ ಜನರಿಗೂ ತಿಳಿಯಬೇಕು ಎನ್ನುವ ತುಡಿತ ಅವರಲ್ಲಿ ಬಹಳ ಇತ್ತು. ಕಾನೂನಿನಲ್ಲಿ ಇರುವ ಪಾರಿಭಾಷಿಕ ಶಬ್ದಗಳನ್ನು ಕನ್ನಡಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಪಾರಿಭಾಷಿಕ ಶಬ್ದಗಳಿಗೆ ಹೊಂದುವಂತಹ ಕನ್ನಡ ಶಬ್ದಗಳನ್ನು ಹುಡುಕಾಟ ನಡೆಸಿದ್ದರು ಎಂದು ತಿಳಿಸಿದರು.ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ, ವಿಶ್ವವಿದ್ಯಾಯಗಳಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ಸದಾ ಕಳವಳ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ವ್ಯವಸ್ಥೆಯನ್ನು ಎತ್ತಿಹಿಡಿಯುವ ಕುರಿತು, ಜನರನ್ನು ಎಚ್ಚರಿಸುವ ಲೇಖನಗಳನ್ನು ಹಾಸ್ಯ, ವಿಡಂಬನೆ ಮೂಲಕ ತಿಳಿಸುತ್ತಿದ್ದರು ಎಂದರು.ವಿಶ್ರಾಂತ ಕುಲಪತಿ ಪ್ರೊ.ಪಿ.ಈಶ್ಚರಭಟ್, ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ನುಡಿನಮನ ಸಲ್ಲಿಸಿದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani