(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)ಪಶ್ಚಿಮ ಬಂಗಾಳದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮೌಲ್ಯ ಸಾಕ್ಷರತಾ ಚಳವಳಿಯ ಸಂಸ್ಥಾಪಕರೂ, ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೂ, ಪತ್ರಿಕೆಯೊಂದರ ಸಂಪಾದಕರೂ ಆದ ಪಾರ್ಥ ಚಟ್ಟೋಪಾಧ್ಯಾಯ ಅವರು ಸೋನಂ ವಾಂಗ್ಚುಕ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
''ಇಂದು ಭಾರತವು ಭ್ರಷ್ಟಾಚಾರ, ಹಿಂಸಾಚಾರ, ಸಾಮಾಜಿಕ ವಿಭಜನೆ, ಮತೀಯ ಸಂಕುಚಿತತೆ, ಅಸಹಿಷ್ಣುತೆ, ಪರಿಸರ ನಾಶ ಹಾಗೂ ಸಾರ್ವಜನಿಕ ನೈತಿಕತೆಯ ಅಧೋಗತಿಯಂತಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಾಮಾನ್ಯವಾಗಿ ಇವು ಬೇರೆ ಬೇರೆ ಸಮಸ್ಯೆಗಳಂತೆ ಕಂಡರೂ ಇವುಗಳ ಮೂಲ ಒಂದೇ- ವ್ಯಕ್ತಿತ್ವದ ಅವನತಿ. ಯಾವುದೇ ಸಮಸ್ಯೆ ಎದುರಾದಾಗ ನಾವು ಹೊಸ ಕಾನೂನುಗಳನ್ನು, ಕಠಿಣ ಶಿಕ್ಷೆಗಳನ್ನು, ಹೊಸ ತನಿಖೆಗಳನ್ನು ಅಥವಾ ರಾಜಕೀಯ ಬದಲಾವಣೆಗಳನ್ನು ಕೋರುತ್ತೇವೆ. ಕೆಲವೊಮ್ಮೆ ಅವು ಅಗತ್ಯವೂ ಆಗಬಹುದು. ಆದರೆ ಅವು ರೋಗದ 'ಲಕ್ಷಣ'ಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತವೆ. ನಿಜವಾದ ರೋಗ ಇನ್ನೂ ಆಳದಲ್ಲಿದೆ.
ಯಾವುದೇ ಕಾನೂನು ಪ್ರಾಮಾಣಿಕತೆಯನ್ನು ಹುಟ್ಟುಹಾಕಲಾರದು. ಯಾವುದೇ ಪೊಲೀಸ್ ವ್ಯವಸ್ಥೆ ಕರುಣೆಯನ್ನು ಬೆಳೆಸಲಾರದು ಕೇವಲ ಪರೀಕ್ಷಾ ಸುಧಾರಣೆಗಳು ಸತ್ಯನಿಷ್ಠೆಯನ್ನು ರೂಪಿಸಲಾರವು. ನೈತಿಕ ನಾಗರಿಕರನ್ನು ರೂಪಿಸದೆ ಯಾವುದೇ ರಾಜಕೀಯ ಕ್ರಾಂತಿಯೂ ನೈತಿಕ ಸಮಾಜವನ್ನು ಕಟ್ಟಲಾರದು.
ಈ ನಂಬಿಕೆಯೇ ನನ್ನ ಜೀವನದ ಕೊನೆಯ ವರ್ಷಗಳನ್ನು ಪಶ್ಚಿಮ ಬಂಗಾಳದ ಮಕ್ಕಳಲ್ಲಿ, ಪಾಲಕರಲ್ಲಿ ಹಾಗೂ ಶಿಕ್ಷಕರಲ್ಲಿ ಮೌಲ್ಯ ಸಾಕ್ಷರತಾ ಚಳವಳಿಗೆ ಸಮರ್ಪಿಸಲು ಕಾರಣವಾಗಿದೆ. ನಮಗೆ ಸರ್ಕಾರದ ಅನುದಾನವೂ ಇಲ್ಲ, ವಿದೇಶಿ ನೆರವೂ ಇಲ್ಲ. ಭಾರತದ ಭವಿಷ್ಯ ಕೇವಲ ಆರ್ಥಿಕ ಬೆಳವಣಿಗೆ ಅಥವಾ ತಾಂತ್ರಿಕ ಪ್ರಗತಿಯಿಂದಲ್ಲ, ನೈತಿಕ ಬೆಳವಣಿಗೆಯಿಂದ ನಿರ್ಧಾರವಾಗುತ್ತದೆ ಎಂದು ನಂಬುವ ಸಾಮಾನ್ಯ ಜನರೇ ನಮ್ಮ ಬೆಂಬಲಿಗರು. ಇನ್ನೂ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ.
ಮೊದಲು ವ್ಯಕ್ತಿತ್ವ ನಿರ್ವಣ. ಹೋರಾಟಗಳು ಸರ್ಕಾರಗಳನ್ನು ಬದಲಾಯಿಸಬಹುದು. ವ್ಯಕ್ತಿತ್ವ ಮಾತ್ರ ತಲೆಮಾರುಗಳನ್ನು ಬದಲಾಯಿಸುತ್ತದೆ. ಚಳವಳಿಗಳು ನೀತಿಗಳನ್ನು ಬದಲಾಯಿಸಬಹುದು. ಮೌಲ್ಯಗಳು ನಾಗರಿಕತೆಗಳನ್ನೇ ಪರಿವರ್ತಿಸುತ್ತವೆ. ಪರೀಕ್ಷಾ ಸುಧಾರಣೆಗಳು ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಬಹುದು. ಆದರೆ ಅಪ್ರಾಮಾಣಿಕತೆಯನ್ನು ನಿಮೂಲನೆ ಮಾಡಲಾರವು. ಭ್ರಷ್ಟಾಚಾರ ವಿರೋಧಿ ಕಾನೂನುಗಳು ಅಪರಾಧಿಗಳನ್ನು ಶಿಕ್ಷಿಸಬಹುದು. ಆದರೆ ಪ್ರಾಮಾಣಿಕ ನಾಗರಿಕರನ್ನು ರೂಪಿಸಲಾರವು. ಪರಿಸರ ಸಂರಕ್ಷಣೆಯ ಕಾನೂನುಗಳು ಅರಣ್ಯಗಳನ್ನು ಉಳಿಸಬಹುದು. ಆದರೆ ಪ್ರಕೃತಿಯ ಬಗ್ಗೆ ಗೌರವವನ್ನು ಮೂಡಿಸಲಾರವು.
ಕೊನೆಗೆ ಎಲ್ಲವೂ ಮಾನವನ ವ್ಯಕ್ತಿತ್ವವನ್ನೇ ಅವಲಂಬಿಸಿರುತ್ತದೆ. ಪಠ್ಯಪುಸ್ತಕ ಮತ್ತು ಕಂಠಪಾಠದ ಮಿತಿಯನ್ನು ಮೀರಿ ಶಿಕ್ಷಣ ಸಾಗಬೇಕು ಎಂಬುದನ್ನು ನೀವು ಈಗಾಗಲೇ ಭಾರತಕ್ಕೆ ತೋರಿಸಿದ್ದೀರಿ. ಒಂದು ದಿನ ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ನಿರ್ವಣಕ್ಕಾಗಿ ರಾಷ್ಟ್ರವ್ಯಾಪಿ ಚಳವಳಿಯನ್ನೂ ನೀವು ಮುನ್ನಡೆಸುವಿರಿ ಎಂಬುದು ನನ್ನ ಪ್ರಾಮಾಣಿಕ ಆಶಯ. ಮಹತ್ವಾಕಾಂಕ್ಷೆಗಿಂತ ಮೊದಲು ಪ್ರಾಮಾಣಿಕತೆಯನ್ನು, ಹಕ್ಕುಗಳಿಗಿಂತ ಮೊದಲು ಜವಾಬ್ದಾರಿಯನ್ನು, ಯಶಸ್ಸಿಗಿಂತ ಮೊದಲು ಸೇವೆಯನ್ನು, ಸ್ಪರ್ಧೆಗಿಂತ ಮೊದಲು ಕರುಣೆಯನ್ನು ಕಲಿಯುವ ಲಕ್ಷಾಂತರ ಭಾರತೀಯ ಯುವಕರನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಅಂತಹ ಚಳವಳಿ ಯಾವುದೇ ರಾಜಕೀಯ ಹೋರಾಟಕ್ಕಿಂತಲೂ ಪ್ರಬಲವಾಗಿರುತ್ತದೆ.
ಅದು ಲಂಚ ಕೊಡುವುದೂ ಇಲ್ಲ, ಲಂಚ ಸ್ವೀಕರಿಸುವುದೂ ಇಲ್ಲದ ನಾಗರಿಕರನ್ನು ರೂಪಿಸುತ್ತದೆ. ಶಿಕ್ಷೆಯ ಭಯದಿಂದಲ್ಲ, ಅಂತರಂಗದ ಪ್ರೇರಣೆಯಿಂದ ಪರಿಸರ ಕಾಪಾಡುವವರನ್ನು ಬೆಳೆಸುತ್ತದೆ. ಎಲ್ಲ ಧರ್ಮಗಳನ್ನೂ, ಎಲ್ಲ ಸಮುದಾಯಗಳನ್ನೂ ಸಮಾನ ಗೌರವದಿಂದ ಕಾಣುವವರನ್ನು, ಸ್ವಾರ್ಥಕ್ಕಿಂತ ರಾಷ್ಟ್ರಹಿತ ಮೇಲುಗೈಗೊಳಿಸುವವರನ್ನು ರೂಪಿಸುತ್ತದೆ. ನನ್ನ ದೃಷ್ಟಿಯಲ್ಲಿ, ಇಂದಿನ ಭಾರತಕ್ಕೆ ಇದಕ್ಕಿಂತ ದೊಡ್ಡ ರಾಷ್ಟ್ರ ನಿರ್ವಣದ ಕಾರ್ಯ ಮತ್ತೊಂದಿಲ್ಲ. ಇತಿಹಾಸವು ಕೇವಲ ಅನ್ಯಾಯದ ವಿರುದ್ಧ ಹೋರಾಡಿದವರನ್ನು ಮಾತ್ರ ನೆನಪಿಸಿಕೊಳ್ಳುವುದಿಲ್ಲ; ಉತ್ತಮ ಮನುಷ್ಯರನ್ನು ರೂಪಿಸಿದವರನ್ನೂ ಚಿರಕಾಲ ಸ್ಮರಿಸುತ್ತದೆ.
ಶೈಕ್ಷಣಿಕ ನವೋದ್ಯಮದ ಮೂಲಕ ನೀವು ಈಗಾಗಲೇ ಒಂದು ಪೀಳಿಗೆಯನ್ನು ಪ್ರೇರೇಪಿಸಿದ್ದೀರಿ. ವ್ಯಕ್ತಿತ್ವ ನಿರ್ವಣದ ಚಳವಳಿಯ ಮೂಲಕ ಮುಂದಿನ ಪೀಳಿಗೆಯನ್ನೂ ಪ್ರೇರೇಪಿಸುವಿರಿ ಎಂಬ ವಿಶ್ವಾಸ ನನ್ನದು. ಭಾರತಕ್ಕೆ ಕೇವಲ ಉತ್ತಮ ರಾಜಕೀಯ ಸಾಕಾಗುವುದಿಲ್ಲ. ಉತ್ತಮ ಮನುಷ್ಯರು ಬೇಕು. ಉತ್ತಮ ಮನುಷ್ಯರು ಉತ್ತಮ ಮೌಲ್ಯಗಳಿಂದಲೇ ರೂಪುಗೊಳ್ಳುತ್ತಾರೆ.''
ಅಬ್ಬಾ! ಉತ್ತಮ ಮನುಷ್ಯರು ಬೇಕಾಗಿದ್ದಾರೆ ಎಂದು ಈ ಕಾಲಕ್ಕಾದರೂ ಗೊತ್ತಾಯಿತಲ್ಲ! ನಮ್ಮ ಅದೃಷ್ಟ! ಈ ದೇಶದ ದೊಡ್ಡ ಸಮಸ್ಯೆ ಏನೆಂದರೆ ಪ್ರಜ್ಞಾವಂತ, ಜ್ಞಾನಿ, ತಪಸ್ವಿ ವ್ಯಕ್ತಿಗಳು, ರಾಷ್ಟ್ರಹಿತಕ್ಕಾಗಿ ಹಗಲಿರುಳು ಯೋಚಿಸುವವರು, ಯಾರ ದೃಷ್ಟಿಕೋನ ಯಾರ ವಿಚಾರಧಾರೆ ಸಂಪೂರ್ಣ ದೋಷರಹಿತವಾಗಿದೆಯೋ, ಯಾರು ಪ್ರಪಂಚದ ಆಗುಹೋಗುಗಳ ಬಗ್ಗೆ, ಭವಿಷ್ಯದ ಬಗ್ಗೆ ತಮ್ಮ ವರ್ತಮಾನದ ಘಟನಾವಳಿಗಳ ವಿಶ್ಲೇಷಣಾ ಸಾಮರ್ಥ್ಯದಿಂದ ಕರಾರುವಾಕ್ಕಾಗಿ ನುಡಿಯಬಲ್ಲರೋ ಅಂಥವರ ಮಾತಿಗೆ ಕವಡೆಯಷ್ಟೂ ಕಿಮ್ಮತ್ತಿಲ್ಲದಿರುವುದು. ಅಂಥವರ ವ್ಯಕ್ತಿತ್ವ ವಿಚಾರಧಾರೆ ಎಂದೂ ಯಾವ ಹಂತದಲ್ಲೂ ಮಕ್ಕಳಿಗೆ ಗೊತ್ತಾಗಲೇಬಾರದು ಎಂದು ಪ್ರತಿಜ್ಞೆಯನ್ನೇ ಮಾಡಿರುವರೇನೋ ಎಂಬಂತೆ ಜವಾಬ್ದಾರಿ ಸ್ಥಾನದಲ್ಲಿರುವವರು ವರ್ತಿಸುತ್ತಿರುವುದು! ಕಳೆದ 80 ವರ್ಷಗಳಿಂದ ವಿದ್ಯಾರ್ಥಿಗಳಿಗೆ ನಾವು ಮಾಡುತ್ತಿರುವ ದ್ರೋಹ ಅಷ್ಟಿಷ್ಟಲ್ಲ! ಇದಕ್ಕೆ ಹೋಲಿಸಿದರೆ ಪ್ರಶ್ನೆಪತ್ರಿಕೆ ಸೋರಿಕೆ ಏನೇನೂ ಅಲ್ಲ! ಯಾವ ವಿದ್ಯಾರ್ಥಿ ಐಪಿಎಸ್ ಅಧಿಕಾರಿಯಾಗಬಲ್ಲನೋ ಅವನನ್ನು ಪೋಸ್ಟಲ್ ಅಸಿಸ್ಟೆಂಟ್ ಮಾಡುವವರು ನಾವು. ಯಾರು ಹಾರ್ವರ್ಡ್ ವಿವಿಯಲ್ಲಿ ವಿದ್ಯಾರ್ಥಿವೇತನದಡಿ ಪಿಎಚ್ಡಿ ಮಾಡಬಲ್ಲನೋ ಅವನನ್ನು ಪ್ರೖೆಮರಿ ಶಾಲೆಯ ಮಾಸ್ತರರನ್ನಾಗಿಸಿದೆ ಶಿಕ್ಷಣ ಇಲಾಖೆ.
ಅಮೆರಿಕದಲ್ಲಿ ತಿಂಗಳಿಗೆ 10000 ಡಾಲರ್ ದುಡಿಯಬಲ್ಲವನನ್ನು ಭಾರತದಲ್ಲಿ 15000 ರೂ.ಗೆ ದುಡಿಸಿಕೊಳ್ಳುತ್ತಿರುವವರು ನಾವು! ನಮ್ಮ ಶಿಕ್ಷಣ ಇಲಾಖೆ ಈ ದೇಶಕ್ಕೆ ಮಾಡುತ್ತಿರುವ ದ್ರೋಹದಲ್ಲಿ ಶೇ. 1ರಷ್ಟನ್ನಾದರೂ ಪಾಕಿಸ್ತಾನವೋ, ಚೈನಾವೋ ಮಾಡುತ್ತಿದೆ ಎಂದೇನೂ ನನಗೆ ಅನಿಸಲ್ಲ. ಇದರ ಬಗ್ಗೆ ಯಾರಿಗೂ ಕಾಳಜಿ ಇಲ್ಲ! ಏಕೆಂದರೆ ಅಧಿಕಾರದಲ್ಲಿರುವವರ ಮಕ್ಕಳಿಗೆ ಈ ಬಿಸಿ ತಟ್ಟಿಲ್ಲವಲ್ಲ! ಅವರೆಲ್ಲ ಯೂರೋಪ್, ಅಮೆರಿಕ, ಆಸ್ಟ್ರೇಲಿಯಾದಲ್ಲಿ ಕಲಿಯುತ್ತಿರುವರಲ್ಲ! ನನ್ನ ಯೂಟ್ಯೂಬ್ ಉಪನ್ಯಾಸಗಳಲ್ಲಿ ನೂರು ಸಲ ಈ ವಿಷಯವನ್ನು ನಾನು ಪ್ರಸ್ತಾಪಿಸಿರಬೇಕು! ಆದರೆ ಅಧಿಕಾರದಲ್ಲಿರುವವರು ಬುಲೆಟ್ಪೂ›ಫ್ ಕಾರಿನೊಂದಿಗೆ ಬುಲೆಟ್ಪೂ›ಫ್ ಚರ್ಮವನ್ನೂ ಹೊಂದಿರುತ್ತಾರೆ. ಈಗಿರುವ ಶಿಕ್ಷಣ ವ್ಯವಸ್ಥೆ ಬಗ್ಗೆ ಪೊ›. ಚಟ್ಟೋಪಾಧ್ಯಾಯ ಸಾಕಷ್ಟು ವಿಷದವಾಗಿಯೇ ಇಲ್ಲಿ ಅರುಹಿದ್ದಾರೆ. ಶಿಕ್ಷಣ ಇಲಾಖೆ ರಾಷ್ಟ್ರ ನಿರ್ವಣವನ್ನು ಗುರಿಯಾಗಿಸಿಕೊಂಡಿದೆಯೋ ರಾಷ್ಟ್ರ ನಿರ್ನಾಮವನ್ನೋ? ಇಂತಹ ಘಾತುಕರ ಕೈಯಲ್ಲಿ ಸಿಕ್ಕು ಈ ಇಲಾಖೆ ಒದ್ದಾಡುತ್ತಿದೆ.
ಯಾರು ಯಾವ ಕೆಲಸಕ್ಕೂ ಅನರ್ಹರೋ ಯಾವುದೇ ವಿಷಯದಲ್ಲಿ ಯಾವ ಜ್ಞಾನವೂ ಇಲ್ಲವೋ, ಕನಿಷ್ಠ ಜ್ಞಾನವೂ ಇಲ್ಲವೋ ಮಿಲಿಯಗಟ್ಟಲೆ ಅಂಥವರು ಸ್ನಾತಕೋತ್ತರ ಪದವಿಗಳನ್ನು ಎರಡೆರಡು ಪಡೆದುಕೊಂಡಿರುತ್ತಾರೆ. ಶೇ. 90ರಷ್ಟು ಶಾಲೆಗಳಲ್ಲಿ ಅರ್ಹ ಶಿಕ್ಷಕರೇ ಇಲ್ಲ ಅಷ್ಟೇ ಸಂಖ್ಯೆಯ ಕಾಲೇಜುಗಳಲ್ಲಿ ಕೂಡ. ಆದರೆ ಇವರ ಹತ್ತಿರ ಪದವಿ, ಬಿಇಡಿ, ಸ್ನಾತಕೋತ್ತರ ಪದವಿ ಅಷ್ಟೇ ಏಕೆ ಪಿಎಚ್ಡಿ ಕೂಡ ಇರುತ್ತದೆ. ಇದೇಕೆ ಹೀಗೆ? ಎಲ್ಲಿಯೂ ಸಲ್ಲಬಾರದ ವ್ಯಕ್ತಿಗಳು ಶೈಕ್ಷಣಿಕ ನೀತಿ ನಿಯಮಗಳನ್ನು ನಿರ್ವಿುಸುತ್ತಾರೆ. ಪ್ರತಿಭೆ, ಸಂಪನ್ಮೂಲಗಳಿಗೆ ಕೊರತೆಯೇನೂ ಇಲ್ಲ. ಭಾರತ ಮಾತೆ ಬಂಜೆಯಲ್ಲ. ಆದರೆ ಜಾತ್ಯತೀತತೆ ಎಂಬ ನಾಟಕದಲ್ಲಿ ಎಲ್ಲ ಜಾತಿಯ ಪ್ರತಿಭೆಗಳಿಗೂ ಸಮಾನ ಅವಕಾಶ ಎಂದಿಗೂ ಸಿಕ್ಕಿಲ್ಲ. India is a country where diamonds Are dimmed and pebbles are polished. ವಜ್ರಗಳನ್ನು ಮಂಕಾಗಿಸಿ ಬೆಣಚು ಕಲ್ಲುಗಳನ್ನು ಉಜ್ಜಿ ಹೊಳೆಯುವಂತೆ ಮಾಡುವುದರಲ್ಲಿ ಭಾರತ ತನ್ನ ಜನ್ಮ ಸಾರ್ಥಕತೆಯನ್ನು ಕಾಣ ಹೊರಟಿದೆ! ಪರಿಣಾಮ ಅತ್ಯಂತ ಕಳಪೆ, ನಿಷ್ಪ್ರಯೋಜಕ, ವೀರ್ಯಹೀನ , ಅಜ್ಞಾನಿ, ಅವಿವೇಕಿ, ಅಸಮರ್ಥ, ಅಪ್ರಾಮಾಣಿಕ, ಭ್ರಷ್ಟ, ದೇಶದ್ರೋಹಿ, ಸಮಾಜದ್ರೋಹಿ ಜನರಿಂದ ಕೂಡಿದ ಸಮಾಜ ನಿರ್ವಣ. ಯಾವ ಉದ್ದೇಶವನ್ನಿಟ್ಟುಕೊಂಡು ಸ್ವಾತಂತ್ರ್ಯಕ್ಕಾಗಿ ಇನ್ನಿಲ್ಲದ ತ್ಯಾಗ ಮಾಡಲಾಯಿತೋ ಅದರ ವಿರುದ್ಧವೇ ಎಲ್ಲವೂ ನಡೆಯುತ್ತದೆ.
ವಿದ್ಯಾರ್ಥಿ ಪರಕೀಯ ಭಾಷೆಯಲ್ಲಿ ವಿಷಯಗಳನ್ನು ಬಾಯಿಪಾಠ ಮಾಡಿ ಪರೀಕ್ಷೆಯ ನಂತರ ಮರೆತು ಬಿಡುವುದೇ ಇಂದಿನ ಶಿಕ್ಷಣ ವ್ಯವಸ್ಥೆ. ನಗೆ ಬರುವುದಿಲ್ಲವೇ ಇದನ್ನು ಕಂಡು. ಬುದ್ಧಿಗಾಗಲಿ ಮನಸ್ಸಿಗಾಗಲಿ ಇದರಿಂದ ಏನು ತರಬೇತಿ ಸಿಕ್ಕಂತಾಯ್ತು? ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಶೇ. 1ರಷ್ಟು ಜನರೂ ಅದೇ ಭಾಷೆಯಲ್ಲಿ ಹತ್ತು ವಾಕ್ಯಗಳ ಆಶುಭಾಷಣ ಮಾಡಲಾರರು. ಇಡೀ ಇಂಗ್ಲಿಷ್ ಸಾಹಿತ್ಯ ಚರಿತ್ರೆ ಬಾಯಿ ಪಾಠ! ಇನ್ನು ಮಾನವೀಯ ಮೌಲ್ಯಗಳ ಕುರಿತು ಕಡಿಮೆ ಹೇಳಿದಷ್ಟೂ ಒಳಿತು. ಯಾವ ದೇಶವೂ ಈ ವಿಷಯದಲ್ಲಿ ನಮ್ಮಷ್ಟು ಅಜ್ಞಾನವನ್ನು, ಉದಾಸೀನತೆಯನ್ನು ಪ್ರದರ್ಶಿಸಿಲ್ಲ. ಪ್ರಾಮಾಣಿಕತೆ, ಉತ್ತರದಾಯಿತ್ವ, ಜವಾಬ್ದಾರಿತನ, ಪಾರದರ್ಶಕತೆಗಳಿಲ್ಲದ ಸಾಮರ್ಥ್ಯವು ವರದಾನವಾಗುವುದಕ್ಕಿಂತ ಶಾಪವಾಗುವ ಸಾಧ್ಯತೆಯೇ ಹೆಚ್ಚು.
ಕಿರಿಯ ವಿಜ್ಞಾನಿಯೊಬ್ಬನನ್ನು ತಮ್ಮ ಸಂಸ್ಥೆಯಲ್ಲಿ ನೇಮಿಸಿಕೊಳ್ಳಲು ಸಿ.ವಿ. ರಾಮನ್ ಸಂದರ್ಶನಕ್ಕೆ ಕರೆದಿದ್ದರು. ಉತ್ತೀರ್ಣರಾಗದೆಯೂ ಅದೇ ಪ್ರಾಂಗಣದಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ತಮ್ಮ ಕೋಣೆಯೊಳಕ್ಕೆ ಕರೆದು, 'ನಿನ್ನನ್ನು ಸೆಲೆಕ್ಟ್ ಮಾಡಿಲ್ಲವೆಂದು ಹೇಳಿದೆನಲ್ಲ' ಎನ್ನಲು 'ನೀವು ನನಗೆ ಕೊಟ್ಟ ಪ್ರಯಾಣ ಭತ್ಯೆ 50 ರೂ.; ನನಗೆ ಖರ್ಚಾಗಿದ್ದು 30 ರೂ.; ಉಳಿದ 20 ರೂ. ಯಾರ ಕೈಗೆ ಕೊಟ್ಟು ಹೋಗಲಿ ಎಂದು ಹುಡುಕುತ್ತಿರುವೆ. ತಾವೇ ಸ್ವೀಕರಿಸುವಿರಾ?' ಎಂದು ಕೇಳಿದಾಗ ರಾಮನ್ ಕೊಟ್ಟ ಉತ್ತರ ನಮ್ಮ ಶಿಕ್ಷಣ ಇಲಾಖೆಯ ಗುತ್ತಿಗೆ ಹಿಡಿದಿರುವವರಿಗೆ ಕಣ್ಣು ತೆರೆಸೀತು. 'ನಿನ್ನನ್ನು ಆರಿಸಿಕೊಂಡಿದ್ದೇವೆ! ಯಾವುದೇ ದೇಶದ ಅಭಿವೃದ್ಧಿಗೆ ಫಿಸಿಕ್ಸ್ ಜ್ಞಾನ ಇರುವವರಿಗಿಂತ ಹೆಚ್ಚಾಗಿ ಪ್ರಾಮಾಣಿಕರ ಅವಶ್ಯಕತೆಯಿದೆ.
ನಾಳೆಯಿಂದ ಕೆಲಸಕ್ಕೆ ಹಾಜರಾಗು!' ನೈತಿಕ ಶಿಕ್ಷಣಕ್ಕೆ ಯಾವ ಹಂತದಲ್ಲಾದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಾನ ಇದೆಯಾ? ವ್ಯವಸ್ಥೆ ಬಿಡಿ, ಪಾಲಕರಾದರೂ ಇದನ್ನು ಒಪ್ಪುತ್ತಾರೆಯೇ? ತಪ್ಪು ಯಾರದು? ಹೆಜ್ಜೆ ಹೆಜ್ಜೆಗೂ ಆದರ್ಶಗಳನ್ನು ಪಾಲಿಸಿದ ಶ್ರೀರಾಮನನ್ನು ಅನಾದಿಕಾಲದಿಂದಲೂ ರೋಲ್ವಾಡೆಲ್ ಆಗಿ ಸ್ವೀಕರಿಸಲಾಗಿತ್ತು. ಹರಿಶ್ಚಂದ್ರ, ದಧೀಚಿ, ಸಾವಿತ್ರಿ, ಅರುಂಧತಿ, ಸೀತೆ, ಕ್ಷುದಿರಾಮ್ ಚಟರ್ಜಿ, ರಾಮಕೃಷ್ಣರು, ವಿವೇಕಾನಂದರು, ಬುದ್ಧ, ಅಕ್ಕಮಹಾದೇವಿ ಇವರೆಲ್ಲ ಇಂದ್ರಿಯ ಚಾಪಲ್ಯಗಳನ್ನು ಪೂರ್ತಿ ಸುಟ್ಟು ಆದರ್ಶಗಳನ್ನೇ ಉಸಿರಾಡಿದವರು. ಆದರೆ ಇಂಥವರ ಚಾರಿತ್ರ್ಯವಧೆಯಲ್ಲೇ ನಿರತರಾದ ಅವಿವೇಕಿಗಳು ಇಂದು ಸರ್ಕಾರಗಳಿಂದ ಚಿಂತಕ ಪಟ್ಟ, ಪ್ರಶಸ್ತಿ, ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆಯುತ್ತಾರೆ! ಮದ್ಯ ಕುಡಿಸಿ, ಮತ್ತು ಬರಿಸಿ, ಮತಿ ಕೆಡಿಸಿ ಮತವನ್ನು ಪಡೆದವನು ಮತಿವಂತನಾಗಿ ಆಳಬಲ್ಲನೇ?!

