ನವದೆಹಲಿ: ಏಪ್ರಿಲ್ 16 ಹಾಗೂ 17ರಂದು ನಡೆಯಬೇಕಿದ್ದ 17ನೇ ಆವೃತ್ತಿಯ ಐಪಿಎಲ್ ಪಂದ್ಯವನ್ನು ಮರುನಿಗದಿ ಮಾಡಲಾಗಿದ್ದು, ಬಿಸಿಸಿಐ 2 ಪಂದ್ಯಗಳ ದಿನಾಂಕವನ್ನು ಬದಲಿಸಿ ಪ್ರಕಟಿಸಿದೆ. ರಾಮನವಮಿ ಪ್ರಯುಕ್ತ ಪಂದ್ಯಗಳ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ.
ಏಪ್ರಿಲ್ 17ರಂದು ರಾಮನವಮಿ ಆಚರಿಸಲಾಗುತ್ತಿದ್ದು, ಐಪಿಎಲ್ನ 31ನೇ ಮತ್ತು 32ನೇ ಪಂದ್ಯಗಳ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಕಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವು ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 16ರಂದು ನಡೆಯಲಿದೆ ಎಂದು ತಿಳಿಸಿದೆ.
ಈ ಹಿಂದೆ ಕಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವನ್ನು ಏಪ್ರಿಲ್ 17 ರಂದು ನಿಗದಿ ಮಾಡಲಾಗಿತ್ತು. ಇದೀಗ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವನ್ನು ಏಪ್ರಿಲ್ 16 ಕ್ಕೆ ಮರುನಿಗದಿ ಮಾಡಲಾಗಿದೆ. ಅದರಂತೆ ಏಪ್ರಿಲ್ 16ರಂದು ನಡೆಯಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವನ್ನು ಮಾರನೇ ದಿನಕ್ಕೆ ನಿಗದಿ ಮಾಡಲಾಗಿದೆ.
ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ; ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಖಚಿತ
ಈ ಪಂದ್ಯಗಳ ಮರುನಿಗದಿ ಬಗ್ಗೆ ಬಿಸಿಸಿಐ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಆದರೆ ರಾಮನವಮಿ ಪ್ರಯುಕ್ತ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 17 ರಂದು ರಾಮನವಮಿ ನಡೆಯಲಿದ್ದು, ಈ ವೇಳೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸಂಪೂರ್ಣ ಭದ್ರತೆ ಒದಗಿಸುವುದು ಕಷ್ಟಕರ. ಹೀಗಾಗಿ ಪಂದ್ಯವನ್ನು ಮರುನಿಗದಿ ಮಾಡುವಂತೆ ಕೊಲ್ಕತ್ತಾ ಪೊಲೀಸ್ ಕಮಿಷನರ್ ಬಿಸಿಸಿಐಗೆ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.
ರಾಮನವಮಿ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಮನವಮಿ ಹಾಗೂ ದುರ್ಗಾ ಪೂಜೆ ಕಲ್ಕತ್ತಾ ಮತ್ತು ಇಡೀ ಪಶ್ಚಿಮ ಬಂಗಾಳದಲ್ಲಿ ಬಹಳ ಜನಪ್ರಿಯವಾಗಿದೆ. ಹಾಗಾಗಿ ಪೊಲೀಸ್ ಭದ್ರತೆ ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಫ್ರಾಂಚೈಸಿ, ರಾಜ್ಯ ಸಂಘಗಳು ಮತ್ತು ಪ್ರಸಾರಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ದಿನಾಂಕಗಳನ್ನು ಮರುನಿಗದಿ ಮಾಡಿದೆ ಎಂದು ತಿಳಿದು ಬಂದಿದೆ.
ಈ ಬಾರಿ, ದೇಶದಲ್ಲಿ ಲೋಕಸಭೆ ಚುನಾವಣೆಯ ಕಾರಣ, ಬಿಸಿಸಿಐ ಐಪಿಎಲ್ 2024 ರ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿತ್ತು. ಮಂಡಳಿಯು ಮೊದಲ ಹಂತದಲ್ಲಿ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು ಮತ್ತು ನಂತರ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಮಾರ್ಚ್ 22 ರಿಂದ ಪ್ರಾರಂಭವಾದ ಐಪಿಎಲ್ 2024 ರಲ್ಲಿ ಇದುವರೆಗೆ 14 ಪಂದ್ಯಗಳನ್ನು ಆಡಲಾಗಿದೆ.
ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಮಾಜಿ ಪ್ರಧಾನಿ ದೇವೇಗೌಡರು: ಸಚಿವ ವೆಂಕಟೇಶ್
ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ದು ಮಾಜಿ ಪ್ರಧಾನಿ ದೇವೇಗೌಡರು: ಸಚಿವ ವೆಂಕಟೇಶ್
